ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನೌಷಧಿಯಿಂದ ರಾಜ್ಯದ ಜನರಿಗೆ ಈ ವರ್ಷ ಆಗಿರುವ ಲಾಭ ಎಷ್ಟು ಗೊತ್ತಾ!

|
Google Oneindia Kannada News

ಬೆಂಗಳೂರು, ಅ. 10: ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಪೂರೈಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆಯಿಂದಾಗಿ (ಪಿಎಂಬಿಜೆಪಿ) ಕರ್ನಾಟಕ ರಾಜ್ಯವೊಂದರಲ್ಲೇ ಜನರಿಗೆ ಈ ವರ್ಷ ಕನಿಷ್ಠವೆಂದರೂ 500 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಪಿಎಂ ಬಿಜೆಪಿ ಯೋಜನೆಯಡಿ ಆರಂಭವಾಗಿರುವ ಜನೌಷಧಿ ಕೇಂದ್ರಗಳ ಕಾರ್ಯನಿರ್ವಹಣೆಯ ಪರಿಶೀಲನಾ ಸಭೆಯ ಬಳಿಕ ಅವರು ಮಾತನಾಡಿದರು.

ಆರ್ಥಿಕ ದುರ್ಬಲರಿಗಾಗಿಯೇ ಆರಂಭಿಸಲಾಗಿರುವ ಜನೌಷಧಿಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿವೆ. ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜನೌಷಧಿ ಮಾರಾಟ ಶೇಕಡಾ 73ರಷ್ಟು ವೃದ್ಧಿಯಾಗಿದೆ. ರಾಜ್ಯದಲ್ಲಿ 2020-21ರ ಹಣಕಾಸು ವರ್ಷದಲ್ಲಿ 125 ಕೋಟಿ ರೂಪಾಯಿಗಳ ಮೌಲ್ಯದ ಜನೌಷಧಿ ಮಾರಾಟದ ಗುರಿ ಹೊಂದಲಾಗಿದ್ದು ಕಳೆದ ಆರು ತಿಂಗಳಲ್ಲಿ 65 ಕೋಟಿ ರೂ. ವಹಿವಾಟು ನಡೆಸಲಾಗಿದೆ. ಕೊರೋನಾದಂತಹ ಸಂಕಷ್ಟದ ಸಮಯದಲ್ಲಿಯೂ ಜನೌಷಧಿ ಕೇಂದ್ರಗಳು ಗುರಿಮೀರಿ ವಹಿವಾಟು ನಡೆಸಿವೆ ಎಂದರು.

ನಾಲ್ಕು ಪಟ್ಟು ಬೆಲೆ ಕಡಿಮೆ

ನಾಲ್ಕು ಪಟ್ಟು ಬೆಲೆ ಕಡಿಮೆ

ಖಾಸಗಿ ಔಷಧ ಅಂಗಡಿಗಳು ಮಾರಾಟ ಮಾಡುವ ಔಷಧಗಳ ಬೆಲೆಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಸಿಗುವ ಅದೇ ಔಷಧಗಳ ಬೆಲೆ ಸರಾಸರಿ ನಾಲ್ಕರಿಂದ ಐದು ಪಟ್ಟು ಕಡಿಮೆ. ಕರ್ನಾಟಕದಲ್ಲಿ ವಾರ್ಷಿಕವಾಗಿ ಮಾರಾಟವಾಗುವ ಜನೌಷಧಿ ಮೌಲ್ಯ ಅಂದಾಜು 125 ಕೋಟಿ ರೂಪಾಯಿ. ನಮ್ಮ ಜನೌಷಧಿ ಅಂಗಡಿಗಳು ಇಲ್ಲವಾಗಿದ್ದರೆ ಜನರು ಸಂಪೂರ್ಣವಾಗಿ ಖಾಸಗಿ ಔಷಧಿ ಅಂಗಡಿಗಳ ಮೇಲೆ ಅವಲಂಬಿತವಾಗಿರಬೇಕಾಗುತ್ತಿತ್ತು. ಇಷ್ಟೇ ಮೌಲ್ಯದ (125 ಕೋಟಿ ರೂ.) ಇದೇ ಔಷಧಗಳನ್ನು ಖಾಸಗಿ ಔಷಧ ಅಂಗಡಿಗಳಲ್ಲಿ ಕೊಂಡುಕೊಳ್ಳಬೇಕಾದರೆ 600ರಿಂದ 700 ಕೋಟಿ ರೂ. ವ್ಯಯಿಸಬೇಕಿತ್ತು ಎಂದು ವಿವರಿಸಿದರು.

ಹೀಗಾಗಿ ರಾಜ್ಯದ ಜನರಿಗೆ ಜನೌಷಧಿ ಕೇಂದ್ರಗಳಿಂದ ಈ ವರ್ಷ ಏನಿಲ್ಲವೆಂದರೂ 500 ಕೋಟಿ ರೂ. ಉಳಿತಾಯವಾಗುತ್ತಿದೆ. ಜನೌಷಧ ಅಂಗಡಿಗಳಲ್ಲಿ ಔಷಧಗಳ ಬೆಲೆ ಕಡಿಮೆ ಎಂದಾಕ್ಷಣ ಗುಣಮಟ್ಟದಲ್ಲೇನೂ ಕಡಿಮೆಯಿಲ್ಲ. ಅಂತಾರಾಷ್ಟ್ರೀಯ ಮಾನದಂಡಕ್ಕನುಗುಣವಾಗಿ ಅವುಗಳ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಶೀಘ್ರ ಎಲ್ಲೆಡೆ ಜನೌಷಧಿ

ಶೀಘ್ರ ಎಲ್ಲೆಡೆ ಜನೌಷಧಿ

ರಾಜ್ಯದಲ್ಲಿ ಇಂದು 705 ಜನೌಷಧಿ ಕೇಂದ್ರಗಳಿವೆ. ಪ್ರತಿವರ್ಷವೂ ನೂರಕ್ಕಿಂತ ಹೆಚ್ಚು ಹೊಸ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಎಲ್ಲಾ ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಇರುವ ಎಲ್ಲ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳ ಬಳಿ ಜನೌಷಧಿ ಕೇಂದ್ರಗಳನ್ನು ತೆರೆಯುವ ಉದ್ದೇಶವಿದೆ. ಪಿಎಂಬಿಜೆಪಿ ಯೋಜನೆಯ ಅನುಷ್ಠಾನಗೊಳಿಸುವ ಸಂಸ್ಥೆ ಬಿಪಿಪಿಐ (BPPI - Bureau of Pharma PSUs of India) ಕರ್ನಾಟಕ ಸರ್ಕಾರದೊಂದಿಗೆ 200 ಜನೌಷಧ ಕೇಂದ್ರಗಳನ್ನು ತೆರೆಯುವ ಬಗ್ಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಪೈಕಿ ಎಂ.ಎಸ್.ಐ.ಎಲ್‌. 85, ರೆಡ್‌ಕ್ರಾಸ್ ಸೊಸೈಟಿ ಮತ್ತಿತರರು 33 ಜನೌಷಧಿ ಕೇಂದ್ರಗಳನ್ನು ತೆರೆದಿದ್ದಾರೆ. ಇನ್ನುಳಿದ ಕೇಂದ್ರಗಳನ್ನೂ ತ್ವರಿತವಾಗಿ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.

ಸ್ತ್ರೀಯರಿಗೆ ಸುವಿಧಾ ಸೌಲಭ್ಯ

ಸ್ತ್ರೀಯರಿಗೆ ಸುವಿಧಾ ಸೌಲಭ್ಯ

ರಾಜ್ಯದ ಜನೌಷಧಿ ಕೇಂದ್ರಗಳಲ್ಲಿ ಗುಣಮಟ್ಟದ 825 ಬಗೆಯ ಔಷಧಗಳು 122 ನಮೂನೆಯ ಸರ್ಜಿಕಲ್ ಸಾಧನಗಳು ಲಭ್ಯವಿವೆ. ಕೇವಲ ಒಂದು ರೂಪಾಯಿಗೆ 'ಸುವಿಧಾ' ಹೆಸರಿನಲ್ಲಿ ಸ್ಯಾನಿಟರಿ ಪ್ಯಾಡ್ ಮಾರಾಟ ಮಾಡಲಾಗುತ್ತಿದೆ. ಬೇರೆ ಅಂಗಡಿಗಳಲ್ಲಿ ಬ್ರಾಂಡೆಡ್ ಸ್ಯಾನಿಟರಿ ಪ್ಯಾಡ್ ಬೆಲೆ 4 ರೂಪಾಯಿಗಳಿಂದ 10 ರೂಪಾಯಿವರೆಗೂ ಇದೆ ಎಂದು ಅವರು ತಿಳಿಸಿದರು.

ʼಸುವಿಧಾʼ ಸ್ಯಾನಿಟರಿ ಪ್ಯಾಡ್‌ ಅನ್ನು ಹೆಚ್ಚೆಚ್ಚು ಜನಪ್ರಿಯಗೊಳಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು. ಹಾಗೆಯೇ ರಾಜ್ಯದಲ್ಲಿ ಈಗಿರುವ ಜನೌಷಧಿ ಕೇಂದ್ರಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು, ಜನೌಷಧಿಯ ಲಾಭ ಹೆಚ್ಚೆಚ್ಚು ಜನರಿಗೆ ತಲುಪಿಸಲು ತ್ವರಿತ ಪರಿಣಾಮಕಾರಿ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

Recommended Video

ಬರಿ ಮಾತಿಗೆ ಬಗ್ಗಲ್ಲಾ China , ಅವರ ಕೋಟೆನ ಛಿದ್ರ ಮಾಡೋದೇ | Oneindia Kannada
ಕೆಎಪಿಎಲ್ ಪರಿಶೀಲನೆ

ಕೆಎಪಿಎಲ್ ಪರಿಶೀಲನೆ

ಇದೇ ಸಂದರ್ಭದಲ್ಲಿ ಸಚಿವ ಸದಾನಂದ ಗೌಡ ಅವರು ತಮ್ಮ ಖಾತೆಯಡಿ ಕಾರ್ಯನಿರ್ವಹಿಸುವ ಸಾರ್ವಜನಿಕ ವಲಯದ ಉದ್ಯಮ ಕರ್ನಾಟಕ ಎಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನ (ಕೆಎಪಿಎಲ್) ಹಿರಿಯ ಅಧಿಕಾರಿಗಳ ಜತೆ ಕಂಪನಿಯ ಉತ್ಪಾದನೆ, ಮಾರಾಟ, ರಫ್ತು, ತಾಂತ್ರಿಕ ಉನ್ನತೀಕರಣ ಹಾಗೂ ಹಣಕಾಸು ಕ್ಷಮತೆಯ ಪರಿಶೀಲನೆ ನಡೆಸಿದರು.

ಬೆಂಗಳೂರಿನಲ್ಲಿರುವ ಕೆಎಪಿಎಲ್‌ ಆರಂಭವಾದಾಗಿನಿಂದಲೂ ಲಾಭದಲ್ಲಿದೆ. ಈ ವರ್ಷ 525 ಕೋಟಿ ರೂ ಮೌಲ್ಯದ ಔಷಧ ಉತ್ಪಾದನೆ ಹಾಗೂ 500 ಕೋಟಿ ರೂ. ಮಾರಾಟ ಗುರಿಯನ್ನು ನೀಡಲಾಗಿದೆ. ಕಳೆದ ಎರಡು ತ್ರೈಮಾಸಿಕದಲ್ಲಿ ಕಂಪನಿಯು 257 ಕೋಟಿ ರೂ ಮೌಲ್ಯದ ಔಷಧ ಮಾರಾಟ ಮಾಡಿದೆ ಎಂದು ಮಾಹಿತಿ ನೀಡಿದರು.

English summary
Union Minister DV Sadananda Gowda, speaking after the review meeting of Janasudhi centers started under PM BJP project in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X