ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಲಕಂಠರಾಯನಗಡ್ಡಿ ವಾಸಿಗಳಿಗೆ ನೀರು ಎಂದೂ ಶಾಪ!

By ಯಾದಗಿರಿ ಪ್ರತಿನಿಧಿ
|
Google Oneindia Kannada News

ಯಾದಗಿರಿ, ಏಪ್ರಿಲ್ 19 : ನದಿಪಕ್ಕದ ಈ ಗ್ರಾಮದ ಜನರಿಗೆ ನೀರು ಇದ್ದರೂ ತೊಂದರೆ, ನೀರು ಇಲ್ಲದಿದ್ದರೂ ತೊಂದರೆ! ಪ್ರವಾಹ ಬಂದಾಗ ಹೊರಜಗತ್ತಿನ ಸಂಪರ್ಕ ಕಳೆದುಕೊಳ್ಳುವ ಜನರು, ಬರಗಾಲದಲ್ಲಿ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗುತ್ತದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನೀಲಕಂಠರಾಯನ ಗಡ್ಡಿ ಗ್ರಾಮ. ದ್ವೀಪದಂತಿರುವ ಈ ಗ್ರಾಮದ ಸುತ್ತಲೂ ಕೃಷ್ಣಾ ನದಿ ಇದ್ದು, ನಾರಾಯಣಪೂರ ಜಲಾಶಯದಿಂದ ನೀರು ಬಿಟ್ಟರೆ ಸಾಕು ಈ ಗ್ರಾಮದ ಜನರು ಆತಂಕಕ್ಕೆ ಒಳಗಾಗುತ್ತಾರೆ. ಹೊರಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಾರೆ.

ಶುದ್ಧ ಕುಡಿಯುವ ನೀರಿಗೆ ತೊಂದರೆ : ಇಲ್ಲಿಯ ಜನರಿಗೆ ಮೂಲ ಸೌಲಭ್ಯಗಳು ಗಗನಕುಸುಮವಾಗಿವೆ. ಮೊದಲಿಂದಲೂ ಇಲ್ಲಿಯ ನಿವಾಸಿಗಳು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಕೃಷ್ಣಾ ನದಿಯ ನೀರನ್ನೇ ಕುಡಿಯುವುದು ಹಾಗೂ ಇನ್ನಿತರ ಚಟುವಟಿಕೆಗಳಿಗೆ ಉಪಯೋಗಿಸುತ್ತಿದ್ದರು. ಈಗ ಮಳೆ ಇಲ್ಲದೇ ಬರಗಾಲ ಆವರಿಸಿದ್ದು, ಬತ್ತಿರುವ ನದಿಯಲ್ಲಿ ನೀರಿಲ್ಲದೆ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. [ಮಳೆಗಾಲದಲ್ಲಿ ದ್ವೀಪವಾಗುವ ಗ್ರಾಮದಲ್ಲಿ ಹನಿ ನೀರಿಲ್ಲ]

Drought in Neelakanta rayana gaddi island and Krishna river

ಈ ಹಿಂದೆ ಬಹುತೇಕ ಸಂದರ್ಭಗಳಲ್ಲಿ ನೀಲಕಂಠರಾಯನಗಡ್ಡಿ ಜಲಾವೃತಗೊಂಡು ಜನ ಅತಂತ್ರ ಸ್ಥಿತಿ ಎದುರಿಸುತ್ತಿದ್ದರು. ಈ ಬಾರಿ ಹನಿ ಹನಿ ನೀರಿಗಾಗಿ ಕಿ.ಮೀ.ಗಟ್ಟಲೆ ಸಾಗಬೇಕಾದ ಅನಿವಾರ್ಯತೆ. ಗುಡ್ಡ ಹತ್ತಿಳಿದು ನೀರಿಗಾಗಿ ನೀಲಕಂಠರಾಯನ ಗಡ್ಡೆ ಗ್ರಾಮಸ್ಥರು ಪರದಾಡುವದನ್ನ ನೋಡಿದರೆ, ನೀರಿದ್ದಾಗ ಒಂದು ಸಮಸ್ಯೆ, ನೀರಿಲ್ಲದಿದ್ದರೂ ಒಂದು ಸಮಸ್ಯೆ ಅನ್ನೋ ಹಾಗೆ ತ್ರಿಶಂಕು ಸ್ಥಿತಿ ಇಲ್ಲಿನದು.

ಭೀಕರ ಬರದ ಛಾಯೆ : ಬರದ ಛಾಯೆ ಈ ಬಾರಿ ನೀಲಕಂಠರಾಯನ ಗಡ್ಡಿ ಗ್ರಾಮಸ್ಥರನ್ನೂ ಬಲವಾಗಿ ಆವರಿಸಿಕೊಂಡಿದೆ. ಸದಾ ನೀರಲ್ಲೇ ವಾಸ ಮಾಡ್ತಿದ್ದ ಅನುಭವಕ್ಕೊಳಗಾಗ್ತಿದ್ದ ಇಲ್ಲಿನವರಿಗೆ ಈ ಬಾರಿ ಬರ ಆತಂಕ ಮೂಡಿಸಿದೆ. ಗಡ್ಡೆಯಿಂದ ಕೆಳಗಿಳಿದು ಬಂದು ನೀರಿಗಾಗಿ ಇಲ್ಲಿನ ಜನರು ಪರದಾಡುವುದು ಈಗ ಪ್ರತಿನಿತ್ಯ ಕಂಡುಬರುತ್ತಿರುವ ದೃಶ್ಯ. [ಸ್ನೇಹಿತನ ಸಂಕಷ್ಟ ಹಂಚಿಕೊಂಡ ಇವರು ನಿಜವಾದ ಗೆಳೆಯರು!]

Drought in Neelakanta rayana gaddi island and Krishna river

ಸುಮಾರು 43 ಕುಟುಂಬಗಳಿಂದ 250ಕ್ಕೂ ಹೆಚ್ಚು ಜನರು ಇಲ್ಲಿ ವಾಸಿಸುತ್ತಿದ್ದಾರೆ. ಈ ಗ್ರಾಮ ಹಲವಾರು ವರ್ಷಗಳಿಂದ ಈ ರೀತಿ ನಡುಗಡ್ಡೆಯಾಗಿಯೇ ಉಳಿದಿದೆ. ಜನರು ಆಚೆಗೆ ಬರಬೇಕಾದರೆ ತೆಪ್ಪದ ಮುಖಾಂತರ ಇಲ್ಲವೇ, ಬೆನ್ನಿಗೆ ಈಸ್‌ಕಾಯಿ ಕಟ್ಟಿಕೊಂಡು (ಮೂರು ಕುಂಬಳಕಾಯಿಗಳನ್ನು ಒಂದಕ್ಕೊಂದು ಜೋಡಿಸಿದ ಸಾಧನ) ಈಜಿಕೊಂಡು ಇನ್ನೊಂದು ದಡಕ್ಕೆ ಬರುತ್ತಾರೆ. ಒಮ್ಮೆ ಬಂದು ಮೇಲೆ ಮನೆಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಾರೆ.

ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಮಾತ್ರ ಇದೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಕ್ಕಳು ದೂರದ ಬೆಂಚಿಗಡ್ಡಿ ಗ್ರಾಮದ ಶಾಲೆಗೆ ಹೋಗಬೇಕು. ಗ್ರಾಮವನ್ನು ಸ್ಥಳಾಂತರಿಸುವ ಪ್ರಯತ್ನವನ್ನು ಜಿಲ್ಲಾಡಳಿತವು ಮಾಡಲು ಮುಂದಾದರೂ ಗ್ರಾಮಸ್ಥರೂ ಫಲವತ್ತಾದ ಜಮೀನನ್ನು ಬಿಟ್ಟು ಬರಲು ತಯಾರಿಲ್ಲ.

Drought in Neelakanta rayana gaddi island and Krishna river

ಸೋಲಾರ್ ದೀಪ : ಕಲಬುರಗಿಯ ಸೆಲ್ಕೋ ಸೋಲಾರ್ ಕಂಪನಿಯವರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಮಾರು 43 ಮನೆಗಳಿಗೆ ಹಾಗೂ 25 ಉಚಿತವಾಗಿ ಬೀದಿ ದೀಪಗಳನ್ನು ಅಳವಡಿಸಿದ್ದಾರೆ. ಅಲ್ಲದೇ ಮನೆಯಲ್ಲಿ ಮೊಬೈಲ್ ಚಾರ್ಜ್ ಮಾಡಲು ಒಂದು ಬೋರ್ಡ್‌ನ್ನು ಅಳವಡಿಸಿದ್ದಾರೆ.

ಗ್ರಾಮಕ್ಕೆ ಎರಡು ಬೋಟ್ : ಮಳೆಗಾಲದಲ್ಲಿ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಲಾಗುತ್ತದೆ. ಪ್ರವಾಹ ಉಂಟಾಗಿ ನೀಲಕಂಠರಾಯನ ಗಡ್ಡೆಯ ನಿವಾಸಿಗಳು ಹೊರಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತಾರೆ. ಇದಕ್ಕಾಗಿ ಜಿಲ್ಲಾಡಳಿತ ಗಡ್ಡೆ ಜನರ ಸುರಕ್ಷತೆಗಾಗಿ ಎರಡು ಬೋಟ್ ವ್ಯವಸ್ಥೆ ಮಾಡಲಾಗಿದೆ. ನದಿಗೆ ನೀರು ಬಂದಾಗ ಈ ಬೋಟ್‌ಗಳನ್ನು ಗ್ರಾಮಸ್ಥರು ಉಪಯೋಗಿಸುತ್ತಾರೆ.

Drought in Neelakanta rayana gaddi island and Krishna river

ಪ್ರವಾಹ ಬಂದಾಗ ಜಿಲ್ಲಾಡಳಿತ ತಿಂಗಳಿಗಾಗುವಷ್ಟು ಆಹಾರ ಪದಾರ್ಥಗಳು ನೀಡಿ ಕೈತೊಳೆದುಕೊಳ್ಳುತ್ತದೆ. ಆದರೆ, ಶಾಶ್ವತವಾದ ಯೋಜನೆಗಳನ್ನು ಒದಗಿಸುವಲ್ಲಿ ಹಿಂದೇಟು ಹಾಕುತ್ತದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಈ ಗ್ರಾಮವನ್ನು ಜನಪ್ರತಿನಿಧಿಗಳು ಕೂಡ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಅಂತ ಕಕ್ಕೇರಾ ಗ್ರಾಮದವರು ಆರೋಪಿಸುತ್ತಾರೆ.
English summary
Water is always a problem for residents in Neelanata Rayana Gaddi island in Yadgir taluk. During monsoon the island gets covered completely by Krishna River. During summer they don't get even single drop of water. This summer the island is facing sever drought.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X