• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಬಲ್ ಇಂಜಿನ್ ಸರ್ಕಾರ ಶರಾವತಿ ಸಂತ್ರಸ್ತರಿಗೆ ನೆರವಾಗಲಿಲ್ಲ: ಸಿದ್ದರಾಮಯ್ಯ

|
Google Oneindia Kannada News

ಶಿವಮೊಗ್ಗ, ನವೆಂಬರ್ 29: ಡಬಲ್ ಇಂಜಿನ್ ಸರ್ಕಾರ ಇದ್ದರು ಶರಾವತಿ ಸಂತ್ರಸ್ತರಿಗೆ ನೆರವಾಗಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ಶಿವಮೊಗ್ಗದಲ್ಲಿ ಸೋಮವಾರ ಎನ್‌ಇಎಸ್‌ ಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ಮಲೆನಾಡಿನ ರೈತರ ವಿವಿಧ ಸಮಸ್ಯೆಗಳ ಮಲೆನಾಡ ಜನಾಕ್ರೋಶ ಪಾದಯಾತ್ರೆ ಹಾಗೂ ಸಮಾವೇಶದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಾನು ಅನೇಕ ಸಭೆಗಳಲ್ಲಿ ಈ ಹಿಂದೆ ಪಾಲ್ಗೊಂಡಿದ್ದೇನೆ ಆದರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿರುವುದು ಇದು ಮೊದಲು, ಇದಕ್ಕೆ ಕಾರಣ ಈ ಭಾಗದ ಸಮಸ್ಯೆಗಳು. ರೈತರ ಅಡಿಕೆ, ತೆಂಗು, ಮೆಣಸು, ಭತ್ತ ಮುಂತಾದ ಬೆಳೆಗಳು ರೋಗಗಳಿಗೆ ತುತ್ತಾಗಿ, ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟದಲ್ಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು

ನಾವು ಅಧಿಕಾರಕ್ಕೆ ಬಂದ ನಂತರ ಇಲ್ಲಿನ ಜನರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ನಾವು ಮಾಡುತ್ತೇವೆ. ನಾವು ನುಡಿದಂತೆ ನಡೆದ ಸರ್ಕಾರ. 2013ರಲ್ಲಿ ನಾವು ಜನರಿಗೆ ನೀಡಿದ್ದ 165 ಭರವಸೆಗಳಲ್ಲಿ 157 ಭರವಸೆಗಳನ್ನು ಈಡೇರಿಸಿದ್ದೇವೆ. ಇದರ ಜೊತೆಗೆ 30 ಹೆಚ್ಚುವರಿ ಕಾರ್ಯಕ್ರಮಗಳನ್ನು ಜನರಿಗೆ ನೀಡಿದ್ದೇವೆ. ಹೀಗೆ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದ ಸರ್ಕಾರ ಇದ್ದರೆ ಅದು ಕಾಂಗ್ರೆಸ್‌ ಸರ್ಕಾರ. ಈಗಿನ ಬಿಜೆಪಿ ಸರ್ಕಾರ ಜನರಿಗೆ 600 ಭರವಸೆಗಳನ್ನು ನೀಡಿ ಅದರಲ್ಲಿ 25 ಭರಸವೆಗಳನ್ನು ಈಡೇರಿಸಿ, 30 ಭರವಸೆಗಳನ್ನು ಅರ್ಧಬಂರ್ಧ ಈಡೇರಿಸಿದ್ದಾರೆ. ಇದು ಜನರಿಗೆ ಮಾಡಿದ ದ್ರೋಹ ಅಲ್ಲವಾ? ಎಂದು ಪ್ರಶ್ನಿಸಿದರು.

ಶಿವಮೊಗ್ಗ ಜಿಲ್ಲೆ ಹೋರಾಟಗಳ ತವರೂರು. ಇಲ್ಲಿ ಉಳುವವನೇ ಭೂಮಿಯ ಒಡೆಯ ಹೋರಾಟ, ಸಮಾಜವಾದಿ ಹೋರಾಟಗಳು ನಡೆದಿವೆ. ಈ ಹೋರಾಟಗಳಲ್ಲಿ ಭಾಗಿಯಾಗಿರುವಂತಹ ಕಾಗೋಡು ತಿಮ್ಮಪ್ಪನವರು ಇಂದು ನಮ್ಮ ನಡುವೆ ಸಾಕ್ಷಿಪ್ರಜ್ಞೆಯಾಗಿ ಜೊತೆ ನಿಂತಿದ್ದಾರೆ. 2015ರಲ್ಲಿ ಶರಾವತಿ ಸಂತ್ರಸ್ಥರ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದರು, ಕಾಗೋಡು ತಿಮ್ಮಪ್ಪನವರು ಅಂದು ಸಭಾಪತಿಗಳಾಗಿದ್ದರು, ಈ ಸಮಸ್ಯೆಯನ್ನು ಬಗೆಹರಿಸಲೇಬೇಕು ಎಂದು ಹೇಳಿದಾಗ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಾಗಿದ್ದ ಮದನ್‌ ಗೋಪಾಲ್‌ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆ ಮಾಡಿದ್ದೆ, ಈ ಸಮಿತಿ ಸಭೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡಿತ್ತು.

ಶರಾವತಿ ಸಂತ್ರಸ್ಥ 7 ಸಾವಿರ ಕುಟುಂಬಗಳಿಗೆ 9945 ಎಕರೆ ಅರಣ್ಯ ಭೂಮಿಯನ್ನು ಹಿಂದೆ ನೀಡಲಾಗಿತ್ತು, ಆದರೆ ಈ ಜಮೀನಿನ ಹಕ್ಕು ಪತ್ರವನ್ನು ವಾಸವಿದ್ದ ಜನರಿಗೆ ನೀಡಿರಲಿಲ್ಲ. ನಮ್ಮ ಸರ್ಕಾರ ಈ ಜನರಿಗೆ ಹಕ್ಕು ಪತ್ರ ನೀಡುವ ತೀರ್ಮಾನ ಮಾಡಿದೆವು. ನಾವು ಸುಮಾರು 1000ಕ್ಕೂ ಅಧಿಕ ಜನರಿಗೆ ಹಕ್ಕುಪತ್ರ ನೀಡುವ ಕೆಲಸ ಮಾಡಿದ್ದೆವು, ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದ್ದರೆ ಎಲ್ಲಾ ಜನರಿಗೂ ಹಕ್ಕು ಪತ್ರ ನೀಡುವ ಕೆಲಸ ಮಾಡುತ್ತಿದ್ದೆವು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ. 2019ರಲ್ಲಿ ಗಿರೀಶ್‌ ಆಚಾರ್‌ ಎಂಬುವವರು ನಾವು ಹೊರಡಿಸಿದ್ದ 56 ಆದೇಶಗಳನ್ನು ಹೈಕೋರ್ಟ್‌ ನಲ್ಲಿ ಪ್ರಶ್ನಿಸಿದರು, ಇದರಿಂದಾಗಿ ಹೈಕೋರ್ಟ್‌ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ನಮ್ಮ ನೋಟಿಫಿಕೇಷನ್‌ ಅನ್ನು ವಜಾ ಮಾಡಿತು.

ಬಸವರಾಜ ಬೊಮ್ಮಾಯಿ ಅವರು ಶರಾವತಿ ಸಂತ್ರಸ್ಥರಿಗೆ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದ್ದರು, ಕೊಡಿಸಿದ್ದಾರ? ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಡಬ್ಬಲ್‌ ಇಂಜಿನ್‌ ಸರ್ಕಾರ ಇದೆ, ಯಡಿಯೂರಪ್ಪ, ಈಶ್ವರಪ್ಪ ಇದೇ ಜಿಲ್ಲೆಯವರು, ರೈತರ ಪರ ಹೋರಾಟ ಮಾಡುತ್ತೇನೆ ಎಂದು ಹೇಳುತ್ತಾರೆ ಆದರೆ ಜಿಲ್ಲೆಯ ರೈತರಿಗೆ ನ್ಯಾಯ ಸಿಕ್ಕಿದೆಯಾ? ಈಶ್ವರಪ್ಪ ಅವರಂಥ ಕಡು ಭ್ರಷ್ಟ ಯಾರು ಇಲ್ಲ, ಸಂತೋಷ್‌ ಎಂಬ ಗುತ್ತಿಗೆದಾರ 40% ಲಂಚ ನೀಡಿಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಅವರು ಬಿಲ್‌ ಹಣ ನೀಡಿಲ್ಲ, ಇದರಿಂದ ನೊಂದು ಆತ ಆತ್ಮಹತ್ಯೆ ಮಾಡಿಕೊಂಡರು. ತನ್ನ ಸಾವಿಗೆ ಈಶ್ವರಪ್ಪ ಅವರೇ ನೇರ ಕಾರಣ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡರೂ ಅವರಿಗೆ ಪೊಲೀಸರ ಮೂಲಕ ತನಿಖೆ ನಡೆಸಿ ನಿರಾಪರಾಧಿ ಎಂದು ಬಿ ರಿಪೋರ್ಟ್‌ ನೀಡಿದರು. ಉತ್ತರ ಕನ್ನಡದ ಪರೇಶ್‌ ಮೇಸ್ತಾ ಸಾವಿಗೀಡಾದಾಗ ಕೊಲೆ ಆಗಿದೆ ಎಂದು ಇಡೀ ಜಿಲ್ಲೆಯಾದ್ಯಾಂತ ಹೋರಾಟ ಮಾಡಿ, ಜನರನ್ನು ರೊಚ್ಚಿಗೆಬ್ಬಿಸಿ ಚುನಾವಣೆ ಗೆಲ್ಲುವ ಕುತಂತ್ರ ಮಾಡಿದರು. ಈ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್‌ ನೀಡಿದೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬಿಐ ರಿಪೋರ್ಟ್‌ ಅನ್ನು ಸಿದ್ದರಾಮಯ್ಯ ಹೇಳಿ ಬರೆಸಿದ್ದು, ಸಿದ್ದರಾಮಯ್ಯ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಹೇಳುವ ಬಿಜೆಪಿ ಅವರಿಗೆ ನಾಚಿಕೆಯಾಗಲ್ವಾ? ಎಂದು ಕಿಡಿಕಾರಿದರು.

Double engine government did not help the victims of Sharavati Says Siddaramaiah

ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ ಸಿದ್ದರಾಮಯ್ಯ ಅವರು ತಮ್ಮ ಲೇಬಲ್‌ ಅಂಟಿಸಿಕೊಂಡು ಪ್ರಚಾರ ಪಡೆದಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಅವರು ಆರೋಪ ಮಾಡಿದ್ದಾರೆ. ಹಾಗಾದರೆ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದವರು ಯಾರು ಎಂದು ಬೊಮ್ಮಾಯಿ ಅವರಿಗೆ ಗೊತ್ತಿಲ್ವಾ? ಅಟಲ್‌ ಬಿಹಾರಿ ವಾಜಪೇಯಿ ಅವರಾಗಲೀ ನರೇಂದ್ರ ಮೋದಿ ಅವರಾಗಲೀ ಅಲ್ಲ, ಮನಮೋಹನ್‌ ಸಿಂಗ್‌ ಅವರ ಕಾಂಗ್ರೆಸ್‌ ಸರ್ಕಾರ. ಎಲ್ಲಾ ಜಾತಿಯ ಬಡ ಜನರಿಗೆ ಉಚಿತವಾಗಿ 7 ಕೆ.ಜಿ ಅಕ್ಕಿ ನೀಡುವ ಕಾರ್ಯಕ್ರಮ ಜಾರಿಗೆ ತಂದಿದ್ದೆ, ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದರೆ ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಅಸ್ಸಾಂ ನಲ್ಲಿ ಯಾಕೆ ಇಲ್ಲ? ನಮ್ಮ ಸರ್ಕಾರ ನೀಡುತ್ತಿದ್ದ ಅಕ್ಕಿ ಪ್ರಮಾಣವನ್ನು ಕಡಿತ ಮಾಡಿದ್ದು ಬೊಮ್ಮಾಯಿ ಅವರು. ಮತ್ತೆ ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಅಕ್ಕಿಯನ್ನು ಕಡಿತ ಮಾಡಿದವರು ಬಡವರ ಪರವಾಗಿ ಇರಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಇಂದಿರಾ ಗಾಂಧಿ ಅವರು ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದವರು. ಉಳುವವನೆ ಭೂಮಿಯ ಒಡೆಯ ಎಂಬ ಕಾಯ್ದೆಯನ್ನು ಜಾರಿಗೆ ಕೊಟ್ಟವರು ದೇವರಾಜ ಅರಸು ಅವರು. ಇಂದು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಉಳ್ಳವನನ್ನೇ ಭೂಮಿಯ ಒಡೆಯ ಮಾಡುತ್ತಿರುವುದು ಬಿಜೆಪಿ ಸರ್ಕಾರ. ಈ ಬಿಜೆಪಿ ಸರ್ಕಾರವನ್ನು 40% ಕಮಿಷನ್‌ ಸರ್ಕಾರ ಎಂದು ಹೇಳಿದವರು ಗುತ್ತಿಗೆದಾರರ ಸಂಘದವರು. ನ ಖಾವೂಂಗಾ ನ ಖಾನೆದೂಂಗ ಎಂದು ಹೇಳುವ ನರೇಂದ್ರ ಮೋದಿ ಅವರು ಯಾಕೆ ಸುಮ್ಮನಿದ್ದಾರೆ? ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಮೋದಿ ಅವರಿಗೆ ಪತ್ರ ಬರೆದು ಒಂದು ವರ್ಷ ಕಳೆದಿದೆ ಏನಾದರೂ ಕ್ರಮ ಕೈಗೊಂಡರಾ? ಎಂದು ಪ್ರಶ್ನಿಸಿದರು.

ಬಂಗಾರಪ್ಪ ಅವರು, ಕಾಗೋಡು ತಿಮ್ಮಪ್ಪ ಅವರು ಮುಖ್ಯಮಂತ್ರಿ, ಮಂತ್ರಿ ಆಗಿದ್ದರು ಇವರ ಆಸ್ತಿಪಾಸ್ತಿಗಳನ್ನು ನೋಡಿ, ಬಿಜೆಪಿಯವರ ಆಸ್ತಿಯನ್ನು ನೋಡಿ. ಕೋಟಿ ಕೋಟಿ ಲೂಟಿ ಮಾಡಿ ಆಸ್ತಿ ಮಾಡಿಕೊಂಡಿದ್ದಾರೆ. ಇವರಿಗೆ ನರೇಂದ್ರ ಮೋದಿ ಅವರು ರಕ್ಷಣೆ ನೀಡುತ್ತಿದ್ದಾರೆ. ಐಟಿ, ಇಡಿ ಅವರು ಕಾಂಗ್ರೆಸಿನವರನ್ನು ಹುಡುಕಿ ಹುಡುಕಿ ರೇಡ್‌ ಮಾಡಿ ಜೈಲಿಗೆ ಹಾಕುತ್ತಾರೆ. ಬಿಜೆಪಿಯವರೇನು ಹರಿಶ್ಚಂದ್ರರಾ? ಇಂದು ನೇಮಕಾತಿ, ವರ್ಗಾವಣೆ, ಗುತ್ತಿಗೆ ಕಾಮಗಾರಿಗಳಲ್ಲಿ ಲಂಚ ನಡೆಯುತ್ತಿದೆ. ಹೋಟೆಲ್‌ ನ ಮೆನುವಿನಂತೆ ಎಲ್ಲಾ ಅಧಿಕಾರಿಗಳಿಗೆ ಒಂದೊಂದು ರೇಟ್‌ ಫಿಕ್ಸ್‌ ಮಾಡಿದ್ದಾರೆ. ಇಂಥಾ ಸರ್ಕಾರ ಇರಬೇಕಾ? ಎಂದು ಕಿಡಿಕಾರಿದರು.

ದೇಶದ ಯುವಕರನ್ನು ಜಾತಿ, ಧರ್ಮಗಳ ಆಧಾರದಲ್ಲಿ ಎತ್ತಿ ಕಟ್ಟಿ ಬಡಿದಾಡುವಂತೆ ಮಾಡಿದ್ದಾರೆ. ಹಿಜಾಬ್‌, ಪ್ರಾರ್ಥನಾ ಮಂದಿರಗಳ ಪ್ರಾರ್ಥನೆ ಮುಂತಾದ ವಿಚಾರಗಳಲ್ಲಿ ಬಿಜೆಪಿ ಅವರು ಮಧ್ಯಪ್ರವೇಶ ಮಾಡುತ್ತಿದ್ದಾರೆ. ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತಿದೆ. ಈ ದೇಶ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ, ಇದು ಸರ್ವ ಧರ್ಮಗಳ ನಾಡು. ಇದನ್ನು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ನೀಡಿರುವ ಸಂವಿಧಾನವೂ ಹೇಳುತ್ತದೆ. ಈ ಸಂವಿಧಾನದ ಕತ್ತು ಹಿಸುಕುವ ಕೆಲಸವನ್ನು ಮಾಡುತ್ತಿದ್ದಾರೆ. ನಾವದನ್ನು ಗಟ್ಟಿಧ್ವನಿಯಿಂದ ವಿರೋಧ ಮಾಡಬೇಕಾಗಿದೆ.

ದೇಶದಲ್ಲಿ ಜನರ ಮನಸುಗಳ ಒಡೆದಿವೆ, ಭ್ರಷ್ಟಾಚಾರ, ದುರಾಡಳಿತ, ಬೆಲೆಯೇರಿಕೆ ಮಿತಿಮೀರಿದೆ ಎಂಬ ಕಾರಣಕ್ಕೆ ರಾಹುಲ್‌ ಗಾಂಧಿ ಅವರು 3575 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. ಸ್ವತಂತ್ರ ಭಾರತದಲ್ಲಿ ಯಾವೊಬ್ಬ ನಾಯಕನೂ ಇಷ್ಟು ದೊಡ್ಡ ಪಾದಯಾತ್ರೆ ಮಾಡಿದ ನಿದರ್ಶನ ಇಲ್ಲ. ಇಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನ ಬದುಕುವುದು ಕಷ್ಟವಾಗಿದೆ. ಇಂಥಾ ಸರ್ಕಾರವನ್ನು ಕಿತ್ತು ಹಾಕಬೇಕು, ಈ ಹೋರಾಟ ಶಿವಮೊಗ್ಗ ಜಿಲ್ಲೆಯಿಂದಲೇ ಆರಂಭ ಆಗಬೇಕು.

English summary
The double engine government did not help the victims of Sharavati Says Siddaramaiah,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X