ಇದು ಪ್ರಧಾನಿ ಮೋದಿ 'ಮನ್ ಕೀ ಬಾತ್' ಅಲ್ಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ 'ಪ್ರಶ್ನೆ'!
ಬೆಂಗಳೂರು, ಸೆ. 12: ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರವಾಗಿ ವಿರೋಧಿಸುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಅನುಕರಣೆ ಮಾಡುತ್ತಿದ್ದಾರಾ? ಇಂಥದ್ದೊಂದು ಪ್ರಶ್ನೆಯನ್ನು ಅವರ ಕಾರ್ಯಕ್ರವೊಂದು ಜನರಲ್ಲಿ ಹುಟ್ಟುಹಾಕಿದೆ. ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮ ಹೋಲುವಂತಹ ಸರಣಿಯನ್ನು ಡಿ.ಕೆ. ಶಿವಕುಮಾರ್ ಆರಂಭಿಸಿದ್ದಾರೆ. ವಾರಕ್ಕೊಂದು ಪ್ರಶ್ನೆಯನ್ನು ಬಿಜೆಪಿ ಸರ್ಕಾರದ ಮುಂದಿಡುವ ಮೂಲಕ ಜನ ಸಾಮಾನ್ಯರಲ್ಲಿ ಬೆಲೆ ಏರಿಕೆ ಸೇರಿದಂತೆ ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ವಿವರಿಸುವುದಾಗಿ ಡಿಕೆಶಿ ತಿಳಿಸಿದ್ದಾರೆ. ಈ ವಾರದ ವಿಷಯಗ ಬಗ್ಗೆ ಮುಂದಿದೆ ಮಾಹಿತಿ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಕನಿಷ್ಟ 150 ರೂ. ಕಡಿಮೆ ಮಾಡುವಂತೆ ಅವರು ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.

ಜನವಿರೋಧಿ ನಿರ್ಧಾರಗಳ ವಿರುದ್ಧ ಒಂದು ಪ್ರಶ್ನೆ
'ಬಿಜೆಪಿ ಸರ್ಕಾರದ ಜನವಿರೋಧಿ ನೀತಿ, ನಿರ್ಧಾರಗಳ ವಿರುದ್ಧ ಒಂದು ಪ್ರಶ್ನೆ' ಸರಣಿ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜನಾಭಿಪ್ರಾಯ ಮೂಡಿಸುತ್ತಿದ್ದಾರೆ. ಕಳೆದ ವಾರದಿಂದ ಆರಂಭವಾಗಿರುವ ಜನಪರ ವಿಚಾರಗಳ ಸರಣಿಯ ಭಾಗವಾಗಿ ಅವರು ಈ ವಾರ ಅಡುಗೆ ಅನಿಲ ಬೆಲೆ ಏರಿಕೆ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಬಡ ಮತ್ತು ಮಧ್ಯಮ ವರ್ಗದ ವಿಶೇಷವಾಗಿ, ಗೃಹಿಣಿಯರಿಗೆ ತಲೆಬಿಸಿ ತಂದಿಟ್ಟಿರುವ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ವಿರುದ್ದ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ವಸ್ತುಸ್ಥಿತಿ ವಿವರ ಹಂಚಿಕೊಂಡಿರುವ ಅವರು, ಸಾರ್ವಜನಿಕರ ಪ್ರತಿಕ್ರಿಯೆಯನ್ನು ನಿರೀಕ್ಷಿಸಿದ್ದಾರೆ.

ಸಾವಿರ ರೂಪಾಯಿ ಆಗಲಿದೆ ಸಿಲಿಂಡರ್ ಬೆಲೆ!
ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಪ್ರಸ್ತುತ 900 ರೂ. ತಲುಪಿದೆ. ಬೀದರ್ ಜಿಲ್ಲೆಯಲ್ಲಿ ಶನಿವಾರ ರೂ.956 ರೂ. ಇದೆ. ರೀಫಿಲ್ ಸಿಲಿಂಡರ್ ಬೆಲೆ ಸದ್ಯದಲ್ಲೇ ಒಂದು ಸಾವಿರ ರೂಪಾಯಿ ಆಗಬಹುದು.
ರಾಜ್ಯದ ಜನ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. ಕೋವಿಡ್ ಸಾವು- ನೋವು ಮುಗಿದಿಲ್ಲ. ಬಹಳಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸಂಪಾದನೆ ಇಲ್ಲದೆ ಸಂಸಾರ ಸರಿದೂಗಿಸಲು ಜನರು ಪರಿತಪಿಸುತ್ತಿರುವಾಗ ಸರ್ಕಾರ ಗಾಯದ ಮೇಲೆ ಬರೆ ಎಳೆದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಲೇ ಇದೆ. ದೇಶದಲ್ಲಿ290 ದಶಲಕ್ಷ ಗೃಹಬಳಕೆ ಎಲ್ಪಿಜಿ ಗ್ರಾಹಕರಿದ್ದು, ಕೇಂದ್ರ ಸರ್ಕಾರದ ಸಬ್ಸಿಡಿಯೂ ನಿಂತುಹೋಗಿದೆ ಎಂದು ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಸ್ಕೂಲ್ ಫೀಸ್ ಕಟ್ಟಬೇಕಾ?
"ನಾನು ರಾಜ್ಯದ ನಾನಾ ಭಾಗಗಳನ್ನು ಸುತ್ತುತ್ತಿದ್ದೇನೆ. ಎಲ್ಲ ಕಡೆಗಳಲ್ಲೂ ಬಡವರು, ಶ್ರೀಮಂತರು, ಮಧ್ಯಮ ವರ್ಗದ ಜನರು ಸೇರಿ ಎಲ್ಲ ವರ್ಗದ ಜನರೊಟ್ಟಿಗೆ ಸಮಾಲೋಚನೆ ನಡೆಸುತ್ತಿದ್ದೇನೆ. ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದ ಎಲ್ಲ ವರ್ಗದ ಜನರು ತೊಂದರೆಗೆ ಒಳಗಾಗಿದ್ದಾರೆ. ಬಡ ಕುಟುಂಬಗಳಂತೂ ಮಕ್ಕಳ ಸ್ಕೂಲ್ ಫೀಸ್ ಕಟ್ಟಬೇಕಾ? ಅಥವಾ ಹೊಟ್ಟೆ ತುಂಬಿಸಿಕೊಳ್ಳಲು ಸಿಲಿಂಡರ್ ರೀಫಿಲ್ ಮಾಡಿಸಿಕೊಳ್ಳಬೇಕಾ? ಎಂಬ ಅನಿವಾರ್ಯ ಆಯ್ಕೆಯ ಗೊಂದಲದಲ್ಲಿ ಸಿಕ್ಕಿಬಿದ್ದಿದ್ದಾರೆ" ಎಂದಿದ್ದಾರೆ.
"ಉದ್ಯೋಗ ಕಳೆದುಕೊಂಡು ಜೀವನ ನಿರ್ವಹಣೆ ಸಾಧ್ಯವಾಗದೆ ಜನ ಆತ್ಮಹತ್ಯೆ ದಾರಿ ಉಳಿಯುತ್ತಿರುವ ಈ ಸಂಕಟದ ಕಾಲದಲ್ಲಿ ಸರ್ಕಾರ ನಿರಂತರವಾಗಿ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡುತ್ತಿರುವುದು ಜನವಿರೋಧಿ ಮಾತ್ರವಲ್ಲ, ಅಮಾನವೀಯ ಕೂಡ" ಎಂದು ಕೆಪಿಸಿಸಿ ಅಧ್ಯಕ್ಷರು ಕಿಡಿಕಾರಿದ್ದಾರೆ.

ನಜಾಭಿಪ್ರಾಯ ಕೇಳಿದ ಡಿ.ಕೆ. ಶಿವಕುಮಾರ್!
ಉಜ್ವಲ ಯೋಜನೆಯಡಿ ಎಲ್ಪಿಜಿ ಸಿಲಿಂಡರ್ ಬಳಕೆ ಮಾಡುತ್ತಿದ್ದ ಕೆಲವು ಕುಟುಂಬಗಳು ಬೆಲೆ ಏರಿಕೆ ಕಾರಣದಿಂದ ಮತ್ತೆ ಸೌದೆ ಒಲೆಗೆ ಮರಳುತ್ತಿದ್ದಾರೆ. ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಗೃಹಿಣಿಯರು ಎಲ್ಪಿಜಿ ರೀಫಿಲ್ ಮಾಡಿಸಲು ಕಷ್ಟಪಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಕನಿಷ್ಟ 150 ರೂ. ಇಳಿಸಬೇಕು ಎಂದು ಶಿವಕುಮಾರ್ ಹೇಳಿದ್ದಾರೆ.
ತಮ್ಮ ಈ ಅಭಿಪ್ರಾಯದ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಜನಾಭಿಪ್ರಾಯ ಕೇಳಿದ್ದಾರೆ. ರೀಫಿಲ್ ಸಿಲಿಂಡರ್ ಬೆಲೆಯನ್ನು ಕನಿಷ್ಟ 150 ರೂ. ತಗ್ಗಿಸಬೇಕೇ? ಈ ಕುರಿತು ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಫೇಸ್ ಬುಕ್, ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಬೇಕು ಎಂದು ಶಿವಕುಮಾರ್ ಮನವಿ ಮಾಡಿದ್ದಾರೆ.