ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜನಗರ: ಆಕ್ಸಿಜೆನ್ ದುರಂತದ ಸಂಪೂರ್ಣ ಚಿತ್ರಣ ಬಿಚ್ಚಿಟ್ಟ ಡಿ.ಕೆ. ಶಿವಕುಮಾರ್!

|
Google Oneindia Kannada News

ಬೆಂಗಳೂರು, ಜು. 01: ಚಾಮರಾಜನಗರ ಆಕ್ಸಿಜೆನ್ ದುರಂತ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅಕ್ಷರಶಃ ಕಪ್ಪು ಚುಕ್ಕೆಯಾದಂತಾಗಿದೆ. ಇಡೀ ಪ್ರಕರಣದ ಕುರಿತು ಈವರೆಗೂ ಯಾವುದೇ ಕಠಿಣ ಕ್ರಮವನ್ನು ಕೈಗೊಳ್ಳದಿರುವುದು ಆ ಭಾಗದ ಜನರ ಆಕ್ರೋಶಕ್ಕೂ ಕಾರಣವಾಗಿದೆ. ಪ್ರಕರಣ ನಡೆದು ಎರಡು ತಿಂಗಳು ಕಳೆದಿದ್ದರೂ ತಪ್ಪಿತಸ್ಥರ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಸಿಎಂ ಯಡಿಯೂರಪ್ಪ ಅವರ ಸರ್ಕಾರ ಮುಂದಾಗಿಲ್ಲ. ಕೊರೊನಾ ಮೊದಲ ಅಲೆಯನ್ನು ಸಾಕಷ್ಟು ಮುಂಜಾಗ್ರತೆಯಿಂದ ಎದುರಿಸಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎರಡನೇ ಅಲೆ ನಿರ್ವಹಣೆಯಲ್ಲಿ ಸಂಪೂರ್ಣ ನಿರ್ಲಕ್ಷ ತೋರಿದ್ದರಿಂದ ಇಂತಹ ದುರಂತಗಳು ಇಡೀ ದೇಶದಾದ್ಯಂತ ಸಂಭವಿಸಲು ಕಾರಣವಾಯಿತು ಎಂದು ಕಾಂಗ್ರೆಸ್ ಆರೋಪಿಸಿದೆ.

ಚಾಮರಾಜನಗರದ ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜೆನ್ ಕೊರೆತೆಯಿಂದ ದುರಂತ ಸಾವು ಕಂಡ ಕುಟುಂಬಸ್ಥರ ಮನೆಗಳಿಗೆ ರಾಜ್ಯ ಕಾಂಗ್ರೆಸ್ ನಾಯಕರು ಇತ್ತೀಚೆಗೆ ಭೇಟಿ ಕೊಟ್ಟು ಆರ್ಥಿಕ ಸಹಾಯ ಮಾಡಿದ್ದಾರೆ. ಈ ಎಲ್ಲದರ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಸಂಪೂರ್ಣ ಮಾಹಿತಿ ಕೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ದುರಂತ ಸಾವಿನ ದಿನದ ಚಿತ್ರಣವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಅಷ್ಟಕ್ಕೂ ಆಕ್ಸಿಜೆನ್ ಕೊರತೆಯ ಅಂದಿನ ದಿನ ನಡೆದಿದ್ದಾದರೂ ಏನೂ? ಡಿ.ಕೆ. ಶಿವಕುಮಾರ್ ಅವರು ಸಾಕಷ್ಟು ಮಾಹಿತಿ ನೀಡಿದ್ದಾರೆ. ಮುಂದಿದೆ ಮಾಹಿತಿ!

ವಿಲಿವಿಲಿ ಒದ್ದಾಡಿ ಪ್ರಾಣ ಬಿಟ್ಟರು!

ವಿಲಿವಿಲಿ ಒದ್ದಾಡಿ ಪ್ರಾಣ ಬಿಟ್ಟರು!

"ನಾನು ಚಾಮರಾಜನಗರ ನಗರಕ್ಕೆ ಹೋದಾಗ ಅಲ್ಲಿನ ಜನ ತಮ್ಮ ಗೋಳು ತೋಡಿಕೊಂಡಾಗ ಮನಸಿಗೆ ಬಹಳ ಬೇಸರವಾಯಿತು. ರಾಷ್ಟ್ರೀಯ ಮಟ್ಟದ ಶೂಟರ್ ಮಡಿಲಿನಲ್ಲೇ ತಾಯಿ ವಿಲಿವಿಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ. ಕೆಲವು ಕಡೆ ವೈದ್ಯರು, ನರ್ಸ್‌ಗಳು ಇರಲಿಲ್ಲ. 36 ಜನರೂ ಪ್ರಾಣಿಗಳಂತೆ ನರಳಾಡಿ ಸತ್ತಿದ್ದಾರೆ. ಜನರಿಗೆ ಗೊತ್ತಾಗಬಾರದು ಎಂದು ಸತ್ತವರನ್ನು ಅಲ್ಲಿಂದ ಬೆರೆ ಕಡೆಗೆ ಸಾಗಿಸಿದ್ದಾರೆ." ಎಂದು ಆಕ್ಸಿಜೆನ್ ಕೊರತೆಯಿಂದ ಚಾಮರಾಜನಗರದಲ್ಲಿ ಸಂಭವಿಸಿದ ದುರಂತ ಸಾವುಗಳ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿವರಿಸಿದರು.


"36 ಮೃತರ ಪೈಕಿ ಶೇಕಡಾ 80ರಷ್ಟು ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಒಬ್ಬನಿಗೆ ಮದುವೆಯಾಗಿ 3 ತಿಂಗಳಾಗಿದೆ. ಮತ್ತೊಬ್ಬನಿಗೆ ಮದುವೆ ನಿಶ್ಚಯವಾಗಿತ್ತು. ಎಲ್ಲರೂ ಅವರವರ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದವರು." ಎಂದು ಗದ್ಗದಿತರಾಗಿ ದುರಂತದ ಬಗ್ಗೆ ತಿಳಿಸಿದ್ದಾರೆ.

ಆಕ್ಸಿಜನ್ ಕೊರತೆ ಮೊದಲೇ ಗೊತ್ತಿತ್ತು..!

ಆಕ್ಸಿಜನ್ ಕೊರತೆ ಮೊದಲೇ ಗೊತ್ತಿತ್ತು..!

"ಸ್ವತಃ ನ್ಯಾಯಾಲಯವೇ ಈ ಸಾವುಗಳು ಆಕ್ಸಿಜನ್ ಕೊರತೆಯಿಂದ ಆಗಿವೆ ಎಂದ ಹೇಳಿದೆ. ಹಾಗಿದ್ದ ಮೇಲೆ ಇವು ಸಹಜ ಸಾವೋ, ಕೊಲೆಯೋ? ನೀವೇ ನಿರ್ಧರಿಸಿ. ಅಲ್ಲಿ ಆಕ್ಸಿಜನ್ ಕೊರತೆ ಇದೆ ಅಂತ ಅಧಿಕಾರಿಗಳಿಂದ ಮಂತ್ರಿಗಳವರೆಗೂ ಎಲ್ಲರಿಗೂ ಮೊದಲೇ ಗೊತ್ತಿತ್ತು. ಆದರೂ ಆಕ್ಸಿಜನ್ ಪೂರೈಸಲು ಕ್ರಮ ತೆಗೆದುಕೊಳ್ಳಲಿಲಿಲ್ಲ. ಹೀಗಾಗಿ ಒಂದೇ ಆಕ್ಸಿಜನ್ ಪೈಪ್ ಅನ್ನು ಒಬ್ಬರಾದ ಮೇಲೆ ಮತ್ತೊಬ್ಬರಿಗೆ ಐದೈದು ನಿಮಿಷದಂತೆ ನೀಡಲಾಗಿದೆ." ಎಂದು ಅಂದು ರಾತ್ರಿ ನಡೆದಿದ್ದ ಘಟನೆಯನ್ನು ಡಿಕೆಶಿ ವಿವರಿಸಿದರು.


"ನಾನು ಹೋಗುವ ದಿನದವರೆಗೂ ಸೋಂಕಿತನಾಗಿದ್ದ ವ್ಯಕ್ತಿಗೆ ತನ್ನ ಮಗಳು ಹಾಗೂ ಅತ್ತೆ ಸತ್ತಿದ್ದಾಳೆ ಎನ್ನುವ ವಿಷಯವೇ ಗೊತ್ತಿರಲಿಲ್ಲ. ಗಂಡನನ್ನು ಕಳೆದುಕೊಂಡ ಮತ್ತೊಂದು ಹೆಣ್ಣು ಮಗಳಿಗೆ ಚಿಕ್ಕ ಮಕ್ಕಳು ಹಾಗೂ ಅತ್ತೆ, ಮಾವನ ಜವಾಬ್ದಾರಿ ಇದೆ. ಆಕೆಗೆ ಗಂಡನ ಮರಣ ಪ್ರಮಾಣ ಪತ್ರವನ್ನೇ ನೀಡುತ್ತಿಲ್ಲ. ಹೀಗಾಗಿ ಪರಿಹಾರವೂ ಸಿಕ್ಕಿಲ್ಲ. ಆಕ್ಸಿಜನ್ ನೀಡದೇ ಕೊಂದು ಹಾಕಿ, ಸಹಜ ಸಾವು ಅಂತಾ ಮರಣ ಪತ್ರ ನೀಡುತ್ತಿದ್ದಾರೆ." ಎಂದು ಸರ್ಕಾರದ ನಿರ್ಲಕ್ಷ ಹಾಗೂ ಬೇಜವಾಬ್ದಾರಿಯನ್ನು ಡಿಕೆಶಿ ಜನರ ಗಮನಕ್ಕೆ ತಂದಿದ್ದಾರೆ.

ತಾಯಿಗೆ ತಡವಾಗಿ ಶವ ಹಸ್ತಾಂತರ!

ತಾಯಿಗೆ ತಡವಾಗಿ ಶವ ಹಸ್ತಾಂತರ!

ಜೊತೆಗೆ, "ಒಬ್ಬ ಯುವಕನ ದೇಹವನ್ನು ಬೇರೆಯವರಿಗೆ ನಿಮ್ಮ ಕಡೆಯವರು ತೆಗೆದುಕೊಂಡು ಹೋಗಿ ಎಂದು ಬಲವಂತ ಮಾಡಿದ್ದಾರೆ. ಆಮೇಲೆ ಅವರು ನಮ್ಮವರಲ್ಲ ಎಂದು ಮತ್ತೆ ವಾಪಸ್ ತಂದುಕೊಟ್ಟಿದ್ದಾರೆ. ನಂತರ ಆತನನ್ನು ಅವನ ಸ್ನೇಹಿತರು ಗುರುತಿಸಿ, ಆತನ ತಾಯಿಗೆ ಶವ ಹಸ್ತಾಂತರ ಮಾಡಿದ್ದಾರೆ." ಎಂದು ಸರ್ಕಾರದ ನಿರ್ಲಜ್ಜ ವರ್ತನೆಯನ್ನು ವಿವರಿಸಿದರು.

'ಮುಖ್ಯಮಂತ್ರಿಗಳು ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಇಡೀ ರಾಜ್ಯ ಸುತ್ತಿ ಜನರ ಸಂಕಷ್ಟ ಆಲಿಸಬೇಕು. ಇಡೀ ರಾಜ್ಯ ಆಗದಿದ್ದರೂ ಕನಿಷ್ಟ ಪಕ್ಷ ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 36 ಮಂದಿಯ ಕುಟುಂಬಗಳನ್ನಾದರೂ ಭೇಟಿ ಮಾಡಿ, ಅವರ ಕಷ್ಟ ಕೇಳಲಿ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

ಸುಳ್ಳು ಸಾವಿನ ಲೆಕ್ಕ ಕೊಟ್ಟ ಸರ್ಕಾರ!

ಸುಳ್ಳು ಸಾವಿನ ಲೆಕ್ಕ ಕೊಟ್ಟ ಸರ್ಕಾರ!

"ಚಾಮರಾಜನಗರ ಆಕ್ಸಿಜೆನ್ ದುರಂತದಲ್ಲಿ 36 ಜನ ಸತ್ತಿದ್ದರೂ ಸರ್ಕಾರ 24 ಕುಟುಂಬಗಳಿಗೆ ಮಾತ್ರ ಪರಿಹಾರ ಕೊಟ್ಟಿದೆ. ಈ ಘಟನೆಗೆ ಇದುವರೆಗೂ ಯಾರನ್ನೂ ಹೊಣೆ ಮಾಡಿಲ್ಲ. ನೀವು ತಪ್ಪು ಮಾಡಿಲ್ಲ ಅಂದಮೇಲೆ ನೀವ್ಯಾಕೆ ಜನರ ಬಳಿ ಹೋಗಿ ಅವರನ್ನು ಮಾತನಾಡಿಸುತ್ತಿಲ್ಲ. ಅವರ ಗೋಳು ಕೇಳದಿದ್ದ ಮೇಲೆ ಈ ಸರ್ಕಾರಕ್ಕೆ ಯಾಕಿರಬೇಕು? ಮುಖ್ಯಮಂತ್ರಿಗಳೇ ಹೋಗಬೇಕು ಅಂತಿಲ್ಲ, ಯಾರಾದರೂ ಮಂತ್ರಿ ಹೋಗಬಹುದಲ್ಲ. ಯಾಕೆ ಆ ಕೆಲಸ ಆಗಿಲ್ಲ?"


"ಎಲ್ಲ ವಿಚಾರವನ್ನು ನಾನು ಇಲ್ಲಿ ಮಾತನಾಡುವುದಿಲ್ಲ, ಅಧಿವೇಶನದಲ್ಲಿ ಮಾತನಾಡುತ್ತೇನೆ. ಮೆಡಿಕಲ್ ಟೂರಿಸಂಗೆ ಹೆಸರುವಾಸಿಯಾಗಿರುವ ನಮ್ಮ ರಾಜ್ಯದಲ್ಲೇ, ವೈದ್ಯರು, ಡೀನ್ ಗಳು ಇರುವ ಆಸ್ಪತ್ರೆಯಲ್ಲೇ ಈ ಪರಿಸ್ಥಿತಿಯಾದರೆ ಇನ್ನು ಬೇರೆ ಕಡೆ ಹೇಗಿರಬೇಡ? ನಿನ್ನೆ ಕೂಡ ಸುಪ್ರೀಂ ಕೋರ್ಟ್ ಪರಿಹಾರ ವಿಚಾರವಾಗಿ 6 ತಿಂಗಳ ಸಮಯಾವಕಾಶ ನೀಡಿದೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗದ ವರದಿಗಳನ್ನು ನ್ಯಾಯಾಂಗ ಗಂಭೀರವಾಗಿ ಪರಿಗಣಿಸಿ ಜನರ ಪರವಾಗಿ ನಿಂತಿದೆ. ಅದಕ್ಕಾಗಿ ರಾಜ್ಯದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ." ಎಂದು ಡಿಕೆಶಿ ವಿವರಿಸಿದರು.

Recommended Video

ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜ್ಯಪ್ರವಾಸದ ಅಸಲಿ ಕಾರಣವೇನು | Oneindia Kannada
ರಾಜ್ಯದಲ್ಲಿ ಸತ್ತವರು 3 ಲಕ್ಷಕ್ಕೂ ಅಧಿಕ!

ರಾಜ್ಯದಲ್ಲಿ ಸತ್ತವರು 3 ಲಕ್ಷಕ್ಕೂ ಅಧಿಕ!

"ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಸತ್ತವರಿಗೆ ಪರಿಹಾರ ನೀಡಬೇಕು ಅಂತಾ ಕೋರ್ಟ್ ಹಾಗೂ ನಾವು ಒತ್ತಾಯ ಮಾಡಿದ್ದೇವೆ. ನಾನು ಹಾಗೂ ನಮ್ಮ ನಾಯಕರು ಚಾಮರಾಜನಗರಕ್ಕೆ ಹೋಗಿ ಅವರಿಗೆ ತಲಾ 1 ಲಕ್ಷ ರುಪಾಯಿ ಪರಿಹಾರವನ್ನು ಪಕ್ಷದ ವತಿಯಿಂದ ಕೊಟ್ಟಿದ್ದೇವೆ. ಸಂತ್ರಸ್ತ ಕುಟುಂಬದವರಿಗೆ ಮರಣ ಪ್ರಮಾಣ ಪತ್ರ ನೀಡುತ್ತಿಲ್ಲ. ಹಾಗಾದರೆ ಅವರು ಈಗ ಹೇಗೆ ಅರ್ಜಿ ಹಾಕಬೇಕು? ಅವರಿಗೆ ಪರಿಹಾರ ಹೇಗೆ ಸಿಗಬೇಕು? ಇಂತಹ ಸಮಯದಲ್ಲಿ ನಾನು ಚೆಕ್ ಬುಕ್ ತೆಗೆದುಕೊಂಡು ಹೋಗಿ, ಸಂಬಂಧಪಟ್ಟವರನ್ನು ಮಾತನಾಡಿಸಿ, ಕೋವಿಡ್ ನಿಂದ ಸತ್ತವರ ಕುಟುಂಬಗಳಿಗೆ ಪರಿಹಾರ ನೀಡಿದ್ದೇನೆ. ಅದೇ ರೀತಿ ಸರ್ಕಾರಕ್ಕೆ ಯಾಕೆ ನೀಡಲು ಆಗುತ್ತಿಲ್ಲ?"


"ಸರ್ಕಾರಿ ವೆಬ್ಸೈಟ್ ನಲ್ಲಿ ಜೂನ್ 13 ರವರೆಗೂ 3,27,985 ಜನ ಕೋವಿಡ್ ನಿಂದ ಸತ್ತಿದ್ದಾರೆ. ಆದರೆ ಸರ್ಕಾರ ಹೇಳುತ್ತಿರೋದು 30 ಸಾವಿರ ಮಾತ್ರ. ಹಾಗಾದರೆ ಉಳಿದವರಿಗೆ ಪರಿಹಾರ ನೀಡುವವರು ಯಾರು? ಪರಿಹಾರದಿಂದ ಅವರು ಬದುಕುವುದಿಲ್ಲ ಎನ್ನುವುದು ಬೇರೆ ಮಾತು. ಆದರೆ ನಿಮ್ಮ ಜತೆ ಸರ್ಕಾರ ಇದೆ ಅಂತಾ ಧೈರ್ಯ ಹೇಳಬಹುದಲ್ಲವೇ?"

"ಕೋವಿಡ್ ಡೆತ್ ಆಡಿಟ್ ಆಗಿಲ್ಲ. ಅದು ಆಗಬೇಕು. ಸತ್ತಿರುವ ಎಲ್ಲರಿಗೂ ಹೈಕೋರ್ಟ್ ಸೂಚನೆಯಂತೆ ಪರಿಹಾರ ಸಿಗಬೇಕು. ರಾಜ್ಯದಲ್ಲಿ ಕೋವಿಡ್ ನಿಂದ ಸತ್ತಿರುವ ಎಲ್ಲ 3 ಲಕ್ಷ ಜನರಿಗೂ ಕೋರ್ಟ್ ಆದೇಶದಂತೆ ಪರಿಹಾರ ಸಿಗಬೇಕು. ಇದು ಜನರ ಹಕ್ಕು, ಸರ್ಕಾರದ ಜವಾಬ್ದಾರಿ."


"ಚಾಮರಾಜನಗರ ದುರಂತದಲ್ಲಿ 36 ಮಂದಿ ಸತ್ತಿದ್ದರೂ ಇದರ ಹೊಣೆಯನ್ನು ಯಾರೂ ಹೊತ್ತಿಲ್ಲ. ಸುಮೋಟೋ ಕೇಸ್ ದಾಖಲಿಸಿ ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಷ್ಟು ದೊಡ್ಡ ದುರಂತ ನಡೆದರೂ ಯಾರ ಮೇಲೂ ಕ್ರಮ ಇಲ್ಲ. ಇವರನ್ನು ರಕ್ಷಣೆ ಮಾಡಲು ಸರ್ಕಾರ ಮುಂದಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ. ಆದರೂ ಸರ್ಕಾರ ಸುಳ್ಳು ಹೇಳುತ್ತಿದೆ." ಎಂದು ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

English summary
KPCC President DK Shivakuamar has spoken in detail about 36 victims of tragic death due to lack of oxygen in Chamarajanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X