• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಬಂದ್: ರಾಜ್ಯದ ಜಿಲ್ಲೆಗಳ ಪ್ರತಿಕ್ರಿಯೆ ಹೀಗಿದೆ

By Lekhaka
|
Google Oneindia Kannada News

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ವಿವಿಧ ಕನ್ನಡಪರ ಸಂಘಟನೆಗಳು ಡಿ.5 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಾನಾ ಜಿಲ್ಲೆಗಳ ಪ್ರತಿಕ್ರಿಯೆ ಇಲ್ಲಿದೆ. ಮುಂದೆ ಓದಿ...

Puttapa Koli Koli, [05.12.20 11:38]

ಚಿತ್ರದುರ್ಗ ವರದಿ:

ಕರ್ನಾಟಕ ಬಂದ್ ಹಿನ್ನಲೆ ಕೋಟೆನಾಡು ಚಿತ್ರದುರ್ಗದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ತಳ್ಳಾಡಿದ ಘಟನೆ ನಡೆಯಿತು. ಪ್ರತಿಭಟನೆ ಸಂದರ್ಭದಲ್ಲಿ ಬಸ್ ತಡೆಗೆ ಯತ್ನಿಸಿದ ಕರವೇ ಕಾರ್ಯಕರ್ತರನ್ನು ಪೊಲೀಸರು ತಡೆದರು.

ಕರ್ನಾಟಕ ಬಂದ್: ರಾಮನಗರದಲ್ಲಿ ಅಣಕು ಶವಯಾತ್ರೆ, ಪ್ರತಿಕೃತಿ ದಹನಕರ್ನಾಟಕ ಬಂದ್: ರಾಮನಗರದಲ್ಲಿ ಅಣಕು ಶವಯಾತ್ರೆ, ಪ್ರತಿಕೃತಿ ದಹನ

ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಕರವೇ ಕಾರ್ಯಕರ್ತರು, ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ನಂತರ ಪ್ರತಿಭಟನಾಕಾರರನ್ನು ಪೊಲೀಸರು ಎಳೆದೊಯ್ದರು. ಜಿಲ್ಲೆಯ ಹಿರಿಯೂರಿನಲ್ಲಿ ಬಂದ್ ಸುಳಿವು ಕಾಣದೇ, ಎಂದಿನಂತೆ ಜನಸಾಮಾನ್ಯರ ಓಡಾಟ‌, ಹಾಲು, ತರಕಾರಿ ಹಣ್ಣು, ಅಂಗಡಿ ಮುಂಗಟ್ಟುಗಳು ಓಪನ್ ಆಗಿದ್ದವು. ಕಾರು, ಲಾರಿ, ಬಸ್, ಆಟೋ, ದ್ವಿಚಕ್ರ ವಾಹನ ಸಂಚಾರ ಆರಂಭವಾಗಿದೆ.

Puttapa Koli Koli, [05.12.20 11:38]Puttapa Koli Koli, [05.12.20 11:56]

ರಾಮನಗರ ವರದಿ:
ಮರಾಠಿ ಪ್ರಾಧಿಕಾರ ರಚನೆ ಮಾಡಿರುವ ಸರ್ಕಾರದ ನಾಡ ವಿರೋಧಿ ನಡೆಯನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ಕೊಟ್ಟಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಳಂಬೆಳಿಗ್ಗೆ ಬೀದಿಗಿಳಿದು ಕನ್ನಡಪರ ಸಂಘಟನೆಗಳು ಹೋರಾಟ ಆರಂಭಿಸಿವೆ.

ಬೆಳಗಿನ ಜಾವ ಬೀದಿಗಿಳಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ರಾಮಗರದ ಐಜೂರು ವೃತ್ತದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ ರಾಜ್ಯ ಸರ್ಕಾರ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕಾಳಿಸ್ವಾಮಿಯವರ ಅಣಕು ಶವಯಾತ್ರೆ ನಡೆಸಿ ನಂತರ ಪ್ರತಿಕೃತಿ ದಹನ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಮಗಳೂರು ವರದಿ:

ಕರ್ನಾಟಕ ಬಂದ್‌ಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಉತ್ತಮ ಪ್ರತಿಕಿಯೆ ವ್ಯಕ್ತವಾಗಿದ್ದು, ಆಟೋ, ಟ್ಯಾಕ್ಸಿ ಸಂಚಾರ ಬಂದ್ ಆಗಿದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ವರ್ತಕರು ಬೆಂಬಲ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಂದಿನಂತೆ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಓಡಾಟ ಆರಂಭವಾಗಿದ್ದರೂ, ಕನ್ನಡಪರ, ರೈತಪರ, ಪ್ರಗತಿಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆ ಗಳು ಕರ್ನಾಟಕ ಬಂದ್‌ಗೆ ಸಾಥ್ ನೀಡಿವೆ. ಬೆಳಗ್ಗೆ 10.30ಕ್ಕೆ ತಾಲೂಕು ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕನ್ನಡ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ.

ಶಿವಮೊಗ್ಗ ವರದಿ:

ಮರಾಠ ಅಭಿವೃದ್ಧಿ ನಿಗಮ ಖಂಡಿಸಿ ಸರ್ಕಾರದ ವಿರುದ್ಧ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನಲೆಯಲ್ಲಿ, ಶಿವಮೊಗ್ಗದಲ್ಲಿ ಕನ್ನಡಪರ ಹಾಗೂ ರೈತ ಪರ ಸಂಘಟನೆಗಳಿಂದ ಉತ್ತಮ ಬೆಂಬಲ ದೊರೆತಿದೆ. ಮಲೆನಾಡು ಶಿವಮೊಗ್ಗ ಜಿಲ್ಲೆಯಾದ್ಯಂತ ನೆಲ, ಜಲ, ಭಾಷೆಗೆ ಬೆಂಬಲಿಸಿ ಬಂದ್‌ಗೆ ಕರೆ ನೀಡಲಾಗಿದೆ.

ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸರ್ಪಗಾವಲು ಇದ್ದು, ಮುಖ್ಯ ಬಸ್ ನಿಲ್ದಾಣದಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸ್ ಬಂದೋ ಬಸ್ತ್ ನಿಯೋಜಿಸಲಾಗಿದೆ. ಬಸ್ ಸಂಚಾರ ತಡೆಯಲು ಕನ್ನಡಪರ ಸಂಘಟನೆಗಳ‌ ತಯಾರಿಗೆ ಬ್ರೇಕ್ ಹಾಕಲು ಪೋಲಿಸರು ರೆಡಿಯಾಗಿದ್ದಾರೆ. ಸದ್ಯಕ್ಕೆ ಶಿವಮೊಗ್ಗದಲ್ಲಿ ಬಂದ್ ವಾತಾವರಣ ಇದ್ದು, 11 ಗಂಟೆಗೆ ಕನ್ನಡಪರ ಸಂಘಟನೆ ವತಿಯಿಂದ ಪ್ರತಿಭಟನೆಗೆ ನಡೆಸಲಾಗುತ್ತದೆ.

ಉಡುಪಿ ವರದಿ:

ರಾಜ್ಯದಲ್ಲಿ ಕನ್ನಡಪರ ಸಂಘಟನೆ ಕರೆ ಕೊಟ್ಟಿರುವ ಕರ್ನಾಟಕ ಬಂದ್‌ಗೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯ ಸರಕಾರ ರಚಿಸಿದ ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕರೆ ನೀಡಿದ ಬಂದ್‌ಗೆ ಆಟೋ ಚಾಲಕರ ಘಟಕ ಬೆಂಬಲ ನೀಡಿಲ್ಲ.

ಕರ್ನಾಟಕ ಬಂದ್‌ ಗೂ, ನಮಗೂ ಸಂಬಂಧವೇ ಇಲ್ಲದಂತೆ ವ್ಯವಹಾರ, ಓಡಾಟ ನಡೆದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರಿಂದ ನಗರದಲ್ಲಿ ಗಸ್ತು ತಿರುಗಲಾಗುತ್ತಿದೆ. ಉಡುಪಿ ನಗರದಲ್ಲಿ ಬಸ್ ಸಂಚಾರ ಯಥಾಸ್ಥಿತಿ ಕಾಪಾಡಿದೆ.

ಬೆಳಗಾವಿ ವರದಿ:

ಕರ್ನಾಟಕ ಬಂದ್ ಹಿನ್ನೆಲೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಎಂದಿನಂತೆ ಬಸ್ ಸಂಚಾರ ಕಾರ್ಯಾರಂಭಿಸಿದೆ. ಪ್ರಯಾಣಿಕರು ಎಂದಿನಂತೆ ಬಸನಲ್ಲಿ ಓಡಾಟ ಮಾಡುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

ಮಂಡ್ಯ ವರದಿ:

ಕರ್ನಾಟಕ ಬಂದ್‌ಗೆ ಸಕ್ಕರೆ ನಾಡು ಮಂಡ್ಯದಲ್ಲಿ ಪ್ರತಿಭಟನೆ ಕಾವೇರಿದೆ. ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು ಅರೆಬೆತ್ತಲೆ ಪ್ರತಿಭಟನೆ ಮಾಡುತ್ತಿದ್ದಾರೆ. ನಗರದ ಸಂಜಯ್ ವೃತ್ತದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನಾಕಾರರು ಮೈಸೂರು-ಬೆಂಗಳೂರು ಹೆದ್ದಾರಿ ತಡೆದಿದ್ದು, ಪ್ರತಿಭಟನಾಕಾರರ ರಸ್ತೆ ತಡೆ ನಿಲ್ಲಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ. ಈ ವೇಳೆ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತವಾಗಿದೆ.

ಹುಬ್ಬಳ್ಳಿ ವರದಿ:

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕರ್ನಾಟಕ ಬಂದ್‌ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಂದಿನಂತೆ ವಾಣಿಜ್ಯ ವ್ಯವಹಾರ ಶುರುವಾಗಿದೆ. ಸಂಚಾರ ವ್ಯವಸ್ಥೆಯೂ ಎಂದಿನಂತಿದ್ದು, ಹುಬ್ಬಳ್ಳಿ ಜನಜೀವನದ ಮೇಲೆ ಬಂದ್ ಯಾವುದೇ ಪರಿಣಾಮ ಬೀರಿಲ್ಲ.

ಬೆಂಗಳೂರು ವರದಿ:
ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಮಯ ೧೦ ಗಂಟೆಯಾಗಿದ್ದರೂ ಜನರು ಬೀದಿಗೆ ಬಂದಿರಲಿಲ್ಲ. ಜನರಿಲ್ಲದೇ ಇರುವುದರಿಂದ ಬೆಂಗಳೂರಿನಲ್ಲಿ ಬಸ್ ಗಳು ಖಾಲಿ ಖಾಲಿ ಇವೆ.

BMTC ಹಾಗೂ ವೋಲ್ವೋ ಬಸ್ ಸಂಚಾರ ಇದೇ, ಆದರೆ ಪ್ರಯಾಣಿಕರಿಲ್ಲ. ಪ್ರಯಾಣಿಕರು ಇಲ್ಲದೇ BMTC ಸಿಬ್ಬಂದಿ ಪರದಾಡುತ್ತಿರುವ ದೃಶ್ಯ ಕಂಡುಬಂದಿದೆ.

ಮೈಸೂರು ವರದಿ:
ಕರ್ನಾಟಕ ಬಂದ್ ಹಿನ್ನೆಲೆ ಮೈಸೂರಿನಲ್ಲಿ ಸದ್ಯಕ್ಕೆ ಜನಜೀವನ ಎಂದಿನಂತಿದೆ. ಮೈಸೂರಿನಲ್ಲಿ ಹಾಲು, ಪೇಪರ್‌ ಇಲ್ಲ. ಕೇಂದ್ರಿಯ ಬಸ್‌ ನಿಲ್ದಾಣದಿಂದ ಬಸ್‌ಗಳು ಸಂಚಾರ ಮಾಡುತ್ತಿವೆ. ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಎಂದಿನಂತೆ ಬಸ್ ಸಂಚಾರ ಆರಂಭವಾಗಿದೆ.

ಮೈಸೂರು ಹಾಗೂ ಬೆಂಗಳೂರು ನಡುವಿನ ಬಸ್‌ಗಳಿಗೆ ಯಾವುದೇ ತಡೆ ಇಲ್ಲ. ನಗರದಲ್ಲಿ ಆಟೋಗಳು, ಟ್ಯಾಕ್ಸಿಗಳು ಓಡಾಡುತ್ತಿದ್ದು,
ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಿ.ಆರ್ ತುಕಡಿಯೊಂದಿಗೆ ಪೋಲೀಸ್ ಬೀಗಿ ಬಂದೂಬಸ್ತ್ ಒದಗಿಸಲಾಗಿದೆ.

ಕಲಬುರಗಿ ವರದಿ:
ಕಲಬುರಗಿಯಲ್ಲಿ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಲಬುರಗಿಯಲ್ಲಿ ಬಸ್, ಆಟೋ ಸಂಚಾರ ಎಂದಿನಂತೆ ಮಾಮೂಲಾಗಿತ್ತು. ವ್ಯಾಪಾರೋದ್ಯಮ, ಹೋಟೆಲ್, ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ಓಪನ್ ಆಗಿವೆ. ಕರ್ನಾಟಕ ಬಂದ್ ಕಲಬುರಗಿಯಲ್ಲಿ ಪ್ರತಿಭಟನೆಗೆ ಮಾತ್ರ ಸೀಮಿತವಾಗಿದೆ.

ಬಳ್ಳಾರಿ ವರದಿ:
ಕನ್ನಡ ಒಕ್ಕೂಟ ಕಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನಲೆಯಲ್ಲಿ, ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಇಂದು ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಎಂದಿನಂತೆ ವಾಹನ ಸಂಚಾರ ಓಡಾಟವಿದ್ದು, ಬಳ್ಳಾರಿಯಲ್ಲಿ ಕರ್ನಾಟಕ ಬಂದ್ ಗೆ ಜನ ನೋ ರೆಸ್ಪಾನ್ಸ್ ಎಂದಿದ್ದಾರೆ.

ಚಾಮರಾಜನಗರ ವರದಿ:
ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಚಾಮರಾಜನಗರದಲ್ಲಿ ಪ್ರತಿಭಟನೆಯ ಕಿಚ್ಚು ಇದ್ದು, ನಗರದ ಭುವನೇಶ್ವರಿ ವೃತ್ತದಲ್ಲಿ ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟಿಸುತ್ತಿದ್ದ ಕನ್ನಡ ಸಂಘಟನೆಗಳ ಕಾರ್ಯಕರ್ತರನ್ನು ಬಂಧನ ಮಾಡಲಾಗಿದೆ.

ಉರಿಯುತ್ತಿದ್ದ ಟೈರ್ ಗಳ ಮುಂದೆ ಮಲಗಿ ಪ್ರತಿಭಟಿಸುತ್ತಿದ್ದವರ ಬಂಧಿಸಲಾಗಿದ್ದು, ಪೊಲೀಸರು ನೀರು ಹಾಕಿ ಬೆಂಕಿ ನಂದಿಸಿದರು.

ರಾಯಚೂರು ವರದಿ:
ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಅಧಿಕೃತವಾಗಿ ತರಕಾರಿ ಮಾರುಕಟ್ಟೆ ಬಂದ್ ಮಾಡಲಾಯಿತು. ಬಂದ್‌ಗೆ ತರಕಾರಿ ಮಾರಾಟಗಾರರು ಬೆಂಬಲ ವ್ಯಕ್ತಪಡಿಸಿದ್ದಾರೆ.

ತಳ್ಳುಗಾಡಿಯಲ್ಲಿ ಮಾತ್ರ ಮಾರಾಟಗಾರರು ವ್ಯಾಪಾರ ಮಾಡುತ್ತಿದ್ದಾರೆ. ಮುಂಜಾನೆ ರೈತರಿಂದ ತರಕಾರಿ ಖರೀದಿಸಿ ಗಲ್ಲಿಗಳಿಗೆ ಮಾರಾಟಕ್ಕೆ ಹೋಗಿದ್ದರು.

ಯಾದಗಿರಿ ವರದಿ:
ಕರ್ನಾಟಕ ಬಂದ್‌ಗೆ ಯಾದಗಿರಿಯಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಯಾದಗಿರಿ ಜನಜೀವನ ಎಂದಿನಂತಿದೆ. ಯಾದಗಿರಿ ನಗರದಿಂದ ಇತರೆ ಜಿಲ್ಲೆಗಳ ಮತ್ತು ರಾಜ್ಯಗಳಿಗೆ ಬಸ್ ಸಂಚಾರ ಆರಂಭವಾಗಿದೆ.

ಅಂಗಡಿ, ಹೋಟೆಲ್ ಗಳು ಓಪನ್ ಆಗಿದ್ದು, 11 ಗಂಟೆಯ ಬಳಿಕ ಕನ್ನಡಪರ ಸಂಘಟನೆಗಳಿಂದ ಬಂದ್‌ಗೆ ನೈತಿಕ ಬೆಂಬಲ ಸಾಧ್ಯತೆ ಇದೆ. 5ಕ್ಕೂ ಅಧಿಕ ಸಂಘಟನೆಗಳಿಂದ ಬಂದ್‌ಗೆ ನೈತಿಕ ಬೆಂಬಲ ವ್ಯಕ್ತವಾಗಿದೆ. ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಿದ್ದಾರೆ.

ಬೀದರ್ ವರದಿ:
ಕರ್ನಾಟಕ ಬಂದ್‌ಗೆ ಗಡಿ ಜಿಲ್ಲೆ ಬೀದರ್ ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಎಂದಿನಂತೆ ಸಹಜ ಸ್ಥಿತಿಯಲ್ಲಿ ಬೀದರ್ ಜನತೆ ಇದ್ದು, ನಗರದಿಂದ ಜಿಲ್ಲೆಯಾದ್ಯಂತ ಬಸ್ ಸಂಚಾರ ಆರಂಭವಾಗಿತ್ತು.

ಅಂಗಡಿ, ಹೋಟಲ್ ಗಳು ಓಪನ್ ಆಗಿದ್ದು, ಆಟೋ, ಖಾಸಗಿ ವಾಹನ ಸಂಚಾರ ನಿರಾಳವಾಗಿ ಸಂಚರಿಸುತ್ತಿವೆ. ಬೆಳಿಗ್ಗೆ 11ರ ನಂತರ ಸಾಂಕೇತಿಕವಾಗಿ ಮೆರವಣಿಗೆ ಮುಖಾಂತರ ಕನ್ನಡ ಪರ ಸಂಘನೆಗಳು ಮನವಿ ಪತ್ರ ಕೊಡಲಿದ್ದಾರೆ.

ಮಂಗಳೂರು ವರದಿ:
ಕರ್ನಾಟಕ ಬಂದ್‌ಗೆ ದ.ಕ ಜಿಲ್ಲೆಯಲ್ಲಿ ಬೆಂಬಲ ಸಿಕ್ಕಿಲ್ಲ. ಎಂದಿನಂತೆ ಜನ ಜೀವನ ಆರಂಭವಾಗಿದ್ದು, ಖಾಸಗಿ‌, ಸರ್ಕಾರಿ ಬಸ್ ಓಡಾಟ ಆರಂಭಿಸಿವೆ. ಸರ್ಕಾರಿ ಕಚೇರಿಗಳಲ್ಲಿಯೂ ಎಂದಿನಂತೆ ಕಾರ್ಯವೈಖರಿ ನಡೆಯುತ್ತಿದೆ.

   Chahal Jadeja ಅದಲು ಬದಲು ಸರಿ ಇಲ್ಲ ಎಂದ Henriques | Oneindia Kannada

   ಕೋಲಾರ ವರದಿ:
   ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನಲೆ, ಕೋಲಾರದಲ್ಲಿ ಬಂದ್ ಎಫೆಕ್ಟ್ ಕಾಣಲಿಲ್ಲ. ಜಿಲ್ಲೆಯಲ್ಲಿ ಸಾರಿಗೆ ಬಸ್ ಸಂಚಾರಕ್ಕೆ ಅಡ್ಡಿಯಿಲ್ಲ. ಎಂದಿನಂತೆ ಸರ್ಕಾರಿ, ಖಾಸಗಿ ಬಸ್ ಸಂಚಾರ ಆರಂಭವಾಗಿದೆ. ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡಲು ಕರೆ ಕೊಟ್ಟು, ಹೋರಾಟಕ್ಕೂ ಬಂದಿರಲಿಲ್ಲ. ಬಸ್ ನಿಲ್ದಾಣಗಳಲ್ಲಿ ಎಂದಿನಂತೆ ಸಾರ್ವಜನಿಕರು ಓಡಾಡುತ್ತಿದ್ದಾರೆ.

   English summary
   Various Kannada organizations have called on the Karnataka bandh on December 5 against the state government formed by the Maratha Development Corporation.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X