• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೊ.ಜಿ ವೆಂಕಟಸುಬ್ಬಯ್ಯ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರ ಕಂಬನಿ, ಸಂತಾಪ

|

ಬೆಂಗಳೂರು, ಏಪ್ರಿಲ್ 19: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ನಿಘಂಟು ತಜ್ಞ, ಶತಾಯುಷಿ ಪ್ರೊ.ಜಿ.ವೆಂಕಟಸುಬ್ಬಯ್ಯ (108) ಭಾನುವಾರ ರಾತ್ರಿ ನಿಧನರಾಗಿದ್ದಾರೆ.

ಹಿರಿಯ ಕನ್ನಡ ತಜ್ಞ ಪ್ರೊ.ಜಿ ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದು, ಭಾವಪೂರ್ಣ ಸಂತಾಪ ಸೂಚಿಸಿದ್ದಾರೆ.

ನಿಘಂಟು ತಜ್ಞ, ಶತಾಯುಷಿ ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನನಿಘಂಟು ತಜ್ಞ, ಶತಾಯುಷಿ ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನ

ಬಸವನಗುಡಿ ಬ್ರಾಹ್ಮಣ ಮಹಾಸಭಾ

1913ರ ಆಗಸ್ಟ್ 23ರಂದು ಜನಿಸಿದ ಪೂಜ್ಯ ಪ್ರೊ. ಜಿ. ವೆಂಕಟಸುಬ್ಬಯ್ಯನವರು ತಮ್ಮ 108ನೇ ವರ್ಷದಲ್ಲಿ ವಯೋಸಹಜ ಅನಾರೋಗ್ಯದಿಂದ ಭಾನುವಾರ ರಾತ್ರಿ ನಮ್ಮನ್ನಗಲಿದ್ದಾರೆ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಸವನಗುಡಿ ಬ್ರಾಹ್ಮಣ ಮಹಾಸಭಾ ಶ್ರದ್ಧಾಂಜಲಿ ಸಲ್ಲಿಸಿದೆ.

ನಿಘಂಟು ತಜ್ಞರೆಂದೇ ಕನ್ನಡ ನಾಡಿನಲ್ಲಿ ಪ್ರಖ್ಯಾತರಾದ ವೆಂಕಟಸುಬ್ಬಯ್ಯನವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ. ತಂದೆ ಗಂಜಾಂ ತಿಮ್ಮಣ್ಣಯ್ಯನವರು ಮೈಸೂರು ಅರಮನೆಯ ವಿದ್ವಾಂಸರಾಗಿದ್ದರು. ತಾಯಿ ಸುಬ್ಬಮ್ಮನವರು. ಪ್ರೊ.ಜಿ.ವಿ ಅವರ ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿಯೇ ನೆರವೇರಿತು. ಅವರು ಹೈಸ್ಕೂಲಿಗೆ ಸೇರಿದ್ದು ಮಧುಗಿರಿಯಲ್ಲಿ. ಇಂಟರ್ ಮೀಡಿಯೆಟ್ ಮತ್ತು ಆನರ್ಸ್ ಓದಿದ್ದು ಮೈಸೂರು ಮಹಾರಾಜ ಕಾಲೇಜಿನಲ್ಲಿ. 937ರಲ್ಲಿ ಎಂ.ಎ ಮತ್ತು 1939ರಲ್ಲಿ ಬಿ.ಟಿ ಪದವಿ ಗಳಿಸಿದರು.

ಪ್ರೊ. ಜಿ. ವೆಂಕಟಸುಬ್ಬಯ್ಯನವರು ಮೊದಲು ಉದ್ಯೋಗಕ್ಕಾಗಿ ಸೇರಿದ್ದು ಮಂಡ್ಯದ ಪುರಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ. ನಂತರ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ. ಬೆಂಗಳೂರಿನ ಹೈಸ್ಕೂಲಿನಲ್ಲಿ ಕೆಲಕಾಲ ಅಧ್ಯಾಪಕರಾಗಿ, ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಉಪ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, 1972ರಲ್ಲಿ ಸಂಜೆ ಕಾಲೇಜಿನ ಪ್ರಿನ್ಸಿಪಾಲರಾಗಿ 1973ರಲ್ಲಿ ನಿವೃತ್ತಿ ಪಡೆದರು.

ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸಂತಾಪ

ನಾಡಿನ ಖ್ಯಾತ ಸಂಶೋಧಕ, ನಿಘಂಟು ತಜ್ಞ ಫ್ರೊ. ಜಿ. ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಕೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ತಂದುಕೊಟ್ಟ ಹಿರಿಮೆ ಶ್ರೀಯುತರದು. ನಾಡು-ನುಡಿಗೆ ಸಲ್ಲಿಸಿದ ಸೇವೆ ಅನನ್ಯವಾದದ್ದು.

ನಾಡು-ನುಡಿಯ ಶ್ರೇಷ್ಠ ವಿದ್ವಾಂಸಕನನ್ನು ರಾಜ್ಯ ಕಳೆದುಕೊಂಡಂತಾಗಿದೆ. ಅವರ ಕುಟುಂಬ ವರ್ಗದವರಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ

ನಾಡಿನ ಹಿರಿಯ ಭಾಷಾತಜ್ಞ, ಸಂಶೋಧಕ ಶತಾಯುಷಿ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ನಿಘಂಟು ರಚನೆಗೆ, ಕನ್ನಡ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಪ್ರೊ. ಜಿ.ವಿ ಅವರ ಕೊಡುಗೆ ಅನನ್ಯವಾದುದು. ತಮ್ಮ ಸುದೀರ್ಘ ಜೀವಿತಾವಧಿಯಲ್ಲಿ ಇಗೋ ಕನ್ನಡ ಸಾಮಾಜಿಕ ನಿಘಂಟು ಸೇರಿದಂತೆ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಅಪೂರ್ವ ಸಾಧನೆಗೈದವರು. ಕೊನೆಯವರೆಗೂ ಬರವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಬೆರಗು ಮೂಡಿಸುತ್ತದೆ. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕದ ಅಪೂರ್ವ ರತ್ನವೊಂದು ಮರೆಯಾಯಿತು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ. ಅವರ ಕುಟುಂಬ, ಅಪಾರ ಶಿಷ್ಯವರ್ಗಕ್ಕೆ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಸಿಎಂ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸಚಿವ ಕೆ.ಎಸ್ ಈಶ್ವರಪ್ಪ

ಕನ್ನಡ ನಿಘಂಟು ತಜ್ಞ, ಪದ್ಮಶ್ರೀ ನಾಡೋಜ, ಪಂಪ ಪ್ರಶಸ್ತಿ, ಭಾಷಾ ಸಮ್ಮಾನ್ ಪುರಸ್ಕೃತ, ಕನ್ನಡ ನಾಡು ನುಡಿಗಾಗಿ ದುಡಿದ ಪ್ರೊ. ಜಿ.ವೆಂಕಟಸುಬ್ಬಯ್ಯ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ವೆಂಕಟಸುಬ್ಬಯ್ಯ ನಿಧನಕ್ಕೆ ಸಚಿವ ಅರವಿಂದ ಲಿಂಬಾವಳಿ ಸಂತಾಪ

ಕನ್ನಡದ ಹಿರಿಯ ವಿದ್ವಾಂಸ, ನಿಘಂಟು ತಜ್ಞ ಡಾ. ಜಿ. ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಕನ್ನಡದ ನಿಘಂಟು ಕ್ಷೇತ್ರಕ್ಕೆ ತಮ್ಮ ಅದ್ವಿತೀಯ ಪಾಂಡಿತ್ಯದ ಮೂಲಕ ಅನನ್ಯ ಕೊಡುಗೆ ಕೊಟ್ಟ ಡಾ.ಜಿ ವೆಂಕಟಸುಬ್ಬಯ್ಯ ಈ ನಾಡು ಕಂಡ ಅಪ್ರತಿಮ ವಿದ್ವಾಂಸರಲ್ಲಿ ಒಬ್ಬರು. ಕನ್ನಡ ಭಾಷೆಯ ಯಾವುದೇ ಶಬ್ದದ ಬಗ್ಗೆ ಯಾರೇ ಅನುಮಾನ ವ್ಯಕ್ತಪಡಿಸಿದರೂ, ಇಗೋ ಕನ್ನಡ ಎಂದು ಉತ್ತರಿಸಿ ಅವರ ಅನುಮಾನಕ್ಕೆ ತೆರೆ ಎಳೆದವರು ಜಿ ವಿ.

ಪ್ರಜಾವಾಣಿ ಪತ್ರಿಕೆಯಲ್ಲಿ ಹಲವು ದಶಕಗಳ ಕಾಲ "ಇಗೋ ಕನ್ನಡ " ಅಂಕಣ ಬರೆದು ನಾಡಿನ ಮನೆಮನೆಗೂ ಕನ್ನಡ ಶಬ್ದಗಳ ಅರ್ಥ ಸಂಪತ್ತನ್ನು ತಲುಪಿಸಿದರು. ಕನ್ನಡದಲ್ಲಿ ಯಾವುದೇ ನಿಘಂಟು ತಯಾರಾದರೂ ವೆಂಕಟಸುಬ್ಬಯ್ಯ ಅವರ ಪಾತ್ರ ಇರುತ್ತಿತ್ತು. ಸ್ವತಃ ಅವರೇ ಒಂದು ಕನ್ನಡದ ಆಕರಗ್ರಂಥ ಆಗಿದ್ದರು. ಸಾಹಿತ್ಯ, ವಿಮರ್ಶೆ, ಅನುವಾದ ಹೀಗೆ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಜಿ.ವೆಂಕಟಸುಬ್ಬಯ್ಯ ನಡೆದಾಡುವ ವಿಶ್ವಕೋಶ, ಶಬ್ದಬ್ರಹ್ಮ ಎಂದೇ ಖ್ಯಾತರಾಗಿದ್ದರು.

ಬೆಂಗಳೂರಿನಲ್ಲಿ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಿತ ನಾಡೋಜ, ಪಂಪ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಇವರು ಕನ್ನಡ ಭಾಷೆಗೆ ಸಲ್ಲಿಸಿದ ಅನನ್ಯ ಸೇವೆಗಾಗಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಿತು.

ಜಿವಿ ಎಂದೇ ಖ್ಯಾತರಾಗಿದ್ದ ಜಿ.ವೆಂಕಟಸುಬ್ಬಯ್ಯ ಅವರ ಅಗಲಿಕೆ ನಿಜಕ್ಕೂ ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಆದ ಅತಿ ದೊಡ್ಡ ನಷ್ಟ ಎಂದು ನಾನು ಭಾವಿಸಿದ್ದೇನೆ. ನಾನು ಕನ್ನಡದ ಈ ಅಪ್ರತಿಮ ವಿದ್ವಾಂಸರಿಗೆ ನಮನ ಸಲ್ಲಿಸುತ್ತೇನೆ ಎಂದು ಸಚಿವ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ವೆಂಕಟಸುಬ್ಬಯ್ಯ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂತಾಪ

ನಾಡಿನ ಖ್ಯಾತ ಸಂಶೋಧಕರು, ನಿಘಂಟು ತಜ್ಞರಾದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. ಶತಾಯುಷಿಗಳಾಗಿದ್ದ ಪ್ರೊ. ಜಿ .‌ವೆಂಕಟಸುಬ್ಬಯ್ಯ ಅವರ ನಿಧನದಿಂದ ಸಾರಸ್ವತ ಲೋಕ ಬಡವಾಗಿದೆ ಎಂದು ಶಿವಕುಮಾರ್ ಅವರು ಕಂಬನಿ ಮಿಡಿದಿದ್ದಾರೆ.

ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಖ್ಯಾತ ವಿದ್ವಾಂಸರು ಹಾಗೂ ಜನಪ್ರಿಯ ಪ್ರಾಧ್ಯಾಪಕರಾಗಿದ್ದವರು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ತಂದುಕೊಟ್ಟವರು. ಆ ಮೂಲಕ ಭಾಷೆ, ನಾಡು ನುಡಿಗೆ ಅಪ್ರತಿಮ ಸೇವೆ ಸಲ್ಲಿಸಿದ್ದಾರೆ ಎಂದು ಶಿವಕುಮಾರ್ ಅವರು ಸ್ಮರಿಸಿದ್ದಾರೆ.

   KS Eshwarappa ಕೊರೊನ ಹಾಗು ಲಾಕ್ಡೌನ್ ಕುರಿತು ಮಾತನಾಡಿದ್ದಾರೆ | Oneindia Kannada

   ಭಾಷೆ ಮೇಲಿನ ಇವರ ಪಾಂಡಿತ್ಯಕ್ಕೆ ನಡೆದಾಡುವ ನಿಘಂಟು, ಶಬ್ದ ಬ್ರಹ್ಮ ಎಂಬ ಬಿರುದುಗಳು ಬಂದಿವೆ. ಸಾಹಿತ್ಯ ವಿಮರ್ಶೆ, ಸಂಶೋಧನೆ, ಅನುವಾದ, ನಿಘಂಟು ರಚನೆ ಕ್ಷೇತ್ರಗಳಲ್ಲಿ ಇವರ ಸೇವೆ ಅಪಾರ. ಅನೇಕ ಪುಸ್ತಕಗಳನ್ನು, ನಿಘಂಟುಗಳು ತಮ್ಮ ಅಂಕಣದಿಂದ ಮನೆಮಾತಾಗಿದ್ದಾರೆ ಎಂದು ಕೊಂಡಾಡಿದ್ದಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರು, ಅಸಂಖ್ಯ ಅಭಿಮಾನಿಗಳಿಗೆ ಇವರ ಅಗಲಿಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿ.ಕೆ ಶಿವಕುಮಾರ್ ಅವರು ಶೋಕಸಂದೇಶದಲ್ಲಿ ತಿಳಿಸಿದ್ದಾರೆ.

   English summary
   Here are the list of Dignitaries Offers Condolences to Death of veteran Kannada writer Prof G Venkatasubbaiah. He was suffered from age-related illness, died on Sunday night.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   loader
   X