ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗನ ಗೆಲುವಿಗಾಗಿ ನಾಲ್ಕೂ ಕ್ಷೇತ್ರಗಳನ್ನು ಬಲಿಕೊಟ್ಟರೆ ಯಡಿಯೂರಪ್ಪ?

By ಯಶೋಧರ ಪಟಕೂಟ
|
Google Oneindia Kannada News

Recommended Video

ಮಗನ ಗೆಲುವಿಗಾಗಿ ಶಿವಮೊಗ್ಗ ಬಿಟ್ಟು ಉಳಿದ 4 ಕ್ಷೇತ್ರಗಳನ್ನ ಬಲಿ ಕೊಟ್ರಾ ಬಿ ಎಸ್ ವೈ | Oneindia Kannada

ಬೆಂಗಳೂರು, ನವೆಂಬರ್ 06 : ಐದು ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ನಾಲ್ಕರಲ್ಲಿ ಸೋತು ಒಂದರಲ್ಲಿ ಗೆಲುವಿನ ಏದುಸಿರು ಬಿಟ್ಟಿರುವುದು, ಮುಂದಿನ ಲೋಕಸಭೆ ಚುನಾವಣೆಗೆ ಯಾವುದೇ ದಿಕ್ಸೂಚಿಯಾಗದೇ ಇರಬಹುದು. ಆದರೆ, ಈ ಸೋಲಿನಿಂದ ಪಾಠ ಕಲಿಯದಿದ್ದರೆ ಬಿಜೆಪಿಗೆ ಮುಂದೆ ಕೇಡುಗಾಲ ಕಟ್ಟಿಟ್ಟ ಬುತ್ತಿ.

ಈ ಹೀನಾಯ ಸೋಲಿನಿಂದ ಭಾರತೀಯ ಜನತಾ ಪಕ್ಷ ಕಂಗೆಡುವ ಬದಲು, ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ದೆಹಲಿಯಲ್ಲಿ ಕುಳಿತಿರುವ ಹಿರಿಯ ನಾಯಕರು, ಉತ್ತರ ಭಾರತದ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ಳುವ ಬದಲು, ದಕ್ಷಿಣ ಭಾರತದತ್ತಲೂ ಒಂದು ಬಾರಿ ಇಣುಕಿ ನೋಡಬೇಕಿದೆ.

ಶಿವಮೊಗ್ಗದಲ್ಲಿ ಕಾಂಗ್ರೆಸ್‌-ಜೆಡಿಎಸ್ ಸೋಲಿಗೆ 5 ಕಾರಣಗಳು!ಶಿವಮೊಗ್ಗದಲ್ಲಿ ಕಾಂಗ್ರೆಸ್‌-ಜೆಡಿಎಸ್ ಸೋಲಿಗೆ 5 ಕಾರಣಗಳು!

ಶಿವಮೊಗ್ಗವನ್ನು ಹೊರತುಪಡಿಸಿದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ ಭಾರತೀಯ ಜನತಾ ಪಕ್ಷ ಎಲ್ಲಿಯೂ ಸಾಟಿಯಾಗಿರಲಿಲ್ಲ. ಬಳ್ಳಾರಿ, ಮಂಡ್ಯ ಲೋಕಸಭೆ ಮತ್ತು ಜಮಖಂಡಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹೀನಾಯ ಸೋಲು ಕಂಡಿದೆ. ಎಲ್ಲೆಡೆಯೂ ಮೈತ್ರಿಕೂಟದ ಮತಗಳ ಹತ್ತಿರವೂ ಸುಳಿದಿಲ್ಲ.

ಶಿವಮೊಗ್ಗ ಉಪ ಚುನಾವಣೆ Live : ಸೊರಬದಲ್ಲಿಯೇ ಜೆಡಿಎಸ್‌ಗೆ ಹಿನ್ನಡೆಶಿವಮೊಗ್ಗ ಉಪ ಚುನಾವಣೆ Live : ಸೊರಬದಲ್ಲಿಯೇ ಜೆಡಿಎಸ್‌ಗೆ ಹಿನ್ನಡೆ

ಯಡಿಯೂರಪ್ಪನವರು ಶಿವಮೊಗ್ಗದಲ್ಲಿ ಗೆಲುವಿನ ಕಾರಣಕರ್ತರಾದರೆ, ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಕಂಡ ಸೋಲಿನ ಹಕ್ಕುದಾರರು ಕೂಡ ಹೌದು. ತಮ್ಮ ಮಗನ ಗೆಲುವಿಗಾಗಿ ಯಡಿಯೂರಪ್ಪನವರು ಉಳಿದ ನಾಲ್ಕೂ ಕ್ಷೇತ್ರಗಳನ್ನು ಬಲಿಕೊಟ್ಟರೆ ಎಂಬ ಮಾತು ಕೇಳಿಬಂದರೂ ಅಚ್ಚರಿಯಿಲ್ಲ.

ಬಿಎಸ್ವೈ ಮುಂದೆ ನಡೆಯಲಿಲ್ಲ ಸಿದ್ದು, ಎಚ್ಡಿಕೆ ಆಟ

ಬಿಎಸ್ವೈ ಮುಂದೆ ನಡೆಯಲಿಲ್ಲ ಸಿದ್ದು, ಎಚ್ಡಿಕೆ ಆಟ

ಶಿವಮೊಗ್ಗದಲ್ಲಿ ಮತಗಳು ಸ್ವಲ್ಪ ಏರುಪೇರಾಗಿದ್ದರೂ ಯಡಿಯೂರಪ್ಪನವರು ಮುಖಭಂಗ ಅನುಭವಿಸಬೇಕಾಗಿತ್ತು. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಡೆ ಕ್ಷಣದಲ್ಲಿ ಕಣಕ್ಕಿಳಿದಿದ್ದ ಮಧು ಬಂಗಾರಪ್ಪ ಅವರ ಗೆಲುವಿಗಾಗಿ ಸ್ವತಃ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಚಾರಕ್ಕಿಳಿದಿದ್ದರೂ ಯಡಿಯೂರಪ್ಪನವರ ಬಲದ ಮುಂದೆ ನಿಲ್ಲಲಿಲ್ಲ.

ಬಿಜೆಪಿ ದೌರ್ಬಲ್ಯ ಎತ್ತಿ ತೋರಿಸಿದ ಫಲಿತಾಂಶ

ಬಿಜೆಪಿ ದೌರ್ಬಲ್ಯ ಎತ್ತಿ ತೋರಿಸಿದ ಫಲಿತಾಂಶ

ಇದು 75 ವರ್ಷದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಲ ಪ್ರದರ್ಶನವಾದರೆ, ಯಡಿಯೂರಪ್ಪನವರಿಲ್ಲದಿದ್ದರೆ ಕರ್ನಾಟಕದಲ್ಲಿ ಬಿಜೆಪಿಗೆ ಗೆಲುವು ಅಸಾಧ್ಯ ಎಂಬ ಪಕ್ಷದ ದೌರ್ಬಲ್ಯವನ್ನೂ ಎತ್ತಿ ತೋರಿಸಿದೆ. ಯಡಿಯೂರಪ್ಪ ಹೊರತಾಗಿ ಬಿಜೆಪಿಯ ಹಲವಾರು ನಾಯಕರು ಶತಾಯಗತಾಯ ಪ್ರಯತ್ನಿಸಿದರೂ, ಬಳ್ಳಾರಿ, ಜಮಖಂಡಿ, ಮಂಡ್ಯದಲ್ಲಿ ಬಿಜೆಪಿಗೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಇನ್ನು ರಾಮನಗರದತ್ತ ಈ ನಾಯಕರು ಸುಳಿಯದಿದ್ದರಿಂದ ಬಿಜೆಪಿ ಅಭ್ಯರ್ಥಿಯೇ ಸಿಡಿಮಿಡಿಗೊಂಡು ಕಾಂಗ್ರೆಸ್ಸಿಗೆ ವಾಪಸ್ ಹೋಗುವಂತಾಯಿತು. ಈ ಬೆಳವಣಿಗೆಯಿಂದಾಗಿ ಬಿಜೆಪಿ ಎಲ್ಲ ನಾಯಕರು ಇಡೀ ಕರ್ನಾಟಕದಲ್ಲಿ ನಗೆಪಾಟಲಿಗೀಡಾಗಿದ್ದಾರೆ. ಇದರಲ್ಲಿ ಯಡಿಯೂರಪ್ಪನವರ ಪಾಲೂ ಇದೆ.

ಉಪ ಚುನಾವಣೆ ಮುಗಿಯುತ್ತಲೇ ಶಿವಮೊಗ್ಗ ಬಿಜೆಪಿಯಲ್ಲಿ ಅಸಮಾಧಾನ!ಉಪ ಚುನಾವಣೆ ಮುಗಿಯುತ್ತಲೇ ಶಿವಮೊಗ್ಗ ಬಿಜೆಪಿಯಲ್ಲಿ ಅಸಮಾಧಾನ!

ಪ್ರತಿಷ್ಠೆಯನ್ನೇ ಪಣಕ್ಕಿಟ್ಟಿದ್ದ ಯಡಿಯೂರಪ್ಪ

ಪ್ರತಿಷ್ಠೆಯನ್ನೇ ಪಣಕ್ಕಿಟ್ಟಿದ್ದ ಯಡಿಯೂರಪ್ಪ

ಶಿವಮೊಗ್ಗದಲ್ಲಿ ಯಡಿಯೂರಪ್ಪನವರು ತಮ್ಮ ಪ್ರತಿಷ್ಠೆಯನ್ನೇ ಪಣಕ್ಕಿಟ್ಟಿದ್ದರು. ತಮ್ಮ ಬಲವನ್ನು ಬಿಜೆಪಿ ಹೈಕಮಾಂಡ್ ಗೆ ತೋರಿಸುವ ಉದ್ದೇಶದಿಂದಲಾದರೂ ಅವರು ಶಿವಮೊಗ್ಗದಲ್ಲಿ ಗೆದ್ದೇ ಗೆಲ್ಲಬೇಕಾಗಿತ್ತು. ಗೆಲುವೊಂದನ್ನೇ ಗುರಿಯಾಗಿಟ್ಟುಕೊಂಡಿದ್ದ ಯಡಿಯೂರಪ್ಪನವರು ತಮ್ಮ ಸರ್ವ ಶಕ್ತಿಯನ್ನೆಲ್ಲ ಶಿವಮೊಗ್ಗದಲ್ಲಿ ಧಾರೆಯೆರೆದಿದ್ದಾರೆ. ಆದರೆ, ಉಳಿದ ಕ್ಷೇತ್ರಗಳಲ್ಲಿ ಕಣ್ಣೆತ್ತಿಯೂ ನೋಡಿಲ್ಲದಿರುವುದು ಬಿಜೆಪಿಗೆ ಭಾರೀ ಹೊಡೆತ ನೀಡಿದೆ. ಅದರಲ್ಲೂ ಈಬಾರಿ ಎರಡು ಪ್ರಮುಖ ಪಕ್ಷಗಳು ಕೈಜೋಡಿಸಿದ್ದರಿಂದ ಯಡಿಯೂರಪ್ಪನವರು ಮುಖ ಉಳಿಸಿಕೊಳ್ಳಲಾದರೂ ಶಿವಮೊಗ್ಗದಲ್ಲಿ ಗೆಲ್ಲಲೇಬೇಕಿತ್ತು.

ರೆಡ್ಡಿ ಸಹೋದರರಿಗೆ ಮಣ್ಣು ಮುಕ್ಕಿಸಿದ ಬಳ್ಳಾರಿ

ರೆಡ್ಡಿ ಸಹೋದರರಿಗೆ ಮಣ್ಣು ಮುಕ್ಕಿಸಿದ ಬಳ್ಳಾರಿ

ಇನ್ನು ಬಳ್ಳಾರಿಯಲ್ಲಿ ತಮ್ಮ ಸಹೋದರಿ ಜೆ ಶಾಂತಾ ಅವರ ಗೆಲುವಿಗಾಗಿ ಮಾಜಿ ಸಂಸದ ಬಿ ಶ್ರೀರಾಮುಲು ಅವರು ಏನೇ ಹರಸಾಹಸ ಮಾಡಿದರೂ, ಡಿಕೆ ಶಿವಕುಮಾರ್ ಅವರ ಬಲದ ಮುಂದೆ ರೆಡ್ಡಿಗಳ ಆಟ ನಡೆದಿಲ್ಲ. ಜನಾರ್ದನ ರೆಡ್ಡಿ ಅವರು ಸಿದ್ದರಾಮಯ್ಯನವರ ಮಗನ ಸಾವಿನ ಬಗ್ಗೆ ಮಾತನ್ನಾಡಿದ್ದು ಅವರಿಗೇ ಮುಳುವಾಗಿದೆ. ಇಂಥ ಮಾತು ಆಡಿದ್ದಕ್ಕೆ ಜನತಾ ಜನಾರ್ಧನನೇ ಜನಾರ್ದನ ರೆಡ್ಡಿಯವರಿಗೆ ತಕ್ಕ ಪಾಠ ಕಲಿಸಿದ್ದಾನೆ ಎಂದು ಸಿದ್ದರಾಮಯ್ಯನವರು ಮಾರ್ಮಿಕವಾಗಿ ನುಡಿದಿದ್ದಾರೆ. ಬಳ್ಳಾರಿಯಲ್ಲಿ ಉಗ್ರಪ್ಪನವರು ಎಲ್ಲ 5 ಲಕ್ಷಕ್ಕೂ ಹೆಚ್ಚು ದಾಖಲೆಯ ಮತಗಳನ್ನು ಗಳಿಸಿದರೆ, ಶಾಂತಾ ಅವರು 3.6 ಲಕ್ಷ ಮತಗಳನ್ನು ಗಳಿಸಿ ಹೀನಾಯ ಸೋಲು ಕಂಡಿದ್ದಾರೆ.

ಬಿಜೆಪಿಯಲ್ಲಿ ಎರಡನೇ ಸಾಲಿನ ನಾಯಕರು ಯಾರಿದ್ದಾರೆ?

ಬಿಜೆಪಿಯಲ್ಲಿ ಎರಡನೇ ಸಾಲಿನ ನಾಯಕರು ಯಾರಿದ್ದಾರೆ?

ರೆಡ್ಡಿ ಸಹೋದರರದು ಈ ಕಥೆಯಾದರೆ, ಬಿಜೆಪಿಯಲ್ಲಿ ಉಳಿದ ನಾಯಕರು ತಾವು ಎರಡನೇ ಸಾಲಿನಲ್ಲಿ ನಿಲ್ಲಲೂ ಲಾಯಕ್ಕಿಲ್ಲ ಎಂಬುದನ್ನು ಈ ಉಪ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಡಿವಿ ಸದಾನಂದ ಗೌಡರು, ಜಗದೀಶ್ ಶೆಟ್ಟರ್ ಅವರು, ಮಾಜಿ ಉಪ ಮುಖ್ಯಮಂತ್ರಿಗಳಾದ ಕೆಎಸ್ ಈಶ್ವರಪ್ಪನವರು, ಆರ್ ಅಶೋಕ್ ಅವರು ಒಬ್ಬೇ ಒಬ್ಬ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಸೋತಿದ್ದಾರೆ. ಈ ಕಾರಣದಿಂದಾಗಿಯೇ, ಯಡಿಯೂರಪ್ಪನವರು 75 ದಾಟಿದ್ದರೂ, ಬಿಜೆಪಿಯ ಹಿರಿಯ ನಾಯಕರು ಬೇರೊಬ್ಬ ನಾಯಕನ ಮೇಲೆ ನಂಬಿಕೆ ಇಡುವ ಕುರಿತು ಕೂಡ ಚಿಂತಿಸುತ್ತಿಲ್ಲ. ಯಡಿಯೂರಪ್ಪನವರನ್ನು ಮೂಲೆಗುಂಪಾಗಿಸಿದರೆ ಲೋಕಸಭೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಗಂಟುಮೂಟೆ ಕಟ್ಟಬೇಕಾಗುತ್ತದೆ.

4 ಕ್ಷೇತ್ರಗಳ ಸೋಲಿಗೆ ಕಾರಣ ಕೇಳಬೇಕು ಅಮಿತ್ ಶಾ

4 ಕ್ಷೇತ್ರಗಳ ಸೋಲಿಗೆ ಕಾರಣ ಕೇಳಬೇಕು ಅಮಿತ್ ಶಾ

ಶಿವಮೊಗ್ಗದಲ್ಲಿ ಗೆಲುವಿನ ಶ್ರೇಯಸ್ಸು ಮಾತ್ರವಲ್ಲ, ಮಂಡ್ಯ, ಬಳ್ಳಾರಿ, ಜಮಖಂಡಿ, ರಾಮನಗರದಲ್ಲಿನ ಸೋಲಿನ ಹೊಣೆಗಾರಿಕೆಯನ್ನೂ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪನವರೇ ಹೊರಬೇಕಾಗುತ್ತದೆ. ಈ ಸೋಲಿಗೆ ಕಾರಣ ನೀಡಬೇಕೆಂದು ಕೇಳುವ ಧೈರ್ಯವನ್ನೂ ಬಿಜೆಪಿ ಹೈಕಮಾಂಡ್ ತೋರಬೇಕು. ಪ್ರಚಾರ ಮಾಡುವಾಗ ಎಲ್ಲ 5 ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಲಿದೆ, ಮೈತ್ರಿಕೂಟಕ್ಕೆ ಜನ ಪಾಠ ಕಲಿಸಲಿದ್ದಾರೆ ಎಂಬ ಮಾತುಗಳಿಗೆ ಯಡಿಯೂರಪ್ಪನವರೇ ಉತ್ತರ ನೀಡಬೇಕು. ಶಿವಮೊಗ್ಗದಲ್ಲಿ ಗೆದ್ದಿರುವುದು ಭಾರೀ ಅಭಿಮಾನದಿಂದ ಹೇಳಿಕೊಳ್ಳುವಂಥದ್ದೂ ಅಲ್ಲ.

English summary
Did Yeddyurappa sacrifice other constituencies for his son's victory in Shivamogga? Who is there in BJP as alternative leader? What would have happened had Yeddyurappa lost Shivamogga Lok Sabha seat also? An analysis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X