ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BTS2020: ರಾಜ್ಯದ ಮೊದಲ ಜೈವಿಕ ಆರ್ಥಿಕತೆ ವರದಿ ಬಿಡುಗಡೆ!

|
Google Oneindia Kannada News

ಬೆಂಗಳೂರು, ನ. 20: ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕದ ಜೈವಿಕ ಆರ್ಥಿಕತೆ (ಬಯೋ ಎಕಾನಮಿ) ಕೊಡುಗೆಯನ್ನು 5 ಸಾವಿರ ಕೋಟಿ ಡಾಲರ್‌ಗಳಿಗೆ ಹೆಚ್ಚಿಸುವ ದಿಸೆಯಲ್ಲಿ ಲಸಿಕೆ, ಕೃಷಿ ತಾಂತ್ರಿಕತೆ ಜೈವಿಕ-ತಯಾರಿಕೆ ಹಾಗೂ ಸಾಗರ ಸಂಬಂಧಿ ಜೈವಿಕ ತಾಂತ್ರಿಕತೆಯಲ್ಲಿ ಮೌಲ್ಯವರ್ಧನೆ ವಲಯಗಳಿಗೆ ಒತ್ತು ನೀಡಲಾಗುವುದು ಎಂದು ಡಿಸಿಎಂ ಡಾ.ಸಿ.ಎನ್. ಅಶ್ವಥ್ ನಾರಾಯಣ ಹೇಳಿದರು.

ರಾಜ್ಯದ ಮೊಟ್ಟ ಮೊದಲ ಕರ್ನಾಟಕ ಜೈವಿಕ ಆರ್ಥಿಕತೆ ವರದಿ-2020ಯನ್ನು ಶುಕ್ರವಾರ ಬೆಂಗಳೂರು ತಂತ್ರಜ್ಞಾನ ಮೇಳದಲ್ಲಿ ಬಿಡುಗಡೆ ಮಾಡಿ ಮಾತನಾಡಿ, ವರದಿಯು 7 ಪ್ರಮುಖ ಶಿಫಾರಸುಗಳನ್ನು ಒಳಗೊಂಡಿದೆ ಎಂದರು.

BTS-2020: ವರ್ಚುಯಲ್ ಮೇಳಕ್ಕೆ ನಿರೀಕ್ಷೆ ಮೀರಿ ಸ್ಪಂದನೆ!BTS-2020: ವರ್ಚುಯಲ್ ಮೇಳಕ್ಕೆ ನಿರೀಕ್ಷೆ ಮೀರಿ ಸ್ಪಂದನೆ!

ಕೃಷಿ, ಪಶುಸಂಗೋಪನೆ, ಪೌಷ್ಟಿಕತೆ, ಲಸಿಕೆ, ಆರೋಗ್ಯ ಸೇವೆ, ಜೈವಿಕ ಇಂಧನ, ಸಾಗರ ಜೀವನೋಪಾಯ ಕ್ಷೇತ್ರಗಳಲ್ಲಿ ಆಗುವ ಜೈವಿಕ ತಂತ್ರಜ್ಞಾನದ ಬೆಳವಣಿಗೆಗಳು ಜನಸಾಮಾನ್ಯರ ಬದುಕನ್ನು ನೇರವಾಗಿ ಸುಧಾರಿಸಲಿವೆ ಎಂದು ಡಿಸಿಎಂ ಅಭಿಪ್ರಾಯಪಟ್ಟಿದ್ದಾರೆ. ಚರ್ಮ ಸೇರಿದಂತೆ ದೇಹದ ಯಾವುದೇ ಅಂಗವನ್ನು ಪ್ರಯೋಗಾಲಯದಲ್ಲಿ ಬೆಳೆಸಬಹುದಾದ ಮಟ್ಟಕ್ಕೆ ಜೈವಿಕ ತಂತ್ರಜ್ಞಾನ ಬೆಳೆದಿದೆ. ಜೀನ್ ಎಡಿಟಿಂಗ್ ನಿಂದ ವಂಶಪಾರಂಪಾರ್ಯವಾಗಿ ಬರುವ ಕಾಯಿಲೆಗಳನ್ನು ನಿವಾರಿಸಬಹುದು ಎಂಬ ಆಶಾಭಾವ ಮೂಡಿದೆ. ಮುಂಬರುವ ದಿನಗಳಲ್ಲಿ ಈ ಕ್ಷೇತ್ರದ ಸಂಶೋಧನೆಗಳು ಬದುಕಿನ ಗುಣಮಟ್ಟದ ಮೇಲೆ ಅಗಾಧ ಪರಿಣಾಮ ಬೀರಲಿವೆ ಎಂದು ಡಾ. ಅಶ್ವಥ್ ನಾರಾಯಣ ವಿವರಿಸಿದರು.

ನನೆಗುದಿಗೆ ಬಿದ್ದಿದ್ದ ಯೋಜನೆ

ನನೆಗುದಿಗೆ ಬಿದ್ದಿದ್ದ ಯೋಜನೆ

ಕರ್ನಾಟಕ ಸರ್ಕಾರವು ಜೈವಿಕ ತಂತ್ರಜ್ಞಾನದ ಸಾಮರ್ಥ್ಯವನ್ನು ಮನಗಂಡಿದೆ. ಹೀಗಾಗಿ, 20 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಯೊಂದಕ್ಕೆ ಇದೀಗ ಚಾಲನೆ ಸಿಕ್ಕಿದೆ. ಇದರ ಪರಿಣಾಮವಾಗಿ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ 7000 ಕೋಟಿ ರೂಪಾಯಿ ವೆಚ್ಚದಲ್ಲಿ 80 ಲಕ್ಷ ಚದುರ ಅಡಿಗಳಷ್ಟು ವಿಸ್ತೀರ್ಣದಲ್ಲಿ ಜೈವಿಕ-ಉದ್ಯಮ ಸಮುಚ್ಚಯದ (ಬಯೋ-ಇಂಡಸ್ಟ್ರಿ ಕ್ಲಸ್ಟರ್) ನಿರ್ಮಾಣ ಆರಂಭಗೊಂಡಿದೆ ಎಂದು ಡಾ. ಅಶ್ವಥ್ ನಾರಾಯಣ್ ತಿಳಿಸಿದರು.

ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರಗಳು

ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರಗಳು

ನಮ್ಮ ರಾಜ್ಯದಲ್ಲಿ 35ಕ್ಕೂ ಹೆಚ್ಚು ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರಗಳು ಹಾಗೂ ಅತ್ಯಾಧುನಿಕ ಬಯೋ-ಇನ್ ಕ್ಯುಬೇಟರ್ ಗಳು (ಜೈವಿಕ ಪರಿಪೋಷಕಗಳು) ಇವೆ. ಸರ್ಕಾರದ ಅನುದಾನದ ನೆರವಿನಿಂದ 150ಕ್ಕೂ ಹೆಚ್ಚು ನವೋದ್ಯಮಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಜೈವಿಕ ತಂತ್ರಜ್ಞಾನದ ನೆರವಿನಿಂದ ಹೆಣ್ಣು ಕರುಗಳಿಗೆ ಮಾತ್ರವೇ ಜನ್ಮ ನೀಡುವಂತೆ ಮಾಡಲು ಸಾಧ್ಯ ಎಂಬುದನ್ನು ತೋರಿಸಿರುವ ಜೀವ ಸೈನ್ಸಸ್ ಸೇರಿದಂತೆ ಹಲವು ಕಂಪನಿಗಳು ಬಯೋ-ವೆಂಚರ್ ಅನುದಾನದೊಂದಿಗೆ ಮುನ್ನಡೆದಿದ್ದು, ಇವೆಲ್ಲವೂ 5000 ಕೋಟಿ ಡಾಲರ್ ಆರ್ಥಿಕ ಕೊಡುಗೆಯ ಗುರಿ ಸಾಧನೆಗೆ ಪೂರಕವಾಗಿದೆ ಎಂದು ಅಶ್ವತ್ಥ ನಾರಾಯಣ ವಿವರಿಸಿದರು.

ಮುಂದಿನ ತಲೆಮಾರಿನ ಲಸಿಕೆ

ಮುಂದಿನ ತಲೆಮಾರಿನ ಲಸಿಕೆ

ಜೈವಿಕ ತಂತ್ರಜ್ಞಾನ ದೂರದರ್ಶಿತ್ವ ಮಂಡಳಿ ಅಧ್ಯಕ್ಷರಾದ ಕಿರಣ್ ಮಜುಂದಾರ್ ಷಾ ಅವರು ಮಾತನಾಡಿ, ಮುಂದಿನ ತಲೆಮಾರಿನ ಲಸಿಕೆ (ನೆಕ್ಸ್ಟ್ ಜೆನ್ ವ್ಯಾಕ್ಸಿನ್), ನೆಕ್ಸ್ಟ್ ಜೆನ್ ಆಂಟಿಬಯಾಟಿಕ್, ಪರಿಸರ ಸ್ನೇಹಿ ನೆಕ್ಸ್ಟ್ ಜೆನ್ ಬ್ಯಾಟರಿಗಳು, ಎನ್ ಜೈಮ್ ತಾಂತ್ರಿಕತೆಗಳು, ಜೈವಿಕ ಇಂಧನಗಳು ಮುಂಬರುವ ದಿನಗಳಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಅಭಿಪ್ರಾಯಪಟ್ಟರು.

ಮಾಲಿನ್ಯದಿಂದಾಗಿ ನಮ್ಮ ಜಲಮೂಲಗಳು ಮಲಿನವಾಗುತ್ತಿವೆ. ಎನ್ ಜೈಮ್ ಟೆಕ್ನಾಲಜಿ (ಕಿಣ್ವ ತಾಂತ್ರಿಕತೆ) ಒಳಗೊಂಡ ಜೈವಿಕ ತಂತ್ರಜ್ಞಾನದ ನೆರವಿನಿಂದ ಇವೆಲ್ಲವನ್ನೂ ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಬಹುದು. ಕೇಂದ್ರ ಸರ್ಕಾರವು ನಮ್ಮ ಜಲಮೂಲಗಳನ್ನು ಈ ತಂತ್ರಜ್ಞಾನ ಬಳಸಿ ಸ್ವಚ್ಛಗೊಳಿಸುವುದನ್ನು ಕಡ್ಡಾಯಗೊಳಿಸಬೇಕು. ಅದೇ ರೀತಿ, ಕುಲಾಂತರಿ ಬೆಳೆಗಳನ್ನು ಪ್ರಯೋಗಾರ್ಥವಾಗಿ ಬೆಳೆಯಲು ಅನುಮತಿ ನೀಡಿ ಅವುಗಳ ಸಾಧಕ-ಬಾಧಕ ಅಧ್ಯಯನಕ್ಕೆ ಅನುವು ಮಾಡಿಕೊಡಬೇಕು ಎಂದರು.

ಹಳೆಯ ಜೈವಿಕ ನೀತಿ

ಹಳೆಯ ಜೈವಿಕ ನೀತಿ

ಸುಮಾರು 20 ವರ್ಷಗಳ ಹಿಂದೆ ಜೈವಿಕ ತಂತ್ರಜ್ಞಾನ ನೀತಿಯನ್ನು ರಾಜ್ಯವು ಮೊದಲ ಬಾರಿಗೆ ಜಾರಿಗೊಳಿಸಿತು. ಆಗ ಭವಿಷ್ಯದಲ್ಲಿ ಇದು ಇಷ್ಟು ವ್ಯಾಪಕವಾಗಿ ಬೆಳೆಯುತ್ತದೆಂಬ ಕಲ್ಪನೆ ಯಾರಿಗೂ ಇರಲಿಲ್ಲ. ಈ ಕ್ಷೇತ್ರ ಈಗ ರಾಜ್ಯದ ಜಿಎಸ್ ಡಿಪಿ ಗೆ ಶೇ 10.23ರಷ್ಟು ಕೊಡುಗೆ ನೀಡುತ್ತಿದೆ. ಜೈವಿಕ ಆರ್ಥಿಕತೆ ವರದಿಯಲ್ಲಿ ನೀಡಲಾಗಿರುವ ಸಲಹೆಗಳನ್ನು ಅಳವಡಿಸಿಕೊಂಡರೆ ಈ ವಲಯವು ಇನ್ನಷ್ಟು ದೊಡ್ಡದಾಗಿ ಬೆಳೆದು ಜನರ ಬದುಕಿನ ಸುಧಾರಣೆಗೆ ಸಹಕಾರಿಯಾಗಲಿದೆ.

ಜೊತೆಗೆ ಈಗ ಸುಮಾರು 2200 ಕೋಟಿ ಡಾಲರ್ ಇರುವ ಈ ವಲಯದ ಕೊಡುಗೆಯನ್ನು ಐದು ವರ್ಷಗಳಲ್ಲಿ 5000 ಕೋಟಿ ಡಾಲರ್ ಗೆ ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ಐಟಿ-ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏಬಲ್ (ಅಸೋಸಿಯೇಷನ್ ಫಾರ್ ಬಯೋಟೆಕ್-ಲೆಡ್ ಎಂಟರ್ ಪ್ರೈಸಸ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣನ್ ಸುರೇಶ್ ಅವರು ವರದಿಯಲ್ಲಿರುವ ಅಂಶಗಳ ಕುರಿತು ಮಾತನಾಡಿದರು. ಕರ್ನಾಟಕ ನಾವೀನ್ಯತಾ ಮತ್ತು ತಂತ್ರಜ್ಞಾನ ಸಂಸ್ಥೆಯ (ಕಿಟ್ಸ್) ವ್ಯವಸ್ಥಾಪಕ ನಿರ್ದೇಶಕಿ ಮೀನಾ ನಾಗರಾಜ್ ವೇದಿಕೆ ಮೇಲಿದ್ದರು. ಐಬ್ಯಾಬ್ ಮುಖ್ಯಸ್ಥ ಸುಬ್ರಮಣ್ಯಂ ಆನ್ ಲೈನ್ ಮೂಲಕ ಪಾಲ್ಗೊಂಡಿದ್ದರು.

ವರದಿಯ ಪ್ರಮುಖ ಶಿಫಾರಸುಗಳು

ವರದಿಯ ಪ್ರಮುಖ ಶಿಫಾರಸುಗಳು

ರಾಜ್ಯದ ಮೊತ್ತಮೊದಲ ಕರ್ನಾಟಕ ಜೈವಿಕ-ಆರ್ಥಿಕತೆ ವರದಿಯಲ್ಲಿನ ಪ್ರಮುಖ ಶಿಫಾರಸುಗಳು ಹೀಗಿವೆ:

* ಲಸಿಕಾ ವಲಯ ಸ್ಥಾಪಿಸಬೇಕು

* ಜೈವಿಕ-ತಯಾರಿಕಾ (ಬಯೋ ಮ್ಯಾನಫ್ಯಾಕ್ಚರಿಂಗ್) ವಲಯ ಸ್ಥಾಪಿಸಬೇಕು

* ಜೀನ್ ಎಡಿಟಿಂಗ್, ಮಾಲಿಕ್ಯುಲಾರ್ ಬ್ರೀಡಿಂಗ್ ಇತ್ಯಾದಿ ತಂತ್ರಜ್ಞಾನ ಬಳಕೆಯಿಂದ "ಕೃಷಿ ತಾಂತ್ರಿಕತೆ" ಪರ್ಯಾವರಣ ಬೆಳೆಸಬೇಕು

* ಸಾಗರ ಸಂಬಂಧಿ ಜೈವಿಕ ತಂತ್ರಾಜ್ಞಾನದಲ್ಲಿ ಮೌಲ್ಯವರ್ಧನೆ ಮಾಡಬೇಕು

* ಪ್ರಮುಖ ಡಯಾಗ್ನಾಸ್ಟಿಕ್ ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕೆಗಾಗಿ 'ಬಯೋ-ಮೆಡಿಕಲ್ ಕ್ಲಸ್ಟರ್' ಸ್ಥಾಪಿಸಬೇಕು

* ಲಭ್ಯ ಜೈವಿಕ ತ್ಯಾಜ್ಯ ಬಳಸಿಕೊಳ್ಳಲು ಅನುಕೂಲವಾಗುವಂತೆ 'ಬಯೋ-ರಿಫೈನರೀಸ್ ಕ್ಲಸ್ಟರ್' ಸ್ಥಾಪಿಸಬೇಕು.

* ಹಾಸನ, ಧಾರವಾಡ ಮತ್ತು ಬೆಳಗಾವಿ ಪ್ರದೇಶಗಳಲ್ಲಿ ಮೌಲ್ಯವರ್ಧಿತ ಕೃಷಿ ಪದ್ಧತಿಯನ್ನು ಅಳವಡಿಸಬೇಕು.

English summary
In the next five years, Karnataka's Bio Economy will increase to $ 5 billion, with emphasis on vaccine, agricultural technology bio-manufacturing and value added sectors in marine biotechnology said Dr. C.N. Ashwath Narayana in Bengaluru Tech Summit 2020. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X