ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ರ ನಿಧನಕ್ಕೆ ಸಿಪಿಐ(ಎಂ) ಶ್ರದ್ದಾಂಜಲಿ

|
Google Oneindia Kannada News

ನಾಡಿನ ಹಿರಿಯ ಸಾಹಿತಿ, ಸಮಾಜವಾದಿ ಚಿಂತಕ ಹಾಗೂ ಸಾಹಿತ್ಯಿಕ ಹೋರಾಟಗಾರ ಪ್ರೊ. ಚಂದ್ರಶೇಖರ್ ಪಾಟೀಲ್ (ಚಂಪಾ-82) ಅವರ ನಿಧನಕ್ಕೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಕರ್ನಾಟಕ ರಾಜ್ಯ ಸಮಿತಿಯು ಹೃದಯಾಂತರಾಳದ ಗೌರವಪೂರ್ವಕ ಶ್ರದ್ಧಾಂಜಲಿಯನ್ನು ಸಲ್ಲಿಸಿದೆ.

ಕೋಮುವಾದ-ಜಾತಿವಾದ ಅಂಧಶ್ರದ್ಧೆ ಹಾಗೂ ಬೇರೆಲ್ಲ ಪ್ರತಿಗಾಮಿ ಶಕ್ತಿಗಳ ವಿರುದ್ಧ ದಿಟ್ಟತನದಲ್ಲಿ ಪರಿಣಾಮಕಾರಿಯಾಗಿ ಧ್ವನಿಯೆತ್ತಿದ ನಾಡಿನ ಸಾಕ್ಷಿಪ್ರಜ್ಞೆ ಪ್ರೊ ಚಂದ್ರಶೇಖರ ಪಾಟೀಲ್ ಅವರ ನಿಧನ ನಾಡಿಗಾದ ಅಪಾರ ನಷ್ಟ ಎಂದು ಸಿಪಿಐ(ಎಂ) ಕಂಬನಿ ಮಿಡಿದಿದೆ. ಅವರ ನಿಧನದಿಂದಾಗಿ ಸಿಪಿಐ(ಎಂ) ಮಾತ್ರವಲ್ಲ ಎಲ್ಲಾ ಪ್ರಗತಿಪರ ಜನತೆಯು ಒಬ್ಬ ನೆಚ್ಚಿನ ಗೆಳೆಯನನ್ನು ಕಳೆದುಕೊಂಡಂತಾಗಿದೆ.

ಚಂಪಾರವರು ನವ್ಯಸಾಹಿತ್ಯದ ಪ್ರಕಾರದಿಂದ ತೊಡಗಿಕೊಂಡು ನವ್ಯ ಸಾಹಿತ್ಯದ ಜನವಿಮುಖತೆಯನ್ನು ವಿರೋಧಿಸಿ ನಂತರ ಬಂಡಾಯ ಸಾಹಿತ್ಯದ ಚಳುವಳಿಯ ಅತ್ಯಂತ ಪ್ರಮುಖ ನಾಯಕರಾಗಿ ಒಂದು ಆಧಾರ ಸ್ಥಂಭವಾದರು. ಪ್ರಜಾಪ್ರಭುತ್ವದ ಪ್ರಬಲ ಸಮರ್ಥಕರಾಗಿದ್ದ ಅವರು ಇಂದಿರಾಗಾಂಧಿಯವರು ಹೇರಿದ ಕರಾಳ ತುರ್ತು ಪರಿಸ್ಥಿತಿಯ ವಿರುದ್ಧ ಸಿಡಿದೆದ್ದು ಹಲವು ವರ್ಷಗಳ ಸೆರೆಮನೆ ವಾಸವನ್ನು ಅನುಭವಿಸಿದರು. ಅವರ ಹರಿತವಾದ, ವ್ಯಂಗ್ಯ ಶೈಲಿಯ ನಿರ್ಭೀತ ಬರಹಗಳ ಮೂಲಕ ಪ್ರತಿಗಾಮಿಗಳತ್ತ ಚಾಟಿ ಬೀಸಿ ಜನತೆಯನ್ನು ಎಚ್ಚರಿಸುತ್ತಿದ್ದುದು ವಿಶಿಷ್ಟವಾಗಿತ್ತು. ಹೀಗಾಗಿ ನಾಲ್ಕು ದಶಕಗಳಿಗೂ ಮೀರಿ ಅವರ ಸೃಜನಶೀಲ ಸಾಹಿತ್ಯಿಕ ಕೃತಿಗಳು, ನಾಟಕ, ಕಾವ್ಯ, ವೈಚಾರಿಕ ಬರಹಗಳು, ಕಿರು ಟಿಪ್ಪಣಿ ಹೀಗೆ ಸಾಹಿತ್ಯದ ಹಲವು ಪ್ರಕಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿ ಸಮಾನತೆ, ಸೌಹಾರ್ದತೆ, ಸಾಮಾಜಿಕ ಬದಲಾವಣೆಯ ಆಶಯಗಳನ್ಮು ಪ್ರತಿಪಾದಿಸಿದರು.

CPIM Karnataka Condolence to Kannada Poet Chandrashekar Patil Death

ಅವರ ಬರಹ, ಮಾತುಗಳ ಶೈಲಿ ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿವಿಶಿಷ್ಟತೆಯೊಂದಿಗೆ ತನ್ನದೇ ಛಾಪು ಮೂಡಿಸಿದೆ. ಅವರ ಸಾಹಿತ್ಯ ಕೃತಿಗಳು ಹಾಗೂ ಸುಮಾರು ಐದು ದಶಕಗಳಿಂದಲೂ ಪ್ರಕಟವಾಗುತ್ತಿರುವ ಸಾಹಿತ್ಯಿಕ ಮಾಸಿಕ ' ಸಂಕ್ರಮಣ' ಪತ್ರಿಕೆ ಓದುಗರನ್ನು ವೈಚಾರಿಕವಾಗಿ ಬೆಳೆಸಿದವಲ್ಲದೇ, ಹಲವಾರು ಬರಹಗಾರರನ್ನು ನಾಡಿಗೆ ಪರಿಚಯಿಸಿದವು. ಕನ್ನಡನಾಡಿನಲ್ಲಿ ಬಂಡಾಯ ಸಾಹಿತ್ಯ ಚಳುವಳಿಯ ಪ್ರಮುಖ ರೂವಾರಿಗಳಲ್ಲಿ ಒಬ್ಬರಾಗಿ ಸಂಕ್ರಮಣ ಪತ್ರಿಕೆಯ ಮೂಲಕವೂ ಈ ಆಶಯಗಳಿಗೆ ಶ್ರಮಿಸಿದ್ದು ಉಲ್ಲೇಖನಾರ್ಹ.

ಪ್ರೊ.ಚಂಪಾ ರವರು ಸಾಹಿತ್ಯ ಮತ್ತು ಜನಚಳುವಳಿಗಳನ್ನು ಬೆಸೆದವರು. ಹಲವಾರು ಶ್ರಮಜೀವಿಗಳ, ರೈತರು, ಕಾರ್ಮಿಕರು, ಕೂಲಿಕಾರರು ಮತ್ತು ವಿದ್ಯಾರ್ಥಿ ಯುವಜನರು, ದಲಿತರು, ಮಹಿಳೆಯರ ಹೋರಾಟಗಳಲ್ಲಿ ಬೆರೆತು ಬೆಂಬಲಿಸಿದವರು. ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಕಟಿಬದ್ದರಾಗಿದ್ದರು.

ಕೋಮುವಾದ, ಮತೀಯ ಮೂಲಭೂತವಾದ, ಭಯೋತ್ಪಾದನೆ ಅಂತಹ ಶಕ್ತಿಗಳ ದಾಳಿಗಳನ್ನು ದಿಟ್ಟತನದಿಂದ ಬಯಲಿಗೆಳೆದು ಶಾಂತಿ-ಸಾಮರಸ್ಯ, ಕೋಮು ಸೌಹಾರ್ದತೆಗಾಗಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡವರು. ಕೋಮುವಾದಿಗಳ ಕೊಲೆ ಬೆದರಿಕೆಯನ್ನೂ ಲೆಕ್ಕಿಸಲಿಲ್ಲ.

2019 ಜನವರಿ 30 ರಂದು ಮಹಾತ್ಮಗಾಂಧಿ ಹುತಾತ್ಮರಾದ ದಿನದಂದು 'ಸೌಹಾರ್ದತೆಗಾಗಿ ಕರ್ನಾಟಕ' ದಿಂದ ಸಂಘಟಿಸಲಾದ ಲಕ್ಷಾಂತರ ಜನರು ಭಾಗವಹಿಸಿದ ಯಶಸ್ವಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ಸಂಘಟಿಸುವಲ್ಲಿ ಮುಂಚೂಣಿಯಲ್ಲಿದ್ದುದನ್ನು ಸಿಪಿಐ(ಎಂ) ಸ್ಮರಿಸಿ ಕೊಂಡಿದೆ.

ಕಮ್ಯೂನಿಸ್ಟರ ಜೊತೆಗೆ ಕೆಲವು ಬಿನ್ನಾಭಿಪ್ರಾಯದೊಡನೆಯೂ ಒಟ್ಟಾಗಿ ಚಳುವಳಿ ಮಾಡಲು ಮೀನಾಮೇಷ ಎಣಿಸುತ್ತಿರಲಿಲ್ಲ ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ.

ಪ್ರೊ ಚಂಪಾರವರು ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಗಬೇಕೆಂದು ಹೋರಾಟವನ್ನು ನಡೆಸಿದವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವಾಗ ಭಾಷೆ ಮತ್ತು ನಾಡಿನ ಹಿತಾಸಕ್ತಿಗಳಿಗೆ ಶ್ರಮಿಸಿದರು. ನಾಡಿನ ಸಾಹಿತ್ಯಿಕ, ಸಾಂಸ್ಕೃತಿಕ, ಭಾಷೆ, ಸಾಮಾಜಿಕ‌ ಸ್ವಾಸ್ತ್ಯದ ಸಂರಕ್ಷಣೆಗೆ ಮತ್ತು ಜನತೆಯ ಬದುಕಿನ ಬದಲಾವಣೆ ಹಾಗೂ ಸಮಾನತೆಗಾಗಿ ಪ್ರೊ.ಚಂಪಾ ರವರ ಕೊಡುಗೆಗಳನ್ನು ಗೌರವದಿಂದ ಸ್ಮರಿಸಿ ಕೊಂಡಿರುವ ಸಿಪಿಐ(ಎಂ) ಅಂತರಾಳದ ಶ್ರದ್ಧಾಂಜಲಿಯನ್ನು ಸಲ್ಲಿಸಿದೆ.

ಅವರ ದುಃಖತಪ್ತ ಕುಟುಂಬಕ್ಕೆ, ಬಂಧು ಬಳಗ, ಹಿತೈಷಿಗಳು ದುಃಖ ಭರಿಸುವ ಶಕ್ತಿಯನ್ಮು ಪಡೆಯಲಿ ಎಂದು ಸಂತಾಪವನ್ನು ತಿಳಿಸಿದೆ ಎಂದು ಕಾರ್ಯದರ್ಶಿ
ಯು. ಬಸವರಾಜ ಹೇಳಿದರು.

English summary
CPI(M) Karnataka unit has sent Condolence message to Kannada Poet Chandrashekar Patil's Death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X