ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಕ್ಕೆ ಸವಾಲಾದ ಕೊರೊನಾ ನಿರ್ವಹಣೆ, ಹೆಚ್ಚುತ್ತಿದೆ ಜನಾಕ್ರೋಶ!

|
Google Oneindia Kannada News

ಮೈಸೂರು, ಮೇ 7: ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಾಮಾರಿ ಕೊರೊನಾವನ್ನು ನಿಭಾಯಿಸುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ದಿನ ಬೆಳಗ್ಗೆಯಾದರೆ ರಾಜ್ಯಾದ್ಯಂತ ಸಾವಿನ ಮರಣ ಮೃದಂಗ, ಜನರ ಆಕ್ರೋಶ, ವಿರೋಧ ಪಕ್ಷಗಳ ಟೀಕೆ, ಸಂಘ ಸಂಸ್ಥೆಗಳ ಪ್ರತಿಭಟನೆ ಹೀಗೆ ಹತ್ತಾರು ಸಮಸ್ಯೆಗಳು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಎದುರಾಗುತ್ತಿದ್ದು, ಎಲ್ಲವನ್ನು ಪರಿಹರಿಸಿ ಮುಂದೆ ಸಾಗುವುದು ಕಷ್ಟಸಾಧ್ಯವಾಗಿದೆ.

ಮೇಲ್ನೋಟಕ್ಕೆ ಸಿಎಂ ಯಡಿಯೂರಪ್ಪ ಅವರಿಗೆ ಬೆನ್ನೆಲುಬಾಗಿ ಸ್ವಪಕ್ಷದವರೇ ನಿಂತಂತೆ ಕಾಣುತ್ತಿಲ್ಲ. ಇನ್ನು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಅಲ್ಲಿಂದ ಯಾವುದೇ ರೀತಿಯ ಸಹಾಯ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೆಲ್ಲದರ ನಡುವೆ ಕೊರೊನಾ ಮಹಾಮಾರಿ ಇಡೀ ರಾಜ್ಯವನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಜನ ಜೀವವನ್ನು ಉಳಿಸಿಕೊಳ್ಳುವುದು ಹೇಗೆಂದು ಗೊತ್ತಾಗದೆ ಒದ್ದಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಅನುಭವಿಸಿದ ನೋವುಗಳು ಅಷ್ಟಿಷ್ಟಲ್ಲ.

ವರ್ಷದಿಂದ ಅನುಭವಿಸಿದ ನೋವುಗಳೆಷ್ಟು?

ವರ್ಷದಿಂದ ಅನುಭವಿಸಿದ ನೋವುಗಳೆಷ್ಟು?

ಬಹಳಷ್ಟು ಉದ್ದಿಮೆಗಳು ನಷ್ಟವಾಗಿ ಬಾಗಿಲು ಮುಚ್ಚಿವೆ. ಇದರಿಂದ ಉದ್ಯೋಗವಿಲ್ಲದೆ ಜನ ಖಾಲಿ ಕೈನಲ್ಲಿ ಕೂತಿದ್ದಾರೆ. ಬೆಳಗಾದರೆ ಸರ್ಕಾರ ತಮಗೇನು ಸಹಾಯ ನೀಡಬಹುದು ಎಂಬ ಕಾತರತೆಯಿಂದ ಬಡ ವರ್ಗ ಕಾಯುತ್ತಿದೆ. ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ ಹೊಟ್ಟೆಗೆ ಅನ್ನ ಸಿಗುವುದೇ ಕಷ್ಟವಾಗಿದೆ. ಹೀಗಿರುವಾಗ ಮಾಡಿಕೊಂಡ ಸಾಲ ತೀರಿಸುವುದಾದರೂ ಹೇಗೆಂಬ ಚಿಂತೆ ಬಡವರದ್ದಾಗಿದೆ. ಅವರ ಆಕ್ರೋಶವೆಲ್ಲವೂ ಸರ್ಕಾರದ ಕಡೆಗಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಅವತ್ತು ಆಡಳಿತದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿದ್ದ ಭಿನ್ನಾಭಿಪ್ರಾಯಗಳನ್ನೇ ಅಸ್ತ್ರವಾಗಿಟ್ಟುಕೊಂಡು ಅಧಿಕಾರದ ಆಮಿಷವೊಡ್ಡಿ ಒಂದಷ್ಟು ಶಾಸಕರನ್ನು ಎಳೆದು ತಂದು ಸರ್ಕಾರ ರಚಿಸಿದ ಯಡಿಯೂರಪ್ಪ ಅವರು ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿರುವುದರಿಂದ ತಮ್ಮ ಕಡೆಗೆ ಅಭಯ ಹಸ್ತ ಚಾಚಬಹುದೆಂಬ ಕನಸು ಕಂಡಿದ್ದರು.

ಮೈತ್ರಿ ಸರ್ಕಾರ ಕೆಡವಿ ಬಿಎಸ್ವೈ ಸಾಧಿಸಿದ್ದೇನು?

ಮೈತ್ರಿ ಸರ್ಕಾರ ಕೆಡವಿ ಬಿಎಸ್ವೈ ಸಾಧಿಸಿದ್ದೇನು?

ಆದರೆ, ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರವನ್ನು ಕರ್ನಾಟಕದಲ್ಲಿ ಆಡಳಿತಕ್ಕೆ ತಂದ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೇಂದ್ರದಿಂದ ಹೇಳಿಕೊಳ್ಳುವ ಯಾವ ಪ್ರೋತ್ಸಾಹಗಳು ದೊರೆಯಲೇ ಇಲ್ಲ. ಬದಲಿಗೆ ಕರ್ನಾಟಕದತ್ತ ಉದಾಸೀನ ತೋರಿದ್ದೇ ಜಾಸ್ತಿ ಎಂದರೆ ತಪ್ಪಾಗಲಾರದು.

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಒಂದೆರಡು ಬಾರಿ ಖುದ್ದು ಪ್ರಧಾನಿ ನರೇಂದ್ರ ಮೋದಿಯವರನ್ನೇ ಭೇಟಿಯಾಗಿ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನವನ್ನು ಪ್ರಸ್ತಾಪಿಸಿದ್ದಲ್ಲದೆ, ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಂದಿದ್ದರು. ಆದರೆ ಯಡಿಯೂರಪ್ಪ ಅವರ ಕಾಲದಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಕಾರ್ಯಗಳೇ ನಡೆದಿಲ್ಲ. ಅದಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ ಸಿಎಂ ಗದ್ದುಗೆ ಏರಿದ ಬಳಿಕ ಅನುಭವಿಸಿದ ಸಂಕಷ್ಟಗಳಿಗೆ ಕೇಂದ್ರದಿಂದ ಸಕರಾತ್ಮಕ ಸ್ಪಂದನೆ ದೊರೆಯಲೇ ಇಲ್ಲ.

ಬಿಜೆಪಿಯಲ್ಲಿ ಉರಿಯುತ್ತಲಿದೆ ಅಸಮಾಧಾನದ ಬೆಂಕಿ

ಬಿಜೆಪಿಯಲ್ಲಿ ಉರಿಯುತ್ತಲಿದೆ ಅಸಮಾಧಾನದ ಬೆಂಕಿ

ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಸಮಯದಲ್ಲಿ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಯಿತು. ಅವತ್ತು ಸಚಿವ ಸಂಪುಟವೂ ರಚನೆಯಾಗಿರಲಿಲ್ಲ. ಅದಕ್ಕೆ ಹೈಕಮಾಂಡ್ ಅವಕಾಶವನ್ನು ನೀಡಿರಲಿಲ್ಲ. ಆದರೂ ಒಬ್ಬರೇ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಿದರು. ಅದರಿಂದ ಹೊರಗೆ ಬರಬೇಕು ಎನ್ನುವಷ್ಟರಲ್ಲಿ ಕೊರೊನಾ ಅಟ್ಟಹಾಸ ಮೆರೆಯಲಾರಂಭಿಸಿತು. ಕಳೆದ ವರ್ಷ ಕೊರೊನಾ ಜತೆಗೆ ಅತಿವೃಷ್ಠಿ ಎಲ್ಲವನ್ನು ಎದುರಿಸಿದ ಬಿ.ಎಸ್ ಯಡಿಯೂರಪ್ಪ ಅವರಿಗೆ ಉಪ ಚುನಾವಣೆ ಮತ್ತೊಂದು ಸವಾಲಾಗಿತ್ತಲ್ಲದೆ, ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಪರೀಕ್ಷೆಯಾಗಿತ್ತು. ಆದರೂ ಉಪ ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿ ತೋರಿಸಿದರು. ಇವರಿಗೆ ಮೂಲ ಬಿಜೆಪಿ ಶಾಸಕರು, ಸಚಿವರಿಗಿಂತ ವಲಸೆ ಬಂದವರೇ ಹೆಚ್ಚಿನ ಸಾಥ್ ನೀಡಿದ್ದರು ಎನ್ನುವುದು ಕೂಡ ಅಷ್ಟೇ ಸತ್ಯ.

ರಾಜ್ಯ ಸರ್ಕಾರದಲ್ಲಿ ಒಮ್ಮತದ ಕೊರತೆ

ರಾಜ್ಯ ಸರ್ಕಾರದಲ್ಲಿ ಒಮ್ಮತದ ಕೊರತೆ

ಇವತ್ತಿಗೂ ಬಿಜೆಪಿಯ ಮೂಲ ಶಾಸಕರಿಗೆ ತಮಗೆ ಸಚಿವ ಸ್ಥಾನ ನೀಡದ ಅಸಮಾಧಾನವಿದೆ. ಹೀಗಾಗಿಯೇ ಅವರೆಲ್ಲರೂ ತಟಸ್ಥರಾದಂತೆ ಕಂಡು ಬರುತ್ತಿದ್ದಾರೆ. ಅವರಾಯಿತು ಅವರ ಕ್ಷೇತ್ರವಾಯಿತು ಎನ್ನುವಂತೆ ಇದ್ದಾರೆ. ಇನ್ನು ಕೆಲವೇ ಕೆಲವು ಸಚಿವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಹೆಗಲಾಗಿ ನಿಂತು ಕಾರ್ಯನಿರ್ವಹಿಸುತ್ತಿದ್ದಾರೆಯೇ ವಿನಃ ಉಳಿದವರು ದೂರವೇ ಉಳಿದಿದ್ದಾರೆ. ಇಡೀ ರಾಜ್ಯ ಕೊರೊನಾದ ಹೊಡೆತಕ್ಕೆ ಸಿಲುಕಿ ತತ್ತರಿಸುತ್ತಿದ್ದರೆ, ಸರ್ಕಾರದೊಂದಿಗೆ ಕೈಜೋಡಿಸಿ ಜನರಿಗೆ ತಮ್ಮ ಕೈಲಾದ ಸಹಾಯ ಮಾಡೋಣ ಎಂಬ ಕನಿಷ್ಠ ಮಾನವೀಯತೆಯೂ ಅವರಲ್ಲಿ ಇಲ್ಲದಾಗಿದೆ. ಹೆಚ್ಚಿನ ಶಾಸಕರು, ಸಚಿವರು ಎಲ್ಲಿದ್ದಾರೆ ಎಂಬುದೇ ಗೊತ್ತಾಗದಂತಾಗಿದೆ. ಇದೆಲ್ಲವೂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಒಮ್ಮತವಿಲ್ಲ ಎಂಬುದನ್ನು ಸಾರಿ ಹೇಳುತ್ತಿದೆ.

Recommended Video

Oxygen ವಿಚಾರದಲ್ಲಿ; ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕಕ್ಕೆ ಜಯ | Oneindia Kannada
ಸರ್ಕಾರ ಇದೆಯೋ ಇಲ್ಲವೋ ಎಂಬ ಪ್ರಶ್ನೆ

ಸರ್ಕಾರ ಇದೆಯೋ ಇಲ್ಲವೋ ಎಂಬ ಪ್ರಶ್ನೆ

ರಾಜ್ಯ ಸರ್ಕಾರದ ಆಡಳಿತದಲ್ಲಾಗುತ್ತಿರುವ ಲೋಪಗಳನ್ನು ಒಂದರ ಮೇಲೊಂದರಂತೆ ವಿಪಕ್ಷಗಳು ತೆರೆದಿಡುತ್ತಿದ್ದರೂ ಅದಕ್ಕೆ ಸ್ಪಷ್ಟನೆ ನೀಡುವರೇ ಇಲ್ಲವಾಗಿದ್ದಾರೆ. ತಮಗೂ ಆರೋಪಕ್ಕೂ ಸಂಬಂಧವೇ ಇಲ್ಲ ಎಂಬಂತೆ ಕೆಲವರು ಮೌನಕ್ಕೆ ಶರಣಾಗಿದ್ದಾರೆ. ಒಂದೆಡೆ ಸ್ವಪಕ್ಷದ ಶಾಸಕರೊಬ್ಬರು ಪರೋಕ್ಷವಾಗಿ ಸಚಿವರನ್ನೇ ಟೀಕಿಸಿದರೆ, ಮತ್ತೊಬ್ಬ ವಿಧಾನ ಪರಿಷತ್ ಸದಸ್ಯರು ಸರ್ಕಾರ ಸಂಪೂರ್ಣ ಫೇಲಾಗಿದೆ ಎಂದು ನೇರವಾಗಿಯೇ ಆರೋಪ ಮಾಡುತ್ತಿದ್ದಾರೆ. ಇದೆಲ್ಲವನ್ನು ಗಮನಿಸುತ್ತಿರುವ ರಾಜ್ಯದ ಜನ, ಸರ್ಕಾರ ಇದೆಯೋ ಇಲ್ಲವೋ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಲೇ ಇದೆ. ಒಂದೆಡೆ ತಮ್ಮವರ ಜೀವ ಉಳಿಸಿಕೊಳ್ಳಲು, ಮತ್ತೊಂದೆಡೆ ಜೀವನಕ್ಕಾಗಿ ಜನ ಹೋರಾಟ ಮಾಡಬೇಕಾಗಿದೆ. ಇದೆಲ್ಲದರ ನಡುವೆ ಆಡಳಿತದ ಲೋಪದಿಂದಾಗಿ ಭ್ರಷ್ಟಾಚಾರದ ಬೆಂಕಿ ಹೊತ್ತಿ ಉರಿಯುತ್ತಿದ್ದು, ಅಸಹಾಯಕರು ಅದರಲ್ಲಿ ಉರಿದು ಬೂದಿಯಾಗುತ್ತಿದ್ದರೆ, ಇನ್ನೊಂದೆಡೆ ಚಳಿ ಕಾಯಿಸಿಕೊಳ್ಳುವವರ ಸಂಖ್ಯೆ ಏರುತ್ತಿದೆ. ಹೀಗಾದರೆ ಹೇಗೆ? ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಗದಂತಾಗಿದೆ.

English summary
Covid Cases in Karnataka: Anger rises as coronavirus rages in the state. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X