• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಮಾಧ್ಯಮ ಲೋಕದಲ್ಲಿ ಕೊರೊನಾ ವೈರಸ್ ಎಬ್ಬಿಸಿರುವ ತಲ್ಲಣ!

|

ಬೆಂಗಳೂರು, ಏ. 25: ಸದಾ ಸುದ್ದಿಯ ಬೆನ್ನು ಬೀಳುವ ಮಾಧ್ಯಮದವರ ಬೆನ್ನಿಗೆ ಇದೀಗ ಕೊರೊನಾ ವೈರಸ್ ಎಂಬ ಮಹಾಮಾರಿ ಬಿದ್ದಿದೆ. ದೇಶಾದ್ಯಂತ ಸುದ್ದಿ ಮಾಧ್ಯಮದ ಪ್ರತಿನಿಧಿಗಳಿಗೆ ಕೊರೊನಾ ವೈರಸ್ ಇದೀಗ ಆತಂಕವನ್ನುಂಟು ಮಾಡಿದೆ. ದೂರದ ಚೀನಾದಲ್ಲಿ ಸೋಂಕಿಗೆ ಮೊದಲ ವ್ಯಕ್ತಿ ಬಲಿಯಾದಾಗಿನಿಂದ ಇಲ್ಲಿವರೆಗೆ ಕೊರೊನಾ ವೈರಸ್ ಕುರಿತಾದ ಎಲ್ಲ ರೀತಿಯ ಸುದ್ದಿಗಳನ್ನು ಮಾಧ್ಯಮ ಪ್ರತಿನಿಧಿಗಳು ವರದಿ ಮಾಡಿದ್ದಾರೆ.

ಸಮಾಜಕ್ಕೆ ಸೂಕ್ತ ತಿಳಿವಳಿಕೆಯನ್ನೂ ಕೊಟ್ಟಿದ್ದಾರೆ. ಆದರೆ ತಾವೇ ಮುಂಜಾಗ್ರತೆ ತೆಗೆದುಕೊಳ್ಳುವಲ್ಲಿ ಮಾಧ್ಯಮ ಪ್ರತಿನಿಧಿಗಳು, ಮಾಧ್ಯಮ ಸಂಸ್ಥೆಗಳು ಎಡವಿದ್ದು ಇದೀಗ ಮುಳುವಾಗಿದೆ. ಬೆಂಗಳೂರಿನಲ್ಲಿ ಕನ್ನಡದ ಪ್ರತಿಷ್ಠಿತ ಸುದ್ದಿ ಮಾದ್ಯಮವೊಂದರ ಕ್ಯಾಮರಾಮ್ಯಾನ್‌ಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಲಾಕ್ ಡೌನ್ ರಿಲೀಫ್: ಯಾವೆಲ್ಲ ಅಂಗಡಿಗಳು ಇಂದಿನಿಂದ ಓಪನ್.?

ಬೆಂಗಳೂರಿನ ಪಾದರಾಯನಪುರ ಸೇರಿದಂತೆ ಕೊರೊನಾ ವೈರಸ್ ಹಾಟ್‌ಸ್ಪಾಟ್‌ಗಳಲ್ಲಿ ಕೆಲಸ ಮಾಡಿರುವ ಹಿನ್ನೆಲೆ ಆ ಕ್ಯಾಮರಾಮ್ಯಾನ್ ಅವರಿಗಿದೆ. ಇದೀಗ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.

37 ವರದಿಗಾರರು, ಕ್ಯಾಮರಾಮನ್‌ಗಳಿಗೆ ಕ್ವಾರಂಟೈನ್

37 ವರದಿಗಾರರು, ಕ್ಯಾಮರಾಮನ್‌ಗಳಿಗೆ ಕ್ವಾರಂಟೈನ್

ಬೆಂಗಳೂರಿನಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಕ್ಯಾಮರಾಮ್ಯಾನ್ ಪ್ರಾಥಮಿಕ ಸಂಪರ್ಕದಲ್ಲಿದ್ದ 37 ಜನರಿಗೆ ಇದೀಗ ಕ್ವಾರಂಟೈನ್ ಮಾಡಲು ಬಿಬಿಎಂಪಿ ಸೂಚಿಸಿದೆ. ವರದಿಗಾರರು, ಕ್ಯಾಮರಾಮ್ಯಾನ್‌ಗಳು, ಡ್ರೈವರ್‌ಗಳು ಹಾಗೂ ಕಚೇರಿ ಸಿಬ್ಬಂದಿಯನ್ನು ಸೇರಿದಂತೆ ಎಲ್ಲರನ್ನೂ ಕ್ವಾರಂಟೈನ್ ಮಾಡಲು ಖಾಸಗಿ ಹೊಟೆಲ್‌ನಲ್ಲಿ ಎಲ್ಲರನ್ನೂ ಇರಿಸಲಾಗಿದೆ. 14 ದಿನಗಳ ಕಾಲ ಎಲ್ಲರನ್ನೂ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಮಾಡಲಾಗುತ್ತಿದೆ.

ತಮ್ಮದೆ ಸಿಬ್ಬಂದಿ ಕುರಿತು ಮಾಧ್ಯಮ ಸಂಸ್ಥೆಗಳ ನಿರ್ಲಕ್ಷ

ತಮ್ಮದೆ ಸಿಬ್ಬಂದಿ ಕುರಿತು ಮಾಧ್ಯಮ ಸಂಸ್ಥೆಗಳ ನಿರ್ಲಕ್ಷ

ಕೊರೊನಾ ಸೋಂಕಿನ ಕುರಿತು ಇಡೀ ಜಗತ್ತಿಗೆ ತಿಳಿಹೇಳಿದ, ಜಾಗೃತಿ ಮೂಡಿಸಿದ ಮಾಧ್ಯಮ ಸಂಸ್ಥೆಗಳು ತಮ್ಮದೆ ಸಿಬ್ಬಂದಿಯ ಆರೋಗ್ಯದ ಕುರಿತು ಗಮನ ಕೊಡದೇ ಇದ್ದುದು ವಿಪರ್ಯಾಸವೆ ಸರಿ. ಫೀಲ್ಡ್‌ನಲ್ಲಿ ಕೆಲಸ ಮಾಡುವ ವರದಿಗಾರರು, ಕ್ಯಾಮರಾಮ್ಯಾನ್‌ಗಳು ಹಾಗೂ ಡ್ರೈವರ್‌ಗಳ ವಿಷಯದಲ್ಲಿ ಸೂಕ್ತವಾಗಿ ಮುನ್ನಚ್ಚರಿಕೆಯನ್ನು ತೆಗೆದುಕೊಳ್ಳದೆ ಇದ್ದಿದ್ದು ಇದೀಗ ಮುಳುವಾಗಿದೆ.

ಎಲೆಕ್ಟ್ರಾನಿಕ್ ಮಿಡಿಯಾದ ವರದಿಗಾರರು, ಕ್ಯಾಮರಾಮ್ಯಾನ್‌ಗಳು, ಡ್ರೈವರ್‌ಗಳು ಪ್ರತಿಕ್ಷಣವೂ ಒತ್ತಡದಲ್ಲಿಯೆ ಕೆಲಸ ಮಾಡುವುದು ಅನಿವಾರ್ಯವಾಗಿರುತ್ತದೆ. ನೈಸರ್ಗಿಕ ವಿಕೋಪ, ಸಮಾಜದಲ್ಲಿನ ಅಶಾಂತಿ, ಬಾಂಬ್ ಬ್ಲಾಸ್ಟ್ ಸೇರಿದಂತೆ ಹಲವು ಅಪಾಯಕಾರಿ ಸನ್ನಿವೇಶಗಳಲ್ಲಿ ವರದಿಗಾರರು, ಕ್ಯಾಮರಾಮ್ಯಾನ್‌ಗಳು ಒತ್ತಡದಲ್ಲಿಯೆ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ.

ಕೊರೊನಾ ವೈರಸ್ ಸೋಂಕಿನ ಸಂದರ್ಭದಲ್ಲಿಯೂ ಕಚೇರಿಗಳಿಂದ ಅಂತಹ ಒತ್ತಡಗಳು ವರದಿಗಾರರು, ಕ್ಯಾಮರಾಮ್ಯಾನ್‌ಗಳ ಮೇಲೆ ಇದ್ದವು ಎಂಬುದು ಗುಟ್ಟಾಗಿಯೆನೂ ಇರಲಿಲ್ಲ. ಹೀಗಾಗಿ ಕಂಟೇನ್ಮೆಂಟ್ ಝೋನ್‌ನಲ್ಲಿ ಕೆಲಸ ಮಾಡುವ ಒತ್ತಡ ಕೂಡ ಮಾಧ್ಯಮ ಪ್ರತಿನಿಧಿಗಳ ಮೇಲೆ ಇತ್ತು. ಇದೀಗ ಕೊರೊನಾ ಸೋಂಕು ಪತ್ತೆಯಾಗಿರುವ ಸುದ್ದಿವಾಹಿನಿಯ ಕ್ಯಾಮರಾಮ್ಯಾನ್‌ ಕೂಡ ಪಾದರಾಯನಪುರ ಸೇರಿದಂತೆ ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಕೆಲಸ ಮಾಡಿದ ಹಿನ್ನೆಲೆಯಿದೆ.

ತಾಯಿಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸದ ಸ್ಥಿತಿ

ತಾಯಿಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸದ ಸ್ಥಿತಿ

ತಾವು ಮಾಡದ ತಪ್ಪಿಗೆ ಕ್ವಾರಂಟೈನ್‌ಗೆ ಒಳಗಾಗಿರುವ ಚಾನಲ್‌ವೊಂದರ ಹಿರಿಯ ವರದಿಗಾರರಿಗೆ ತಾಯಿಯ ಅಂತ್ಯಸಂಸ್ಕಾರದಲ್ಲೂ ಭಾಗವಹಿಸಲು ಆಗಲಿಲ್ಲ. ದೂರದ ಬಾಗಲಕೋಟೆಯಲ್ಲಿ ತಾಯಿಯ ಆಕಸ್ಮಿಕ ನಿಧನದ ಸುದ್ದಿ ಕೇಳಿ ಊರಿಗೆ ಹೋಗಲು ಎಲ್ಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದರು.

ಆದರೆ ಅದೇ ವೇಳೆಯಲ್ಲಿ ಬಿಬಿಎಂಪಿ ಆರೋಗ್ಯ ಇಲಾಖೆಯಿಂದ ಅವರಿಗೆ ದೂರವಾಣಿ ಕರೆ ಬಂದಿದೆ. ನೀವು ಸೋಂಕು ದೃಢಪಟ್ಟಿರುವ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದೀರಿ. ಹೀಗಾಗಿ ಕ್ವಾರಂಟೈನ್‌ಗೆ ಒಳಗಾಬೇಕು. ಯಾವುದೇ ಪ್ರಯಾಣ ಮಾಡುವಂತಿಲ್ಲ ಎಂದು ಸೂಚಿಸಿದ್ದಾರೆ. ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದು ಗೊತ್ತಾಗುತ್ತಿದ್ದಂತೆಯೆ ಸ್ವತಃ ಆ ಹಿರಿಯ ವರದಿಗಾರರೆ ಮುಂದಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಹೀಗಾಗಿ ಕೊನೆಯದಾಗಿ ತಾಯಿಯ ಮುಖವನ್ನು ನೋಡುವ ಭಾಗ್ಯವೂ ಅವರಿಗೆ ಇಲ್ಲದಂತಾಗಿದೆ. ಕಳೆದ 15 ವರ್ಷಗಳಿಂದ ಜನರ ಕಣ್ಣೀರಿಗೆ ಧ್ವನಿಯಾಗಿದ್ದ ಆ ಹಿರಿಯ ವರದಿಗಾರರಿಗೆ ತಾಯಿಯ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸುವ ಅವಕಾಶ ಸಿಗದಿರುವುದು ಮಾಧ್ಯಮ ಕ್ಷೇತ್ರದ ಮತ್ತೊಂದು ಮುಖವನ್ನು ಅನಾವರಣ ಮಾಡಿದೆ.

ಲಾಕ್ ಡೌನ್ ರಿಲೀಫ್: ಯಾವೆಲ್ಲ ಅಂಗಡಿಗಳು ಇಂದಿನಿಂದ ಓಪನ್.?

ಕ್ಯಾಮರಾಮ್ಯಾನ್ ಸಂಪರ್ಕದ ವಿವರ ಹೀಗಿದೆ

ಕ್ಯಾಮರಾಮ್ಯಾನ್ ಸಂಪರ್ಕದ ವಿವರ ಹೀಗಿದೆ

ಇನ್ನು ಚಾನಲ್ ಕ್ಯಾಮರಾಮ್ಯಾನ್ ಕಳೆದ ಮೂರ್ನಾಲ್ಕು ದಿನಗಳಲ್ಲಿ ಮಾಡಿರುವ ಸಂದರ್ಶನಗಳು, ಭೇಟಿ ಕೊಟ್ಟಿರುವ ಸ್ಥಳಗಳ ವಿವರ ಆತಂಕಕಾರಿಯಾಗಿದೆ. ರಾಜ್ಯದ ಪ್ರತಿಷ್ಠಿತ ರಾಜಕಾರಣಿಗಳ ಸಂದರ್ಶನ, ಸುದ್ದಿಗೋಷ್ಠಿಗಳನ್ನು ಚಿತ್ರೀಕರಿಸಿದ್ದಾರೆ. ಜೊತೆಗೆ ರಾಜಕಾರಣಿಗಳ ನಿವಾಸಗಳಿಗೂ ಭೇಟಿ ಕೊಟ್ಟಿದ್ದಾರೆ. ಹೀಗಾಗಿ ಎಲ್ಲರಲ್ಲಿಯೂ ಇದೀಗ ಆತಂಕ ಶುರುವಾಗಿದೆ.

ಸೂಕ್ತ ಮುಂಜಾಗ್ರತೆಯನ್ನು ರಾಜಕೀಯ ನಾಯಕರೂ ತೆಗೆದುಕೊಳ್ಳಬೇಕಿತ್ತು. ಅನಗತ್ಯವಾಗಿ ಸುದ್ದಿಗೋಷ್ಠಿ, ಸಂದರ್ಶನಗಳು ಈ ಸಂದರ್ಭದಲ್ಲಿ ಅಗತ್ಯವಿರಲಿಲ್ಲ ಎಂಬ ಚರ್ಚೆಗಳು ಇದೀಗ ಆರಂಭವಾಗಿವೆ.

ನಿನ್ನೆಯಿಂದ ಮಾಧ್ಯಮ ಪ್ರತಿನಿಧಿಗಳ ಪರೀಕ್ಷೆ

ನಿನ್ನೆಯಿಂದ ಮಾಧ್ಯಮ ಪ್ರತಿನಿಧಿಗಳ ಪರೀಕ್ಷೆ

ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಬಿಬಿಎಂಪಿ ವತಿಯಿಂದ ಕೋವಿಡ್ ಪರೀಕ್ಷೆ ನಡೆಸುವಂತೆ ಪತ್ರ ಬರೆದಿದ್ದರು. ಹೀಗಾಗಿ ಎಲೆಕ್ಟ್ರಾನಿಕ್, ಮುದ್ರಣ ಹಾಗೂ ಆನ್‌ಲೈನ್‌ ಮಾಧ್ಯಮ ಪ್ರತಿನಿಧಿಗಳಿಗೆ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದಿದ್ದರೂ ಕ್ಯಾಮರಾಮ್ಯಾನ್‌ ಅವರಲ್ಲಿ ಸೋಂಕು ದೃಢಪಟ್ಟಿದೆ.

ರಾಜ್ಯ ವಾರ್ತಾ ಇಲಾಖೆಯಿಂದ ಆಯೋಜಿಸಲಾಗಿದ್ದ ಕೊವಿಡ್ ಪರೀಕ್ಷೆಯಲ್ಲಿ ಈವರೆಗೆ ಒಟ್ಟು 762 ಮಾಧ್ಯಮ ಕ್ಷೇತ್ರದವರು ಭಾಗವಹಿಸಿದ್ದಾರೆ. ಈವರೆಗೆ ಪರೀಕ್ಷೆಗೆ ಒಳಗಾಗದವರಿಗೆ ಏಪ್ರಿಲ್ 27 ರಂದು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವ ಅವಕಾಶವನ್ನು ವಾರ್ತಾ ಇಲಾಖೆ ಕಲ್ಪಿಸಿದೆ.

ಕೊರೊನಾ ವೈರಸ್ ಹರಡುವ ಸಂದರ್ಭದಲ್ಲಿ ಬೇಕಿತ್ತಾ ಒತ್ತಡ?

ಕೊರೊನಾ ವೈರಸ್ ಹರಡುವ ಸಂದರ್ಭದಲ್ಲಿ ಬೇಕಿತ್ತಾ ಒತ್ತಡ?

ಹಿಂದೆ ರಾಜಕೀಯ, ನೈಸರ್ಗಿಕ ವಿಕೋಪ, ಭಯೋತ್ಪಾದಕರ ದಾಳಿಗಳಾದಾಗಲೂ ವರದಿಗಾರರು ಕೆಲಸ ಅವಧಿ ಮರೆತು ಕೆಲಸ ಮಾಡಿದ್ದಾರೆ. ಆದರೆ ಈಗಿನ ಪರಿಸ್ಥಿತಿ ತೀರಾ ಭಿನ್ನ ಎಂಬುದನ್ನು ಕೆಲವು ಮಾಧ್ಯಮ ಸಂಸ್ಥೆಗಳಲ್ಲಿನ ಮುಖ್ಯಸ್ಥರು ಅರಿಯಲೇ ಇಲ್ಲ ಎಂದು ಕ್ವಾರಂಟೈನ್‌ನಲ್ಲಿರುವ ವರದಿಗಾರರು, ಟ್ರೈವರ್‌ ಹಾಗೂ ಕ್ಯಾಮರಾಮ್ಯಾನ್‌ಗಳು ಒನ್ ಇಂಡಿಯಾಕ್ಕೆ ಮಾಹಿತಿ ಕೊಟ್ಟಿದ್ದಾರೆ.

ಹಿಂದೆ ನಾವು ಒತ್ತಡಗಳಲ್ಲಿ ಕೆಲಸ ಮಾಡಿದ್ದೇವೆ. ಆದರೆ ಅವುಗಳೆಲ್ಲ ಕಣ್ಣಿಗೆ ಕಾಣುವ ವೈರಿ ಅಥವಾ ಸ್ಥಿತಿಗಳಾಗಿದ್ದವು. ಈಗಿನ ಪರಿಸ್ಥಿತಿ ಬೇರೆಯಾಗಿತ್ತು. ಅಂತಹ ಸೂಕ್ಷ್ಮವನ್ನು ಜವಾಬ್ದಾರಿ ಸ್ಥಾನಗಳಲ್ಲಿರುವವರು ಅರಿಯ ಬೇಕಾಗಿತ್ತು. ಆದರೆ ಅದಾಗಲೇ ಇಲ್ಲ.

ಈಗ ಮಾಡದ ತಪ್ಪಿಗೆ ನಾವು, ನಮ್ಮ ಕುಟುಂಬದ ಸದಸ್ಯರು ಅನುಭವಿಸಬೇಕಾಗಿದೆ. ಜೊತೆಗೆ ಕೆಲಸದಲ್ಲಿ ತೋರುವ ಸಣ್ಣ ನಿರ್ಲಕ್ಷವೂ ಕೆಲಸಕ್ಕೆ ಕುತ್ತು ತರುವ ಪರಿಸ್ಥಿತಿಯಿತ್ತು. ಹೀಗಾಗಿ ಅಪಾಯ ಮೈಮೇಲೆ ಎಳೆದುಕೊಂಡು ವೈಯಕ್ತಿಕವಾಗಿ ಸಾಕಷ್ಟು ಮುಂಜಾಗ್ರತೆಗಳನ್ನು ನಾವು ತೆಗೆದುಕೊಂಡಿದ್ದೇವೆ. ಆದರೂ ಹೀಗಾಗಿದೆ ಎಂದು ಕ್ವಾರಂಟೈನ್‌ಗೆ ಒಳಗಾಗಿರುವವರೊಬ್ಬರು ಹೇಳಿದ್ದಾರೆ.

English summary
Coronavirus infection confirmed to cameraman on a reputable channel. The 37 media representatives who have been in touch with them have been quarantined.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X