• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ದಾದಿಯರ ದಿನ: ಕೇವಲ ಕೊರೊನಾ ಯೋಧರು ಎಂದು ಕರೆದರೆ ಸಾಕೇ?

|

ಆತ್ಮವಿಶ್ವಾಸ ತುಂಬುವ ಆರೈಕೆ ಹಾಗೂ ಸೇವಾ ಮನೋಭಾವನೆ ಇಲ್ಲದ ಚಿಕಿತ್ಸೆಯಿಂದ ಯಾರೂ ಗುಣಮುಖರಾಗುವುದಿಲ್ಲ. ಎಷ್ಟೇ ಸಣ್ಣ ಕಾಯಿಲೆ ಇದ್ದರೂ ಸರಿಯಾದ ಆರೈಕೆಯಿಲ್ಲದೆ ಇದ್ದರೆ ಗುಣಮುಖರಾಗುವುದು ಕಷ್ಟ. ಚಿಕಿತ್ಸೆಯೆ ಇಲ್ಲದ ಕೊರೊನಾ ವೈರಸ್ ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ಯೋಧರಂತೆ ಸೇವೆ ಮಾಡುತ್ತಿರುವವರು ವೈದ್ಯಕೀಯ ಸಿಬ್ಬಂದಿ, ಅದರಲ್ಲೂ ಪ್ರಮುಖವಾಗಿ ದಾದಿಯರು.

ಇವತ್ತು ವಿಶ್ವ ದಾದಿಯರ ದಿನ. ತಮ್ಮ ಜೀವದ ಹಂಗು ತೊರೆದು ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡವರು ಆರೋಗ್ಯ ಕಾರ್ಯಕರ್ತರು. ಕ್ರಿಮಿಯನ್ ಯುದ್ದದಲ್ಲಿ ಕಣ್ಣಿಗೆ ಕಾಣುವ ವೈರಿಗಳೊಂದಿಗೆ ಹೋರಾಡಿ ಗಾಯಗೊಂಡಿದ್ದ ಸೈನಿಕರಿಗೆ ಶುಶ್ರೂಷೆ ಮಾಡಿದ್ದ ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಸೇವಾ ಮನೋಭಾವನೆ ಮತ್ತೊಮ್ಮೆ ಮರುಕಳಿಸಿದಂತೆ ಜಗತ್ತಿನಾದ್ಯಂತ ಸುಮಾರು 20 ಮಿಲಿಯನ್‌ಗೂ ಹೆಚ್ಚು ದಾದಿಯರು ಕೊರೊನಾ ವೈರಸ್‌ ವಿರುದ್ದದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಆರೋಗ್ಯ ಇಲಾಖೆ ಸೈನಿಕರ ಸೇವೆ ಹಾಗೂ ಸಂಬಳ ನಡುವಿನ ವ್ಯತ್ಯಾಸ

ಫ್ಲಾರೆನ್ಸ್‌ ನೈಟಿಂಗೇಲ್‌ ಜನ್ಮ ದ್ವಿಶತಮಾನೋತ್ಸವದ ಸಂದರ್ಭದಲ್ಲಿ ಇಡೀ ವಿಶ್ವ ಹಿಂದೆಂದಿಗಿಂತಲೂ ಹೆಚ್ಚು ಆರೋಗ್ಯ ಹಾಗೂ ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ವಿಪರ್ಯಾಸ. ಕೋವಿಡ್‌ ವಿರುದ್ಧದ ನಿರ್ಣಾಯಕ ಹೋರಾಟದ ಸಂದರ್ಭದಲ್ಲಿ ನಮ್ಮ ಕೊರೊನಾ ಯೋಧರ ಕುರಿತು ಅರಿಯುವುದು ಅಗತ್ಯ!

ದೇಶದಲ್ಲಿ ಕೊರೊನಾ ಯೋಧರು!

ದೇಶದಲ್ಲಿ ಕೊರೊನಾ ಯೋಧರು!

ಕೊರೊನಾ ವೈರಸ್ ತಂದಿಟ್ಟಿರುವ ಸಂಕಷ್ಟದ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರನ್ನು ನಮ್ಮ ಸರ್ಕಾರ ಕೊರೊನಾ ಯೋದರು ಎಂದು ಹೆಮ್ಮೆಯಿಂದ ಕರೆಯುತ್ತಿದೆ. ಆದರೆ ಈ ಹೆಮ್ಮೆ ಕೇವಲ ತೋರಿಕೆಗೆ ಮಾತ್ರ ಎನ್ನುತ್ತಾರೆ ಕೊರೊನಾ ಯೋಧರು. ಕೊರೊನಾ ವೈರಸ್‌ ಜೊತೆಗಿನ ಹೋರಾಟದ ಜೊತೆಗೆ ತಮ್ಮ ದೈನಂದಿನ ಜೀವನದ ಹೋರಾಟವನ್ನೂ ಮಾಡಬೇಕಾದ ಅನಿವಾರ್ಯತೆ ಆರೋಗ್ಯ ಕ್ಷೇತ್ರದಲ್ಲಿನ ಈ ಕೊರೊನಾ ಯೋಧರಿಗಿದೆ. ಅವರಿಗೆ ಸರ್ಕಾರ ಕೊಡುತ್ತಿರುವ ಸೌಲಭ್ಯ, ವೇತನ ಹಾಗೂ ಉದ್ಯೋಗ ಭದ್ರತೆ ಏನೇನು ಸಾಲದು ಎಂಬುದು ಅಂಕಿ ಅಂಶಗಳಿಂದಲೇ ತಿಳಿಯುತ್ತದೆ.

ಕೊರೊನಾ ವೈರಸ್‌ ವಿರುದ್ಧ ನಿರ್ಣಾಯಕ ಹೋರಾಟ ಯಾವುದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯುತ್ತಿಲ್ಲ. ಬದಲಿಗೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಗಳಡಿ ಸೇವೆ ಸಲ್ಲಿಸುತ್ತಿರುವ ನಮ್ಮ ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು, ಜೆಎನ್‌ಎಂಎಸ್‌ ನರ್ಸ್‌ಗಳು, ವೈದ್ಯರು ಹಾಗೂ 108 ಅಂಬುಲೆನ್ಸ್‌ಗಳಲ್ಲಿ ಕೆಲಸ ಮಾಡುತ್ತಿರುವವರು ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಕೊರೊನಾ ವೈರಸ್‌ ಶಂಕಿತರು ಅಥವಾ ಸೋಂಕಿತರನ್ನು ಪತ್ತೆ ಹಚ್ಚುವುದರಿಂದ ಶುರುವಾಗಿ ಅವರನ್ನು ನಿಗದಿತ ಆಸ್ಪತ್ರೆಯಲ್ಲಿ ದಾಖಲು ಮಾಡುವವರೆಗೆ ಜವಾಬ್ದಾರಿ ಇರುತ್ತದೆ. ನಂತರ ಸೋಂಕಿತರೊಂದಿಗೆ ಪ್ರಥಮ, ದ್ವಿತೀಯ ಹಂತದ ಸಂಪರ್ಕದಲ್ಲಿ ಇದ್ದವರನ್ನು ಪತ್ತೆ ಮಾಡುವ ಕಾರ್ಯವನ್ನೂ ಮಾಡುವುದು ಇದೇ ಆರೋಗ್ಯ ಕಾರ್ಯಕರ್ತರು. ಒಟ್ಟಾರೆಯಾಗಿ ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವುದನ್ನು ಗಮನಿಸಿಯೆ ಸರ್ಕಾರ ಅವರನ್ನು ಕೊರೊನಾ ಯೋಧರು ಎಂದು ಕರೆಯುತ್ತಿದೆ.

ಕಿರಿಯ ಆರೋಗ್ಯ ಸಹಾಯಕಿಯರು

ಕಿರಿಯ ಆರೋಗ್ಯ ಸಹಾಯಕಿಯರು

ಕೊರೊನಾ ವೈರಸ್‌ ನಿಯಂತ್ರಣದ ಒತ್ತಡ ಇದೇ ಕೊರೊನಾ ಯೋಧರ ಮೇಲಿದೆ. ಸರ್ಕಾರದಿಂದ ಮೇಲಾಧಿಕಾರಿಗಳಿಗೆ ಒತ್ತಡ ಬಂದಾಗೆಲ್ಲ ಬಲಿಯಾಗುವುದು ಇದೇ ಯೋಧರು. ಇವರು ಸರ್ಕಾರದ ಖಾಯಂ ಉದ್ಯೋಗಿಗಳಲ್ಲ. ಪ್ರತಿ ವರ್ಷ ಗುತ್ತಿಗೆ ನವೀಕರಣಗೊಳ್ಳುತ್ತದೆ. ರಾಜ್ಯದಲ್ಲಿ ಸುಮಾರು 3 ಸಾವಿರ ದಾದಿಯರು ಹಾಗೂ ಒಂದೂವರೆ ಸಾವಿರ 108 ಅಂಬುಲೆನ್ಸ್‌ಗಳಲ್ಲಿ ಕೆಲಸ ಮಾಡುವ ಪೈಲಟ್ ಹಾಗೂ ನರ್ಸ್‌ಗಳಿದ್ದಾರೆ.

ಅವರಿಗೆ ಕೊಡುತ್ತಿರುವ ವೇತನ ಮಾಸಿಕ 12 ಸಾವಿರ ರೂ.ಗಳು. ಅದರಲ್ಲಿ ಕೈಗೆ ಸಿಗುವುದು ಕೇವಲ 10,500 ರೂಪಾಯಿಗಳು ಮಾತ್ರ. ಇವರು ಎನ್‌ಎಚ್‌ಆರ್‌ಎಂ ಯೋಜನೆಯಡಿ ಕೆಲಸ ಮಾಡುತ್ತಿರುವುದರಿಂದ ಸರ್ಕಾರಿ ನೌಕರರಿಗೆ ಸಿಗುವ ಯಾವ ಸೌಲಭ್ಯಗಳೂ ಇವರಿಗೆ ದೊರೆಯುವುದಿಲ್ಲ.

ಪ್ರತಿ ಒಂದು ಸಾವಿರ ಜನರಿಗೆ ಒಬ್ಬರಂತೆ ಆಶಾ ಕಾರ್ಯಕರ್ತರು ಕೆಲಸ ನಿರ್ವಹಿಸುತ್ತಾರೆ. 5 ಸಾವಿರ ಜನರಿಗೆ ಒಬ್ಬ ಕಿರಿಯ ಆರೋಗ್ಯ ಸಹಾಯಕಿಯರು ಇರಬೇಕು ಎಂಬ ನಿಯಮವಿದೆ. ಆದರೆ ಕೊರೊನಾ ವೈರಸ್‌ ಸಂದರ್ಭದಲ್ಲಿಯೂ ಸುಮಾರು 20 ಸಾವಿರ ಜನಸಂಖ್ಯೆಗೆ ಒಬ್ಬ ಕಿರಿಯ ಆರೋಗ್ಯ ಸಹಾಯಕಿರಿದ್ದಾರೆ. ಹೀಗಾಗಿ ಕೆಲಸ ಒತ್ತಡ ಯಾವ ಮಟ್ಟಿದಲ್ಲಿ ಇದೆ ಎಂಬುದನ್ನು ಗಮನಿಸಬಹುದು.

ಆಶಾ ಕಾರ್ಯಕರ್ತರು

ಆಶಾ ಕಾರ್ಯಕರ್ತರು

ಇನ್ನು ರಾಜ್ಯಾದ್ಯಂತ ಕೊರೊನಾ ಶಂಕಿತರು ಹಾಗೂ ಸೋಂಕಿತರನ್ನು ಪ್ರಾಥಮಿಕವಾಗಿ ಗುರುತಿಸುವ ಆಶಾ ಕಾರ್ಯಕರ್ತರ ಕೆಲಸ ಸಾಕಷ್ಟಿದೆ. ಪ್ರತಿ ಸಾವಿರ ಜನರಿಗೆ ಒಬ್ಬ ಆಶಾ ಕಾರ್ಯಕರ್ತರು ಇರಬೇಕು ಎಂಬ ನಿಯಮವಿದೆ. ಆದರೆ ಅದು ಪಾಲನೆ ಆಗುತ್ತಿಲ್ಲ. ಹೀಗಾಗಿ ಪ್ರತಿದಿನ ಕನಿಷ್ಠ 20 ಕುಟುಂಬಗಳನ್ನು ಸರ್ವೆ ಮಾಡುವ ಒತ್ತೆ ಆಶಾ ಕಾರ್ಯಕರ್ತರ ಮೇಲಿದೆ.

ಕೊರೊನಾ ವೈರಸ್ ತೀವ್ರವಾಗಿ ಹರಡುತ್ತಿರುವ ಲಾಕ್‌ಡೌನ್ ಸಡಿಲಿಕೆಯ ಈ ಸಂದರ್ಭದಲ್ಲಿ ಅಪಾಯಕಾರಿ ಸನ್ನಿವೇಶಗಳಲ್ಲಿ ಇವರು ಕೆಲಸ ಮಾಡುತ್ತಿದ್ದಾರೆ. ಆದರೆ ಸಮಾಧಾನದ ಸಂಗತಿ ಎಂದರೆ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಇವರಿಗೆ ವೇತನದ ಜೊತೆಗೆ ತಲಾ 3 ಸಾವಿರ ರೂ. ಪ್ರೋತ್ಸಾಹಧನ ಕೊಡಲಾಗುತ್ತಿದೆ.

ಕೊರೊನಾ ಯೋಧರಾಗಿರುವ ಗುತ್ತಿಗೆ ವೈದ್ಯರು

ಕೊರೊನಾ ಯೋಧರಾಗಿರುವ ಗುತ್ತಿಗೆ ವೈದ್ಯರು

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಕೆಲಸ ಮಾಡುತ್ತಿರುವ ಸುಮಾರು 870 ಎಂಬಿಬಿಎಸ್‌, ಬಿಎಎಂಎಸ್‌ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ 2005ರಿಂದಲೂ ಗುತ್ತಿಗೆ ವೈದ್ಯರಾಗಿಯೆ ಸೇವೆ ಸಲ್ಲಿಸುತ್ತಿರುವ ಇವರ ವೇತನ ಕೇವಲ 19500 ರೂಪಾಯಿಗಳು ಮಾತ್ರ. ಉಳಿದಂತೆ ಯಾವುದೇ ಪ್ರೋತ್ಸಾಹಧನ ಕೂಡ ಈ ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ವೈದ್ಯರಿಗೆ ಕೊಡುತ್ತಿಲ್ಲ. ಆದರೆ ಕೊರೊನಾ ವೈರಸ್ ಸಂದರ್ಭದಲ್ಲಿ ಅಧಿಕ ಕೆಲಸ ಒತ್ತಡ ಇವರ ಮೇಲೆಯೂ ಇದೆ.

ಈಡೇರದ ಪಿಪಿಇ ಕಿಟ್‌ಗಳ ಬೇಡಿಕೆ

ಈಡೇರದ ಪಿಪಿಇ ಕಿಟ್‌ಗಳ ಬೇಡಿಕೆ

ಶಂಕಿತರನ್ನು ತಪಾಸಣೆ ಮಾಡುವಾದ ಪಿಪಿಇ ಕಿಟ್‌ಗಳನ್ನು ಧರಿಸಬೇಕೆಂಬ ನಿಯಮವಿದೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗಾಗಲಿ, ಕಿರಿಯ ಆರೋಗ್ಯ ಸಹಾಯಕಿಯರಿಗಾಗಲಿ ಪಿಪಿಎ ಕಿಟ್‌ಗಳನ್ನು ಸರ್ಕಾರ ಒದಗಿಸಿಲ್ಲ. ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವ ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ಪಿಪಿಇ ಕಿಟ್ ಕೊಡಲಾಗಿದೆ. ಇದೀಗ ಲಾಕ್‌ಡೌನ್ ಸಡಿಲಿಕೆಯಿಂದ ಇವರಿಗೆ ಮತ್ತಷ್ಟು ಆತಂಕ ಶುರುವಾಗಿದೆ.

100 ಎಂಎಲ್‌ ಸ್ಯಾನಿಟೈಸರ್‌ನಲ್ಲಿ ಅಂಬುಲೆನ್ಸ್ ಕ್ಲಿನಿಂಗ್

100 ಎಂಎಲ್‌ ಸ್ಯಾನಿಟೈಸರ್‌ನಲ್ಲಿ ಅಂಬುಲೆನ್ಸ್ ಕ್ಲಿನಿಂಗ್

ಕೊರೊನಾ ವೈರಸ್ ಸೋಂಕಿತರನ್ನು 108 ಅಂಬುಲೆನ್ಸ್‌ಗಳಲ್ಲಿ ರವಾನಿಸಬಾರದು ಎಂಬ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ತೀವ್ರ ಜ್ವರ ಅಥವಾ ಹೊಟ್ಟೆನೋವು ಎಂದು ಬರುವ ರೋಗಿಗಳಲ್ಲಿ ಕೊರೊನಾ ವೈರಸ್ ದೃಢಪಟ್ಟಿರುವ ಉದಾಹರಣೆಗಳಿವೆ. ಹೀಗಾಗಿ ಯಾವುದೇ ರೋಗಿಯನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ಅಂಬುಲೆನ್ಸ್‌ ಸ್ವಚ್ಚಗೊಳಿಸಲು ಪೈಲೆಟ್‌ ಎಂದು ಕರೆಯುವ ಡ್ರೈವರ್‌ಗಳಿಗೆ ನೂರು ಎಂಎಲ್ ಸ್ಯಾನಿಟೈಸರ್ ಹಾಗೂ 20 ಲೀಟರ್ ನೀರು ಕೊಡಲಾಗುತ್ತದೆ. ಆದರೆ ಅದರಿಂದ ಅಂಬುಲೆನ್ಸ್‌ನ್ನು ವೈರಾಣುಮುಕ್ತ ಮಾಡುವುದು ಅಸಾಧ್ಯ ಎನ್ನುತ್ತಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೈಲಟ್‌ ಒಬ್ಬರು. ಇದರಿಂದಾಗಿ ಸೋಂಕು ಆರೋಗ್ಯ ಸಿಬ್ಬಂದಿ ಅಥವಾ ಬೇರೆ ಸಾಮಾನ್ಯ ರೋಗಿಗೂ ತಗಲುವ ಸಾಧ್ಯತೆಗಳನ್ನು ಅಲ್ಲಗಳೆಯುಂತಿಲ್ಲ.

ಕೊರೊನಾ ವೈರಸ್‌ ಸಂಕಷ್ಟದ ಸಂದರ್ಭದಲ್ಲಿ ಬೇಡಿಕೆಗಳು

ಕೊರೊನಾ ವೈರಸ್‌ ಸಂಕಷ್ಟದ ಸಂದರ್ಭದಲ್ಲಿ ಬೇಡಿಕೆಗಳು

ಕೊರೊನಾ ವೈರಸ್‌ ತಡೆಗಟ್ಟಲು ಕೇಂದ್ರ ಸರ್ಕಾರಕ್ಕೆ ಪಿಎಂ ಕೇರ್ಸ್‌ ಹಾಗೂ ರಾಜ್ಯದಲ್ಲಿ ಸಿಎಂ ಪರಿಹಾರ ನಿಧಿಗೆ ಹಣ ಹರಿದು ಬರುತ್ತಿದೆ. ಆ ಹಣವನ್ನು ಕೊರೊನಾ ಸಂಕಷ್ಟದಲ್ಲಿರುವ ಯೋಧರಿಗೆ ಬಳಸಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ಸರ್ಕಾರ ಕೇವಲ ಕೊರೊನಾ ಯೋಧರು ಎಂದು ಕರೆಯುವ ಬದಲಿಗೆ, ಈಗಿರುವ ವೇತನದ ಎರಡರಷ್ಟು ವೇತನವನ್ನು ಕೊಡಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ 50 ಲಕ್ಷ ರೂ.ಗಳ ಆರೋಗ್ಯ ವಿಮಾ ಯೋಜನೆಯನ್ನು ಎಲ್ಲರಿಗೂ ವಿಸ್ತರಣೆ ಮಾಡಬೇಕು, ಗುಣಮಟ್ಟದ ಮಾಸ್ಕ್‌, ಪಿಪಿಇ ಕಿಟ್‌ಗಳನ್ನು ಕೊಡಬೇಕು. ಪ್ರಮುಖವಾಗಿ ಕೊರೊನಾ ಯೋಧರ ಕೆಲಸಕ್ಕೆ ಭದ್ರತೆ ಮತ್ತು ರಕ್ಷಣೆಯನ್ನು ಒದಗಿಸಬೇಕು. ಅಗತ್ಯ ವಾಹನ ಸೌಲಭ್ಯ, ಮತ್ತು ಮಧ್ಯಾಹ್ನದ ಊಟವನ್ನು ಒದಗಿಸಬೇಕು ಎಂಬ ಅರ್ಹ ಬೇಡಿಕೆಗಳನ್ನು ಕೊರೊನಾ ಯೋಧರು ಸರ್ಕಾರ ಎದುರು ಇಟ್ಟಿದ್ದಾರೆ.

ಆರೋಗ್ಯ ಕ್ಷೇತ್ರಕ್ಕಿಲ್ಲ ಅಗತ್ಯ ಧನ ಸಹಾಯ

ಆರೋಗ್ಯ ಕ್ಷೇತ್ರಕ್ಕಿಲ್ಲ ಅಗತ್ಯ ಧನ ಸಹಾಯ

ಬಡತನ ರೇಖೆಗಿಂತ ಕೆಳಗಿರುವ ನಮ್ಮ ರಾಷ್ಟ್ರೀಯ ತಲಾ ವರಮಾನ (ಜಿಡಿಪಿ)ಯ ಶೇಕಡಾ 1.29 ರಷ್ಟು ಅನುದಾನವನ್ನು ಮಾತ್ರ ಆರೋಗ್ಯ ಇಲಾಖೆಗೆ ಕೊಡಲಾಗುತ್ತಿದೆ. ಜಿಡಿಪಿಯ ಕನಿಷ್ಠ ಶೇಕಡಾ 5ರಷ್ಟು ಹಣವನ್ನಾದರೂ ಆರೋಗ್ಯ ಕ್ಷೇತ್ರಕ್ಕೆ ಮೀಸಲಿರಿಸಬೇಕು ಎಂಬ ಒತ್ತಾಯಗಳಿವೆ. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ, ಬರು ಸಾಧ್ಯೆತೆಗಳು ಸಧ್ಯಕ್ಕೆ ಕಂಡು ಬರುತ್ತಿಲ್ಲ. ಕೊರೊನಾ ವೈರಸ್ ತಂದಿಟ್ಟುರುವ ಸಂಕಷ್ಟದ ಸಂದರ್ಭದಲ್ಲಿ ಕೇವಲ ರಕ್ಷಣಾ ಕ್ಷೇತ್ರಕ್ಕೆ ಮಹತ್ವ ಕೊಟ್ಟರೆ ದೇಶದ ಅಭಿವೃದ್ಧ ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ. ಕೊರೊನಾ ವೈರಸ್‌ ಕೊಡುತ್ತಿರುವ ಪಾಠದಿಂದಲಾದರೂ ಆಡಳಿತ ನಡೆಸುವವರು ಎಚ್ಚೆತ್ತುಕೊಳ್ಳಬೇಕಿದೆ. ಸಾಮ್ರಾಜ್ಯಶಾಹಿ ವ್ಯವಸ್ಥೆಗಳು ದೇಶದ ಜನರ ಆರೋಗ್ಯಕ್ಕೆ ಇನ್ನು ಮುಂದಾದರೂ ಗಮನ ಕೊಡಬೇಕಿದೆ.

English summary
No one will be cured with confidence-free care and service-minded treatment. It is difficult to cure any minor illness but without proper care. Medical personnel, especially nurses, serve as warriors while fighting untreated coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X