ಸಾಂಬಾರ ಪದಾರ್ಥಗಳ ರಾಣಿ ಏಲಕ್ಕಿ ನೇಪಥ್ಯಕ್ಕೆ ಸರಿದದ್ಯಾಕೆ?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಕೊಡಗು,ಮಾರ್ಚ್,11: ಸಾಂಬಾರ ಪದಾರ್ಥಗಳ ರಾಣಿ ಎಂದೆನಿಸಿಕೊಳ್ಳುತ್ತಿದ್ದ, ಬಂಗಾರದ ಬೆಳೆಯಾಗಿದ್ದ ಏಲಕ್ಕಿ ಬೆಳೆಗೆ ಕಟ್ಟೆರೋಗ ಬಾಧಿಸಿದ ಕಾರಣ ಏಲಕ್ಕಿ ಸಂಪೂರ್ಣ ನೇಪಥ್ಯಕ್ಕೆ ಸರಿದಿದ್ದು, ಇದೀಗ ಕೊಡಗಿನ ತುಂಬೆಲ್ಲಾ ಕಾಫಿ ತೋಟಗಳೇ ತಲೆ ಎತ್ತುತ್ತಿದೆ. ಜತೆಗೆ ಕೇರಳದ ನೆಲ್ಯಾಣಿ ಏಲಕ್ಕಿಯೂ ಇದರ ಹಿನ್ನಡೆಗೆ ಕಾರಣವಾಗಿದೆ.

ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಕೊಡುತ್ತಿದ್ದ ಏಲಕ್ಕಿಗೆ ಕಳೆದ ಒಂದೆರಡು ದಶಕಗಳ ಹಿಂದೆ ಒಂದು ಕೆಜಿಗೆ ಸುಮಾರು 700 ರಿಂದ 1000 ರೂ. ಬೆಲೆಯಿತ್ತು. ಕಟ್ಟೆರೋಗದಿಂದ ಏಲಕ್ಕಿ ಬೆಳೆಯ ಇಳುವರಿ ಸಂಪೂರ್ಣ ಕುಸಿದಿದೆ. ಹಾಗಾಗಿ ಕೆಜಿಯೊಂದಕ್ಕೆ ಕೇವಲ 500 ರೂ. ಮಾತ್ರ ಲಭಿಸುವಂತಾಗಿದೆ.[ಕರಿಮೆಣಸು ಬೆಳೆಗಾರನ ಕಂಗೆಡಿಸಿದ 'ಸೊರಗುರೋಗ']

Cordamom plant's value drops down in Kodagu

ಏನಿದು ಕಟ್ಟೆರೋಗ?

ಕೃಷಿ ಸಂಶೋಧನಾ ಕೇಂದ್ರದ ಮಾಹಿತಿ ಪ್ರಕಾರ ಕಟ್ಟೆ ರೋಗ ಎಂಬುದು ಒಂದು ನಂಜು ರೋಗ. ಇದು 'ಪೆಂಟಲೋನಿಯಾ ನೈಗ್ರೋನೆರ್ವೋಸಾ' ಎಂಬ ಒಂದು ಜಾತಿಯ ಗಿಡಹೇನು(ಕೀಟ)ವಿನಿಂದ ಬರುತ್ತದೆ. ಆಂಗ್ಲ ಭಾಷೆಯಲ್ಲಿ 'ಮೊಸಾಯಿಕ್ ಅಥವಾ ಮಾರ್ಬಲ್' ಎಂದು ಕರೆಯಲಾಗುತ್ತಿದೆ.

ಕಟ್ಟೆರೋಗದ ಲಕ್ಷಣಗಳೇನು?

ಏಲಕ್ಕಿ ಗಿಡಗಳಲ್ಲಿ ಯಾವಾಗ ಫಸಲು ಬರಲು ಆರಂಭವಾಗುತ್ತದೋ ಆ ಅವಧಿಯಲ್ಲಿ ಕಟ್ಟೆರೋಗ ಕಾಣಿಸಿಕೊಳ್ಳುತ್ತದೆ. ಆಗ ಗಿಡಗಳ ಬೆಳವಣಿಗೆ ಸಂಪೂರ್ಣ ಕುಂಠಿತಗೊಳ್ಳುತ್ತದೆ. ಗಾತ್ರದಲ್ಲಿ ಚಿಕ್ಕದಾಗಿ, ತೀರಾ ಸಣ್ಣದಾದ ಪುಷ್ಪ ಗೊಂಚಲು ಕಾಣಿಸಿಕೊಳ್ಳುತ್ತದೆ. ಕೊನೆಗೆ ಏಕಾಏಕಿ ಸತ್ತು ಹೋಗುತ್ತವೆ.[ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]

ಕೇರಳದಲ್ಲಿ ಬಂದಿರುವ ಏಲಕ್ಕಿಯ ಹೊಸ ತಳಿ ಯಾವುದು?

ಕೇರಳದಲ್ಲಿ ನೆಲ್ಯಾಣಿ ಎಂಬ ಹೊಸತಳಿಯನ್ನು ಬೆಳೆಸಲಾಗುತ್ತಿದೆ. ಈ ತಳಿ ಸಾಂಪ್ರದಾಯಿಕ ತಳಿಗಿಂತ ಹತ್ತು ಪಟ್ಟು ಇಳುವರಿ ನೀಡುತ್ತದೆ. ಕೊಡಗಿನ ಏಲಕ್ಕಿ ಬೆಳೆದರೆ ಎಕರೆಗೆ ಐವತ್ತರಿಂದ ನೂರು ಕೆಜಿ ಪಡೆಯಬಹುದು. ಆದರೆ ಕೇರಳದಲ್ಲಿ ಐನೂರು ಕೆಜಿ ಬೆಳೆ ಪಡೆಯುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಗೆ ಕೇರಳದ ನೆಲ್ಯಾಣಿ ಏಲಕ್ಕಿ ಲಗ್ಗೆಯಿಟ್ಟಿದ್ದು, ಕೊಡಗಿನ ಏಲಕ್ಕಿ ಸದ್ದಿಲ್ಲದೆ ನೇಪಥ್ಯಕ್ಕೆ ಸರಿಯುತ್ತಿದೆ.

Cordamom plant's value drops down in Kodagu

ಕಾಫಿ ಬೆಳೆಯ ಪರಿಸ್ಥಿತಿ ಹಿಂದೆ ಹೇಗಿತ್ತು?

ಹಿಂದೆಲ್ಲಾ ಕೊಡಗಿನ ತುಂಬ ಏಲಕ್ಕಿ ಗಿಡಗಳೇ ರಾರಾಜಿಸುತ್ತಿದ್ದವು. ಇಲ್ಲಿ ಮಳೆಯು ಯಥೇಚ್ಛವಾಗಿ ಸುರಿಯುವ ಕಾರಣ ಈ ಹವಾಗುಣಕ್ಕೆ ಏಲಕ್ಕಿ ಹೊರತುಪಡಿಸಿ ಬೇರೆ ಕೃಷಿ ಮಾಡುವುದು ಕಷ್ಟದ ಕೆಲಸವಾಗಿತ್ತು. ಅಲ್ಲದೇ ಕಾಫಿ ಬೆಳೆಯಬೇಕಾದರೆ ಕಾಫಿ ಮಂಡಳಿಯಿಂದ ಪರವಾನಗಿ ಪಡೆಯಬೇಕಾಗಿತ್ತು. ಹಾಗಾಗಿ ಯಾವುದೇ ರೈತರು ಕಾಫೆ ಬೆಳೆಯುವ ಗೋಜಿಗೆ ಹೋಗುತ್ತಿರಲಿಲ್ಲ.

ಯಾವಾಗ ಏಲಕ್ಕಿಗೆ ಕಟ್ಟೆರೋಗ ಕಾಣಿಸಿಕೊಂಡಿತೋ ಅಂದಿನಿಂದ ಕಾಫಿ ಮಂಡಳಿಯ ಹಿಡಿತದಲ್ಲಿದ್ದ ಕಾಫಿ ಮುಕ್ತ ಮಾರುಕಟ್ಟೆಗೆ ಬಂದಿತು. ಕಾಫಿ ಬೆಳೆಯಲು ಇಚ್ಛಿಸುವ ಪ್ರತಿಯೋರ್ವರಿಗೂ ಕಾಫಿ ಮಂಡಳಿ ಪರವಾನಿಗೆ ನೀಡಿತು.[ರೈತರ ಸಮಸ್ಯೆ ನಿವಾರಣೆಗೊಂದು 'ಯೂ ಫಾರ್ಮ್']

ಅದಾಗಲೇ ಏಲಕ್ಕಿಯೊಂದಿಗೆ ಹೆಣಗಾಡಿ ಸುಸ್ತಾಗಿದ್ದ ಬೆಳೆಗಾರ ಏಲಕ್ಕಿ ತೋಟವನ್ನು ಕಾಫಿ ತೋಟವನ್ನಾಗಿ ಮಾರ್ಪಡಿಸಿದನು. ಮೊದಲಿಗೆ ಹೋಲಿಸಿದರೆ ಶೇ.10ರಷ್ಟು ಭಾಗ ಮಾತ್ರ ಏಲಕ್ಕಿ ಮಾರುಕಟ್ಟೆಗೆ ಬರುತ್ತಿದೆ ಎಂಬುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cordamom plant's value drops down in Kodagu. This place taken by Coffee plants for some days.
Please Wait while comments are loading...