• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ರಾಷ್ಟ್ರ-ಒಂದು ಚುನಾವಣೆಗೆ ಎರಡನೇ ದಿನದ ವಿಧಾನಸಭೆ ಕಲಾಪವೂ ಬಲಿ!

|

ಬೆಂಗಳೂರು, ಮಾ. 05: 'ಸಿಡಿ' ಸ್ಫೋಟ ಪ್ರಕರಣದಿಂದ ಮೊದಲೇ ಗಲಿಬಿಲಿಗೊಂಡಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ವಿಧಾನಸಭೆಯಲ್ಲಿ ಭಾರಿ ಹಿನ್ನಡೆಯಾಗಿದೆ. ಸತತ ಎರಡನೇ ದಿನದ ವಿಧಾನಸಭೆ ಕಲಾಪವೂ ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯಕ್ಕೆ ಬಲಿಯಾಗಿದೆ. ಹೌದು, ಮಹತ್ವದ ಬಜೆಟ್ ಅಧಿವೇಶನದ ಕಲಾಪದ ಎರಡನೇ ದಿನವೂ ಯಾವುದೇ ಚರ್ಚೆ ನಡೆಯದೇ ಬರಿ ಧರಣಿ, ಗದ್ದಲದಲ್ಲಿಯೇ ಇಂದಿನ ಕಲಾಪವೂ ನಾಳೆಗೆ ಮುಂದೂಡಿಕೆ ಆಗಿದೆ.

ಒಂದು ರಾಷ್ಟ್ರ ಒಂದು ಚುನಾವಣೆ ಎಂಬ ಪರಿಕಲ್ಪನೆ ಕುರಿತು ಚರ್ಚೆ ಮಾಡಲು ಮೀಸಲಾಗಿದ್ದ ರಾಜ್ಯ ಬಜೆಟ್ ಅಧಿವೇಶನದ ಮೊದಲೆರಡು ದಿನಗಳ ಕಲಾಪ, ಕಾಂಗ್ರೆಸ್ ಪ್ರತಿಭಟನೆಗೆ ಬಲಿಯಾಗಿದೆ. ಒಂದು ರಾಷ್ಟ್ರ-ಒಂದು ಚುನಾವಣೆ ಆರ್‌ಎಸ್‌ಎಸ್‌ ಅಜೆಂಡಾ ಆಗಿರುವುದರಿಂದ ಯಾವುದೇ ಕಾರಣಕ್ಕೂ ಆ ವಿಷಯದ ಮೇಲೆ ಚರ್ಚೆಗೆ ಅವಕಾಶ ಕೊಡಲ್ಲ ಎಂದು ಕಾಂಗ್ರೆಸ್ ಸದಸ್ಯರು ಸತತ ಎರಡನೇ ದಿನವೂ ನಿರಂತರ ಧರಣಿ ನಡೆಸಿದರು.

ನಿನ್ನೆ ವಿಧಾನಸಭೆಯಲ್ಲಿ ಅಂಗಿ ಬಿಚ್ಚಿದ್ದು ದುರ್ನಡತೆ ಎಂದು ಪರಿಗಣಿಸಿ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರನ್ನು ಅಮಾನತು ಮಾಡಿದ್ದು, ಇಂದು ಇಡೀ ದಿನದ ಕಲಾಪ ಹಾದಿ ದಿಕ್ಕುತಪ್ಪಲು ಕಾರಣವಾಯ್ತು. ಹಠ ಬಿಡದ ಕಾಂಗ್ರೆಸ್ ಸದಸ್ಯರನ್ನು ಸಮಾಧಾನ ಮಾಡುವಲ್ಲಿ ಆಡಳಿತ ಪಕ್ಷದ ನಾಯಕರು ವಿಫಲರಾದರು. ಜೊತೆಗೆ ಪೂರ್ವಭಾವಿಯಾಗಿ ವಿಷಯದ ಕುರಿತು ಸಮಾಲೋಚನೆ ಮಾಡದಿರುವುದು ಹಾಗೂ ಆಡಳಿತ ಪಕ್ಷದ ಶಾಸಕರ ಕೊರತೆಯಿಂದಾಗಿ ಗಂಭೀರ ವಿಚಾರದ ಕುರಿತು ಚರ್ಚೆಯಾಗದೇ ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿಕೆಯಾಗಿದೆ.

ಒಂದೇ ಚುನಾವಣೆಗೆ ಎರಡನೇ ದಿನವೂ ಬಲಿ!

ಒಂದೇ ಚುನಾವಣೆಗೆ ಎರಡನೇ ದಿನವೂ ಬಲಿ!

ದೇಶದಲ್ಲಿ ಒಂದೇ ಬಾರಿಗೆ ಎಲ್ಲ ಚುನಾವಣೆಗಳು ನಡೆಯಬೇಕು ಎಂಬ ಹಿನ್ನೆಲೆಯಲ್ಲಿ ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತು ಚರ್ಚೆ ಶುರುವಾಗಿದೆ. ರಾಜ್ಯ ವಿಧಾನಮಂಡಲದಲ್ಲಿ ಈ ಕುರಿತು ಒಂದು ವಿಸ್ತೃತ ಚರ್ಚೆಯಾಗಬೇಕು ಎಂಬ ಕಾರಣಕ್ಕೆ ಬಜೆಟ್ ಅಧಿವೇಶನದ ಮೊದಲೆರಡು ದಿನಗಳನ್ನು ಈ ವಿಷಯದ ಮೇಲೆ ಚರ್ಚೆ ನಡೆಸಲು ಕಾಯ್ದಿರಿಸಲಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದಿಂದ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಎರಡು ದಿನಗಳ ಕಲಾಪದಲ್ಲಿ ಒಂಚೂರು ಚರ್ಚೆ ಆಗದೇ ಕಲಾಪದ ಸಮಯ ವ್ಯರ್ಥವಾಯಿತು.

ಆರ್‌ಎಸ್‌ಎಸ್ ಅಜೆಂಡಾ ಎಂದ ಕಾಂಗ್ರೆಸ್

ಆರ್‌ಎಸ್‌ಎಸ್ ಅಜೆಂಡಾ ಎಂದ ಕಾಂಗ್ರೆಸ್

ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ವಿಶೇಷ ಆಸ್ಥೆವಹಿಸಿ ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತು ಚರ್ಚೆ ಮಾಡಲು ಎರಡು ದಿನಗಳ ಕಾಲಾವಕಾಶ ನಿಗದಿ ಮಾಡಿದ್ದರು. ಆದರೆ ಸ್ಪೀಕರ್ ನಿರ್ಣಯಕ್ಕೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿ, ಇದು ಅನಗತ್ಯ ಚರ್ಚೆಯ ವಿಚಾರ. ಆರ್‌ಎಸ್‌ಎಸ್‌ ಅಜೆಂಡಾವನ್ನು ಸದನದಲ್ಲಿ ಚರ್ಚೆ ಮಾಡಲು ಆಗುವುದಿಲ್ಲ ಎಂದು ತೀವ್ರವಾಗಿ ವಿರೋಧಿಸಿತು. ಹೀಗಾಗಿ ವಿಧಾನಸಭೆ ಕಲಾಪದ ಮೊದಲೆರಡು ದಿನಗಳಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಸ್ಪೀಕರ್ ಕ್ರಮವನ್ನು ಪ್ರಶ್ನಿಸಿ ಸದನದ ಬಾವಿಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಧರಣಿ ಆರಂಭ ಮಾಡಿದ್ದರಿಂದ ಕಲಾಪದಲ್ಲಿ ಯಾವುದೇ ಚರ್ಚೆ ನಡೆಯಲೇ ಇಲ್ಲ.

ಗುಟುರು ಹಾಕಿದ ವಿಪಕ್ಷ ನಾಯಕ ಸಿದ್ದರಾಮಯ್ಯ

ಗುಟುರು ಹಾಕಿದ ವಿಪಕ್ಷ ನಾಯಕ ಸಿದ್ದರಾಮಯ್ಯ

ಇನ್ನು ಭದ್ರಾವತಿ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ ಅವರು ಅಂಗಿ ಬಿಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ನಿನ್ನೆ ಸದನದಿಂದ ಅಮಾನತು ಮಾಡಲಾಗಿತ್ತು. ಅದನ್ನು ಖಂಡಿಸಿ ಇವತ್ತು ಇಡೀ ದಿನ ಕಾಂಗ್ರೆಸ್ ಸದಸ್ಯರು ಧರಣಿ ಮಾಡಿದರು. ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಕಾಂಗ್ರೆಸ್ ಹೋರಾಟ ತೀವ್ರಗೊಳಿಸಿದ್ದರಿಂದ ಇಂದಿನ ಕಲಾಪವೂ ಬಲಿಯಾಯ್ತು.

ಇಂದು ಬೆಳಿಗ್ಗೆ ಕಲಾಪ ಆರಂಭವಾಗುವ ಮುನ್ನವೇ ಸದನ ಪ್ರವೇಶ ಮಾಡಲು ಕಾಂಗ್ರೆಸ್ ಸದಸ್ಯ ಬಿ.ಕೆ. ಸಂಗಮೇಶ್ ಮುಂದಾಗಿದ್ದರು, ಆದರೆ ಅದಕ್ಕೆ ವಿಧಾನಸಭೆ ಮಾರ್ಷಲ್‌ಗಳು ಅವಕಾಶ ಕೊಡಲಿಲ್ಲ. ಹೀಗಾಗಿ ಕಲಾಪ ಆರಂಭಕ್ಕೂ ಮೊದಲೇ ಸದನದ ಬಾಗಿಲಲ್ಲಿ ಹೈಡ್ರಾಮಾ ನಡೆಯಿತು. ಶಾಸಕ ಸಂಗಮೇಶ್ ಪರವಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಗುಟುರು ಹಾಕಿದರು. ಆದರೂ ಮಾರ್ಷಲ್‌ಗಳು ಸ್ಪೀಕರ್ ಕಾಗೇರಿ ಅವರ ಸೂಚನೆಯಂತೆ ಸದನ ಪ್ರವೇಶಿಸಲು ಸಂಗಮೇಶ್ ಅವರನ್ನು ಬಿಡಲಿಲ್ಲ.

ವಿಪಕ್ಷ ನಾಯಕ ಸಿದ್ದರಾಮಯ್ಯ ಧರಣಿ

ವಿಪಕ್ಷ ನಾಯಕ ಸಿದ್ದರಾಮಯ್ಯ ಧರಣಿ

ಅದರಿಂದ ಕೋಪಗೊಂಡ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಸ್ವತಃ ತಾವೇ ಮುಂದಾಗಿ ಸದನ ಆರಂಭವಾಗುತ್ತಿದ್ದಂತೆಯೆ ಕಾಂಗ್ರೆಸ್ ಸದಸ್ಯರೊಂದಿಗೆ ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳುವಂತೆ ಆಡಳಿತ ಪಕ್ಷದ ಸದಸ್ಯರು ಇದೇ ಸಂದರ್ಭದಲ್ಲಿ ಘೋಷಣೆ ಹಾಕಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕಾಂಗ್ರೆಸ್ ಸದಸ್ಯರ ಧರಣಿ ತೀವ್ರವಾದ ಕಾರಣ ಕಲಾಪವನ್ನು ಮಧ್ಯಾಹ್ನ 12ಕ್ಕೆ ಮೊದಲ ಬಾರಿ ಮುಂದೂಡಲಾಯ್ತು.

ಯಾರ ಮಾತು ಯಾರಿಗೂ ಕೇಳದ ಸ್ಥಿತಿ

ಯಾರ ಮಾತು ಯಾರಿಗೂ ಕೇಳದ ಸ್ಥಿತಿ

ನಂತರ ಮತ್ತೆ ಸದನ ಸಮಾವೇಶಗೊಂಡಾಗಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಪ್ರತಿಭಟನೆ ಕೈಬಿಡಲು ಕಾಂಗ್ರೆಸ್ ರೆಡಿಯಾಗಲಿಲ್ಲ. ಶಾಸಕ ಸಂಗಮೇಶ್ ಅಮಾನತು ಆದೇಶ ಹಿಂಪಡೆಯಿರಿ ಎಂದು ಪ್ರತಿಭಟನೆ ಮುಂದುವರಿಯಿತು. ಸದನದಲ್ಲಿ ಮಾತಿನ ಚಕಮಕಿ ನಡೆದು ಯಾರ ಮಾತು ಯಾರಿಗೂ ಕೇಳದ ಸ್ಥಿತಿ ನಿರ್ಮಾಣವಾಯ್ತು. ಹೀಗಾಗಿ ಮತ್ತೇ ಕಲಾಪ ಮುಂದೂಡಿಕೆಯಾಯ್ತು.

ನಂತರ ಸಂಜೆ 4 ಗಂಟೆಗೆ ಸದನ ಸೇರಿದಾಗಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ವಿಷಯದ ಕುರಿತು ಚರ್ಚೆ ಮಾಡಲು ಅವಕಾಶ ಸಿಗದ ಬಗ್ಗೆ ಸ್ಪೀಕರ್ ಬೇಸರ ವ್ಯಕ್ತಪಡಿಸಿದರು. ಉಳಿದವರಿಗಾದರೂ ಚರ್ಚೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡರು.

  ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕೋಳ್ತಿದ್ದಾರಾ ನಮ್ಮ ಸಚಿವರು? | Oneindia Kannada
  ಸೋಮವಾರಕ್ಕೆ ವಿಧಾನಸಭೆ ಕಲಾಪ ಮುಂದೂಡಿಕೆ

  ಸೋಮವಾರಕ್ಕೆ ವಿಧಾನಸಭೆ ಕಲಾಪ ಮುಂದೂಡಿಕೆ

  ಆದರೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಸದಸ್ಯರು ಸ್ಪೀಕರ್ ಮಾತಿಗೆ ಒಪ್ಪಲೇ ಇಲ್ಲ. ಮೊದಲು ಅಮಾನತು ಆದೇಶ ವಾಪಸ್ ಪಡೆಯಿರಿ ಎಂದು ಪಟ್ಟು ಹಿಡಿದರು. ಇದೇ ಕಾರಣಕ್ಕೆ ಅನಿವಾರ್ಯವಾಗಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಿ ಸ್ಪೀಕರ್ ಆದೇಶ ಮಾಡಿದರು.

  ಗಂಭೀರ ವಿಚಾರದ ಕುರಿತು ಚರ್ಚೆಗೆ ಪೂರ್ವ ತಯಾರಿ ಇಲ್ಲದಿರುವುದು, ಆಡಳಿತ ಪಕ್ಷದ ಶಾಸಕರ ಕೊರತೆ, ಪ್ರತಿಪಕ್ಷ ಕಾಂಗ್ರೆಸ್ ನ ಸಂಘಟಿತ ಹೋರಾಟದ ಕಾರಣಕ್ಕೆ ಒಂದು ರಾಷ್ಟ್ರ - ಒಂದು ಚುನಾವಣೆ ವಿಚಾರದ ಚರ್ಚೆ ವಿಧಾನಸಭೆಯಲ್ಲಿ ಆಗಲಿಲ್ಲ. ಆ ಮೂಲಕ ಕಾಂಗ್ರೆಸ್ ತನ್ನ ಅಜೆಂಡಾವನ್ನು ಉಳಿಸಿಕೊಂಡು, ಬಿಜೆಪಿ ತನ್ನ ಅಜೆಂಡಾವನ್ನು ಬಿಟ್ಟು ಕೊಡಬೇಕಾಯ್ತು.

  English summary
  There was no debate on the second day of the Assembly Budget Session as the Congress members vehemently opposed to the debate on the One nation-One election. Know more.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X