ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ಬಾರಿ ಇಂದು ಮಂಡ್ಯಕ್ಕೆ ಸೋನಿಯಾ ಮೇಡಂ

By Srinath
|
Google Oneindia Kannada News

ಮಂಡ್ಯ, ಸೆ.30: ಖ್ಯಾತ ಚಿತ್ರತಾರೆ ರಮ್ಯಾ ಅವರು ಇತ್ತೀಚೆಗೆ ನಡೆದ ಇಲ್ಲಿನ ಲೋಕಸಭಾ ಉಪಚುನಾವಣೆಯನ್ನು ಭಾರಿ ಅಂತರದೊಂದಿಗೆ ಜಯ ಸಾಧಿಸಿದ್ದನ್ನೇ ನೆಪವಾಗಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಮುಂದಿನ ಮಹಾಸಮರದ ಹೋರಾಟಕ್ಕಾಗಿ ಇಂದು ರಣಕಹಳೆ ಊದಲಿದೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೋಮವಾರ ಮಂಡ್ಯಕ್ಕೆ ಆಗಮಿಸಲಿದ್ದು, ರಾಜ್ಯ ವಿಧಾನಸಭೆ ಮತ್ತು ಲೋಕಸಭೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಅರ್ಪಿಸಲಿದ್ದಾರೆ. ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

congress-president-sonia-gandhi-to-visit-mandya-lok-sabha-constituency

ಸೋನಿಯಾ ಆಗಮನದ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಸ್ವಾಗತ ಬ್ಯಾನರ್‌, ಕಟೌಟ್‌ಗಳನ್ನು ಅಳವಡಿಸಲಾಗಿದ್ದು, ಇಡೀ ಮಂಡ್ಯ ಕಾಂಗ್ರೆಸ್‌ ಮಯವಾಗಿದೆ. ನಗರದ ಸರ್‌ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೃಹತ್‌ ವೇದಿಕೆ ಸಜ್ಜುಗೊಂಡಿದೆ.

ಸೋಮವಾರ ಮಧ್ಯಾಹ್ನ 2.15ರ ವೇಳೆಗೆ ಕೇರಳದ ತಿರುವನಂತಪುರಂನಿಂದ ಮೈಸೂರಿಗೆ ಆಗಮಿಸುವ ಸೋನಿಯಾ, ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಮಂಡ್ಯಕ್ಕೆ ಆಗಮಿಸಲಿದ್ದಾರೆ. ನಂತರ 3.15ಕ್ಕೆ ಕ್ರೀಡಾಂಗಣದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ರಾಜ್ಯದ ಮತದಾರರಿಗೆ ಕೃತಜ್ಞತೆ ಅರ್ಪಿಸಲಿದ್ದಾರೆ. ನಂತರ ಬೆಂಗಳೂರಿಗೆ ತೆರಳಿ, ಅಲ್ಲಿಂದ ದೆಹಲಿಗೆ ಹಿಂತಿರುಗಲಿದ್ದಾರೆ.

ಕೇಂದ್ರ ಸಚಿವರಾದ ವೀರಪ್ಪಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಕೆಎಚ್‌ ಮುನಿಯಪ್ಪ, ಆಸ್ಕರ್‌ ಫ‌ರ್ನಾಂಡಿಸ್‌, ರೆಹಮಾನ್‌ ಖಾನ್‌, ಎಐಸಿಸಿ ರಾಜ್ಯ ಉಸ್ತುವಾರಿ ಕಾರ್ಯದರ್ಶಿ ದಿಗ್ವಿಜಯ ಸಿಂಗ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್‌, ಸಚಿವರು, ಸಂಸದರು, ಶಾಸಕರು, ಪಕ್ಷದ ಪದಾಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೋನಿಯಾ ಆಗಮನದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಹಬ್ಬದ ವಾತಾವರಣ ಮೂಡಿದ್ದು, ನಗರದ ತುಂಬೆಲ್ಲಾ ಕಾಂಗ್ರೆಸ್‌ ನಾಯಕರು ಹಾಗೂ ಸೋನಿಯಾ ಅವರಿಗೆ ಸ್ವಾಗತ ಕೋರುವ ಕಟೌಟ್‌ ಗಳು ರಾರಾಜಿಸುತ್ತಿವೆ. 200 ಪ್ಲೆಕ್ಸ್‌ಗಳನ್ನು ಹಾಕಲು ನಗರಸಭೆ ಅನುಮತಿ ನೀಡಿದ್ದರೂ, ಇಡೀ ನಗರ ಫ್ಲೆಕ್ಸ್‌ಗಳಿಂದ ತುಂಬಿಹೋಗಿದೆ. ಸಮಾವೇಶಕ್ಕೆ 2-3 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆಯಿದೆ.

ಸೋನಿಯಾ ಕಾಂಗ್ರೆಸ್‌ ಅಧ್ಯಕ್ಷೆಯಾದ ನಂತರ ಮಂಡ್ಯಕ್ಕೆ ಬರುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ 1998ರಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಅವರು, ಜನತಾ ದಳದ ಹುರಿಯಾಳು ಅಂಬರೀಶ್‌ ವಿರುದ್ಧ ಸಮರ ಸಾರಿದ್ದರು. ಆದರೆ, ಈ ಬಾರಿ ಅಂಬರೀಶ್‌ ಅವರು ಕಾಂಗ್ರೆಸ್‌ ಸರ್ಕಾರದ ಸಚಿವರಾಗಿದ್ದು, ಸಮಾವೇಶ ನಡೆಯಲಿರುವ ಮಂಡ್ಯ ಜಿಲ್ಲೆಯ ಉಸ್ತುವಾರಿ ವಹಿಸಿದ್ದಾರೆ!

ಮೈಸೂರು-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವವರಿಗೆ ವಿಶೇಷ ಸೂಚನೆ:
ಸೋನಿಯಾ ಗಾಂಧಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ಕೆಲವೆಡೆ ಸಂಚಾರ ನಿರ್ಬಂಧಿಸಲಾಗಿದೆ. ಹೀಗಾಗಿ ಬೆಂಗಳೂರಿನಿಂದ ಮೈಸೂರಿಗೆ ಹೋಗುವವರು ಮತ್ತು ಮೈಸೂರಿನಿಂದ ಬೆಂಗಳೂರಿಗೆ ಬರುವವರು ಹೆದ್ದಾರಿಯಲ್ಲಿ ಮಂಡ್ಯ ಮಾರ್ಗವಾಗಿ ಬರಲು ಆಗುವುದಿಲ್ಲ.

ಮೈಸೂರಿನಿಂದ ಬೆಂಗಳೂರಿಗೆ ಹೋಗುವವರು ಬನ್ನೂರು, ಮಳವಳ್ಳಿ, ಹಲಗೂರು, ಕನಕಪುರ ಮಾರ್ಗವಾಗಿ ಸಂಚರಿಸಬೇಕು. ಇಲ್ಲವೆ ಮೈಸೂರು, ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ, ಬೆಳ್ಳೂರು ಕ್ರಾಸ್‌ ಮಾರ್ಗವಾಗಿ ಬೆಂಗಳೂರು ತಲುಪಬೇಕು. ಬೆಂಗಳೂರಿನಿಂದ ಮೈಸೂರಿಗೆ ಹೋಗುವವರೂ ಇದೇ ಮಾರ್ಗವಾಗಿ ಸಂಚರಿಸುವಂತೆ ಮಂಡ್ಯ ಜಿಲ್ಲಾಧಿಕಾರಿ ಬಿಎನ್ ಕೃಷ್ಣಯ್ಯ ಮನವಿ ಮಾಡಿದ್ದಾರೆ.

English summary
As a sign of gratitude Congress President Sonia Gandhi will address Mandya people today Sept 30. Kannada Actress Ramya has won the Mandya Lok Sabha by polls recenltly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X