ರಾಜಕೀಯ ವಿಶೇಷ; ಕಾಂಗ್ರೆಸ್ಗೆ ವರದಾನವಾಗುತ್ತಾ ಒಗ್ಗಟ್ಟಿನ ಮಂತ್ರ!
ಬೆಂಗಳೂರು, ಜನವರಿ 16; ರಾಜ್ಯ ರಾಜಕೀಯದಲ್ಲಿ ಇನ್ಮುಂದೆ ನಡೆಯುವುದೆಲ್ಲವೂ ಹೋರಾಟವೇ. ಮಾಡುವ ಕೆಲಸಗಳೆಲ್ಲವೂ ರಾಜಕೀಯ ಪ್ರೇರಿತವೇ. ರಾಜಕಾರಣಿಗಳ ಪಾಲಿಗೆ ಒಂದು ವರ್ಷ ಎನ್ನುವುದು ಬಹು ಕಡಿಮೆ ಅವಧಿ. ಹೀಗಿರುವಾಗ ಕೊರೊನಾ ಸೇರಿದಂತೆ ಹಲವು ಪ್ರಾಕೃತಿಕ ವಿಕೋಪಗಳು ಅಡ್ಡಗಾಲಾಗಿವೆ. ಇದರ ನಡುವೆಯೇ ರಾಜಕೀಯ ನಾಯಕರು ಅಧಿಕಾರದ ಗದ್ದುಗೆಗಾಗಿ ತಂತ್ರಗಳನ್ನು ಹೆಣೆಯಲು ಆರಂಭಿಸಿದ್ದಾರೆ.
ಕರ್ನಾಟಕದ ರಾಜಕೀಯ ಪಕ್ಷಗಳು ಮತ್ತು ನಾಯಕರ ಕಣ್ಮುಂದೆ ಇರುವುದು 2023ರ ವಿಧಾನಸಭಾ ಚುನಾವಣೆ. ಆ ಚುನಾವಣೆಯಲ್ಲಿ ಮೂರು ಪಕ್ಷಗಳು ಕೂಡ ತಾವೇ ಗೆದ್ದು ಆಡಳಿತ ನಡೆಸುತ್ತೇವೆಂಬ ವಿಶ್ವಾಸವಿಟ್ಟುಕೊಂಡೇ ಮುನ್ನಡೆಯುತ್ತಿದ್ದಾರೆ.
ಮೇಕೆದಾಟು ಪಾದಯಾತ್ರೆ ಸ್ಥಗಿತಗೊಳಿಸಿದ ಕಾಂಗ್ರೆಸ್
ಸಮ್ಮಿಶ್ರ ಸರ್ಕಾರವನ್ನು ಕೆಡವಿ ಅಧಿಕಾರ ಪಡೆದ ಬಿಜೆಪಿಗೆ ಅಧಿಕಾರಕ್ಕೆ ಬಂದಲ್ಲಿಂದ ಇಲ್ಲಿವರೆಗೆ ಸಮಸ್ಯೆಗಳು ತಪ್ಪಿದಲ್ಲ. ಪ್ರವಾಹದ ಜತೆ ಜತೆಯಲ್ಲೇ ಕೊರೊನಾ ಕಾಣಿಸಿಕೊಂಡಿದ್ದರಿಂದ ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ. ಅಷ್ಟೇ ಅಲ್ಲದೆ ಅಧಿಕಾರವಧಿಯಲ್ಲಿ ಎರಡು ಸಿಎಂಗಳನ್ನು ರಾಜ್ಯ ನೋಡಿದ್ದು, ಕೊರೊನಾವನ್ನು ನಿಭಾಯಿಸಿಕೊಂಡು ಮುನ್ನಡೆಯುವುದು ಸವಾಲು ಆಗಿದೆ. ಇದರ ಜತೆಯಲ್ಲಿ ಕಾಂಗ್ರೆಸ್ ತಲೆನೋವಾಗಿ ಪರಿಣಮಿಸಿದೆ.
ಹಾಸನ; ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಕೈ ನಾಯಕರಿಗೆ ಶಾಕ್!
ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿರುವ ಕಾಂಗ್ರೆಸ್ ಪ್ರತಿ ಹೆಜ್ಜೆಗೂ ಅಡ್ಡಗಾಲಾಗಿ ಪರಿಣಮಿದೆ. ಇನ್ನೊಂದು ವರ್ಷದಲ್ಲಿ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಜನರಲ್ಲಿ ಅವಿಶ್ವಾಸ ಮೂಡಿಸಿ ಜನವಿರೋಧಿ ಧೋರಣೆ ಸೃಷ್ಟಿಸುವುದು ಕಾಂಗ್ರೆಸ್ ಉದ್ದೇಶವಾಗಿದೆ.
ಮೇಕೆದಾಟು ಯೋಜನೆ; ಸರ್ಕಾರದ ಬದ್ಧತೆ ಪ್ರಶ್ನಿಸಿದ ಸಿದ್ದರಾಮಯ್ಯ!

ತಪ್ಪು ತಿದ್ದಿಕೊಳ್ಳುವ ಪ್ರಯತ್ನದಲ್ಲಿ ಪಕ್ಷ
ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಈ ಬಾರಿ ತಿದ್ದಿಕೊಳ್ಳುವ ಪ್ರಯತ್ನದಲ್ಲಿದೆ. ಅದರ ಮೊದಲ ಯತ್ನವೇ ಮೇಕೆದಾಟು ಪಾದಯಾತ್ರೆಯಾಗಿತ್ತು. ಈ ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಟ್ಟಾಗಿ ಕಾಣಸಿಕೊಂಡರು. ಇದು ಪಕ್ಷಕ್ಕೆ ಶಕ್ತಿ ಜತೆಗೆ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿತು. ಪಾದಯಾತ್ರೆ ಕುರಿತಂತೆ ಸಾರ್ವಜನಿಕ ವಲಯದಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾದರೂ ಪಕ್ಷದ ಸಂಘಟನೆ ವಿಚಾರದಲ್ಲಿ ಇದು ಕಾರ್ಯಕರ್ತರ ಮತ್ತು ನಾಯಕರ ಸಂಗಮವಾಗಿದ್ದಂತು ಸತ್ಯ.

ಕಾಂಗ್ರೆಸ್ಗೆ ಶಕ್ತಿ ತುಂಬಿದ ಪಾದಯಾತ್ರೆ
ಇತ್ತೀಚೆಗಿನ ವರ್ಷಗಳಲ್ಲಿ ಕಾಂಗ್ರೆಸ್ ಇಂತಹದೊಂದು ಕಾರ್ಯಕ್ರಮವನ್ನು ರೂಪಿಸಿರಲಿಲ್ಲ. ಈ ಪಾದಯಾತ್ರೆ ಕುಡಿಯುವ ನೀರಿನ ಯೋಜನೆಗಾಗಿ ರೂಪಿಸಿದ ಹೋರಾಟವಾಗಿದ್ದರೂ ರಾಜಕೀಯವಾಗಿ ಕಾಂಗ್ರೆಸ್ಗೆ ಲಾಭ ಮತ್ತು ನಷ್ಟಗಳಿದ್ದರೂ ಪಾದಯಾತ್ರೆಗೆ ಸೇರಿದ ಜನಜಾತ್ರೆ ಕಾಂಗ್ರೆಸ್ಗೆ ಮುಂದಿನ ಹೋರಾಟಗಳಿಗೆ ಶಕ್ತಿ ತುಂಬಿದೆ. ಇಡೀ ಪಾದಯಾತ್ರೆಯನ್ನು ಡಿಕೆಶಿ ಬ್ರದರ್ಸ್ ಅಚ್ಚುಕಟ್ಟಾಗಿ ನಡೆಸಿದ್ದಾರೆ. ಜೊತೆಗೆ ಅವರೇ ಕೇಂದ್ರ ಬಿಂದು ಆಗಿರುವುದು ಅಷ್ಟು ದಿನದ ಪಾದಯಾತ್ರೆಯಲ್ಲಿ ಕಂಡು ಬಂದಿದೆ.

ರಾಜಕೀಯ ಹಿತಾಸಕ್ತಿ ಇಲ್ಲ ಎನ್ನಲಾಗದು
ರಾಜಕೀಯವಾಗಿ ನೋಡಿದ್ದೇ ಆದರೆ ಪಾದಯಾತ್ರೆ ಹಿಂದೆ ಕಾಂಗ್ರೆಸ್ನ ರಾಜಕೀಯ ಹಿತಾಸಕ್ತಿ ಇಲ್ಲ ಎನ್ನಲಾಗದು. ಕಾಂಗ್ರೆಸ್ಗೆ ಮುಂದಿನ ಚುನಾವಣೆಗೆ ಇದು ಹುಮ್ಮಸ್ಸು ತುಂಬಿದ್ದರೆ, ಬಿಜೆಪಿ ಮತ್ತು ಜೆಡಿಎಸ್ಗೆ ಆತಂಕ ತಂದಿದೆ. ಕಾಂಗ್ರೆಸ್ನಲ್ಲಿ ಇದುವರೆಗೆ ಚುನಾವಣೆ ಪ್ರಚಾರ ಸೇರಿದಂತೆ ಪಕ್ಷದ ಸಮಾವೇಶಗಳಲ್ಲಿ ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ಭಾಗವಹಿಸುತ್ತಿದ್ದರು. ಇದು ಸಂಘಟನೆಗೆ ಹಿನ್ನಡೆಯಾಗಿತ್ತು. ಆದರೆ ಮೇಕೆದಾಟು ಪಾದಯಾತ್ರೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಜತೆಯಾಗಿಯೇ ಕಾರ್ಯಕರ್ತರ ಮುಂದೆ ನಿಂತು ಧೈರ್ಯ ತುಂಬಿದ್ದರು. ಅದರಿಂದ ಒಂದಷ್ಟು ಪ್ರಯೋಜನವಾಯಿತು.

‘ಕೈ’ನಲ್ಲಿ ಇನ್ಮುಂದೆ ಒಗ್ಗಟ್ಟಿನ ಮಂತ್ರ ಜಪ
ಬಹುಶಃ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಒಟ್ಟಾಗಿಯೇ ಹೋಗುವ ಪ್ರಯತ್ನ ಮಾಡಲಿದೆ. ಆದರೆ ಮುಂದಿನ ಮುಖ್ಯಮಂತ್ರಿ ಯಾರು ಎಂದು ಕಾಂಗ್ರೆಸ್ ಘೋಷಿಸುತ್ತಾ?. ಈಗಾಗಲೇ ಕಾಂಗ್ರೆಸ್ನಲ್ಲಿ ಬಹಳಷ್ಟು ನಾಯಕರು ರೇಸ್ ನಲ್ಲಿದ್ದಾರೆ. ಪಾದಯಾತ್ರೆಗೂ ಮುನ್ನ ಹಳೇ ಮೈಸೂರು ಭಾಗದ ಚಾಮರಾಜನಗರಕ್ಕೆ ತೆರಳಿದ ವೇಳೆ ಚಾಮರಾಜನಗರದಲ್ಲಿ ಡಿ. ಕೆ. ಶಿವಕುಮಾರ್ ಎದುರಲ್ಲೇ ಸಿದ್ದರಾಮಯ್ಯ ಅವರ ಬೆಂಬಲಿಗರು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ್ದರು.
ರಾಮನಗರ ವ್ಯಾಪ್ತಿಯ ಕಾರ್ಯಕರ್ತರು ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದು ಆಶಯ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ನಡುವೆ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಅನ್ನು ಆಡಳಿತಕ್ಕೆ ತರಬೇಕೆಂದು ಹಠ ತೊಟ್ಟಿರುವ ಡಿಕೆಶಿ ಅದಕ್ಕಾಗಿ ಎಲ್ಲಿಲ್ಲದ ಶತ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಜೆಡಿಎಸ್ ಅಧಿಕಾರದ ಕನಸು ಕಾಣುತ್ತಿದೆ
ಕಾಂಗ್ರೆಸ್ ಆಡಳಿತಕ್ಕೆ ಬರಲು ಹೋರಾಡುತ್ತಿದ್ದರೆ, ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ಒದ್ದಾಡುತ್ತಿದೆ. ಇದೆಲ್ಲದರ ನಡುವೆ ಜೆಡಿಎಸ್ ಮಾತ್ರ ಮುಂದಿನ 2023ರಲ್ಲಿ ನಾವೇ ಅಧಿಕಾರಕ್ಕೆ ಬರುವುದಾಗಿ ಘೋಷಣೆ ಮಾಡಿಕೊಂಡೇ ಬರುತ್ತಿದ್ದಾರೆ. ಇದೊಂದು ರೀತಿಯ ಅಚ್ಚರಿಯೂ ಹೌದು. ಈಗಾಗಲೇ ನಾಯಕರ ಕೊರತೆಯಿಂದ ಬಳಲುತ್ತಿರುವ ಪಕ್ಷವಾಗಿರುವ ಜೆಡಿಎಸ್ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಮಾಡಿ ಗೆಲುವಿನ ಪತಾಕೆ ಹಾರಿಸುವ ತಯಾರಿಯಲ್ಲಿದೆ.
ಆದರೆ ರಾಜಕೀಯ ವಿಶ್ಲೇಷಕರ ಅಭಿಪ್ರಾಯಗಳೇ ಬೇರೆಯಾಗಿದ್ದು, ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ಎಷ್ಟು ಹೆಚ್ಚು ಸ್ಥಾನ ಗೆಲ್ಲುತ್ತದೆಯೋ ಅಷ್ಟೇ ನಷ್ಟ ಕಾಂಗ್ರೆಸ್ ಮತ್ತು ಬಿಜೆಪಿಗೆ ಆಗಲಿದೆ. ಜೆಡಿಎಸ್ ಈ ಬಾರಿ ಕಾಂಗ್ರೆಸ್ ವಿರುದ್ಧವೇ ಗೆಲುವಿನ ಅಸ್ತ್ರವನ್ನು ಪ್ರಯೋಗಿಸುವ ಸಾಧ್ಯತೆಯಿದ್ದು, ಮುಂದಿನ ಚುನಾವಣೆಯಲ್ಲಿ ಕಿಂಗ್ ಮೇಕರ್ ಆದರೆ ಅದರಲ್ಲಿ ಅಚ್ಚರಿಪಡುವಂತಹದ್ದೇನಿಲ್ಲ.