ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಪಕ್ಷ ಬಿಡಲು ಸಿದ್ಧವಾದ ಮುನಿಯಪ್ಪರ ಕೈಕಟ್ಟುವ ಪ್ರಯತ್ನ?

|
Google Oneindia Kannada News

ಬೆಂಗಳೂರು, ಸೆ. 29: ರಾಹುಲ್ ಗಾಂಧಿ ನೇತೃತ್ವದಲ್ಲಿ ಸಾಗಿಬರುತ್ತಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಕಾಲಿಡುತ್ತಿದೆ. ಯಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಆಗಿದೆ. ಅನೇಕ ಸಂಘಟನೆಗಳು ಈ ಯಾತ್ರೆಯ ಯಶಸ್ವಿಗೆ ಕೈಜೋಡಿಸಿವೆ. ಇದೇ ವೇಳೆ, ಭಾರತ್ ಜೋಡೋ ಯಾತ್ರೆಯನ್ನು ಇಟ್ಟುಕೊಂಡು ಕಾಂಗ್ರೆಸ್‌ನಲ್ಲಿರುವ ಕೆಲ ಒಡಕುಗಳನ್ನು ಮುಚ್ಚುವ ಪ್ರಯತ್ನವೂ ನಡೆದಿದೆ.

ಕಾಂಗ್ರೆಸ್ ತೊರೆಯಲು ಸಿದ್ಧವಾಗಿರುವ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಮುಖಂಡ ಕೆಎಚ್ ಮುನಿಯಪ್ಪ ಅವರನ್ನು ಭಾರತ್ ಜೋಡೋ ಯಾತ್ರೆಗೆ ಜೋಡಿಕೊಳ್ಳುವ ಮೂಲಕ ಅವರನ್ನು ಹಿಡಿದಿಡುವ ಪ್ರಯತ್ನ ಪಕ್ಷದಲ್ಲಿ ನಡೆಯುತ್ತಿರುವುದು ತಿಳಿದುಬಂದಿದೆ. ಡಾ. ಜಿ ಪರಮೇಶ್ವರ ಮತ್ತು ಬಿ.ಕೆ. ಹರಿಪ್ರಸಾದ್ ನೇತೃತ್ವದ ತಂಡವೊಂದು ಕೆಎಚ್ ಮುನಿಯಪ್ಪ ಜೊತೆ ಮಾತನಾಡಿರುವುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ದಿಗ್ವಿಜಯ್ ಸಿಂಗ್ ಸ್ಪರ್ಧೆ, ಹಿಂದೆ ಸರಿದ ಕಮಲ್ ನಾಥ್?ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ದಿಗ್ವಿಜಯ್ ಸಿಂಗ್ ಸ್ಪರ್ಧೆ, ಹಿಂದೆ ಸರಿದ ಕಮಲ್ ನಾಥ್?

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ಮುನಿಯಪ್ಪರನ್ನು ಕೇಳಿಕೊಳ್ಳಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಕಾಂಗ್ರೆಸ್‌ನ ಹಿರಿಯ ನಾಯಕರಾಗಲೀ, ಮುನಿಯಪ್ಪ ಆಗಲೀ ಈ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಮುನಿಯಪ್ಪ ಪಕ್ಷ ತೊರೆಯುವ ವಿಚಾರವನ್ನೂ ಪರಮೇಶ್ವರ್ ತಳ್ಳಿಹಾಕಿದ್ದಾರೆ.

Congress Leaders Trying To Bind KH Muniyappa Through Bharat Jodo Yatra

"ಮುನಿಯಪ್ಪ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು. ಅವರು ಕಾಂಗ್ರೆಸ್ ತೊರೆಯುತ್ತಾರೆ ಎಂದು ಹೇಳುವುದೆಲ್ಲಾ ಬರೀ ವದಂತಿ ಅಷ್ಟೇ. ಮುಖ್ಯ ರಾಜಕಾರಣದಲ್ಲಿ ಸ್ವಲ್ಪ ದಿನಗಳಿಂದ ಅವರು ಸಕ್ರಿಯರಾಗಿರಲಿಲ್ಲ ಅಷ್ಟೇ. ಆದರೆ, ಈಗ ಮತ್ತೆ ಆ್ಯಕ್ಟಿವ್ ಆಗುತ್ತಿದ್ದಾರೆ," ಎಂದು ಮಾಜಿ ಉಪಮುಖ್ಯಮಂತ್ರಿಗಳೂ ಆದ ಡಾ. ಜಿ ಪರಮೇಶ್ವರ ಹೇಳಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ 100 ಕ್ಷೇತ್ರಗಳಲ್ಲಿ ಸ್ಪರ್ಧೆ2023ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ 100 ಕ್ಷೇತ್ರಗಳಲ್ಲಿ ಸ್ಪರ್ಧೆ

ಇನ್ನು, ಬಿಕೆ ಹರಿಪ್ರಸಾದ್ ಮತ್ತು ಡಾ. ಪರಮೇಶ್ವರ್ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಮಾತನಾಡಲು ಭೇಟಿ ಮಾಡಿದ್ದರು ಎಂಬುದನ್ನು ಮುನಿಯಪ್ಪ ತಳ್ಳಿಹಾಕಿದ್ದಾರೆ. ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ನಾಮಪತ್ರ ಸಲ್ಲಿಸುವ ವಿಚಾರದಲ್ಲಿ ಎದ್ದಿರುವ ಗೊಂದಲ ಪರಿಸ್ಥಿತಿ ಬಗ್ಗೆ ಚರ್ಚಿಸಲು ಕಾಂಗ್ರೆಸ್ ನಾಯಕರು ತಮ್ಮನ್ನು ಭೇಟಿಯಾಗಿದ್ದರು ಎಂದು ಹೇಳಿರುವ ಮುನಿಯಪ್ಪ, "ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ಸೋನಿಯಾ ಗಾಂಧಿ ಮತ್ತು ಹೈಕಮಾಂಡ್ ಹೇಳುವ ಸೂಚನೆಗಳನ್ನು ಶಿರಸಾವಹಿಸಿ ಪಾಲಿಸುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ.

ಮುನಿಯಪ್ಪ ಅಸಮಾಧಾನ ನಿಜವಾ?

ಕೋಲಾರ ಕ್ಷೇತ್ರದಿಂದ ಸತತ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಕೆಎಚ್ ಮುನಿಯಪ್ಪ 2019ರ ಚುನಾವಣೆಯಲ್ಲಿ ಬಿಜೆಪಿಯ ಎಸ್ ಮುನಿಸ್ವಾಮಿ ಎದುರು ಸೋತಿದ್ದರು. ಅದಾದ ಬಳಿಕ ಅವರು ಕಾಂಗ್ರೆಸ್ ಪಕ್ಷದೊಳಗೆ ಕಡೆಗಣಿತವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಮತ್ತು ಮುನಿಯಪ್ಪ ಮಧ್ಯೆ ಬಹಳಷ್ಟು ಭಿನ್ನಾಭಿಪ್ರಾಯಗಳಿರುವ ಬಗ್ಗೆಯೂ ವದಂತಿಗಳಿವೆ.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಕೆಎಚ್ ಮುನಿಯಪ್ಪರನ್ನು ಭೇಟಿ ಮಾಡಿದ್ದರು. ಸಿಎಂ ಬೊಮ್ಮಾಯಿ ಸೂಚನೆ ಮೇರೆಗೆ ಈ ಭೇಟಿ ನಡೆದಿದೆ ಎನ್ನಲಾಗುತ್ತಿದೆ. ಈ ಬೆಳವಣಿಗೆ ಬಳಿಕ ಕೆಎಚ್ ಮುನಿಯಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಬಗ್ಗೆ ಸುದ್ದಿ ದಟ್ಟವಾಗಿ ಕೇಳಿಬರುತ್ತಿದೆ.

Congress Leaders Trying To Bind KH Muniyappa Through Bharat Jodo Yatra

ಇದಕ್ಕೆ ಇಂಬುಕೊಡುವಂತೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಮುನಿಯಪ್ಪ ವಿಚಾರವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಮಾತನಾಡಿರುವುದು ತಿಳಿದುಬಂದಿದೆ.

ಮುನಿಯಪ್ಪಗೆ ಬೇಡಿಕೆ

ಕಾಂಗ್ರೆಸ್‌ನೊಳಗೆ ಅಸಮಾಧಾನಗೊಂಡಿರುವ ಕೆಎಚ್ ಮುನಿಯಪ್ಪ ಅವರನ್ನು ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿ ಮಾತ್ರವಲ್ಲ ಜೆಡಿಎಸ್ ಕೂಡ ಪ್ರಯತ್ನಿಸುತ್ತಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೀಮೆಯಲ್ಲಿರುವ ಮುಸ್ಲಿಂ ಸಮುದಾಯಗಳ ಬೆಂಬಲ ಕಾಂಗ್ರೆಸ್ ಜೊತೆಗೆ ಜೆಡಿಎಸ್‌ಗೂ ಹಂಚಿಹೋಗಿದೆ. ಈಗ ಮುನಿಯಪ್ಪ ಸೇರಿಕೊಂಡರೆ ಪಕ್ಷದ ಬಲ ಇನ್ನಷ್ಟು ಹೆಚ್ಚುತ್ತದೆ ಎಂಬುದು ಜೆಡಿಎಸ್ ಎಣಿಕೆ.

74 ವರ್ಷದ ಕೆಎಚ್ ಮುನಿಯಪ್ಪ ಮಾದಿಗ ಸಮುದಾಯದವರು. ಎಡಗೈ ದಲಿತ ವರ್ಗದ ಇವರಿಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಬಹಳ ಬೆಂಬಲ ಇದೆ. 1991ರಿಂದ 2014ರವರೆಗೆ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಇವರನ್ನು ಸೋಲಿಸುವವರೇ ಇಲ್ಲದಂತಿದ್ದರು. ಮಾಜಿ ಕೇಂದ್ರ ಸಚಿವರಾದ ಮುನಿಯಪ್ಪ ಅವರಿಗೆ ಒಬ್ಬ ಮಗ ಮತ್ತು ಮೂವರು ಹೆಣ್ಮಕ್ಕಳಿದ್ದಾರೆ. ಮಗಳು ರೂಪಾ ಶಶಿಧರ್ ಕೂಡ ರಾಜಕೀಯದಲ್ಲಿದ್ದು ಕೆಜಿಎಫ್ ಶಾಸಕಿಯಾಗಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Congress delegation led by Dr. Parameshwara and BK Hariprasad is said to have met KH Muniyappa to convince him to take active part in Bharat Jodo Yatra. There is a rumour that The 7 time MP from Kolar KH Muniyappa is thinking of leaving the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X