ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎತ್ತಿನ ಬಂಡಿ ಏರಿದ ಕಾಂಗ್ರೆಸ್ ನಾಯಕರು: ಹಕ್ಕುಚ್ಯುತಿ ಎಚ್ಚರಿಕೆ ಕೊಟ್ಟ ಸಿದ್ದರಾಮಯ್ಯ!

|
Google Oneindia Kannada News

ಬೆಂಗಳೂರು, ಸೆ. 13: ಎತ್ತಿನ ಬಂಡಿ ಏರಿ ವಿಧಾನಸೌಧಕ್ಕೆ ತೆರಳುವ ಮೂಲಕ ಕಾಂಗ್ರೆಸ್ ನಾಯಕರು ಬೆಲೆ ಏರಿಕೆ ಕುರಿತು ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಹತ್ತು ದಿನಗಳ ಕಾಲ ನಡೆಯಲಿರುವ ವಿಧಾನ ಮಂಡಲ ಮಳೆಗಾಲದ ಆಧಿವೇಶನ ಇಂದು (ಸೋಮವಾರ) ಆರಂಭವಾಗಿದೆ. ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ತೆರಳುವ ಮೂಲಕ ಕಾಂಗ್ರೆಸ್ ನಾಯಕರು ಗಮನ ಸೆಳೆದಿದ್ದಾರೆ.

Recommended Video

ಅಧಿವೇಶನಕ್ಕೆ ಚಕ್ಕಡಿ ಗಾಡಿಯಲ್ಲಿ ಬಂದ ಕಾಂಗ್ರೆಸ್‌ ನಾಯಕರು.. | Oneindia Kannada

ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿರುವ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು 'ಎತ್ತಿನ ಗಾಡಿ ಚಲೋ' ಪ್ರತಿಭಟನೆ ಮಾಡಿದರು.

ವಿಧಾನಮಂಡಲ ಕಲಾಪ ಆರಂಭದ ಮೊದಲ ದಿನ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ನಿವಾಸದಿಂದಲೇ ಎತ್ತಿನ ಗಾಡಿ ಮೂಲಕ ವಿಧಾನಸೌಧಕ್ಕೆ ತೆರಳಿದರು. ಇವರಿಗೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಶಾಸಕರು ಜೊತೆಗಿದ್ದರು. ಇದೇ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುವ ಎಚ್ಚರಿಕೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಟ್ಟಿದ್ದಾರೆ.

ತಾವೇ ಎತ್ತಿನ ಗಾಡಿ ನಡೆಸಿದ ಡಿಕೆಶಿ!

ತಾವೇ ಎತ್ತಿನ ಗಾಡಿ ನಡೆಸಿದ ಡಿಕೆಶಿ!

"ಕೋವಿಡ್ ಪರಿಸ್ಥಿತಿಯಲ್ಲಿ ಬಿಜೆಪಿಯ ದುರಾಡಳಿತದಿಂದ ದೇಶದ ಜನ ಉದ್ಯೋಗ, ಆದಾಯ, ಜೀವ ಹಾಗೂ ಜೀವನ ಕಳೆದುಕೊಂಡಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ದುಬಾರಿ ತೆರಿಗೆ ಮೂಲಕ ಇಂಧನ ಬೆಲೆ ಏರಿಕೆ ಮಾಡಿರುವ ಹೃದಯಹೀನ ಬಿಜೆಪಿ ಸರ್ಕಾರ ಜನರ ಬದುಕನ್ನು ದುಃಸ್ಥಿತಿಗೆ ದೂಡಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎತ್ತಿನ ಗಾಡಿ ಪ್ರತಿಭಟನೆ ಆರಂಭಿಸುವುದಕ್ಕು ಮೊದಲು ಹೇಳಿದರು.

ಜನರ ಈ ಕಷ್ಟಕ್ಕೆ ಪ್ರತಿಧ್ವನಿಯಾಗಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬೆಲೆ ಏರಿಕೆ ಮೂಲಕ ಜನರನ್ನು ಹಗಲು ದರೋಡೆ ಮಾಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದೇವೆ ಎಂದು ಹೇಳಿದ ಡಿಕೆ ಶಿವಕುಮಾರ್ ಅವರು, ತಾವೇ ಎತ್ತಿನ ಗಾಡಿ ಹೊಡೆದುಕೊಂಡು ವಿಧಾನಸೌಧಕ್ಕೆ ತೆರಳಿದರು.

ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ!

ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ!

'ಬಿಜೆಪಿ ಸರ್ಕಾರ ಜನರ ಜೇಬಿಗೆ ಕೈಹಾಕಿ ದೋಚುತ್ತಿದೆ. ಕೊರೊನಾ ಸಂಕಷ್ಟ ಹಾಗೂ ಉದ್ಯೋಗ ಕಳೆದುಕೊಂಡು ಕಷ್ಟಪಡುತ್ತಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಪೆಟ್ರೋಲ್, ಡೀಸೆಲ್ ದರವನ್ನು ಪ್ರತಿ ಲೀಟರ್ ಗೆ ಕನಿಷ್ಟ 25 ರೂ. ತಗ್ಗಿಸಬೇಕು. ಅಡುಗೆ ಅನಿಲ ದರ ಇಳಿಕೆ ಮಾಡಬೇಕು. ಸಾಮಾನ್ಯ ಜನರ ಸಂಕಷ್ಟ ಅರಿತು ಕೆಲಸ ಮಾಡುವ ಸೂಕ್ಷ್ಮ ಪ್ರಜ್ಞೆಯಿಂದ ಸರ್ಕಾರ ನಡೆದುಕೊಳ್ಳಬೇಕು. ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ. ಬೆಲೆ ಏರಿಕೆ ಮತ್ತು ಬಿಜೆಪಿ ಸರ್ಕಾರದ ವೈಫಲ್ಯ, ಭ್ರಷ್ಟಾಚಾರದ ವಿರುದ್ದ ವಿಧಾನಮಂಡಲ ಉಭಯ ಸದನಗಳಲ್ಲಿ ಕಾಂಗ್ರೆಸ್ ತೀವ್ರ ಹೋರಾಟ ನಡೆಸಲಿದೆ' ಎಂದು ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ಬಂದ ಸಿದ್ದರಾಮಯ್ಯ!

ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ಬಂದ ಸಿದ್ದರಾಮಯ್ಯ!

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕುಮಾರಕೃಪಾ ರಸ್ತೆಯ ತಮ್ಮ ನಿವಾಸದಿಂದ ವಿಧಾನಸೌಧಕ್ಕೆ ಎತ್ತಿನ ಗಾಡಿಯಲ್ಲಿ ತೆರಳುವ ಮೂಲಕ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದರು. ಆದರೆ ಕಾಂಗ್ರೆಸ್ ನಾಯಕರು ಎತ್ತಿನ ಗಾಡಿಯಲ್ಲಿ ಪ್ರಯಾಣಿಸಿ ವಿಧಾನಸೌಧಕ್ಕೆ ಬಂದಿದ್ದನ್ನು ಲೇವಡಿ ಮಾಡಿದ್ದರು. ಅದಕ್ಕೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ, "ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರು 1973ರಲ್ಲಿ ಬೆಲೆ ಏರಿಕೆ ವಿರೋಧಿಸಿ ಎತ್ತಿನ ಗಾಡಿಯಲ್ಲಿ ಸಂಸತ್ತಿಗೆ ಬಂದಿರಲಿಲ್ಲವೇ? ಆಗ ಪ್ರತಿಭಟನೆ ಮಾಡಿದವರು ಬಿಜೆಪಿಯವರಲ್ಲವೇ ? ಕಾಂಗ್ರೆಸ್ ಪ್ರತಿಭಟನೆ ವಿರೋಧಿಸಿರುವ ಮುಖ್ಯಮಂತ್ರಿ ಹಾಗೂ ಬಿಜೆಪಿಯವರು ಇತಿಹಾಸ ಓದಿಕೊಳ್ಳಬೇಕು" ಎಂದರು.

ಪೊಲೀಸರ ವಿರುದ್ಧ ಹಕ್ಕುಚ್ಯುತಿ ಮಂಡನೆ ಎಚ್ಚರಿಕೆ!

ಪೊಲೀಸರ ವಿರುದ್ಧ ಹಕ್ಕುಚ್ಯುತಿ ಮಂಡನೆ ಎಚ್ಚರಿಕೆ!

ತಮ್ಮ ತಮ್ಮ ನಿವಾಸಗಳಿಂದ ತೆರಳಿದ್ದ ಕಾಂಗ್ರೆಸ್ ನಾಯಕರಿಗೆ ಎತ್ತಿನ ಬಂಡಿಯಲ್ಲಿ ವಿಧಾನಸೌಧ ಪ್ರವೇಶಿಸಲು ಪೊಲೀಸರು ಅನುಮತಿ ಕೊಡಲಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರಾದ ಈಶ್ವರ್ ಖಂಡ್ರೆ, ಎಚ್.ಕೆ. ಪಾಟೀಲ್ ಮತ್ತಿತರ ಹಿರಿಯ ನಾಯಕರು ವಿಧಾನಸೌಧ ಗೇಟಿನ ಮುಂದೆ ಧರಣಿ ನಡೆಸಿದರು.

ತಮ್ಮನ್ನು ತಡೆದ ಪೊಲೀಸರ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಟ್ಟಾದರು. ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ಬರಬಾರದು ಎಂದು ಯಾವ ಕಾನೂನೂ ಇಲ್ಲ. ತಾವು ಬಂಡಿಯಲ್ಲಿ ಒಳಗೆ ಹೋಗಲು ಅವಕಾಶ ಕೊಡದಿದ್ದರೆ ಪೊಲೀಸರ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡನೆ ಮಾಡುವುದಾಗಿ ಎಚ್ಚರಿಸಿದರು. ಬಳಿಕ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಎತ್ತಿನ ಗಾಡಿಯಲ್ಲಿ ವಿಧಾನಸೌಧ ಆವರಣ ಪ್ರವೇಶಿಸಲು ಅವಕಾಶ ಮಾಡಿಕೊಡಲಾಯಿತು.

English summary
Congress leaders protest against bjp govt on price hike by ride in bullock cart. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X