ಬಿಕ್ಕಟ್ಟಿನ ವೇಳೆ ಪ್ರವಾಸ ಬೇಕೆ: ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್ ಅಸಮಾಧಾನ?

ಬೆಂಗಳೂರು, ಜೂನ್ 9: ಸಚಿವ ಸ್ಥಾನ ಕೈತಪ್ಪಿದವರು, ಸ್ಥಾನ ಸಿಕ್ಕರೂ ತಾವು ಬಯಸಿದ ಖಾತೆ ಸಿಗದವರು ವರಿಷ್ಠರ ವಿರುದ್ಧ ಅಸಮಾಧಾನಗೊಂಡು ಗೊಂದಲ ಸೃಷ್ಟಿಸುತ್ತಿದ್ದರೆ, ಅತ್ತ ಬಾದಾಮಿಯಲ್ಲಿ ಪ್ರವಾಸ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಕೆ. ಸುಧಾಕರ್, ಬಿ.ಸಿ. ಪಾಟೀಲ್, ಎಚ್.ಕೆ. ಪಾಟೀಲ್, ರೋಷನ್ ಬೇಗ್ ಸೇರಿದಂತೆ ಅನೇಕರು ಅಸಮಾಧಾನಗೊಂಡಿದ್ದಾರೆ.
ಚಾಮುಂಡೇಶ್ವರಿಯಲ್ಲಿ ವಿರೋಧ ಪಕ್ಷಗಳ ಷಡ್ಯಂತ್ರಕ್ಕೆ ಬಲಿ: ಸಿದ್ದರಾಮಯ್ಯ
ಅದರಲ್ಲಿಯೂ ಎಂ.ಬಿ. ಪಾಟೀಲ್ ಅವರು ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ಹೈಕಮಾಂಡ್ ಸೂಚನೆಗಳಿಗೂ ಬಗ್ಗುತ್ತಿಲ್ಲ. ಇದರಿಂದ ಸಮ್ಮಿಶ್ರ ಸರ್ಕಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ದಿನೇ ದಿನೇ ಅತೃಪ್ತರ ಚಟುವಟಿಕೆ ಹೆಚ್ಚುತ್ತಿದೆ. ಇಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಅತೃಪ್ತರ ಜತೆ ಮಾತುಕತೆ ನಡೆಸಿ ಸಮಾಧಾನಗೊಳಿಸಲು ಮುಂಚೂಣಿಯಲ್ಲಿ ಸಿದ್ದರಾಮಯ್ಯ ಇರಬೇಕಿತ್ತು.
ಆದರೆ, ಬಾದಾಮಿಯಲ್ಲಿ ಪ್ರವಾಸ ಮಾಡುತ್ತಿರುವುದು ಸರಿಯಲ್ಲ ಎಂದು ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಹೇಳಿದೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು, ಪಕ್ಷದಲ್ಲಿನ ಗೊಂದಲಗಳನ್ನು ಸರಿಪಡಿಸಲು ಮುಂದಾಗುವಂತೆ ಸೂಚಿಸಿದ್ದಾರೆ.
ಆದರೆ, ಬಾದಾಮಿಯಲ್ಲಿನ ಕಾರ್ಯಕ್ರಮ ಪೂರ್ವನಿಯೋಜಿತವಾಗಿತ್ತು. ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಇಂತಹ ಅಸಮಾಧಾನ ಸಹಜ. 122 ಶಾಸಕರ ಬೆಂಬಲ ಪಡೆದು ಕಾಂಗ್ರೆಸ್ ಸರ್ಕಾರ ರಚಿಸಿದ್ದಾಗಲೂ ಇದೇ ರೀತಿ ಅಸಮಾಧಾನಗಳು ಎದುರಾಗಿದ್ದವು ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.
ಬಾದಾಮಿ ಕ್ಷೇತ್ರದಲ್ಲಿ ತಮ್ಮನ್ನು ಗೆಲ್ಲಿಸಿದ ಜನರಿಗೆ ಕೃತಜ್ಞತೆ ಹೇಳಲು ಮತ್ತು ಅಲ್ಲಿನ ಪರಿಸ್ಥಿತಿಗಳನ್ನು ತಿಳಿದುಕೊಳ್ಳಲು ಸಿದ್ದರಾಮಯ್ಯ ಅವರು ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ.