ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತುಷ್ಟ ಜನರಿರುವ ಭೂತಾನ್ ಪ್ರವಾಸಕ್ಕೆ ಹೋಗೋಣ ಬನ್ನಿ...

ಭೂತಾನ್ ದೇಶಕ್ಕೆ ಪ್ಯಾಕೇಜ್ ಪ್ರವಾಸವೊಂದು ಇಲ್ಲಿದೆ. ಏಳು ದಿನಗಳ ಕಾಲ ಭೂತಾನ್ ನ ಸುಂದರ ಸ್ಥಳಗಳನ್ನು ಕಣ್ತುಂಬಿಕೊಳ್ಳಬಹುದು. ಪ್ರವಾಸಕ್ಕೆ ಎಷ್ಟು ಹಣ, ಯಾವ್ಯಾವ ಸ್ಥಳಕ್ಕೆ ಭೇಟಿ...ಮತ್ತಷ್ಟು ವಿವರಗಳು ಇಲ್ಲಿವೆ ಓದಿ.

By ಡಿ.ಜಿ.ಮಲ್ಲಿಕಾರ್ಜುನ
|
Google Oneindia Kannada News

ಶಿಡ್ಲಘಟ್ಟ, ಜನವರಿ 9: ವಿದೇಶ ಪ್ರವಾಸದ ಯೋಜನೆ ಹಾಕ್ತಿದೀರಾ? ಅದೇ ಕಟ್ಟಡ, ಕೃತಕ ಎನಿಸುವ ಪರಿಸರ ಇರುವ ದೇಶಕ್ಕೆ ಹೋಗೋದು ಬೇಡ ಅನಿಸಿದೆಯಾ? ಜಗತ್ತಿನ ಅತ್ಯಂತ ಸುಂದರ, ಸಹಜ ಜಾಗಕ್ಕೆ ಹೋಗೋದಿಕ್ಕೆ ಬಯಸ್ತಿದೀರಾ. ಹಾಗಿದ್ದರೆ ಈ ಪ್ರವಾಸ ನಿಮಗೆ ಸೂಕ್ತವಾಗುತ್ತದೆ. ಅದು ಯಾವುದು ಅಂತೀರಾ

ಪ್ರಪಂಚದಲ್ಲೇ ಅತ್ಯಂತ ಸಂತುಷ್ಟ ಜನರಿರುವ ದೇಶ ಎನ್ನುವ ಅಗ್ಗಳಿಕೆಗೆ ಪಾತ್ರವಾದ ಭೂತಾನ್ ಗೆ ಪ್ರವಾಸ ಕೈಗೊಳ್ಳೋಣ ಬನ್ನಿ. ಪ್ರವಾಸದ ಪ್ರಮುಖ ಲಾಭವೆಂದರೆ, ಕಾರ್ಬನ್ ನೆಗೆಟಿವ್ ದೇಶಕ್ಕೆ ಹೋಗುವ ಮೂಲಕ ನಮ್ಮ ಶ್ವಾಸಕೋಶವನ್ನು ಶುದ್ಧಗೊಳಿಸಿಕೊಳ್ಳಬಹುದು.[ಭೂತಾನ್ ಮಕ್ಕಳ ಮುಗ್ಧತೆ, ಪ್ರೀತಿ ಮತ್ತು ಬಿಡಿ ಚಿತ್ರಗಳು]

ಜುಲೈ ತಿಂಗಳ ಮೊದಲ ವಾರದಲ್ಲಿ ಹೊರಡುತ್ತೇವೆ. 6 ರಾತ್ರಿ, 7 ಹಗಲಿನ ಭೂತಾನ್ ಪ್ರವಾಸಕ್ಕೆ ತಗುಲುವ ಖರ್ಚು 40 ಸಾವಿರ ರುಪಾಯಿ ಮಾತ್ರ. ಇದರಲ್ಲಿ ಪ್ರಯಾಣದ ವೆಚ್ಚ, ತಿಂಡಿ ಮತ್ತು ಎರಡು ಹೊತ್ತಿನ ಊಟ ಸೇರಿರುತ್ತದೆ. ಪಾಸ್ ಪೋರ್ಟ್ ಅಗತ್ಯವಿಲ್ಲ, ಮತದಾರರ ಗುರುತಿನ ಚೀಟಿ ಇದ್ದರೆ ಸಾಕು. ಇನ್ನೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9901638655/9980217997 ಸಂಪರ್ಕಿಸಿ.

ಪ್ರವಾಸದ ವಿವರ

ಪ್ರವಾಸದ ವಿವರ

ದಿನ 1 : ಬೆಂಗಳೂರು - ಬಾಗ್ದೋಗ್ರ - ಪುನ್ಶೋಲಿಂಗ್
ಬೆಂಗಳೂರಿನಿಂದ ವಿಮಾನದಲ್ಲಿ ಹೊರಟು ಪಶ್ಚಿಮ ಬಂಗಾಳದ ಬಾಗ್ದೋಗ್ರ ವಿಮಾನ ನಿಲ್ದಾಣದಲ್ಲಿ ಇಳಿಯುತ್ತೇವೆ. ಅಲ್ಲಿಂದ ಜಲ್ದಾಜಾಲ್ದಾಪಾರ' ಎಂಬ ಅಭಯಾರಣ್ಯ ದಾಟುತ್ತಾ ರಸ್ತೆ ಅಕ್ಕಪಕ್ಕ ಅಡಿಕೆ ತೋಟಗಳು, ಬಾಳೆ ಗಿಡಗಳು, ಟೀ ಎಸ್ಟೇಟ್ ಗಳನ್ನು ನೋಡುತ್ತಾ ನಾಲ್ಕು ಗಂಟೆ ಪ್ರಯಾಣ ಮುಗಿಸಿ ಭೂತಾನ್ ಪ್ರವೇಶಿಸುತ್ತೇವೆ. ಪುನ್ಶೋಲಿಂಗ್ ಎಂಬ ಈ ಊರು ಭೂತಾನ್ ದೇಶದ ಪ್ರಮುಖ ವಾಣಿಜ್ಯ ಕೇಂದ್ರ. ಭೂತಾನ್ ದೇಶದ ಸಂಸ್ಕೃತಿ, ಆಚಾರ, ವಿಚಾರ, ವಿಶೇಷಗಳ ಬಗ್ಗೆ ಹೋಟೆಲಿನಲ್ಲಿ ಗೈಡ್ ಮಾಹಿತಿ ಒದಗಿಸುವರು.

ದಿನ 2 : ಪುನ್ಶೋಲಿಂಗ್ - ಥಿಂಪು

ದಿನ 2 : ಪುನ್ಶೋಲಿಂಗ್ - ಥಿಂಪು

ಬೆಳಗ್ಗೆ ತಿಂಡಿ ನಂತರ ಥಿಂಪುವಿನೆಡೆಗೆ ಪಯಣ. ದಾರಿಯಲ್ಲಿ ಕರ್‍ಬಂಡಿ ಗೋಂಪ ಎಂಬ ಸುಂದರವಾದ ಮೊನಾಸ್ಟ್ರಿಗೆ ಭೇಟಿ. ರಾಜಮಾತೆಯಿಂದ 1967ರಲ್ಲಿ ನಿರ್ಮಾಣವಾದ ಈ ಮೊನಾಸ್ಟ್ರಿ ಎತ್ತರವಾದ ಪ್ರದೇಶದಲ್ಲಿರುವುದರಿಂದ ಸುಂದರ ಭೂ ದೃಶ್ಯಗಳು ಕಾಣಿಸುತ್ತವೆ. ಊಟದ ನಂತರ ದಾರಿಯಲ್ಲಿ ಕಂಡು ಬರುವ ವಾಂಗ್ ಚೂ ನದಿಯು ಪಾರೋ ಚೂ ನದಿಯನ್ನು ಸೇರುವ ಸ್ಥಳಗಳನ್ನು ನೋಡುತ್ತಾ ಸೆಮ್ಟೋಕಾ ಝೋಂಗ್ ಎಂಬ ಹಳೆ ಕೋಟೆಯನ್ನು ದರ್ಶಿಸುತ್ತೇವೆ. ಭೂತಾನ್ ನಾಯಕ ಶಬ್‍ದ್ರುಂಗ್ ನಗವಾಂಗ್ ನಾಮ್ಗೈಲ್ ಸಣ್ಣಪುಟ್ಟ ರಾಜ್ಯಗಳನ್ನು ಒಗ್ಗೂಡಿಸಿ, ದೇಶವನ್ನು ಕಟ್ಟುವಾಗ ಅಂದರೆ 1627ರಲ್ಲಿ ಕಟ್ಟಿದ ಝೋಂಗ್ ಇದು. ಥಿಂಪು ತಲುಪಿ ಹೋಟೆಲಿನಲ್ಲಿ ಉಳಿಯುವುದು.

ದಿನ 3 : ರಾಜಧಾನಿ ಥಿಂಪು ವೀಕ್ಷಣೆ

ದಿನ 3 : ರಾಜಧಾನಿ ಥಿಂಪು ವೀಕ್ಷಣೆ

ಭೂತಾನ್ ನ ರಾಜಧಾನಿ ಥಿಂಪು ಅತ್ಯಂತ ಸುಂದರವಾದ ನಗರ. ಟ್ರಾಫಿಕ್ ಸಿಗ್ನಲ್ ಇಲ್ಲದ ದೇಶ ಭೂತಾನ್. ಇಲ್ಲಿ ರಸ್ತೆಗಳಲ್ಲಿ ಎಲ್ಲೂ ಟ್ರಾಫಿಕ್ ಸಿಗ್ನಲ್ ಗಳಿಲ್ಲ. ಸಾಮಾನ್ಯವಾಗಿ ಎಲ್ಲರಿಗೂ ಹಿಂದಿ ಬರುತ್ತದೆ. ಭಾರತಕ್ಕಿಂತ ಅಲ್ಲಿನ ಸಮಯ ಅರ್ಧ ಗಂಟೆ ಮುಂದೆ. ಥಿಂಪು ರಾಜಧಾನಿಯಾಗಿದ್ದು 1961ರಲ್ಲಿ. ಇಲ್ಲಿ ಸುಮಾರು ಒಂದು ಲಕ್ಷದಷ್ಟು ಜನರಿದ್ದಾರೆ. ವಾಂಗ್ ಚು ನದಿ ಇದೆ. ಇಲ್ಲಿ ಕಾಲ್ನಡಿಗೆಯಲ್ಲಿ ಸುತ್ತಬಹುದು. ಜತೆಗೂ ಭಾರತದಂತೆಯೇ ಅಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ.

ವೀಕ್ಷಣಾ ಸ್ಥಳಗಳು

ವೀಕ್ಷಣಾ ಸ್ಥಳಗಳು

ಜಾನಪದ ವಸ್ತು ಸಂಗ್ರಹಾಲಯ, ನ್ಯಾಷನಲ್ ಲೈಬ್ರರಿ (ವಿಶ್ವದಲ್ಲೇ ಅತಿ ದೊಡ್ಡ ಪುಸ್ತಕ ಇಲ್ಲಿದೆ), ಟೆಕ್ಸ್ ಟೈಲ್ ಮ್ಯೂಸಿಯಂ ಮತ್ತು ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಜೊರಿಗ್ ಚುಸುಮ್ (13 ಕರಕುಶಲಕಲೆಗಳ ಕಲಿಕಾ ಕೇಂದ್ರ), ನ್ಯಾಷನಲ್ ಮೆಮೊರಿಯಲ್ ಚೋರ್ಟನ್ (ಭೂತಾನ್ ನ ಮೂರನೇ ರಾಜ ಜಿಗ್ಮೆ ದೋರ್ಜಿ ವಾಂಗ್‍ಚುಕ್ ಅವರ ನೆನಪಿಗೆ ಕಟ್ಟಿಸಿರುವ ಸ್ತೂಪ), ದ ಬಿಗ್ ಬುದ್ಧ-(ಬುದ್ಧ ದೋರ್ದೆನ್ಮಾ ಎಂದು ಕರೆಯುವ ಧ್ಯಾನದಲ್ಲಿ ಕುಳಿತ ಬುದ್ಧನ ಮೂರ್ತಿಯನ್ನು ಎತ್ತರದ ಬೆಟ್ಟದ ಮೇಲೆ ಸ್ಥಾಪಿಸಲಾಗಿದೆ. ಐವತ್ತೆರಡು ಮೀಟರ್ ಎತ್ತರದ ಈ ಬುದ್ಧ ಪ್ರತಿಮೆ ಪ್ರಪಂಚದ ಅತಿದೊಡ್ಡ ಕುಳಿತಿರುವ ಭಂಗಿಯ ಬುದ್ಧನ ಮೂರ್ತಿ ಎಂದು ಖ್ಯಾತವಾಗಿದೆ. ಅಲ್ಲಿಂದ ಥಿಂಪು ಕಣಿವೆಯು ಬಲು ಸೊಗಸಾಗಿ ಕಾಣುತ್ತದೆ), ಭೂತಾನ್ ಕರಕುಶಲ ಮಳಿಗೆಗಳು

ದಿನ 4 : ಥಿಂಪು - ಪುನಾಖಾ

ದಿನ 4 : ಥಿಂಪು - ಪುನಾಖಾ

ಥಿಂಪುವಿನಿಂದ ಪುನಾಖಾದೆಡೆಗೆ ಪಯಣ (70 ಕಿ.ಮೀ). ಮೊದಲು 3050 ಮೀಟರ್ ಎತ್ತರದ ದೋಚುಲಾ ಪಾಸ್ ತಲುಪುತ್ತೇವೆ. ಥಿಂಪುವಿನಿಂದ 30 ಕಿಮೀ ದೂರವಿರುವ ದೋಚುಲಾ ಪಾಸ್ ಪ್ರಕೃತಿ ಸೌಂದರ್ಯ ಮೇಳೈಸಿರುವ ಸುಂದರ ತಾಣ. 2003ರಲ್ಲಿ ಭೂತಾನ್ ಗಡಿ ಪ್ರವೇಶಿಸಿದ್ದ ಉಗ್ರರನ್ನು ಹೊಡೆದೋಡಿಸುವಾಗ ಮೃತರಾದ ಸೈನಿಕರ ನೆನಪಿಗೆ ರಾಜಮಾತೆ ಇಲ್ಲಿ 108 ಸ್ತೂಪಗಳನ್ನು ಕಟ್ಟಿಸಿದ್ದಾರೆ. ಅಲ್ಲೇ ಬೆಟ್ಟದ ಮೇಲೆ ರಾಜ ಮನೆತನದ ನೂರನೆಯ ವರ್ಷದ ಸವಿನೆನಪಿಗಾಗಿ ಡ್ರುಕ್ ವ್ಯಾಗ್ಯಿಲ್ ಲಾಖಾಂಗ್(ದೇವಸ್ಥಾನ) ಕಟ್ಟಿಸಿದ್ದಾರೆ. ಹಿಮಾಲಯದ ಸುಂದರ ದೃಶ್ಯವನ್ನು ಇಲ್ಲಿಂದ ಕಾಣಬಹುದು.

ಪುನಾಖಾ ಝೋಂಗ್

ಪುನಾಖಾ ಝೋಂಗ್

ಭೂತಾನ್ ನ ಝೋಂಗ್ ಗಳಲ್ಲಿ ಅತ್ಯಂತ ವೈಭವದ್ದು ಪುನಾಖಾ ಝೋಂಗ್. ಮೋಚು ಮತ್ತು ಪೋಚು ನದಿಗಳ ಸಂಗಮದ ಹತ್ತಿರ ಅದನ್ನು ಕಟ್ಟಿದ್ದಾರೆ. 1950ರಲ್ಲಿ ಥಿಂಪುವನ್ನು ರಾಜಧಾನಿ ಮಾಡುವವರೆಗೂ ಪುನಾಖಾ ಭೂತಾನ್ ನ ರಾಜಧಾನಿಯಾಗಿತ್ತು. ಝೋಂಗ್ ಒಳಗೆ ಬುದ್ಧ, ಗುರು ರಿಂಪೋಚೆ ಮತ್ತು ಶಬ್‍ದ್ರುಂಗ್ ಅವರ ಬಂಗಾರದ ಬಣ್ಣದ ದೊಡ್ಡ ದೊಡ್ಡ ಮೂರ್ತಿಗಳಿರುವ ನೂರು ಕಂಬಗಳ ಕೋಣೆಯಿದೆ. ಈಗಿನ ದೊರೆ ಜಿಗ್ಮೆ ಕೇಸರ್ ನಾಮ್ಗೈಲ್ ವಾಂಗ್‍ಚುಕ್ ಅವರು ಅಕ್ಟೋಬರ್ 11, 2011 ರಂದು ಜೆತ್ಸುನ್ ಪೇಮಾ ಅವರನ್ನು ಈ ಝೋಂಗ್ ನಲ್ಲಿ ವಿವಾಹವಾದಾಗ ನವದಂಪತಿ ಸೌಂದರ್ಯದೊಂದಿಗೆ ಝೋಂಗ್ ನ ಅಂದವೂ ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಿತ್ತು. ಪುನಾಖಾ ಝೋಂಗ್ ನಿರ್ಮಿಸಿದ್ದ ಶಬ್‍ದ್ರುಂಗ್ ನಗವಾಂಗ್ ನಾಮ್ಗೈಲ್ 1651ರಲ್ಲಿ ಅಲ್ಲೇ ನಿಧನರಾದರು. ಭೂತಾನ್ ನ ಮೊದಲ ದೊರೆ ಉಗೈನ್ ವಾಂಗ್‍ಚುಕ್ 1907ರಲ್ಲಿ ಪದಗ್ರಹಣ ಮಾಡಿದ್ದು ಕೂಡ ಪುನಾಖಾ ಝೋಂಗ್‍ನಲ್ಲಿಯೇ.

ದಿನ 5: ಪುನಾಖಾ - ಪಾರೋ

ದಿನ 5: ಪುನಾಖಾ - ಪಾರೋ

ಪಾರೋ ಝೋಂಗ್ ನೋಡುತ್ತೇವೆ. ಪಾರೋ ಝೋಂಗ್ ಅನ್ನು ರಿಂಚೆನ್ ಪುಂಗ್ ಝೋಂಗ್ ಎಂದು ಕೂಡ ಕರೆಯುತ್ತಾರೆ. ಗುರು ರಿಂಪೋಚೆ ಈ ಸ್ಥಳದಲ್ಲಿ ಮೊನಾಸ್ಟರಿಯನ್ನು ನಿರ್ಮಿಸಿದ್ದರಂತೆ. ಈ ಸ್ಥಳದ ಪವಿತ್ರತೆಯನ್ನು ಮನಗಂಡು ಶಬ್‍ದ್ರುಂಗ್ ನಗವಾಂಗ್ ನಾಮ್ಗೈಲ್ 1644 ರಲ್ಲಿ ಝೋಂಗ್ ನಿರ್ಮಿಸಿದರಂತೆ. ಅತ್ಯಂತ ಎತ್ತರದ ಚೇಲಾಲಾ ಪಾಸ್(3900 ಮೀಟರ್) ನಿಂದ ಪಾರೋ ಮತ್ತು ಹಾ ವ್ಯಾಲಿಗಳ ಸುಂದರ ದೃಶ್ಯಾವಳಿಗಳನ್ನು ಕಾಣಬಹುದು.

ವಾಪಸ್ ಬೆಂಗಳೂರಿಗೆ

ವಾಪಸ್ ಬೆಂಗಳೂರಿಗೆ

ದಿನ 6: ಪಾರೋ - ಪುನ್ಶೋಲಿಂಗ್
ದಿನ 7: ಪುನ್ಶೋಲಿಂಗ್ - ಬಾಗ್ದೋಗ್ರಾ ವಿಮಾನ ನಿಲ್ದಾಣ - ಬೆಂಗಳೂರು

English summary
Here is the package tour to Bhuthan. No need of passport. You can plan your trip calmly. Because tour will be on July first week. To and fro journey by flight and tour package price RS. 40,000. And starts from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X