ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ನರೇಂದ್ರ ಮೋದಿ ಎದುರು ಮಹತ್ವದ ಬೇಡಿಕೆ ಇಟ್ಟ ಮುಖ್ಯಮಂತ್ರಿ ಯಡಿಯೂರಪ್ಪ!

|
Google Oneindia Kannada News

ಬೆಂಗಳೂರು, ಜು. 16: ತಿಂಗಳಿಗೆ ಕನಿಷ್ಠ 1.5 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ 19 ಪರಿಸ್ಥಿತಿ ಕುರಿತಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸಿನಲ್ಲಿ ಭಾಗವಹಿಸಿ ಸಿಎಂ ಯಡಿಯೂರಪ್ಪ ಮಾತನಾಡಿದರು.

ಸಂವಾದದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, "ಯುರೋಪ್ ಮತ್ತಿತರ ರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಮೂರನೇ ಅಲೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಆರೋಗ್ಯ ವ್ಯವಸ್ಥೆಯ ಮೂಲಸೌಕರ್ಯ ಹೆಚ್ಚಿಸಬೇಕು" ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ಇಳಿಮುಖವಾಗಿದ್ದು, 1900 ಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ ಸುಮಾರು 400ಕ್ಕೆ ಇಳಿದಿದೆ. ಪಾಸಿಟಿವಿಟಿ ದರ ಶೇ. 1.42 ರಷ್ಟಿದ್ದು, ಮರಣ ಪ್ರಮಾಣ ಶೇ. 1.25 ಕ್ಕೆ ಇಳಿದಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿವರಿಸಿದರು.

ತಿಂಗಳಿಗೆ 1.5 ಕೋಟಿ ಡೋಸ್ ಲಸಿಕೆ ಕೊಡಿ

ತಿಂಗಳಿಗೆ 1.5 ಕೋಟಿ ಡೋಸ್ ಲಸಿಕೆ ಕೊಡಿ

"ಕೋವಿಡ್ 19ರ ಪಾಸಿಟಿವಿಟಿ ದರ, ಪ್ರಕರಣಗಳ ಸಂಖ್ಯೆ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯವನ್ನು ಆಧರಿಸಿ, ನಿರ್ಬಂಧಗಳನ್ನು ವಿಧಿಸಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಕೋವಿಡ್ ಸೂಕ್ತ ನಡವಳಿಕೆಯನ್ನು ಖಾತರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ಸಹ ನೀಡಲಾಗಿದೆ" ಎಂದು ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂವಾದ ಸಂದರ್ಭದಲ್ಲಿ ತಿಳಿಸಿದರು.

"ರಾಜ್ಯದಲ್ಲಿ ಈ ವರೆಗೆ ಒಟ್ಟು 2.62 ಕೋಟಿ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಪ್ರತಿ ದಿನ 5 ಲಕ್ಷ ಡೋಸ್‌ಗಳಂತೆ ತಿಂಗಳಿಗೆ 1.5 ಕೋಟಿ ಡೋಸ್ ಲಸಿಕೆ ಒದಗಿಸಬೇಕು" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಪ್ರಧಾನಿಗೆ ಮನವಿ ಮಾಡಿದರು.

ಮೂರನೇ ಅಲೆ ಎದುರಿಸಲು ಸಿದ್ಧತೆ

ಮೂರನೇ ಅಲೆ ಎದುರಿಸಲು ಸಿದ್ಧತೆ

ವಿಡಿಯೋ ಸಂವಾದದಲ್ಲಿ ಮೂರನೇ ಅಲೆಯ ಸಿದ್ಧತೆ ಬಗ್ಗೆಯೂ ಸಿಎಂ ಯಡಿಯೂರಪ್ಪ ಪ್ರಧಾನಿಗೆ ವಿವರಿಸಿದರು. "ಪ್ರಸ್ತುತ ಮೂರನೇ ಅಲೆಯನ್ನು ಎದುರಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಎಲ್ಲ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಆಕ್ಸಿಜನೇಟೆಡ್ ಬೆಡ್‌ಗಳು, ವೆಂಟಿಲೇಟರ್ ಬೆಡ್‌ಗಳು ಹಾಗೂ ಮಕ್ಕಳ ಐಸಿಯುಗಳು ಮೊದಲಾದ ಸೌಲಭ್ಯ ಹೆಚ್ಚಿಸಲಾಗುತ್ತಿದೆ. ವೈದ್ಯರು, ಸ್ಟಾಫ್ ನರ್ಸ್, ಪ್ರಯೋಗಾಲಯ ತಂತ್ರಜ್ಞರ ಸೇವೆ ಒದಗಿಸಲಾಗುತ್ತಿದೆ. ಜೊತೆಗೆ ಕೋವಿಡ್ ಚಿಕಿತ್ಸೆಗೆ ಅಗತ್ಯ ಪರಿಕರಗಳನ್ನೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಖರೀದಿಸಲಾಗುತ್ತಿದೆ. ಹೊಸ ಆರ್‌ಟಿಪಿಸಿಆರ್ ಪ್ರಯೋಗಾಲಯಗಳ ಸ್ಥಾಪನೆ ಹಾಗೂ ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬೊರೇಟರಿಗಳನ್ನು ಸ್ಥಾಪಿಸಲಾಗುತ್ತಿದೆ" ಎಂದು ವಿವರಿಸಿದರು.

ಪ್ರಧಾನಿ ಮೋದಿಗೆ ಯಡಿಯೂರಪ್ಪ ಬೇಡಿಕೆ

ಪ್ರಧಾನಿ ಮೋದಿಗೆ ಯಡಿಯೂರಪ್ಪ ಬೇಡಿಕೆ

"ಮುಂದಿನ ದಿನಗಳಲ್ಲಿ ಮೂರನೇ ಅಲೆಯನ್ನು ಎದುರಿಸಲು ಕೇಂದ್ರ ಸರ್ಕಾರದಿಂದ ಲಸಿಕೆ ಹಂಚಿಕೆ ಹೆಚ್ಚಳ ಮಾಡಬೇಕು. ಜೊತೆಗೆ 800 ನಿಯೊ ನೇಟಲ್ ಮತ್ತು ಪಿಡಿಯಾಟ್ರಿಕ್ ವೆಂಟಿಲೇಟರುಗಳನ್ನು ಪಿಎಂ ಕೇರ್ಸ್ ಅಡಿ ಒದಗಿಸಬೇಕು" ಎಂದು ಪ್ರಧಾನಿ ಮೋದಿ ಅವರಿಗೆ ಸಿಎಂ ಯಡಿಯೂರಪ್ಪ ಮನವಿ ಮಾಡಿದರು.

"ಜೊತೆಗೆ, ತಾಲ್ಲೂಕು ಆಸ್ಪತ್ರೆಗಳಿಗೆ 40 ಪಿಎಸ್‌ಎ ಆಕ್ಸಿಜನ್ ಉತ್ಪಾದನಾ ಘಟಕಗಳ ಹಂಚಿಕೆ ಮಾಡುವಂತೆ ಹಾಗೂ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಹಂಚಿಕೆಯ ವಿಕೇಂದ್ರೀಕರಣ ಮಾಡಬೇಕು. ಮ್ಯುಕೊರ್ಮೈಕೊಸಿಸ್ ಆಂಫೊಟೆರಿಸಿನ್ ಬಿ ಮತ್ತು ಮಕ್ಕಳಿಗೆ ಐವಿಐಜಿ ಹಂಚಿಕೆಯನ್ನು ಹೆಚ್ಚಿಸಬೇಕು" ಎಂದು ಪ್ರಧಾನಿ ಬಳಿ ಯಡಿಯೂರಪ್ಪ ಮನವಿ ಮಾಡಿದರು.

ಸಂವಾದದಲ್ಲಿ ಅಮಿತ್ ಶಾ ಭಾಗಿ

ಸಂವಾದದಲ್ಲಿ ಅಮಿತ್ ಶಾ ಭಾಗಿ

ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಸಂವಾದದಲ್ಲಿ ಭಾಗವಹಿಸಿದ್ದರು.

ರಾಜ್ಯದಿಂದ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್. ಅಶ್ವಥ್ ನಾರಾಯಣ, ಗೋವಿಂದ ಎಂ. ಕಾರಜೋಳ, ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

English summary
Chief Minister Yediyurappa requested Prime minister Modi to provide at least 1.5 crore doses of vaccine per month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X