ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ?
ಬೆಂಗಳೂರು, ಜ. 21: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಮತ್ತೊಂದು ಸಮಸ್ಯೆ ಸಿಎಂ ಯಡಿಯೂರಪ್ಪ ಅವರಿಗೆ ಎದುರಾಗಿದೆ. ಖಾತೆ ಹಂಚಿಕೆ ಅಸಮಾಧಾನಕ್ಕೆ ಸಂಬಂಧಿಸಿದಂತೆ ಜೆ.ಸಿ. ಮಾಧುಸ್ವಾಮಿ ಅವರು ರಾಜೀನಾಮೆ ಕೊಟ್ಟಿದ್ದಾರೆ ಎಂಬ ಮಾಹಿತಿ ಬಂದಿದೆ. ತಮ್ಮಲ್ಲಿನ ಖಾತೆಯನ್ನು ಬೇರೆ ಸಚಿವರಿಗೆ ಹಂಚಿಕೆ ಮಾಡಿರುವುದು ಸಚಿವ ಮಾಧುಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಾಧುಸ್ವಾಮಿ ಅವರು ಭಾಗವಹಿಸುತ್ತಿಲ್ಲ ಎಂಬ ಮಾಹಿತಿಯೂ ಇದೆ. ಮತ್ತೊಂದೆಡೆ ಸಚಿವ ಡಾ. ಸುಧಾಕರ್ ನೇತೃತ್ವದಲ್ಲಿ ವಲಸೆ ಶಾಸಕರು ಸಭೆ ಸೇರಿದ್ದಾರೆ.
ಖಾತೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಲಸೆ ಸಚಿವರ ಅಸಮಾಧಾನ ಕೂಡ ಹೆಚ್ಚಾಗಿದೆ. ಆರೋಗ್ಯ ಸಚಿವ ಡಾ. ಸುಧಾಕರ್ ನಿವಾಸದಲ್ಲಿ ಬೆಳಗ್ಗೆಯಿಂದಲೇ ಸಭೆ ನಡೆಯುತ್ತಿದೆ. ಖಾತೆ ಮರು ಹಂಚಿಕೆ ಮೂಲಕ ಅವರಲ್ಲಿನ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಸಿಎಂ ಯಡಿಯೂರಪ್ಪ ಮರು ಹಂಚಿಕೆ ಮಾಡಿದ್ದಾರೆ. ಹೀಗಾಗಿ ಡಾ. ಸುಧಾಕರ್ ಅಸಮಾಧಾನಗೊಂಡಿದ್ದಾರೆ. ಸುಧಾಕರ್ ನಿವಾಸದಲ್ಲಿ ಸಚಿವರಾದ ಎಂ.ಟಿ.ಬಿ. ನಾಗರಾಜ್ ಹಾಗೂ ಡಾ. ಕೆ.ಸಿ. ನಾರಾಯಣಗೌಡ ಅವರು ಭಾಗವಹಿಸಿದ್ದಾರೆ. ಬೆಳಗ್ಗೆಯಿಂದ ಬೇರೆ ಯಾರನ್ನೂ ಸಚಿವ ಡಾ. ಸುಧಾಕರ್ ಅವರು ಭೇಟಿ ಮಾಡುತ್ತಿಲ್ಲ. ಮೂವರು ಸಚಿವರು ಸುದೀರ್ಘ ಸಭೆಯ ಬಳಿಕ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಕುತೂಹಲ ಮೂಡಿಸಿದ ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ನಡೆ!

ಮಾಧುಸ್ವಾಮಿ ರಾಜೀನಾಮೆ?
ಖಾತೆ ಮರು ಹಂಚಿಕೆ ಬಳಿಕ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ. ಅವರಿಂದ ಕಾನೂನು ಸಂಸದೀಯ ಇಲಾಖೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಅದಕ್ಕಿಂತ ಹೆಚ್ಚಾಗಿ ಸಣ್ಣ ನೀರಾವರಿ ಇಲಾಖೆಯನ್ನು ಹಿಂದಕ್ಕೆ ಪಡೆದಿರುವುದು ಮಾಧುಸ್ವಾಮಿ ಅವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿ ನೂತನ ಸಚಿವರಿಗೆ ಖಾತೆಗಳ ಹಂಚಿಕೆ ನಡೆಯುತ್ತಿದ್ದ ಹಾಗೇ ತಮ್ಮ ಆಪ್ತ ಸಹಾಯಕ ಅರುಣ ಕೈಯಲ್ಲಿ ರಾಜೀನಾಮೆ ಪತ್ರವನ್ನ ನೀಡಿ, ಯಾರಿಗೂ ಸಿಗದ ಸ್ಥಳಕ್ಕೆ ಮಾಧುಸ್ವಾಮಿ ಹೋಗಿದ್ದಾರೆ ಎನ್ನಲಾಗುತ್ತಿದೆ.

ಸಚಿವ ಸಂಪುಟ ಸಭೆಗೆ ಗೈರು?
ಕಾನೂನು ಹಾಗೂ ಸಣ್ಣ ನೀರಾವರಿ ಇಲಾಖೆ ಸಚಿವರಾಗಿದ್ದ ಮಾಧುಸ್ವಾಮಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಮರು ಹಂಚಿಕೆ ಮಾಡಲಾಗಿದೆ. ಅದರ ಬೆನ್ನಲ್ಲೇ ಅಸಮಾಧಾನಗೊಂಡಿರುವ ಸಚಿವ ಮಾಧುಸ್ವಾಮಿ, ಇಂದು ನಡೆಯುವ ಸಚಿವ ಸಂಪುಟ ಸಭೆಗೂ ಹಾಜರಾಗುತ್ತಿಲ್ಲ ಎಂಬ ಖಚಿತ ಮಾಹಿತಿಯಿದೆ. ಉತ್ತಮ ಸಂಸದೀಯ ಪಟುವಾಗಿದ್ದ ಮಾಧುಸ್ವಾಮಿಯವರಿಗೆ ಉದ್ದೇಶಪೂರ್ವಕವಾಗಿಯೇ ಮೊದಲು ಕಾನೂನು ಮತ್ತು ಸಂಸದೀಯ ಖಾತೆಯನ್ನ ನೀಡಲಾಗಿತ್ತು. ಆದರೆ, ನೂತನ ಸಚಿವರಿಗೆ ಖಾತೆ ಹಂಚಿಕೆ ಸಮಯದಲ್ಲಿ ಅವರ ಖಾತೆ ಬದಲಾವಣೆ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ.

ಡಾ. ಸುಧಾಕರ್ ನಿವಾಸದಲ್ಲಿ ಪ್ರತ್ಯೇಕ ಸಭೆ
ಮತ್ತೊಂದೆಡೆ ಖಾತೆ ಮರು ಹಂಚಿಕೆಯಿಂದ ಅಸಮಾಧಾನಗೊಂಡಿರುವ ಸಚಿವರಾದ ಡಾ. ಸುಧಾಕರ್, ಎಂ.ಟಿ.ಬಿ. ನಾಗರಾಜ್ ಹಾಗೂ ಡಾ. ಕೆ.ಸಿ. ನಾರಾಯಣಗೌಡ ಅವರು ಸುದೀರ್ಘ ಸಬೆ ನಡೆಸುತ್ತಿದ್ದಾರೆ. ಮೊದಲೇ ಭೇಟಿ ನಿಗದಿ ಮಾಡಿಕೊಂಡಿದ್ದ ಮಾಜಿ ಸಚಿವ ಎಚ್.ವೈ. ಮೇಟಿ ಮನೆಗೆ ಬಂದರೂ ಒಳಗೆ ಬಿಟ್ಟುಕೊಳ್ಳದೆ ಸಭೆಯನ್ನು ಸುಧಾಕರ್ ಮುಂದುವರೆಸಿದ್ದಾರೆ. ಹೀಗಾಗಿ ಸಭೆಯಲ್ಲಿ ಮಹತ್ವದ ತೀರ್ಮಾನವನ್ನು ಮೂರು ಸಚಿವರು ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಮೂವರು ಸಚಿವರಿಗೆ ಸೂಕ್ತ ತೀರ್ಮಾನ ಕೈಗೊಳ್ಳಲು ಉಳಿದ 12 ವಲಸೆ ಶಾಸಕರು ಸೂಚಿಸಿದ್ದಾರೆ ಎನ್ನಲಾಗಿದೆ. ಇದು ಸರ್ಕಾರದ ಮೇಲೆ ಪರಿಣಾಮ ಬೀರುವುದು ಖಚಿತ ಎನ್ನಲಾಗುತ್ತಿದೆ.

ಯಾರಿಗೆ ಯಾವ ಖಾತೆ?
ಸಿಎಂ ಯಡಿಯೂರಪ್ಪ ಅವರು ಖಾತೆ ಮರು ಹಂಚಿಕೆ ಮಾಡಿದ್ದು ರಾಜ್ಯಪಾಲರು ಅದಕ್ಕೆ ಅಂಕಿತ ಹಾಕಿದ್ದಾರೆ. ನೂತನ ಸಚಿವರ ಖಾತೆಗಳ ವಿವರ ಈ ಮುಂದಿನಂತಿದೆ. ಖಾತೆ ಮರು ಹಂಚಿಕೆ ಬಳಿಕ ಯಡಿಯೂರಪ್ಪ ಅವರು ತಮ್ಮಲ್ಲಿ 8 ಖಾತೆಗಳನ್ನು ಉಳಿಸಿಕೊಂಡಿದ್ದಾರೆ.
* ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ: ಆಡಳಿತ ಸುಧಾರಣೆ, ಹಣಕಾಸು, ಬೆಂಗಳೂರು ಅಭಿವೃದ್ಧಿ, ಇಂಧನ, ಗುಪ್ತಚರ ಇಲಾಖೆ, ಅಂಕಿ-ಸಂಖ್ಯೆ, ಮೂಲ ಸೌಕರ್ಯ ಸೇರಿದಂತೆ ಉಳಿದೆಲ್ಲ ಇಲಾಖೆಗಳನ್ನು ತಮ್ಮ ಇಟ್ಟುಕೊಂಡಿದ್ದಾರೆ.
* ಸಿ.ಪಿ. ಯೋಗೇಶ್ವರ್ - ಸಣ್ಣ ನೀರಾವರಿ ಇಲಾಖೆ
* ಆರ್. ಶಂಕರ್ - ಪೌರಾಡಳಿತ ಇಲಾಖೆ
* ಎಂಟಿಬಿ ನಾಗರಾಜ್ - ಅಬಕಾರಿ ಇಲಾಖೆ
* ಆರ್. ಶಂಕರ್ - ಪೌರಾಡಳಿತ ಇಲಾಖೆ
* ಮುರುಗೇಶ್ ನಿರಾಣಿ - ಗಣಿಗಾರಿಕೆೆ ಇಲಾಖೆ
* ಉಮೇಶ್ ಕತ್ತಿ- ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
* ಎಸ್. ಅಂಗಾರ- ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ
* ಅರವಿಂದ ಲಿಂಬಾವಳಿ - ಅರಣ್ಯ ಇಲಾಖೆ
* ಕೆ.ಸಿ. ನಾರಾಯಣಗೌಡ - ಯುವಜನ ಮತ್ತು ಕ್ರೀಡೆ ಇಲಾಖೆ
* ಕೆ. ಗೋಪಾಲಯ್ಯ - ತೋಟಗಾರಿಕೆ ಇಲಾಖೆ
* ಆನಂದ್ ಸಿಂಗ್ - ಪ್ರವಾಸೋದ್ಯಮ ಇಲಾಖೆ
* ಶಿವರಾಂ ಹೆಬ್ಬಾರ್ - ಕಾರ್ಮಿಕ ಇಲಾಖೆ
* ಪ್ರಭು ಚವ್ಹಾಣ್ - ಪಶುಸಂಗೋಪನೆ ಇಲಾಖೆ
* ಕೆ.ಸುಧಾಕರ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
* ಬಸವರಾಜ ಬೊಮ್ಮಾಯಿ - ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆ
* ಜೆ.ಸಿ. ಮಾಧುಸ್ವಾಮಿ - ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
* ಸಿ.ಸಿ. ಪಾಟೀಲ್ - ಸಣ್ಣ ಕೈಗಾರಿಕೆ ಇಲಾಖೆ
* ಕೋಟ ಶ್ರೀನಿವಾಸ ಪೂಜಾರಿ - ಮುಜರಾಯಿ ಇಲಾಖೆ