ನಸುನಗುತ್ತಲೇ ಕರ್ನಾಟಕ ಬಿಜೆಪಿ ಜನ್ಮ ಜಾಲಾಡಿದ ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 13: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಹಿನ್ನೆಲೆಯಲ್ಲಿ ಖುಷಿಯ ಮೂಡ್ ನಲ್ಲಿದ್ದ ಸಿಎಂ ಸಿದ್ದರಾಮಯ್ಯ, ಗುರುವಾರ ಮಧ್ಯಾಹ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗುನಗುತ್ತಲೇ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಹಾಗೆಂದ ಮಾತ್ರಕ್ಕೆ ಅವರ ಮಾತುಗಳಲ್ಲಿ ಅತಿಯಾದ ಸಂಭ್ರಮವಾಗಲೀ, ಗೆದ್ದ ಬಗ್ಗೆ ಅಹಂಕಾರವಾಗಲೀ ಸಾಸಿವೆ ಕಾಳಿನಷ್ಟೂ ಕಾಣಲಿಲ್ಲ. ನಗುನಗುತ್ತಲೇ ಯಾರಿಗೆ ಬಿಸಿ ಮುಟ್ಟಿಸಬೇಕೋ ಅವರಿಗೆ ಬಿಸಿ ಮುಟ್ಟಿಸುತ್ತಾ, ಯಾರಿಗೆ ಸ್ಪಷ್ಟೀಕರಣ ನೀಡಬೇಕೋ ಅವರಿಗೆ ಆ ಸ್ಪಷ್ಟನೆ ನೀಡುತ್ತಾ, ತಮ್ಮನ್ನು ಟೀಕಿಸಿದವರಿಗೆ ನಗುತ್ತಲೇ ಮಾತಿನ ಚಾಟಿ ಬೀಸುತ್ತಾ ಸುದ್ದಿಗೋಷ್ಠಿ ನಡೆಸಿಕೊಟ್ಟರು.

ಒಂದು ಹಂತದಲ್ಲಿ ಕುವೆಂಪು ಅವರ 'ಸರ್ವ ಜನಾಂಗದ ಶಾಂತಿ ತೋಟ' ಸಾಲನ್ನು ಹೇಳುತ್ತಾ ಕರ್ನಾಟಕ ಮತದಾರರ ಮನಸ್ಥಿತಿಯನ್ನು ಸೂಚ್ಯವಾಗಿ ಹೇಳಿದರಲ್ಲದೆ, ಕರ್ನಾಟಕವು ಮತ್ತೊಂದು ಉತ್ತರ ಪ್ರದೇಶ ಆಗುವುದಿಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದರು.

CM Siddaramaiah thank Devegowda and Kumaraswamy

ಒಟ್ಟಾರೆಯಾಗಿ ಹೇಳುವುದಾದರೆ, ಆರಕ್ಕೇರಂದಂತೆ ಮೂರಕ್ಕಿಳಿಯದಂತೆ ನಾಜೂಕಾಗಿ, ಸಮ ಚಿತ್ತದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರು ತಮ್ಮ ಮನೋಭಾವದಿಂದ ಮಾತ್ರವೇ ಈ ಚುನಾವಣೆಯಲ್ಲಿ ತಮ್ಮ ಗುಂಡಿ ತಾವೇ ತೋಡಿಕೊಂಡಿದ್ದನ್ನು ನಯವಾಗಿ ಎತ್ತಿ ತೋರಿದರು.

ಅವರ ಮಾತುಗಳ ಹೈಲೈಟ್ಸ್ ಇಲ್ಲಿವೆ.

- ಈ ಚುನಾವಣೆ ದಿಕ್ಸೂಚಿ ಎಂದು ಹೇಳಲಾಗಿತ್ತು. ಆದರೆ, ನನ್ನ ಪ್ರಕಾರ ಇದು ದಿಕ್ಸೂಚಿಯಲ್ಲ.

- ಚುನಾವಣೆಯಲ್ಲಿ ಹಣ ಚೆಲ್ಲಿದರೆ ಮಾತ್ರ ಗೆಲ್ಲುತ್ತಾರೆ ಅನ್ನುವುದು ಸುಳ್ಳು. ಹಣ ಹಂಚೋ ಹಾಗಿದ್ರೆ ಟಾಟಾ ಬಿರ್ಲಾ ಕೂಡಾ ಗೆಲ್ತಿದ್ರು.

- ಪಕ್ಷದ ಸಿದ್ಧಾಂತ, ಕಾರ್ಯಕ್ರಮಗಳು, ನಾಲ್ಕು ವರ್ಷಗಳಲ್ಲಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡಿ ಜನ ಮತ ಹಾಕಿದ್ದಾರೆ.

- ಐದು ಬಜೆಟ್ ಮಂಡಿಸಿದ್ದೇನೆ. ಇದರಲ್ಲಿ ಜನತೆಗೆ ಕೊಟ್ಟಿರುವ ಭರವಸೆ ಈಡೇರಿಸಿದ್ದೇವೆ. ಇದೇ ಜನತೆಯ ಈ ತೀರ್ಪಿಗೆ ಕಾರಣ. ನಂಜನಗೂಡಿನಲ್ಲಿ 21 ಸಾವಿರ, ಗುಂಡ್ಲುಪೇಟೆ 10 ಸಾವಿರ ಅಂತರದಲ್ಲಿ ಗೆದ್ದಿದ್ದು ಇದಕ್ಕೆ ಸಾಕ್ಷಿ.

- ಫಲಿತಾಂಶದಿಂದ ಜನರ ಮನಸ್ಸು ತಿಳಿಕೊಳ್ಳೋಕೆ ಅವಕಾಶ.

- ಬಿಜೆಪಿಯವರು ದ್ವೇಷ ಬಿತ್ತುವ ಮೂಲಕ ಹಾಗೂ ಜಾತಿ, ಧರ್ಮದ ಆಧಾರದಲ್ಲಿ ಮತ ಕೇಳಲು ಮುಂದಾಗಿದ್ದರು. ಆದರೆ, ಅದು ನೆರವೇರಲಿಲ್ಲ.

- ಒಂದು ತಿಂಗಳ ಕಾಲ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಕ್ಷೇತ್ರಗಳಲ್ಲಿ ಠಿಕಾಣಿ ಹೂಡಿದರೂ ಗೆಲವು ತರಲಾಗಲಿಲ್ಲ. ಅದಕ್ಕೆ ಕಾರಣ, ಅವರು, ಕ್ಷೇತ್ರಗಳ ಸಮಸ್ಯೆಗಳನ್ನು ಚರ್ಚಿಸಲಿಲ್ಲ, ಮೋದಿ ಸರ್ಕಾರದ ಸಾಧನೆಯನ್ನು ತಿಳಿಸಲಿಲ್ಲ. ಬದಲಿಗೆ ವೈಯಕ್ತಿಕ ಟೀಕೆಗಳಲ್ಲೇ ಮುಳುಗಿಹೋದರು. ಇದೇ ಅವರ ಸೋಲಿಗೆ ಕಾರಣ.

- ಟೀಕಿಸುವ ಭರದಲ್ಲಿ ವೈಯಕ್ತಿಕ ಟೀಕೆ, ನಿಂದನೆ ಮಾಡಿದಲ್ಲದೆ, ಅಸಾಂವಿಧಾನಿ ಪದ ಬಳಸಿದರು. ಯಡಿಯೂರಪ್ಪ ಸಿದ್ದರಾಮಯ್ಯ ಅಯೋಗ್ಯ ಮುಖ್ಯಮಂತ್ರಿ, ಏಕವಚನ. ನಾನು ಪ್ರತಿಯಾಗಿ ಕೆಟ್ಟ ಭಾಷೆ ಬಳಸಲಿಲ್ಲ. ಅದು ನಮ್ಮ ಸಂಸ್ಕೃತಿಯಲ್ಲ.

- ನಾವು ಬಹಿರಂಗ ಪ್ರಚಾರದಲ್ಲಿ ನಾವೆಂದೂ ವಿರೋಧ ಪಕ್ಷದ ನಾಯಕರನ್ನು ಟೀಕಿಸಲು ಹೋಗಲಿಲ್ಲ. ನಾವು ನಮ್ಮ ಪ್ರತಿ ಪ್ರಚಾರದಲ್ಲಿ ಜನರಿಗಾಗಿ ನಮ್ಮ ಸರ್ಕಾರ ಕೈಗೊಂಡಿರುವ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾತ್ರವೇ ಹೇಳಿದೆವು.

- ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಆ ಹೆಣ್ಣು ಮಗಳ ಬಗ್ಗೆ (ಗುಂಡ್ಲುಪೇಟೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್) ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರು. ಈಶ್ವರಪ್ಪ ಯಾವಾಗಲೂ ನಮ್ಮ ಪಕ್ಷಕ್ಕೆ ಸಂಸ್ಕೃತಿ ಇದೆ ಅಂತಾರೆ. ಅದ್ಯಾವ ಸಂಸ್ಕೃತಿಯೋ ನನಗೆ ಗೊತ್ತಿಲ್ಲ. ಇದೆಲ್ಲದಕ್ಕೂ ಜನ ಸೂಕ್ತ ಉತ್ತರ ಕೊಟ್ಟಿದ್ದಾರೆ.

- ಬಿಜೆಪಿಯವರು ಹೀಗೆಲ್ಲಾ ಟೀಕಿಸಿದ್ದರೂ ನಾನೆಂದೂ ಅವರ ವಿರುದ್ಧ ವಾಗ್ದಾಳಿ ಮಾಡಲಿಲ್ಲ. ನಾನು ಜನರ ಹಿತ, ಪಕ್ಷದ ಸಿದ್ಧಾಂತ, ಕಾರ್ಯಕ್ರಮಗಳು, ನಾಲ್ಕು ವರ್ಷಗಳಲ್ಲಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾತ್ರ ಚರ್ಚಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಐದು ಬಜೆಟ್ ಮಂಡಿಸಿದ್ದೇನೆ. ಇದರಲ್ಲಿ ಜನತೆಗೆ ಕೊಟ್ಟಿರುವ ಭರವಸೆ ಈಡೇರಿಸಿದ್ದೇವೆ. ಇದೇ ನಮಗೆ ಶ್ರೀರಕ್ಷೆಯಾಗಿದೆ.

- ಉಪಚನಾವಣೆ ಗೆದ್ದಿರುವುದು ಜನರ ನಾಡಿಮಿಡಿತ ಅರಿಯಲು ಸಾಧ್ಯವಾಗಿದೆ. ಜನರು ನಮ್ಮ ಕಾರ್ಯಕ್ರಮ ಮೆಚ್ಚಿಕೊಂಡಿದ್ದಾರೆ. ನಾವು ಮಾಡಿದ ಕೆಲಸಗಳಿಗೆ ಕೂಲಿ ಕೊಡಿ ಎಂದಿದ್ದೆವು.

- ಕರ್ನಾಟಕ ಮತ್ತೊಂದು ಉತ್ತರ ಪ್ರದೇಶ ಆಗಲಾರದು ಎಂಬುದು ಸತ್ಯವಾಗಿದೆ. ಇತ್ತೀಚೆಗೆ, ಉತ್ತರ ಪ್ರದೇಶ ಎಲೆಕ್ಸನ್ ಮುಗಿದ ಮೇಲೆ ಕರ್ನಾಟಕದಲ್ಲೂ ಮೋದಿ ಗಾಳಿ ಬೀಸುತ್ತದೆ ಎಂದುಕೊಂಡಿದ್ದರು. ಅದಕ್ಕೆ ಈ ಹಿಂದೆ ನಾನು ವಿಧಾನ ಸಭೆಯಲ್ಲಿ ಉತ್ತರ ಕೊಟ್ಟಿದ್ದೆ. ಕರ್ನಾಟಕ ಉತ್ತರ ಪ್ರದೇಶ ಆಗುವುದಿಲ್ಲ. ಕರ್ನಾಟಕದಲ್ಲಿ ವಿಚಾರಧಾರೆಗಳುಳ್ಳ ಜನರಿದ್ದಾರೆ ಎಂದಿದ್ದೆ. ಅದೇ ಸತ್ಯವಾಯಿತು.

- ಧರ್ಮ, ಜಾತಿ ಆಧಾರದಲ್ಲಿ ವಿಷ ಬೀಜ ಬಿತ್ತಲು ಯತ್ನಿಸಿದವರಿಗೆ ಸೋಲಾಗಿದೆ. ಜನ ಅದಕ್ಕೆಲ್ಲಾ ಸೊಪ್ಪು ಹಾಕಲ್ಲ. ಮತದಾರರಿಗೆ ಪ್ರಜ್ಞೆಯಿದೆ. ಕಾಂಗ್ರೆಸ್ ಯಾವತ್ತೂ ಜಾತಿ, ಧರ್ಮದ ಆಧಾರದಲ್ಲಿ ವೋಟು ಕೇಳಲ್ಲ. ನಮ್ಮ ಕಾರ್ಯಕ್ರಮ , ಯೋಜನೆ ಮುಂದಿಟ್ಟು ಮತ ಕೇಳುತ್ತೇವೆ. ಹಾಗಾಗಿ, ಜಾತಿ, ಧರ್ಮ ಮೀರಿ ಓಟು ಹಾಕಿದ್ದಾರೆ.

- ಒಟ್ಟಾರೆಯಾಗಿ, ಎರಡೂ ಕ್ಷೇತ್ರಗಳ ಮತದಾರರಿಗೆ ಮತ್ತೊಮ್ಮೆ, ಮಗದೊಮ್ಮೆ ಕೋಟಿ ಕೋಟಿ ನಮಸ್ಕಾರ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief Minister Siddaramaiah analyse the victory of Congress in recent byelections as the victory of party's secularism. In a pressmeet on 13th April, 2017, he lashed out against BJP leaders for trying to get votes on the basis of religion and caste. This kind of strategies lead to BJP's defeat, he said.
Please Wait while comments are loading...