ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಣಿಗೆ ತೆರಳುವಾಗ ಯಡಿಯೂರಪ್ಪ ಕಾರ್ ಪಂಕ್ಚರ್!
ಬೆಂಗಳೂರು, ಡಿ. 05: ಗಡಿನಾಡು ಬೆಳಗಾವಿಯಲ್ಲಿ ಇಂದು (ಡಿ.05) ರಾಜ್ಯ ಬಿಜೆಪಿ ಕಾರ್ಯಕಾರಣಿ ನಡೆಯುತ್ತಿದೆ. ಒಂದು ದಿನದ ಕಾರ್ಯಕಾರಣಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ಶಾಸಕರು, ಸಂಸದರು ಹಾಗೂ ಪ್ರಮುಖರು ಭಾಗವಹಿಸಿದ್ದಾರೆ. ಕಾರ್ಯಕಾರಣಿಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿನ್ನೆ ಬೆಂಗಳೂರಿನಿಂದ ಬೆಳಗಾವಿಗೆ ತೆರಳಿದ್ದು, ಅಲ್ಲಿನ ಖಾಸಗಿ ಕೊಟೆಲ್‌ನಲ್ಲಿ ವಾಸ್ತವ್ಯ ಮಾಡಿದ್ದರು.
ಬೆಳಗಾವಿಯ ಖಾಸಗಿ ಹೊಟೆಲ್ ಒಂದರಲ್ಲಿ ವಾಸ್ತವ್ಯ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯಕಾರಣಿಯಲ್ಲಿ ಭಾಗವಹಿಸಲು ಅಲ್ಲಿಂದ ಗಾಂಧಿ ಭವನಕ್ಕೆ ಹೋಗಬೇಕಾಗಿತ್ತು. ಆದರೆ ಕೊನೆ ಕ್ಷಣದಲ್ಲಿ 10 ನಿಮಿಷ ತಡವಾಗಿ ಯಡಿಯೂರಪ್ಪ ಅವರು ಅಲ್ಲಿಂದ ತೆರಳಿದರು. ಮುಖ್ಯಮಂತ್ರಿಗಳು ಪ್ರಯಾಣಿಸಬೇಕಿದ್ದ ಕಾರ್ ಪಂಕ್ಚರ್ ಆಗಿದ್ದು ಅದಕ್ಕೆ ಕಾರಣ.
ಸಿಎಂ ವಾಸ್ತವ್ಯ ಮಾಡಿದ್ದ ಹೊಟೇಲ್ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಸಚಿವಾಲಯದ ಕಾರ್ ಪಂಕ್ಚರ್ ಆಗಿದೆ ಎಂಬುದು ಕೊನೆಯ ಕ್ಷಣದಲ್ಲಿ ಸಿಎಂ ಚಾಲಕ ಸಿಬ್ಬಂದಿ ಅರವಿಗೆ ಬಂದಿದೆ. ಕಾರಿನ ಒಂದು ಚಕ್ರಕ್ಕೆ ಮೊಳೆ ಚುಚ್ಚಿದ್ದರಿಂದ ಪಂಕ್ಚರ್ ಆಗಿತ್ತು. ಪಂಕ್ಚರ್ ಆಗಿದ್ದ ಕಾರಿನ ಚಕ್ರವನ್ನು ಸಿಬ್ಬಂದಿ ಬದಲಾಯಿಸಿದ ಬಳಿಕ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಕಾರ್ಯಕಾರಣಿಗೆ ತೆರಳಿದ್ದಾರೆ.