ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಖಡಕ್ ಸಂದೇಶ

|
Google Oneindia Kannada News

ಬೆಂಗಳೂರು, ಮೇ 08: ಕರ್ನಾಟಕದಲ್ಲಿ ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಡಳಿತ ಶೈಲಿಯನ್ನು ಬದಲಾಯಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಭಾನುವಾರ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ, ರಾಜ್ಯದ ಆಡಳಿತ ಶೈಲಿಯಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು. ಬಡವರಿಗೆ ಸಹಾಯ ಮಾಡಲು ಏನೇ ನಿರ್ಧಾರ ತೆಗೆದುಕೊಂಡರೂ ಸರ್ಕಾರ ನಿಮ್ಮ ರಕ್ಷಣೆಗೆ ನಿಲ್ಲುತ್ತದೆ. ಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಿದರೆ ಹೊಸ ಚೈತನ್ಯ ಮೂಡುತ್ತದೆ. ಅದರಿಂದ ನಿಮಗೂ ತೃಪ್ತಿ ದೊರೆಯುವುದು ಎಂದರು.

 ಕೃಷಿ ಭೂಮಿ ಆಧಾರಿತ ಸಂಶೋಧನೆಗೆ ಆದ್ಯತೆ ನೀಡಲು ಸಿಎಂ ಬೊಮ್ಮಾಯಿ ಕರೆ ಕೃಷಿ ಭೂಮಿ ಆಧಾರಿತ ಸಂಶೋಧನೆಗೆ ಆದ್ಯತೆ ನೀಡಲು ಸಿಎಂ ಬೊಮ್ಮಾಯಿ ಕರೆ

ರಾಜ್ಯದಲ್ಲಿ ಜನಸಾಮಾನ್ಯರಿಗಾಗಿ ಆಡಳಿತದಲ್ಲಿ ಬದಲಾವಣೆ ಆಗುತ್ತಿದೆ. ಸರಳ, ಸುಲಭ ಮತ್ತು ಸ್ವಚ್ಛತೆಯ ಭಾವನೆ ಬರುವಂತೆ ಆಡಳಿತವನ್ನು ನಡೆಸಬೇಕಿದೆ. ನಾವೆಲ್ಲಾ ಒಂದು ತಂಡವಾಗಿ ಒಟ್ಟಿಗೆ ಕೆಲಸ ಮಾಡಬೇಕಿದೆ. ನನ್ನ ಕಲ್ಪನೆಯ ನವ ಕರ್ನಾಟಕದ ಸಾಕಾರಕ್ಕೆ ನಿಮ್ಮ ಸಹಕಾರ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆ ಪ್ರಮುಖಾಂಶ

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆ ಪ್ರಮುಖಾಂಶ

* ರಾಜ್ಯದ ಬೆಳವಣಿಗೆಗೆ ಜಿಲ್ಲಾಡಳಿತ ಪ್ರಮುಖ ಪಾತ್ರ ವಹಿಸುತ್ತಿದ್ದು, ಜಿಲ್ಲಾಧಿಕಾರಿಗಳು ಸನ್ನಿವೇಶಕ್ಕೆ ತಕ್ಕಂತೆ ಹಲವು ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾಗಿದೆ. ಜಿಲ್ಲಾಧಿಕಾರಿ ಕಚೇರಿ ಎಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡುತ್ತದೆಯೋ ಅಷ್ಟು ಆಡಳಿತವೂ ಕ್ರಿಯಾಶೀಲವಾಗಿರುತ್ತದೆ. ಜಿಲ್ಲಾಧಿಕಾರಿಗಳೇ ಈ ಆಡಳಿತದ ನಾಯಕರು ಎಂದರು.

* ಜಿಲ್ಲಾಧಿಕಾರಿ ಆಗುವುದೇ ವಿಶೇಷ. ಜಿಲ್ಲೆಯಲ್ಲಿ ನೇರ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ನೀವು ಪರಿಸ್ಥಿತಿಗೆ ತಕ್ಷಣ ಸ್ಪಂದಿಸಬೇಕಾಗುತ್ತದೆ. ಔಪಚಾರಿಕವಾಗಿ ಕೆಲಸ ಮಾಡಬೇಕಿಲ್ಲ. ತಕ್ಷಣದ ಕ್ರಮ ವಹಿಸಬೇಕು. ಕ್ರಿಯಾಶೀಲರಾಗಿದ್ದಲ್ಲಿ ಸಮಸ್ಯೆ ಕಡಿಮೆಯಾಗುತ್ತವೆ. ಜನ ಜಾಗೃತರಾಗಿದ್ದು, ಕಾಲ ಬದಲಾಗಿದೆ. ನಿಮ್ಮ ಕೆಲಸವನ್ನು ಪ್ರಶ್ನೆ ಮಾಡುತ್ತಾರೆ. ಕ್ರಿಯಾಶೀಲವಾಗಿ ಕೆಲಸ ಮಡಿದರೆ ಪ್ರಶ್ನೆ ಮಾಡುವ ಪ್ರಮೇಯ ಇರುವುದಿಲ್ಲ.

* ಪರಿಹಾರ ನೀಡುವ ಕಾರ್ಯಕ್ರಮಗಳಲ್ಲಿ ಅಕ್ರಮಗಳನ್ನು ತಡೆಯಬೇಕು. ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ವಿಳಂಬ ಧೋರಣೆ ಸಲ್ಲದು. ವಿಳಂಬ ಧೋರಣೆಯು ಒಟ್ಟಾರೆ ರಾಜ್ಯದ ವರ್ಚಸ್ಸಿನ ಮೇಲೆ ಪ್ರಭಾವ ಬೀರಲಿದೆ.

* ಇದು ಸರ್ಕಾರದ ಕಡೆಯ ವರ್ಷವಾಗಿದ್ದರಿಂದ ಈ ವರ್ಷ ಅನುಷ್ಠಾನಗೊಳ್ಳಬೇಕಿರುವ ಕಾರ್ಯಕ್ರಮಗಳು ಹಾಗೂ ಬಜೆಟ್ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸೂಕ್ತ ಯೋಜನೆ ಬೇಕಾಗಿದ್ದು, ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಿಬೇಕಿದೆ. ಈ ಬಗ್ಗೆ ಅತ್ಯಂತ ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು ಎಂದರು.

* ಆಯಾ ಜಿಲ್ಲೆಯ ಎಲ್ಲಾ ತಹಶೀಲ್ದಾರರ ಹಾಗೂ ಅಪರ ಜಿಲ್ಲಾಧಿಕಾರಿಗಳ ಕಚೇರಿಗೆ ವಾರಕ್ಕೊಮ್ಮೆ ಭೇಟಿ ನೀಡಬೇಕು. ಅರ್ಜಿಗಳು ಬಾಕಿ ಉಳಿಯದಂತೆ ಕ್ರಮ ವಹಿಸಬೇಕು. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಲಾ ಸಹಾಯಕ ಕಮಿಷನರ್, ತಹಶೀಲ್ದಾರ್, ಎಡಿಸಿಗಳು ಜೊತೆಗಿರಬೇಕು. ದೀನ ದಲಿತರಿಗೆ, ಬಡವರಿಗೆ, ರೈತರಿಗೆ ಯೋಜನೆಗಳನ್ನು ತಲುಪಿಸಬೇಕು. ಕಚೇರಿ ಕೆಲಸದ ಅವಧಿಯನ್ನು ವಿಸ್ತರಿಸಬೇಕು. ಇದರಲ್ಲಿ ಯಾವುದೇ ರಾಜಿ ಇರುವುದಿಲ್ಲ.

* ರಾಜ್ಯದ ವಿವಿಧ ಭಾಗಗಳಿಂದ ಮುಖ್ಯಮಂತ್ರಿಗಳ ಕಚೇರಿಯಲ್ಲಿ 16436 ಅರ್ಜಿಗಳು ಬಂದಿವೆ. 10 ಸಾವಿರ ನಿಮಗೆ ಕಳಿಸಿದೆ. 6000 ಬಾಕಿ ಇವೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಲು ಒಂದು ಸೆಲ್ ರಚಿಸಲು ಸೂಚಿಸಿದರು.

* ಅರ್ಜಿ ಕೊಟ್ಟರೆ ಕೆಲಸವಾಗುವುದಿಲ್ಲ ಎಂಬ ಮಾತಿದೆ. ನಿಮ್ಮ ಪಾತ್ರ ಬಹಳ ಮುಖ್ಯ. ಬಡವರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮಹತ್ವ ನೀಡಿ. ದೌರ್ಜನ್ಯ ಪ್ರಕರಣಗಳ ಬಗ್ಗೆ ಗಮನ ನೀಡಿ, ಸರ್ಕಾರ ಪ್ರಮುಖ ಕಾರ್ಯಕ್ರಮಗಳಾದ ಮನೆ ಬಾಗಿಲಿಗೆ ದಾಖಲೆಗಳು ಮುಂತಾದವುಗಳ ಬಗ್ಗೆ ಪರಿಶೀಲಿಸಿ ಎಂದು ಸಲಹೆ ನೀಡಿದರು.

* ಪ್ರಾಧಿಕಾರದ ಅರ್ಜಿಗಳು, ಭೂ ಮಂಜೂರಾತಿ ಪ್ರಕರಣಗಳು, ಪಿಂಚಣಿಗಳು, ಗ್ರಾಮ ಒನ್ ಮುಂತಾದ ಯೋಜನೆಗಳ ಅನುಷ್ಠಾನದ ಬಗ್ಗೆ ಗಮನ ಹರಿಸಿ. ನಿಮ್ಮ ಆಡಳಿತದ ವೈಖರಿ ಬದಲಾಯಿಸಿ, ಜನಪರ ಆಡಳಿತ ನೀಡಿ. ಉತ್ತರದಾಯಿತ್ವ, ಪಾರದರ್ಶಕತೆ ಇರಲಿ.

* ಮುಖ್ಯಮಂತ್ರಿಗಳ ಕಚೇರಿಯಿಂದ ಬಂದ ಕಡತಗಳಿಗೆ ಪ್ರತಿಕ್ರಿಯೆ ನೀಡಬೇಕು. ಬಡಜನರು, ನಿರ್ಗತಿಕರು ಬರುತ್ತಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಬೇಕು. ಜನರ ಪರವಾಗಿ ಕೆಲಸ ಮಾಡಲು ಒಂದು ಕಾರಣವಿದ್ದರೂ ಮಾಡಬೇಕು.

* ಎಲ್ಲಾ ಪ್ರಕರಣಗಳನ್ನು ತಿರಸ್ಕರಿಸಿದರೆ ಪ್ರಾಮಾಣಿಕರು ಎಂದು ಅರ್ಥವಲ್ಲ. ಜನರಿಗೆ ಸಹಾಯ ಮಾಡಿ. ಅದಕ್ಕಾಗಿ ಸ್ವಲ್ವವಾದರೂ ರಿಸ್ಕ್ ತೆಗೆದುಕೊಳ್ಳಬೇಕು. ಆಡಳಿತಕ್ಕೆ ಚುರುಕು ಮುಟ್ಟಿಸಲು ಹಾಗೂ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನವನ್ನು ಕ್ಷಿಪ್ರಗತಿಯಲ್ಲಿ ಕೈಗೊಳ್ಳುಬೇಕು.

* ಮಳೆಗಾಲಕ್ಕೆ ಬೀಜ ಮತ್ತು ರಸಗೊಬ್ಬರಗಳ ಬೇಡಿಕೆ, ದಾಸ್ತಾನುಗಳ ಬಗ್ಗೆ ಪರಿಶೀಲಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳುವುದು. ಎಲ್ಲಿಯೂ ಕೊರತೆ ಕಂಡು ಬಾರದಂತೆ ವ್ಯವಸ್ಥೆ ಮಾಡುವುದು. ಡಿಎಪಿ ಕೊರತೆಯಿದ್ದಲ್ಲಿ ಮುಂಚಿತವಾಗಿಯೇ ಸೂಕ್ತ ಕ್ರಮ ಕೈಗೊಳ್ಳುವುದು.

* ಅಕಾಲಿಕ ಮಳೆಯಿಂದ ಮಾವು ಮುಂತಾದ ಬೆಳೆಗಳಿಗೆ ಹಾನಿ ಆಗಿರುವ ಬಗ್ಗೆ ವರದಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳುವುದು. ಉತ್ತಮ ಮಳೆಯಾಗಿರುವ ಹಿನ್ನೆಲೆ ಕುಡಿಯುವ ನೀರಿಗೆ ತೊಂದರೆ ಇಲ್ಲ. ಬೋರ್‍ವೆಲ್ ಕಂಪನಿಗಳ ಲಾಬಿಯಿಂದ ಬೇಡಿಕೆ ಸೃಷ್ಟಿಯಾಗುತ್ತದೆ. ಹಾಗಾಗಿ ಅಗತ್ಯವಿರುವಲ್ಲಿ ಮಾತ್ರ ಸಿಇಒಗಳ ಬಳಿ ಇರುವ ಅನುದಾನವನ್ನು ಬಳಸಿಕೊಳ್ಳುವುದು.

* ಭೂಮಿ ಯೋಜನೆಯಡಿ ಜಿಲ್ಲೆಗಳ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಿದ ಮುಖ್ಯಮಂತ್ರಿ, ಭೂಮಿ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು. ಈ ಪ್ರಕರಣ ವಿಲೇವಾರಿಯನ್ನು 30 ದಿನಗಳೊಳಗೆ ಮಾಡುವುದು. ಭೂ ಮಂಜೂರಾತಿ, ಭೂ ಪರಿವರ್ತನೆ, ಸರ್ವೆ ಇಲಾಖೆಯಲ್ಲಿ ಅಳತೆಗಾಗಿ ಬಾಕಿ ಇರುವ ಅರ್ಜಿಗಳು, ತಹಶೀಲ್ದಾರರ ಬಳಿ 3 ಮತ್ತು 9 ವಿಸ್ತೀರ್ಣ ವ್ಯತ್ಯಾಸದಿಂದ ತಿದ್ದುಪಡಿಗಾಗಿ ಬಾಕಿ ಇರುವ ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡುವುದು.

* ಎಲ್ಲಾ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಮಂಜೂರು ಮಾಡಲು ಕ್ರಮ ವಹಿಸುವುದು. ಮೂಲಸೌಕರ್ಯ ಯೋಜನೆಗಳಲ್ಲಿ ಭೂ ಸ್ವಾಧೀನಕ್ಕೆ ವೇಗ ನೀಡಿ, ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಆದ್ಯತೆ ನೀಡುವುದು. 72 ಗಂಟೆಗಳಲ್ಲಿ ಅರ್ಜಿ ವಿಲೇವಾರಿಯಾಗುವ ಬಗ್ಗೆ ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ಮಾಡುವುದು.

* ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಜಿನೋಮ್ ಸೀಕ್ವೆನ್ಸಿಂಗ್ ಎಲ್ಲಾ ಪ್ರಕರಣಗಳಿಗೂ ಮಾಡುವ ಅಗತ್ಯವಿಲ್ಲ. 15-18 ವಯೋಮಾನದವರಿಗೆ ಶೇ 100ರಷ್ಟು ಲಸಿಕೆ ಹಾಕುವುದು.

ರಾಜ್ಯದಲ್ಲಿ ಗ್ರಾಮ ಒನ್ ಕೇಂದ್ರಗಳ ಸ್ಥಾಪನೆ ಆದ್ಯತೆ

ರಾಜ್ಯದಲ್ಲಿ ಗ್ರಾಮ ಒನ್ ಕೇಂದ್ರಗಳ ಸ್ಥಾಪನೆ ಆದ್ಯತೆ

* ಗ್ರಾಮ ಒನ್ ಕೇಂದ್ರಗಳ ಸ್ಥಾಪನೆಯ ಸ್ಥಿತಿಗತಿ ವ್ಯವಸ್ಥೆ ಪರಿ ಪೂರ್ಣವಾಗಿರಬೇಕು. ಯೋಜನೆಯನ್ನು ಟಾಸ್ಕ್ ನಂತೆ ಕೈಗೊಳ್ಳಬೇಕು. ಪ್ರಾದೇಶಿಕ ಆಯುಕ್ತರು ಮೇಲ್ವಿಚಾರಣೆ ಮಾಡುವುದು. ಗ್ರಾಮ ಒನ್ ಕೇಂದ್ರಗಳಲ್ಲಿ ಎಷ್ಟು ಅರ್ಜಿಗಳು ಬಂದಿವೆ, ಎಷ್ಟು ಪ್ರಮಾಣಪತ್ರಗಳ ವಿಲೇವಾರಿಯಾಗುತ್ತಿವೆ ಎಂದು ಜಿಲ್ಲಾಧಿಕಾರಿಗಳು ತಿಂಗಳಿಗೊಮ್ಮೆ ಪರಿಶೀಲಿಸುವುದು.

* ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ಹಾಸನ, ಚಾಮರಾಜನಗರ, ರಾಯಚೂರು, ವಿಜಯನಗರ ಜಿಲ್ಲೆಗಳಲ್ಲಿ ಸ್ಥಾಪಿಸಬೇಕಿರುವ ಗ್ರಾಮ ಒನ್ ಕೇಂದ್ರಗಳನ್ನು ತಕ್ಷಣ ಪ್ರಾರಂಭ ಮಾಡಬೇಕು. ಈ ತಿಂಗಳೊಳಗೆ ಅನುಮೋದನೆ ನೀಡಿ ಉದ್ಘಾಟನೆಗೆ ಕ್ರಮ ವಹಿಸುವುದು.

* ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಕಾಲಮಿತಿಯೊಳಗೆ ತಾಲೂಕು ಮಟ್ಟದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರತ್ಯೇಕ ಅಲ್ಪಾವಧಿ ಟೆಂಡರ್ ಕರೆಯುವುದು. ಯಾವುದೇ ಟೆಂಡರ್ ನಲ್ಲಿ ಎಲ್ - 1ಗೆ ಕೊಡಬೇಕು. ಇಲ್ಲದಿದ್ದರೆ ಟೆಂಡರ್ ರದ್ದುಪಡಿಸುವುದು. ಅಮೃತ್ ನಿರ್ಮಲ್ ನಗರ ಯೋಜನೆಯಡಿ ಬಾಕಿ ಇರುವ ಟೆಂಡರ್‍ಗಳನ್ನು ಕರೆಯುವುದು, ಈಗಾಗಲೇ ಟೆಂಡರ್ ಕರೆದಿರುವುದಕ್ಕೆ ಕಾರ್ಯಾದೇಶ ನೀಡುವುದು. ಕಾಲಮಿತಿಯಲ್ಲಿ ಪೂರ್ಣಗೊಳಿಸುವುದು.

* ನಗರ ಪ್ರದೇಶಗಳಲ್ಲಿ ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಡಾ: ಬಿ.ಆರ್.ಅಂಬೇಡ್ಕರ್ ವಿವಾಸ್ ಯೋಜನೆ - ನಗರದಡಿ ಫಲಾನುಭವಿಗಳ ಕನಿಷ್ಠ ಆಯ್ಕೆ ಮಾಡಿರುವ ಜಿಲ್ಲೆಗಳಾದ ಬೆಂಗಳೂರು ನಗರ, ಕಲಬುರಗಿ, ಧಾರವಾಡ, ಹಾಸನ, ವಿಜಯನಗರದಲ್ಲಿ ಮೇ ಅಂತ್ಯದೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುವುದು. ಈ ಬಗ್ಗೆ 15 ದಿನಗಳಲ್ಲಿ ಪ್ರಗತಿ ಕಡಿಮೆ ಇರುವ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸುವುದು.

* ಪ್ರಧಾನಮಂತ್ರಿ ಆವಾಸ್ (ಎಹೆಚ್‍ಪಿ) ಯೋಜನೆಯಡಿ ಫಲಾನುಭವಿಗಳ ವಂತಿಕೆ ಮತ್ತು ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳು ಕೂಡಲೇ ಬ್ಯಾಂಕರ್ ಸಭೆ ಕರೆದು ಕ್ರಮ ವಹಿಸುವುದು. ಬೆಳಗಾವಿ, ಕಲಬುರಗಿ, ಬೆಂಗಳೂರು, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಐದು ಮೆಗಾ ಹಾಸ್ಟಲ್‍ಗಳು ಸ್ಥಾಪಿಸಲು ಕ್ರಮ ಕೈಗೊಳ್ಳುವುದು.

ಆಯವ್ಯಯದಲ್ಲಿನ ಪ್ರಮುಖ ಘೋಷಣೆ

ಆಯವ್ಯಯದಲ್ಲಿನ ಪ್ರಮುಖ ಘೋಷಣೆ

* ಆಯವ್ಯಯದ ಘೋಷಣೆಗಳಲ್ಲಿ ವಿವಿಧ ಯೋಜನೆಗಳಲ್ಲಿ ಜಮೀನಿನ ಅವಶ್ಯಕತೆ ಇದೆ. ಜಮೀನನ್ನು ಆದ್ಯತೆಯ ಮೇಲೆ ಒಂದು ತಿಂಗಳೊಳಗೆ ಗುರುತಿಸಿ.

* ಹಾವೇರಿ ಮೆಗಾ ಡೈರಿಗೆ ಸ್ಥಳ ಗುರುತಿಸಲಾಗಿದ್ದು, ಸ್ಥಳವನ್ನು ಹಸ್ತಾಂತರಿಸುವಂತೆ ಸೂಚಿಸಲಾಗಿದೆ

* ಗೋಶಾಲೆಗಳ ನಿರ್ಮಾಣಕ್ಕೆ 10 ಎಕರೆ ಜಮೀನನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಗುರುತಿಸಲು ಸೂಚನೆ

* 19 ಜಿಲ್ಲೆಗಳಲ್ಲಿರುವ ಅಲೆಮಾರಿಗಳಿಗೆ ವಸತಿ ನಿರ್ಮಿಸಲು ಸ್ಥಳ ಗುರುತಿಸಲು ಸೂಚನೆ

* ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಾರಾಯಣ ಗುರುಗಳ ವಸತಿ ಶಾಲೆಗಳ ನಿರ್ಮಾಣಕ್ಕೆ ಆದ್ಯತೆ ಮೇಲೆ ಜಮೀನು ಗುರುತಿಸುವುದು.

* ವಸತಿ ಶಾಲೆಗಳಿಗೆ ಕಾಲಕಾಲಕ್ಕೆ ಬೇಟಿ ನೀಡಿ ವ್ಯವಸ್ಥೆಗಳ ಗುಣಮಟ್ಟದ ಬಗ್ಗೆ ಪರಿಶೀಲಿಸುವುದು. ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ನೀಡುವ ಸೌಲಭ್ಯಗಳನ್ನು ಪರಿಶೀಲಿಸಬೇಕು.

* ಸಕಾಲ ಯೋಜನೆಯಡಿ ಕಾಲಮಿತಿಯೊಳಗೆ ಅರ್ಜಿಗಳ ವಿಲೇವಾರಿ. ಅರ್ಜಿ ತಿರಸ್ಕರಿಸಿದರೆ ಅದಕ್ಕೆ ಸಕಾರಣವಿರಬೇಕು. 40 ಲಕ್ಷ ಅರ್ಜಿಗಳ ಪೈಕಿ 28 ಲಕ್ಷ ಅರ್ಜಿಗಳು ತಿರಸ್ಕೃತಗೊಂಡಿವೆ. 1.90 ಲಕ್ಷ ಅರ್ಜಿಗಳು ಸಮಯಮೀರಿ ಬಾಕಿ ಉಳಿದುಕೊಂಡಿವೆ.

* ಪ್ರತಿ ಜಿಲ್ಲೆಗೂ ಭೇಟಿ ನೀಡಿ ಪ್ರಗತಿ ಪರಿಶೀಲಿಸುವುದಾಗಿ ತಿಳಿಸಿದರು.

* ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಅಪೌಷ್ಟಿಕತೆ ನಿವಾರಣೆಗೆ ಕ್ರಮ ವಹಿಸುವುದು.

* ಈ ಬಾರಿಯ ಆಯವ್ಯಯದಲ್ಲಿ 7000 ಶಾಲಾ ಕೊಠಡಿಗಳ ನಿರ್ಮಾಣ, ನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಹಾಗೂ 4 ಸಾವಿರ ಅಂಗನವಾಡಿಗಳ ನಿರ್ಮಾಣ ಕಾರ್ಯವನ್ನು ಯುದ್ದೋಪಾದಿಯಲ್ಲಿ ಕೈಗೊಳ್ಳಬೇಕು.

ಸಿಎಂ ಮತ್ತು ಜಿಲ್ಲಾಧಿಕಾರಿ ಸಭೆಯಲ್ಲಿ ಸಚಿವರ ಉಪಸ್ಥಿತಿ

ಸಿಎಂ ಮತ್ತು ಜಿಲ್ಲಾಧಿಕಾರಿ ಸಭೆಯಲ್ಲಿ ಸಚಿವರ ಉಪಸ್ಥಿತಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದ ಸಭೆಯಲ್ಲಿ ಸಚಿವ ಗೋವಿಂದ ಕಾರಜೋಳ, ಆರ್. ಅಶೋಕ್, ಸಿ.ಸಿ.ಪಾಟೀಲ್, ಕೆ.ಸಿ.ನಾರಾಯಣಗೌಡ, ಕೆ.ಗೋಪಾಲಯ್ಯ, ಬಿ.ಸಿ.ನಾಗೇಶ್, ಬಿ.ಸಿ ಪಾಟೀಲ್, ಸುನೀಲ್ ಕುಮಾರ್, ಪ್ರಭು ಚೌಹಾಣ್, ಉಮೇಶ್ ಕತ್ತಿ ಹಾಗೂ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Recommended Video

ಆನಂದ್ ಮಹೀಂದ್ರ ಅವರಿಂದ ಇಡ್ಲಿ ಅಮ್ಮನಿಗೆ ದೊಡ್ಡ ಉಡುಗೊರೆ | Oneindia Kannada

English summary
CM Basavaraj Bommai Meeting with District Level Officers on Budget Announcement Implements: Here Read the Highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X