ಮೊದಲು ಓದಿ: ಕರ್ನಾಟಕದಲ್ಲಿ ಕೊರೊನಾವೈರಸ್ 3ನೇ ಅಲೆ ನಿಯಂತ್ರಣ ಕ್ರಮಗಳು ಹೀಗಿವೆ
ಬೆಂಗಳೂರು, ಜನವರಿ 18: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯನ್ನು ಎದುರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವುದಕ್ಕೆ ಮುಂದಾಗಿದ್ದಾರೆ.
ರಾಜ್ಯದಲ್ಲಿ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳನ್ನು ವರದಿ ಮಾಡುತ್ತಿರುವ 18 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ವರ್ಚುವಲ್ ಸಭೆ ನಡೆಸಿದರು. ಈ ವೇಳೆ ಜಿಲ್ಲೆಯಲ್ಲಿ ಸೋಂಕಿತ ಪ್ರಕರಣಗಳ ನಿಯಂತ್ರಣ ಮತ್ತು ಲಸಿಕೆ ವಿತರಣೆ ವೇಗವನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ವೈದ್ಯರೇ ಎಚ್ಚರಿಕೆ: ಕರ್ನಾಟಕದಲ್ಲಿ ಕೊವಿಡ್-19 ಬಗ್ಗೆ ತಪ್ಪು ಮಾಹಿತಿ ನೀಡಿದ್ರೆ ಕೇಸ್!
ಕೊರೊನಾವೈರಸ್ ಮೂರನೇ ಅಲೆಯ ನಿಯಂತ್ರಣ ಮತ್ತು ನಿರ್ವಹಣೆಗೆ ಸರ್ಕಾರ ಸಜ್ಜುಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳು ಮತ್ತು ಜಿಲ್ಲಾಧಿಕಾರಿಗಳಿಗೆ ನೀಡಿರುವ ಸೂಚನೆ ಜೊತೆ ನಿಯಮಗಳ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

ರಾಜ್ಯದಲ್ಲಿ ನಿಗಾ ಮತ್ತು ಮೇಲ್ವಿಚಾರಣೆ
- ಆಯಾ ವಲಯ ಮತ್ತು ಕೇಂದ್ರ ವಾರ್ ರೂಮ್ಗಳ ಜೊತೆಗೆ ಎಲ್ಲಾ 27 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರೆ ಮಾಡಲು ಸಾಕಷ್ಟು ಸಿಬ್ಬಂದಿಯನ್ನು ಹೊಂದಿರುವ ನಿಯಂತ್ರಣ ಕೊಠಡಿಗಳನ್ನು ಸಕ್ರಿಯಗೊಳಿಸಲಾಗಿದೆ.
- ಎಲ್ಲಾ ಪಾಸಿಟಿವ್ ಪ್ರಕರಣಗಳ ಅಂಕಿ-ಅಂಶಗಳನ್ನು ಸ್ವೀಕರಿಸಲಾಗುತ್ತಿದ್ದು, ಅದನ್ನು 27 ಪ್ರಾಥಮಿಕ ಆರೋಗ್ಯಾಧಿಕಾರಿಗಳ ವ್ಯಾಪ್ತಿಗಳಿಗೆ ಹಂಚಲಾಗುತ್ತದೆ. ಆ ಬಳಿಕ ಸ್ಥಳಕ್ಕೆ ಭೇಟಿ ನೀಡುವುದು, ಐಸೋಲೇಷನ್ ಮೇಲ್ವಿಚಾರಣೆ ಮತ್ತು ಫಿಜಿಕಲ್ ಟ್ರಯಾಜಿಂಗ್ ಮಾಡುವ ಸಲುವಾಗಿ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಂಚಲಾಗುತ್ತದೆ.
- ಪಾಲಿಕೆಯ ಎಂಟೂ ವಲಯಗಳಿಗೆ ಸಂಬಂಧಿಸಿದಂತೆ 35 ಅಧಿಕಾರಿಗಳಿಗೆ ಇಂಡೆಕ್ಸ್(Index) ಅಪ್ಲಿಕೇಶನ್ ಮತ್ತು ರಿಯಲ್ ಟೈಮ್ ರಿವೀವ್ ಪ್ಲಾಟ್ ಫಾರ್ಮ್ ಗೆ ಆಕ್ಸಸ್ ಆಗಲು ತರಬೇತಿ ನೀಡಲಾಗಿದೆ.
- ಪಾಸಿಟಿವ್ ಪ್ರಕರಣಗಳ ಸಂಖ್ಯೆ, ಟ್ರಯಾಜಿಂಗ್, ಹೋಮ್ ಐಸೋಲೇಷನ್ ಮತ್ತು ಆಸ್ಪತ್ರೆಗೆ ದಾಖಲಾಗುವುದರ ಮೇಲೆ ಪ್ರತಿನಿತ್ಯ ಮೇಲ್ವಿಚಾರಣೆ ನಡೆಸುವುದು

ಅವಲೋಕನದಿಂದ ತಿಳಿದು ಬಂದ ಅಂಶ
- ಕಳೆದ ಒಂದು ವಾರದಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆ ಶೇ. 250ರಷ್ಟು ಹೆಚ್ಚಳವಾಗಿದ್ದನ್ನು ಗಮನಿಸಲಾಗಿದೆ. ಇದು ಜಗತ್ತು ಮತ್ತು ದೇಶದ ಇತರೆ ಪ್ರಮುಖ ನಗರಗಳಿಗೆ ಹೋಲಿಸಿದರೆ ಸುಮಾರು 22000ಕ್ಕೆ ಸಮವಾಗಿದೆ.
- ಕೊವಿಡ್-19 ಸೋಂಕು ಪತ್ತೆಯಾದವರಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಒಟ್ಟಾರೆ ಸಕ್ರಿಯ ಪ್ರಕರಣಗಳ ಪೈಕಿ ಶೇಕಡಾ 1.3ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಈ ಪೈಕಿ ಶೇಕಡಾ 0.5 ಕ್ಕಿಂತ ಕಡಿಮೆ ಜನರು ತುರ್ತು ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
- ಕೊವಿಡ್-19 ಸಕ್ರಿಯ ಪ್ರಕರಣಗಳಲ್ಲಿ ಶೇ.10ರಷ್ಟು ಮಂದಿ 0-18 ವರ್ಷ ವಯಸ್ಸಿನವರಾಗಿದ್ದು, ಮಕ್ಕಳ ಸಂಖ್ಯೆಯಲ್ಲಿ ಯಾವುದೇ ರೀತಿ ಏರಿಕೆ ಕಂಡು ಬಂದಿಲ್ಲ
- ದೈನಂದಿನ ಕೊವಿಡ್-19 ಪರೀಕ್ಷೆ ಪ್ರಮಾಣವನ್ನು 60,000 ದಿಂದ 1.1 ಲಕ್ಷಕ್ಕೆ ಹೆಚ್ಚಿಸಲಾಗಿದೆ.
- ಜನವರಿ 17ರ ಅಂಕಿ-ಅಂಶಗಳ ಪ್ರಕಾರ, 627 ಸಕ್ರಿಯ ಕಂಟೈನ್ಮೆಂಟ್ ವಲಯಗಳಿದ್ದು, 385 ಅಪಾರ್ಟ್ಮೆಂಟ್ಗಳಲ್ಲಿದೆ. 214 ವೈಯಕ್ತಿಕ ಮನೆಗಳು, 5 ಶಾಲೆಗಳು/ಕಾಲೇಜುಗಳು, 23 ಹಾಸ್ಟೆಲ್ಗಳು/ಪಿಜಿಗಳು/ಇತರೆಯಾಗಿವೆ.

ಟ್ರಯಾಜಿಂಗ್ ವ್ಯವಸ್ಥೆ ಹೇಗಿರಲಿದೆ?
- ವಿಧಾನಸಭಾ ಕ್ಷೇತ್ರದ ನಿಯಂತ್ರಣ ಕೊಠಡಿಗಳಿಂದ 24 ಗಂಟೆಗಳ ಒಳಗಾಗಿ ಶೇ.100 ರಷ್ಟು ಟೆಲಿ-ಟ್ರಯಾಜಿಂಗ್ ಮಾಡಲಾಗುತ್ತಿದೆ.
- ಅಗತ್ಯವಿರುವ ರೋಗಿಗಳ ಮನೆ ಬಾಗಿಲಿಗೆ ಹೋಗಿ ಟ್ರಯಾಜ್ ಮಾಡಲು 300ಕ್ಕೂ ಹೆಚ್ಚು ಮೊಬೈಲ್ ಟ್ರಯಾಜ್ ಯುನಿಟ್ಸ್(MTUs)ಗಳನ್ನು ನಿಯೋಜಿಸಲಾಗಿದೆ.
- ಪ್ರತಿನಿತ್ಯ ಸರಾಸರಿ 3,000 ರೋಗಿಗಳು ಫಿಜಿಕಲ್ ಟ್ರಯಾಜ್ಗೆ ಒಳಗಾಗುತ್ತಾರೆ.
- ವೈದ್ಯಕೀಯ ತಪಾಸಣೆ ಬಯಸುವ ರೋಗಿಗಳಿಗೆ ವಾಕ್-ಇನ್ ಸೌಲಭ್ಯದೊಂದಿಗೆ ಫಿಜಿಕಲ್ ಟ್ರಯಾಜ್ ಸೆಂಟರ್(PTC's)ಗಳನ್ನು ಸ್ಥಾಪಿಸಲಾಗಿದೆ.
- ಟ್ರಯಾಜ್ ಮತ್ತು ವೈದ್ಯಕೀಯ ಮೌಲ್ಯಮಾಪನ ಬಯಸಿ ಬರುವ ರೋಗಿಗಳಿಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪಾಲಿಕೆಯ ಆಸ್ಪತ್ರೆಗಳು ಮತ್ತು ಕೊವಿಡ್ ಆರೈಕೆ ಕೇಂದ್ರಗಳಿಂದ ಕೂಡಾ ನೆರವು ನೀಡಲಾಗುವುದು.

ಕೊವಿಡ್-19 ಕೇಂದ್ರಗಳಲ್ಲಿ ಹಾಸಿಗೆ ಹಂಚಿಕೆ
- ಕೊವಿಡ್-19 ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಆಸ್ಪತ್ರೆಗಳು ಮತ್ತು ಹಾಸಿಗೆಗಳನ್ನು ಬಿಬಿಎಂಪಿ ನೇರವಾಗಿ ನಿರ್ವಹಿಸುವುದಿಲ್ಲ. ರಾಜ್ಯ ಸರ್ಕಾರದ ಪರವಾಗಿ ಆಸ್ಪತ್ರೆ ಹಾಸಿಗೆಗಳ ನೋಂದಣಿ, ಮತ್ತು ಕೊವಿಡ್ ರೋಗಿಗಳಿಗೆ ಹಾಸಿಗೆ ಹಂಚಿಕೆಯನ್ನು ಬಿಬಿಎಂಪಿಯಲ್ಲಿ ಸಿ.ಎಚ್.ಬಿ.ಎಮ್.ಎಸ್ ಮೂಲಕ ಮಾಡಲಾಗುತ್ತದೆ. ಮಂಜೂರು ಮಾಡಲಾದ ಈ ಹಾಸಿಗೆ ವೆಚ್ಚವನ್ನು ರಾಜ್ಯ ಸರ್ಕಾರ ಎಸ್.ಎ.ಎಸ್.ಟಿ (ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್) ಮೂಲಕ ಭರಿಸುತ್ತದೆ.
- ಖಾಸಗಿ ಸಂಸ್ಥೆಗಳು ಸಿ.ಎಚ್.ಬಿ.ಎಮ್.ಎಸ್ ಅಡಿಯಲ್ಲಿ ನಿರ್ಧಿಷ್ಟ ಸಂಖ್ಯೆ ಹಾಸಿಗೆಗಳನ್ನು ಮಾತ್ರ ನೀಡುತ್ತವೆ. ಉಳಿದ ಹಾಸಿಗೆಗಳನ್ನು ಸರ್ಕಾರ, ಬಿಬಿಎಂಪಿ ಮತ್ತು ಸಿಎಚ್ಬಿಎಂಎಸ್ಗೆ ಯಾವುದೇ ಶಿಪಾರಸ್ಸು ಇಲ್ಲದೆ ನೇರವಾಗಿ ಬುಕ್ ಮಾಡುತ್ತವೆ.
- ಸದ್ಯ ಬಿಬಿಎಂಪಿಯು ಒಟ್ಟು 28,067 ಹಾಸಿಗೆಗಳನ್ನು ಗುರುತಿಸಿದೆ. ಈ ಪೈಕಿ ಸರ್ಕಾರಿ ಆಸ್ಪತ್ರೆಗಳ ಅಡಿಯಲ್ಲಿ 3,237 ಹಾಸಿಗೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಅಡಿಯಲ್ಲಿ 2,696 ಹಾಸಿಗೆಗಳು, ಖಾಸಗಿ ಆಸ್ಪತ್ರೆಗಳ ಅಡಿಯಲ್ಲಿ 13,540 ಹಾಸಿಗೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಅಡಿಯಲ್ಲಿ 8,594 ಹಾಸಿಗೆಗಳು ಸೇರಿವೆ.
- ಈ ಕೊವಿಡ್-19 ರೋಗಿಗಳ ಹಾಸಿಗೆಗಳಲ್ಲಿ ಈಗ 6,704 ಹಾಸಿಗೆಗಳು ಸಿ.ಎಚ್.ಬಿ.ಎಮ್.ಎಸ್ ಅಡಿಯಲ್ಲಿ ಹಂಚಿಕೆಗಾಗಿ ಲಭ್ಯವಿದ್ದು, 637 ಹಾಸಿಗೆಗಳು ಸಿ.ಎಚ್.ಬಿ.ಎಮ್.ಎಸ್ (ಸರ್ಕಾರಿ ಕೋಟಾ) ನಿಂದ ಹಂಚಿಕೆಯಾಗಿವೆ.
- ಬೆಡ್ ಬ್ಲಾಕಿಂಗ್ ಅನ್ನು ವಿಕೇಂದ್ರೀಕರಿಸಲಾಗಿದ್ದು, ಎಲ್ಲಾ ಪ್ರಾಥಮಿಕ ಆರೋಗ್ಯಾಧಿಕಾರಿ ವ್ಯಾಪ್ತಿಗಳಲ್ಲಿ 27 ವೈದ್ಯರಿಗೆ ಲಾಗಿನ್ ವ್ಯವಸ್ಥೆ ಕಲ್ಪಿಸಲಾಗಿದೆ.
- ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಶುಲ್ಕಗಳು ಮತ್ತು ಇತರೆ ಶುಲ್ಕಗಳು ಸಹ ಸರ್ಕಾರದಿಂದ ನಿಯಂತ್ರಿಸಲ್ಪಡುತ್ತವೆ. ಜನರಲ್ ವಾರ್ಡ್ ದಿನಕ್ಕೆ 10,000, ಹೆಚ್.ಡಿ.ಯು ವಾರ್ಡ್ ದಿನಕ್ಕೆ 12,000, ಐ.ಸಿ.ಯು ವಾರ್ಡ್ ದಿನಕ್ಕೆ 15,000 ಮತ್ತು ಐ.ಸಿ.ಯು-ವೆಂಟಿಲೇಟರ್ ವಾರ್ಡ್ ದಿನಕ್ಕೆ 25,000
- ಖಾಸಗಿ ಆಸ್ಪತ್ರೆಯಲ್ಲಿ ಬಿಲ್ಲಿಂಗ್ ಬಗ್ಗೆ ಕುಂದುಕೊರತೆಗಳಿದ್ದಲ್ಲಿ ಸಾರ್ವಜನಿಕರು +917022356802 ಅಥವಾ 1800 425 8330 ಗೆ ಸಂಪರ್ಕಿಸಬಹುದು.

ರಾಜ್ಯದಲ್ಲಿ ಕೊವಿಡ್-19 ಕೇರ್ ಸೆಂಟರ್ ಹೇಗಿರಲಿದೆ?
- ಶೇಕಡಾ 95ಕ್ಕಿಂತ ಹೆಚ್ಚು ಕೊವಿಡ್-19 ಪೀಡಿತ ಜನರು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಹೆಚ್ಚಿನ ಕೊವಿಡ್ ಪಾಸಿಟಿವ್ ಪ್ರಕರಣಗಳು ಹೋಮ್ ಐಸೋಲೇಷನ್ ಮೂಲಕ ಮನೆಯಲ್ಲಿ ಚೇತರಿಸಿಕೊಳ್ಳಬಹುದು.
- ಹೋಮ್ ಐಸೋಲೇಶನ್ನಲ್ಲಿರುವ ರೋಗಿಗಳಿಗೆ ಟೆಲಿ-ಕಾಲಿಂಗ್ ಮೂಲಕ ಮತ್ತು ವಾರ್ಡ್ ಮಟ್ಟದಲ್ಲಿ ಬಿಬಿಎಂಪಿ ಆರೋಗ್ಯ ತಂಡಗಳು ಕ್ಷೇತ್ರಗಳಿಗೆ ಭೇಟಿ ಮಾಡುವ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ.
- ತೀರಾ ಅಗತ್ಯವಿದ್ದಲ್ಲಿ, ಬಿಬಿಎಂಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮನೆಯಲ್ಲಿ ಪ್ರತ್ಯೇಕವಾಗಿರುವ ರೋಗಿಗಳಿಗೆ ಔಷಧಿಗಳು ಮತ್ತು ಹೋಮ್ ಐಸೋಲೇಶನ್ ಕಿಟ್ಗಳನ್ನು ಒದಗಿಸುತ್ತವೆ.
- ಇಲ್ಲಿಯವರೆಗೆ ಸುಮಾರು 55 ಸಾವಿರ ಹೋಮ್ ಐಸೋಲೇಶನ್ ಕಿಟ್ಗಳನ್ನು ವಿತರಿಸಲಾಗಿದೆ ಮತ್ತು 90 ಸಾವಿರಕ್ಕಿಂತ ಹೆಚ್ಚು ಕಿಟ್ಗಳು ಲಭ್ಯವಿದೆ.
- ಮನೆಯಲ್ಲಿ ಪ್ರತ್ಯೇಕವಾಗಿರಲು ಸಾಧ್ಯವಾಗದ ರೋಗಿಗಳನ್ನು ಸ್ಥಳಾಂತರಿಸಲು ಬಿಬಿಎಂಪಿಯು ಕೊವಿಡ್-19 ಆರೈಕೆ ಕೇಂದ್ರಗಳನ್ನು(ಸಿಸಿಸಿ) ತೆರೆದಿದೆ. 17 ಕೋವಿಡ್ ಆರೈಕೆ ಕೇಂದ್ರಗಳು (ಸಿಸಿಸಿ) 1387 ಹಾಸಿಗೆಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. 911 ಸಾಮಾನ್ಯ ಹಾಸಿಗೆಗಳು ಮತ್ತು 576 ಆಮ್ಲಜನಕ ಹಾಸಿಗೆಗಳ ಜೊತೆಗೆ ಹೆಚ್ಚುವರಿ 10 ಕೋವಿಡ್ ಆರೈಕೆ ಕೇಂದ್ರಗಳು ಅಗತ್ಯವಿದ್ದಾಗ ಕಾರ್ಯನಿರ್ವಹಿಸಲು ಸಿದ್ಧವಾಗಿದೆ. ಕೊವಿಡ್ ಆರೈಕೆ ಕೇಂದ್ರಗಳ ಹಾಸಿಗೆಗಳನ್ನು ಸಿ.ಎಚ್.ಬಿ.ಎಮ್.ಎಸ್ ಮೂಲಕವೂ ಬುಕ್ ಮಾಡಬಹುದು.
- ಕೊವಿಡ್ ಆರೈಕೆ ಕೇಂದ್ರಗಳು ವಾಕ್-ಇನ್ ಪ್ರಕರಣಗಳನ್ನು ಫಿಜಿಕಲ್ ಟ್ರಯಾಜ್ ಮಾಡಲು ಸೌಲಭ್ಯಗಳನ್ನು ಹೊಂದಿದ್ದು, ಅದಕ್ಕೆ ಅನುಗುಣವಾಗಿ ಆಸ್ಪತ್ರೆಗೆ ದಾಖಲಾಗುವುದು ಅಥವಾ ಹೋಮ್ ಐಸೋಲೇಷನ್ ಅನ್ನು ಶಿಫಾರಸ್ಸು ಮಾಡಲಾಗುತ್ತದೆ.

ಕೊರೊನಾವೈರಸ್ ಸಹಾಯವಾಣಿ ಹೀಗಿದೆ
- ಟೋಲ್ ಫ್ರೀ ಸಂಖ್ಯೆ 1533 ಅನ್ನು 24/7 ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ.
- ಈ ಕೇಂದ್ರ ಸಹಾಯವಾಣಿಯ ಜೊತೆಗೆ 8 ವಲಯವಾರು ಸಹಾಯವಾಣಿ ಸಂಖ್ಯೆಗಳನ್ನು ತೆರೆಯಲಾಗಿದ್ದು, ಇವು 24/7 ಕಾರ್ಯನಿರ್ವಹಿಸುತ್ತದೆ
- ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಮತ್ತು ಪ್ರಾಥಮಿಕ ಆರೋಗ್ಯಾಧಿಕಾರಿ ವ್ಯಾಪ್ತಿಯಲ್ಲಿ ನಿಯಂತ್ರಣ ಕೊಠಡಿ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದ್ದು, 24/7 ಕಾರ್ಯ ನಿರ್ವಹಿಸುತ್ತವೆ.

ಮಾಹಿತಿ, ಶಿಕ್ಷಣ ಮತ್ತು ಸಂವಹನದ ಬಗ್ಗೆ ಸಲಹೆಗಳು
- ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು/ಅಪಾರ್ಟ್ಮೆಂಟ್ ಅಸೋಸಿಯೇಷನ್ಗಳಿಗೆ ಮಾರ್ಗಸೂಚಿ ಪರಿಷ್ಕರಿಸಲಾಗಿದೆ
- ನಗರದಲ್ಲಿ ಕೊವಿಡ್ ಸ್ಥಿತಿಯ ಕುರಿತು ದೈನಂದಿನ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಪತ್ರಿಕಾಗೋಷ್ಠಿಯ ಮೂಲಕ ಪ್ರಕಟಿಸಲಾಗುತ್ತದೆ (ಕೊವಿಡ್ ಕುರಿತು ಎಲ್ಲಾ ಇತ್ತೀಚಿನ ಮಾಹಿತಿಯನ್ನು ಬಿಬಿಎಂಪಿ ಕೋವಿಡ್ ವೆಬ್ಸೈಟ್ https://apps.bbmpgov.in/covid19/ ನಲ್ಲಿ ಪಡೆಯಬಹುದಾಗಿದೆ.)
- ಬೆಂಗಳೂರಿನಲ್ಲಿ ಕೊವಿಡ್-19ಗಾಗಿ ಹ್ಯಾಂಡ್ಬುಕ್ ಬಿಡುಗಡೆ ಮಾಡಲಾಗುತ್ತದೆ
- ಎಲ್ಲಾ ವಲಯಗಳ ಮತ್ತು ವಿಧಾನಸಭಾ ಕ್ಷೇತ್ರದ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆಗಳ ಪಟ್ಟಿ ಮಾಡಲಾಗಿದೆ
- ಪರಿಣಾಮಕಾರಿ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಪಿಜಿ ಮತ್ತು ಹಾಸ್ಟೆಲ್ಗಳಲ್ಲಿ ಹೆಚ್ಚಿನ ಜಾಗರೂಕತೆ ಮತ್ತು ತಪಾಸಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ನೀಡಲಾಗಿದೆ
- ಆಸ್ಪತ್ರೆಯ ದಾಖಲಾತಿ ಅಗತ್ಯವಿರುವ ಎಲ್ಲಾ ರೋಗಿಗಳ ಪರಿಣಾಮಕಾರಿ ಟ್ರಯಾಜ್ ಕುರಿತು ಸುತ್ತೋಲೆ ಹೊರಡಿಸಲಾಗಿದೆ