Breaking: ಕರ್ನಾಟಕದಲ್ಲಿ ವಾರಾಂತ್ಯ ಕರ್ಫ್ಯೂ ರದ್ದು
ಬೆಂಗಳೂರು, ಜನವರಿ 21: ಕರ್ನಾಟಕದಲ್ಲಿ ಪ್ರಸ್ತುತ ಇರುವ ಕೊರೊನಾ ಮಾರ್ಗಸೂಚಿಗಳಲ್ಲಿ ಬದಲಾವಣೆ ಹಾಗೂ ಇತರ ನಿರ್ಧಾರಗಳ ಕುರಿತು ಇಂದು (ಶುಕ್ರವಾರ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆದಿದೆ.
ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ತಜ್ಞರು, ಅಧಿಕಾರಿಗಳು ಹಾಗೂ ಸಚಿವರು ಭಾಗಿಯಾಗಿದ್ದರು. ಸಭೆಯಲ್ಲಿ ವಾರಾಂತ್ಯ ಕರ್ಫ್ಯೂ ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಘೋಷಣೆ ಮಾಡಿದರು. ಸಿಎಂ ಜೊತೆಗಿನ ಸಭೆ ನಂತರ ಅಧಿಕೃತ ಘೋಷಣೆ ಮಾಡಿದ್ದು, ಇದೇ ವೇಳೆ ಸಭೆ- ಸಮಾರಂಭಗಳಿಗೆ ಇರುವ ನಿಯಮ ಹಳೆಯ ನಿಯಮವೇ ಮುಂದುವರಿಕೆಯಾಗಲಿದೆ.
ವೀಕೆಂಡ್ ಕರ್ಫ್ಯೂ ತೆರವುಗೊಳಿಸಿ ಕಠಿಣ ನಿಯಮ ಜಾರಿಗೊಳಿಸಲಾಗುವುದು. ಬೆಂಗಳೂರಿಗೆ ಆಗಮಿಸುವ ವಿದೇಶಿಯರ ಮೇಲೆಯೂ ತೀವ್ರ ನಿಗಾ ಇರಿಸಲಾಗುವುದು. ಲಸಿಕೆ ಪ್ರಮಾಣವನ್ನು ಇನ್ನಷ್ಟು ತೀವ್ರಗೊಳಿಸಬೇಕು ಎಂಬ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಹೊಸ ಮಾರ್ಗದರ್ಶಿ ಸೂತ್ರಗಳನ್ನು ಸರ್ಕಾರ ಶೀಘ್ರ ಬಿಡುಗಡೆ ಮಾಡಲಿದೆ.
ಸಚಿವ ಆರ್. ಅಶೋಕ್ ತಿಳಿಸಿದ ಇತರ ವಿಷಯಗಳು
ಕರ್ನಾಟಕದಲ್ಲಿ ನಾಳೆಯಿಂದಲೇ (ಜ.21) ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ರದ್ದಾಗಿದೆ. ಯಾವುದೇ ಶಾಸಕರು ಅಥವಾ ಸಚಿವರ ಒತ್ತಡಕ್ಕೆ ಮಣಿದು ಕರ್ಫ್ಯೂ ರದ್ದುಪಡಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ. ತಜ್ಞರ ಅಭಿಪ್ರಾಯದಂತೆ ವೀಕೆಂಡ್ ಕರ್ಫ್ಯೂ ರದ್ದುಪಡಿಸಲಾಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದರು.
ರಾಜ್ಯದಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 7ರವರೆಗೆ ರಾತ್ರಿ ಕರ್ಫ್ಯೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚಾದರೆ ವೀಕೆಂಡ್ ಕರ್ಫ್ಯೂ ಜಾರಿಮಾಡುವುದು ಅನಿವಾರ್ಯವಾಗುತ್ತದೆ. ವೀಕೆಂಡ್ ಕರ್ಫ್ಯೂ ಹೊರತುಪಡಿಸಿ ಉಳಿದೆಲ್ಲ ಕೊವಿಡ್ ನಿಯಮಗಳು ಎಂದಿನಂತೆ ಮುಂದುವರಿಯಲಿವೆ ಎಂದರು.
ಆಸ್ಪತ್ರೆಗೆ ಸೇರುವವರ ಸಂಖ್ಯೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದರಿಂದ ವೀಕೆಂಡ್ ಕರ್ಫ್ಯೂ ರದ್ದುಪಡಿಸಲಾಗಿದೆ. ಕೊರೊನಾ 3ನೇ ಅಲೆಯಲ್ಲಿ ಆಸ್ಪತ್ರೆಗೆ ಸೇರುವವರ ಸಂಖ್ಯೆ ಶೇ.5ರಷ್ಟು ಮಾತ್ರ ಇದೆ. ಎಲ್ಲ ತಜ್ಞರ ಒಟ್ಟು ಅಭಿಪ್ರಾಯ ಪಡೆದೇ ನಿಯಮಗಳನ್ನು ರೂಪಿಸಲಲಾಗಿದೆ. ವೀಕೆಂಡ್ ಕರ್ಫ್ಯೂ ರದ್ದು ಪಡಿಸುವಾಗಲೂ ಅವರ ಅಭಿಪ್ರಾಯಗಳನ್ನು ಪಡೆದುಕೊಳ್ಳಲಾಗಿದೆ. ಪಾರ್ಟಿ, ಬಾರ್‌ಗಳಲ್ಲಿ ಚಟುವಟಿಕೆ ನಿಯಂತ್ರಿಸುವ ಉದ್ದೇಶದಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಗೃಹ ಸಚಿವ ಆರಗ ಜ್ಞಾನೇಂದ್ರ, ಕಂದಾಯ ಸಚಿವ ಆರ್. ಅಶೋಕ್, ಗೋವಿಂದ್ ಕಾರಜೋಳ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಭಾಗಿಯಾಗಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ಓರ್ವ ಪ್ರತಿನಿಧಿ, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕರ್ಫ್ಯೂಗೆ ವಿರೋಧ ವ್ಯಕ್ತ
ಈ ಹಿಂದೆ ವಾರಾಂತ್ಯಗೆ ಹಲವು ಶಾಸಕರು, ಸಚಿವರು ಹಾಗೂ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಈ ಸಲಹೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ತೆರವಿಗೆ ತಜ್ಞರು ಕೂಡಾ ಶಿಫಾರಸು ಮಾಡಿದ್ದರು, ಅದನ್ನು ಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿಕೊಂಡಿದ್ದಾರೆ.
ಕೋವಿಡ್ ಕಡಿಮೆ ಇರುವ ಜಿಲ್ಲೆಗಳಲ್ಲಿ 50:50 ನಿಯಮ ಮಾಡಿ. ಕೋವಿಡ್ ಹೆಚ್ಚಿರುವ ಕಡೆ ನಿರ್ಬಂಧ ಅಗತ್ಯವಿದೆ ಎಂದು ಸಮಿತಿ ಸದಸ್ಯರು ತಿಳಿಸಿದ್ದರು. ಬೆಂಗಳೂರು ನಗರದಲ್ಲಿ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಿದೆ. ಅಲ್ಲಿ ಕಟ್ಟೆಚ್ಚರ ಅಗತ್ಯ ಎಂದು ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್‌ರಿಂದ ಸಭೆಯಲ್ಲಿ ವರದಿಯನ್ನು ಸಲ್ಲಿಸಲಾಗಿತ್ತು.
ಇನ್ನು ರಾಜ್ಯದಲ್ಲಿ ರಾತ್ರಿ ಕರ್ಫ್ಯೂವನ್ನು ಮುಂದುವರೆಸಲಾಗಿದ್ದು, ಬಾರ್, ಪಬ್‌ಗಳಲ್ಲಿ ಕಾರ್ಯ ಚಟುವಟಿಕೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಸಚಿವರ ಸಲಹೆ ಏನು?
ವಾರಾಂತ್ಯ ಕರ್ಫ್ಯೂ ಮಾಡದಿರಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ವೀಕೆಂಡ್ ಕರ್ಫ್ಯೂ ತೆರವು ಮಾಡುವಂತೆ ಸಚಿವರಿಂದ ಸಲಹೆ ನೀಡಲಾಯಿತು. ಸಚಿವರ ಸಲಹೆಗೆ ಸಿಎಂ ಬೊಮ್ಮಾಯಿರಿಂದ ಸಹಮತ ವ್ಯಕ್ತಪಡಿಸಿದ್ದಾರೆ. ಯುರೋಪ್ ರಾಷ್ಟ್ರಗಳಲ್ಲಿ ಯಾವುದೇ ನಿರ್ಬಂಧಗಳು ಇಲ್ಲ.
ಕೋವಿಡ್ 3ನೇ ಅಲೆ ವ್ಯಾಪಕವಾಗಿ ಹರಡಿದರೂ ತೀವ್ರತೆ ಕಡಿಮೆ ಇದೆ. ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳೋಣ. ಒಂದು ವೇಳೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದರೆ ಆಗ ಬೇಕಾದರೆ ಬಿಗಿ ಕ್ರಮ ಮುಂದುವರಿಸೋಣ ಎಂದು ಹಲವು ಸಚಿವರು ಸಲಹೆ ನೀಡಿದ್ದರು.