ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ರಾಜಾ ಮದಕರಿ ನಾಯಕ ಸಂದರ್ಶನ

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 3: ತ.ರಾ. ಸುಬ್ಬರಾಯರ ಪ್ರಖ್ಯಾತ 'ದುರ್ಗಾಸ್ತಮಾನ' ಕಾದಂಬರಿ ಓದಿದವರಿಗೆ ಚಿತ್ರದುರ್ಗದ ಕಲ್ಲಿನ ಕೋಟೆ, ರಾಜಾ ಮದಕರಿ ನಾಯಕನ ಧೀರೋದಾತ್ತ ಹೋರಾಟದ ಚಿತ್ರಗಳು ಕಣ್ಮುಂದೆ ಬರದೇ ಇರದು. ಇದೀಗ ಅದೇ ಮದಕರಿ ನಾಯಕನ ವಂಶಕ್ಕೆ ಸೇರಿದ ರಾಜಾ ಮದಕರಿ ನಾಯಕ ಅವರು ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ.

ವಿಶೇಷವೆಂದರೆ ಚಿತ್ರದುರ್ಗದ ಮದಕರಿ ನಾಯಕನ ವಂಶಸ್ಥರು ಚುನಾವಣಾ ಕಣಕ್ಕಿಳಿಯುತ್ತಿರುವ ಮೊದಲ ದೃಷ್ಟಾಂತ ಇದು. ಹಲವು ಕನಸುಗಳನ್ನು ಇಟ್ಟುಕೊಂಡು ರಾಜಾ ಮದಕರಿ ನಾಯಕರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. 'ಕನ್ನಡ ಪಕ್ಷ'ದಿಂದ ಕಣಕ್ಕಿಳಿಯುತ್ತಿರುವ ಅವರು ಗೆಲುವಿನ ಕನಸು ಕಾಣುತ್ತಿದ್ದಾರೆ.

ಸಂದರ್ಶನ : ಕೆ.ಜೆ.ಜಾರ್ಜ್ ವಿರುದ್ಧ ಸ್ಪರ್ಧಿಸುವುದು ದೊಡ್ಡ ಸವಾಲು ಅಲ್ಲ!ಸಂದರ್ಶನ : ಕೆ.ಜೆ.ಜಾರ್ಜ್ ವಿರುದ್ಧ ಸ್ಪರ್ಧಿಸುವುದು ದೊಡ್ಡ ಸವಾಲು ಅಲ್ಲ!

ತಮ್ಮ ವಂಶಸ್ಥರು, ಚುನಾವಣೆಗೆ ಸ್ಪರ್ಧಿಸುತ್ತಿರುವ ಕಾರಣ, ಗೆಲುವಿನ ತಮ್ಮ ಲೆಕ್ಕಾಚಾರಗಳನ್ನು 'ಒನ್ಇಂಡಿಯಾ ಕನ್ನಡ'ದ ಜತೆ ರಾಜಾ ಮದಕರಿ ನಾಯಕರು ಹಂಚಿಕೊಂಡಿದ್ದಾರೆ.

ನೀವು ರಾಜಾ ಮದಕರಿ ನಾಯಕರ ಎಷ್ಟನೇ ವಂಶಸ್ಥರು?

ನೀವು ರಾಜಾ ಮದಕರಿ ನಾಯಕರ ಎಷ್ಟನೇ ವಂಶಸ್ಥರು?

ನಾವು ನೇರವಾಗಿ ರಾಜ ಮದಕರಿ ನಾಯಕರ ವಂಶಸ್ಥರು. ನಮ್ಮದು ಈಗ ನಾಲ್ಕು ಕುಟುಂಬಗಳು ಇಲ್ಲಿವೆ. ನಮ್ಮದು ರಾಜ ಮದಕರಿ ನಾಯಕರ 7ನೇ ತಲೆಮಾರು. ಅದರಲ್ಲಿ ಹಿರಿಯವ ನಾನು. .

ನಿಮ್ಮ ಹಿನ್ನಲೆ ಬಗ್ಗೆ ಹೇಳುವುದಾದರೆ?

ನಿಮ್ಮ ಹಿನ್ನಲೆ ಬಗ್ಗೆ ಹೇಳುವುದಾದರೆ?

ನಾನು ಸ್ವಲ್ಪ ಮಟ್ಟಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೆ. ಕಾಂಗ್ರೆಸ್ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿದ್ದೆ. ಮುಂದೆ ಬದಲಾವಣೆಗಾಗಿ ನಾನು ಪಕ್ಷ ತೊರೆದೆ. ನಂತರ ಬಿಜೆಪಿಯಲ್ಲೂ ಜಿಲ್ಲಾ ಎಸ್.ಟಿ ಮೋರ್ಚಾ ಉಪಾಧ್ಯಕ್ಷನಾಗಿದ್ದೆ. ಕಳೆದ ಎರಡು ವರ್ಷಗಳಿಂದ ಎಲ್ಲಾ ಪಕ್ಷಗಳಿಂದ ನಾನು ದೂರವಿದ್ದೆ. ಈಗ ಚಿತ್ರದುರ್ಗ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದೇನೆ.

ರಾಜಕೀಯಕ್ಕೆ ಯಾಕೆ ಬಂದ್ರಿ?

ರಾಜಕೀಯಕ್ಕೆ ಯಾಕೆ ಬಂದ್ರಿ?

ರಾಜ ಮದಕರಿ ನಾಯಕರ ಬಗ್ಗೆ ಎಲ್ಲರೂ ತಿರುಚಿ, ತಪ್ಪು ತಪ್ಪು ಮಾಹಿತಿಗಳನ್ನು ಬರೆಯುತ್ತಿದ್ದರು. ನಾನು ಇದರ ಬಗ್ಗೆ ಸ್ಪಷ್ಟ ವಿವರಣೆಗಳನ್ನು ನೀಡಲು ಆರಂಭಿಸಿದೆ. ಇನ್ನೊಂದು ಕಡೆ, ಹೈದರಾಲಿ ಚಿತ್ರದುರ್ಗವನ್ನು ವಶಪಡಿಸಿಕೊಂಡು ಮದಕರಿ ನಾಯಕನನ್ನು ಶ್ರೀರಂಗಪಟ್ಟಣಕ್ಕೆ ಕರೆದೊಯ್ದು 2 ವರ್ಷ ಕತ್ತಲೆಯಲ್ಲಿಟ್ಟು ಸಾಯಿಸಲಾಗುತ್ತದೆ. ಆಮೇಲೆ ಆತನಿಗೆ ಸರಿಯಾಗಿ ಅಂತ್ಯಸಂಸ್ಕಾರ ಮಾಡಲಿಲ್ಲ. ದಾನಾದಿ ಕರ್ಮಗಳನ್ನು ಮಾಡಲಿಲ್ಲ. ಹೀಗಾಗಿ ನಿಮಗೆ ದೋಷ ಇದೆ ಎಂದು ಜೋಯಿಸರು ಹೇಳುತ್ತಿದ್ದರು.

ಈ ಹಿನ್ನಲೆಯಲ್ಲಿ 2017ರ ಮೇ 15 ನಲ್ಲಿ ನಾಯಕ ಜನಾಂಗದವರು, ಅಭಿಮಾನಿಗಳು, ನಮ್ಮ ಕುಟುಂಬಸ್ಥರು ಶ್ರೀರಂಗಪಟ್ಟಣಕ್ಕೆ ಹೋಗಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದೆವು. ಆ ಮೇಲಿಂದ ನೀವು ರಾಜಕೀಯಕ್ಕೆ ಬರಬೇಕು, ನಾಯಕ ಜನಾಂಗದ ಅಭಿವೃದ್ಧಿ ಮಾಡಬೇಕು ಎಂಬ ಜನರ ಒತ್ತಾಯ ಹೆಚ್ಚಾಯಿತು. ಅಲ್ಲಿಂದ ಈ ರಾಜಕೀಯ ಆರಂಭವಾಯಿತು.

ಚಿತ್ರದುರ್ಗದಲ್ಲಿ ನಾಯಕ ಜನಾಂಗದವರ ಬಲಾಬಲ ಹೇಗಿದೆ?

ಚಿತ್ರದುರ್ಗದಲ್ಲಿ ನಾಯಕ ಜನಾಂಗದವರ ಬಲಾಬಲ ಹೇಗಿದೆ?

ಒಟ್ಟು 2.30 ರಿಂದ 2.40 ಲಕ್ಷ ಮತದಾರರು ಇಲ್ಲಿದ್ದಾರೆ. ಇವರಲ್ಲಿ ಸುಮಾರು 24-25 ಸಾವಿರ ನಾಯಕ ಜನಾಂಗದ ಮತದಾರರಿದ್ದಾರೆ.

'ಕನ್ನಡ ಪಕ್ಷ'ವನ್ನು ಆಯ್ಕೆ ಮಾಡಿಕೊಂಡಿದ್ದೇಕೆ?

'ಕನ್ನಡ ಪಕ್ಷ'ವನ್ನು ಆಯ್ಕೆ ಮಾಡಿಕೊಂಡಿದ್ದೇಕೆ?

ನಾನು ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದೆ. ಚಳ್ಳಕೆರೆ ಮತ್ತು ಮೊಳಕಾಲ್ಮೂರು ಮೀಸಲು ಕ್ಷೇತ್ರಗಳಾಗಿದ್ದು ಅಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಮೇಲೆ ಎಸ್.ಟಿ ಸಮುದಾಯಕ್ಕೆ ಸೇರಿದ ನನ್ನನ್ನೂ ಇಲ್ಲಿ ಕಣಕ್ಕಿಳಿಸುವುದು ಕಷ್ಟ ಎಂದು ಮುಖಂಡರು ಹೇಳಿದರು. ಸಾಮಾಜಿಕ ನ್ಯಾಯ ಪಾಲಿಸುವುದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗೆ ಅನಿವಾರ್ಯವಾಗಿತ್ತು. ಹಾಗಾಗಿ ನಾನು ಇಲ್ಲಿ ಸ್ವತಂತ್ರವಾಗಿ ನಿಲ್ಲಬೇಕು ಎಂದುಕೊಂಡಿದ್ದೆ. ಜನರೂ ಪಕ್ಷೇತರನಾಗಿ ನಿಲ್ಲುವಂತೆ ಸಲಹೆ ನೀಡಿದ್ದರು. ಆದರೆ ಕನ್ನಡಕ್ಕಾಗಿ 'ಕನ್ನಡ ಪಕ್ಷ' ಇದೆ ಎಂಬ ಕಾರಣಕ್ಕೆ ಅದನ್ನೇ ಆಯ್ದುಕೊಂಡೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವೆ ಗೆಲ್ಲೋದು ನಿಮಗೆ ಸಾಧ್ಯನಾ?

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವೆ ಗೆಲ್ಲೋದು ನಿಮಗೆ ಸಾಧ್ಯನಾ?

ಸಾಧ್ಯವಿದೆ. ಸ್ವಾತಂತ್ರ್ಯ ಬಂದಂದಿನಿಂದ ಚಿತ್ರದುರ್ಗದ ರಾಜ ಮದಕರಿ ನಾಯಕನ ವಂಶಸ್ಥರು ಯಾರೂ ಚುನಾವಣೆಗೆ ಸ್ಪರ್ಧಿಸಿಲ್ಲ. ನಮ್ಮ ತಂದೆಯವರಿಗೆ ರಾಜಕೀಯ ಒತ್ತಡದಿಂದ 89ರಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿತು. ಈಗ ನಾನು ಸ್ಪರ್ಧೆ ಮಾಡುತ್ತಿದ್ದೇನೆ, ನನ್ನ ಬಗ್ಗೆ ಜನರಿಗೆ ಪ್ರೀತಿ, ವಿಶ್ವಾಸ, ಅನುಕಂಪ ಇದೆ. ಮದಕರಿ ನಾಯಕ ಗೆದ್ದು ಬರಬೇಕು ಎಂಬುದು ಜನರಲ್ಲಿದೆ.

ಹಾಗಿದ್ದರೆ ಗೆಲ್ಲುವ ಪೂರ್ಣ ವಿಶ್ವಾಸ ಇದೆ?

ಹಾಗಿದ್ದರೆ ಗೆಲ್ಲುವ ಪೂರ್ಣ ವಿಶ್ವಾಸ ಇದೆ?

ಹೌದು ನನಗೆ ಸಂಪೂರ್ಣ ವಿಶ್ವಾಸವಿದೆ. ಇಲ್ಲಿನ ಜನರು ಮೂರೂ ಪಕ್ಷಗಳ ಆಡಳಿತವನ್ನು ನೋಡಿದ್ದಾರೆ. ಇದಲ್ಲದೆ ಚಿತ್ರದುರ್ಗದಲ್ಲಿ ಪಕ್ಷಕ್ಕಿಂತ ವೈಯಕ್ತಿಕವಾಗಿ ಗೆಲ್ಲೋದು ಜಾಸ್ತಿ. ಹಾಲಿ ಬಿಜೆಪಿ ಶಾಸಕ ತಿಪ್ಪಾರೆಡ್ಡಿಯವರು ಈ ಹಿಂದೆ ಎರಡು ಬಾರಿ ಸ್ವತಂತ್ರವಾಗಿ ನಿಂತು ಗೆದ್ದಿದ್ದರು. 2008ರಲ್ಲಿ ಗೆದ್ದ ಬಸವರಾಜ್ ಕೂಡ ಸ್ವಂತ ವರ್ಚಸ್ಸಿನಿಂದ ಗೆದ್ದವರು. 2013ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸೋತರೂ ತಿಪ್ಪಾರೆಡ್ಡಿಯವರು ಗೆದ್ದಿದ್ದು ಸ್ವಂತ ವರ್ಚಸ್ಸಿನ ಮೇಲೆಯೇ. ನಾನು ಕೂಡ ಇಲ್ಲಿ ಸ್ವಂತ ವರ್ಚಸ್ಸಿನ ಮೇಲೆಯೇ ಚುನಾವಣೆಗೆ ನಿಲ್ಲುತ್ತಿದ್ದೇನೆ; ನಾನು ಅಂದರೆ ಅದು ನಮ್ಮ ವಂಶಸ್ಥರ ವರ್ಚಸ್ಸು ಇದು.

ಚುನಾವಣೆಗೆ ನಿಲ್ಲಬೇಕೆಂದರೆ ಹಣ ಬೇಕು. ಈ ವಿಚಾರದಲ್ಲಿ ನಿಮ್ಮ ತಯಾರಿ ಏನಿದೆ?

ಚುನಾವಣೆಗೆ ನಿಲ್ಲಬೇಕೆಂದರೆ ಹಣ ಬೇಕು. ಈ ವಿಚಾರದಲ್ಲಿ ನಿಮ್ಮ ತಯಾರಿ ಏನಿದೆ?

ದುಡ್ಡು ತೆಗೆದುಕೊಂಡು ಮತ ಹಾಕಿದರೆ ಪ್ರಜಾಪ್ರಭುತ್ವಕ್ಕೆ ಮೌಲ್ಯವಿಲ್ಲದ ಹಾಗೆ ಆಗುತ್ತದೆ. ನಾನು ಕೊಡುವುದೂ ಇಲ್ಲ. ಕೊಡಲು ನನಗೆ ಸಾಮರ್ಥ್ಯವೂ ಇಲ್ಲ. ಆಯೋಗದ ಮಿತಿಯಲ್ಲೇ ಖರ್ಚು ಮಾಡುತ್ತೇನೆ. ಜನರಿಗೂ ನಾನು ಏನು ಎಂಬುದು ಗೊತ್ತಿದೆ. ಅವರು ಯಾರೂ ಹಣಕ್ಕೆ ಕೈಯೊಡ್ಡುವವರಲ್ಲ. ಅವಶ್ಯಕತೆಯಷ್ಟೇ ಖರ್ಚು ಮಾಡಿ ಗೆದ್ದು ಬರುತ್ತೇನೆ.

ಚಿತ್ರದುರ್ಗ ಕ್ಷೇತ್ರಕ್ಕೆ ನಿಮ್ಮ ಪ್ರಾಮುಖ್ಯತೆಗಳೇನು?

ಚಿತ್ರದುರ್ಗ ಕ್ಷೇತ್ರಕ್ಕೆ ನಿಮ್ಮ ಪ್ರಾಮುಖ್ಯತೆಗಳೇನು?

ಇಲ್ಲಿನ ಇತಿಹಾಸವನ್ನು ಬೆಳಕಿಗೆ ತರಬೇಕು. ಚಿತ್ರದುರ್ಗವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು. ಈ ಹಿಂದಿನವರು ಅಭಿವೃದ್ಧಿ ಮಾಡಿದರೂ ಇಚ್ಛಾಶಕ್ತಿಯ ಕೊರತೆಯಿಂದ ತುಂಬಾ ಅಭಿವೃದ್ಧಿಯಾಗಿಲ್ಲ. ಜಿಲ್ಲಾ ಕೇಂದ್ರವಾಗಿಯೂ ಚಿತ್ರದುರ್ಗ ಹೋಬಳಿ ಕೇಂದ್ರದ ಹಾಗೆ ಇದೆ.

ಇಲ್ಲಿನ ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿವೆ. ಇಲ್ಲಿಗೆ ಉತ್ತಮ ರಸ್ತೆಗಳು ಬೇಕು. ಆರೋಗ್ಯ ಸೇವೆ ಇಲ್ಲ. ಚಿತ್ರದುರ್ಗಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬುದು ನನ್ನ ಕನಸು. ಜೊತೆಗೆ ಜನರಿಗೆ ಶುದ್ಧ ಕುಡಿಯುವ ನೀರು, ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸುವುದರ ಜತೆಗೆ ಹಳ್ಳಿಗಳ ಬಗ್ಗೆಯೂ ಗಮನ ಹರಿಸುವುದು ನನ್ನ ಯೋಜನೆಯಾಗಿದೆ.

ಬಳ್ಳಾರಿ: ಜೆಡಿಯು ಅಭ್ಯರ್ಥಿ ಟಪಾಲ್ ಗಣೇಶ್ ಸಂದರ್ಶನಬಳ್ಳಾರಿ: ಜೆಡಿಯು ಅಭ್ಯರ್ಥಿ ಟಪಾಲ್ ಗಣೇಶ್ ಸಂದರ್ಶನ

ಯಡಿಯೂರಪ್ಪ ಇಂದಿಗೂ ಆತ್ಮೀಯರು : ಆರ್.ಎಂ.ಮಂಜುನಾಥ ಗೌಡ ಸಂದರ್ಶನಯಡಿಯೂರಪ್ಪ ಇಂದಿಗೂ ಆತ್ಮೀಯರು : ಆರ್.ಎಂ.ಮಂಜುನಾಥ ಗೌಡ ಸಂದರ್ಶನ

English summary
Raja Madakari Nayaka interview: Madakari Nayaka's descendant Raja Madakari Nayaka will contest for 2018 Karnataka assembly elections from Chitradurga assembly constituency from Kannada Paksha (Party).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X