ಚೆಲುವರಾಯಸ್ವಾಮಿಗೆ ಈ ಚುನಾವಣೆ ಪ್ರತಿಷ್ಠೆಯ ಕಣ

Posted By: ಬಿ.ಎಂ.ಲವಕುಮಾರ್
Subscribe to Oneindia Kannada

ಮಂಡ್ಯ, ಮಾರ್ಚ್ 29: ಜೆಡಿಎಸ್ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಅವರು ಉತ್ಸಾಹದಲ್ಲಿದ್ದಾರೆ. ಮುಂದಿನ ಚುನಾವಣೆಗೆ ಬೇಕಾದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದು, ಇದೆಲ್ಲದರ ನಡುವೆ ತಮ್ಮ ಕಚೇರಿ ಮೇಲೆ ಕಾಂಗ್ರೆಸ್ ಬಾವುಟ ಹಾರಿಸುವ ಮೂಲಕ ನಾನೀಗ ಪಕ್ಕಾ ಕಾಂಗ್ರೆಸ್ಸಿಗ ಎಂಬುದನ್ನು ಸಾರುತ್ತಿದ್ದಾರೆ.

ಹಾಗೆನೋಡಿದರೆ ಈಗಿನ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹೆಚ್ಚಿನ ನಾಯಕರು ಜನತಾ ಪರಿವಾರದಿಂದ ಬಂದವರು. ಅದಕ್ಕೆ ಇದೀಗ ಏಳು ಮಂದಿ ಸೇರ್ಪಡೆಗೊಂಡಿದ್ದರಿಂದ ಮೂಲ ಕಾಂಗ್ರೆಸ್ಸಿಗರು ಮೂಲೆ ಗುಂಪಾಗಿದ್ದಾರೆ. ಅದು ಆಚೆಗಿರಲಿ.

ನಾಗಮಂಗಲದಲ್ಲಿ ಚೆಲುವರಾಯಸ್ವಾಮಿ ಏಕೆ ಗೆಲ್ಲಲೇ ಬೇಕು?

ಇದೀಗ ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಮೊದಲ ಬಾರಿಗೆ ತವರು ಕ್ಷೇತ್ರಕ್ಕೆ ಚೆಲುವರಾಯಸ್ವಾಮಿ ಆಗಮಿಸಿದ್ದರು. ಅವರನ್ನು ನಾಗಮಂಗಲ ಹೊರವಲಯ ಚಾಮರಾಜನಗರ ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ ಎಪಿಎಂಸಿ ಮಾರುಕಟ್ಟೆ ಬಳಿ ಕಾದು ಕುಳಿತು ಬೆಂಬಲಿಗರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು. ಬೆಂಬಲಿಗರು ಒಂದು ಹೆಜ್ಜೆ ಮುಂದೆ ಹೋಗಿ ಬೈಕ್ ಜಾಥಾ ಮೂಲಕ ಸ್ವಾಗತಿಸಲು ಬೈಕ್ ಗಳನ್ನು ಸಿದ್ಧಗೊಳಿಸಿಕೊಂಡಿದ್ದರಾದರೂ ಚೆಲುವರಾಯಸ್ವಾಮಿ ಅದಕ್ಕೆ ಒಪ್ಪದೆ, ಅನುಮತಿ ಇಲ್ಲದೆ ಬೈಕ್ ಜಾಥಾ ಮಾಡುವುದು ನೀತಿ ಸಂಹಿತೆ ಉಲ್ಲಂಘನೆ ಎಂದು ಹೇಳಿದ ಬಳಿಕ ಕೈಬಿಟ್ಟಿದ್ದಾರೆ. ಕಾರ್ಯಕರ್ತರು, ಬೆಂಬಲಿಗರು ತಮ್ಮ ಮೇಲೆ ತೋರಿಸುತ್ತಿರುವ ಅಭಿಮಾನವನ್ನು ನೋಡಿದ ಬಳಿಕ ಈ ಬಾರಿಯೂ ಗೆಲುವು ನಮ್ಮದೇ ಎಂಬ ತೀರ್ಮಾನಕ್ಕೆ ಚೆಲುವರಾಯಸ್ವಾಮಿ ಅವರು ಬಂದಿದ್ದಾರೆ.

Cheluvarayaswamy in Nagamangala, thinking of new political strategy

ಇದಲ್ಲದೆ, ತಮ್ಮ ಕಚೇರಿ ಮೇಲೆ ಕಾಂಗ್ರೆಸ್ ಬಾವುಟ ಹಾರಿಬಿಡುವ ಮೂಲಕ ಕಾಂಗ್ರೆಸ್ ನಿಷ್ಠೆಯನ್ನು ಅವರು ಪ್ರದರ್ಶಿಸುತ್ತಿದ್ದಾರೆ. ಈ ಹಿಂದೆ ಅವರು ಜೆಡಿಎಸ್ ಬಾವುಟ ಹಾಕಿದ್ದರಾದರೂ ಜೆಡಿಎಸ್ ವಿರುದ್ಧ ಬಂಡಾಯ ಎದ್ದ ಬಳಿಕ ಆ ಬಾವುಟ ತೆರವುಗೊಳಿಸಿ ಭಾವಚಿತ್ರವುಳ್ಳ ನಾಮಫಲಕವನ್ನಷ್ಟೆ ಹಾಕಿದ್ದರು..

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈಗಾಗಲೇ ಕಚೇರಿಯಲ್ಲಿ ಮೂಲ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ತಮ್ಮ ಬೆಂಬಲಿಗ ಮುಖಂಡರೊಂದಿಗೆ ಚುನಾವಣಾ ತಂತ್ರಗಾರಿಕೆ ಬಗ್ಗೆ ಚಲುವರಾಯಸ್ವಾಮಿ ಚರ್ಚಿಸಿದರು. ಚುನಾವಣೆ ದಿನಾಂಕ ನಿಗದಿಯಾಗಿರುವ ಹಿನ್ನಲೆಯಲ್ಲಿ ಪಕ್ಷದ ಮುಖಂಡರು ಬೂತ್‍ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ, ಯಾವುದೇ ರೀತಿಯ ಗೊಂದಲ, ಭಿನ್ನಾಭಿಪ್ರಾಯಗಳಿಗೆ ಆಸ್ಪದ ಕೊಡದೆ ಮತದಾರರ ಮನವೊಲಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಚೆಲುವರಾಯಸ್ವಾಮಿ ಅವರಿಗೆ ಈ ಬಾರಿಯ ಚುನಾವಣೆ ಪ್ರತಿಷ್ಠೆಯಾಗಿದ್ದು, ಗೆಲುವು ಅನಿವಾರ್ಯವಾಗಿದೆ. ಕ್ಷೇತ್ರದಲ್ಲಿ ತಾವೇ ಪ್ರಭಾವಿ ನಾಯಕರಾಗಿ ಹೊರ ಹೊಮ್ಮಿದ್ದರೂ ಪಕ್ಷಾಂತರ ಮಾಡಿರುವುದರಿಂದಾಗಿ ಎಲ್ಲವೂ ಮೊದಲಿನಂತೆ ನಡೆಯುತ್ತದೆ ಎನ್ನಲಾಗುವುದಿಲ್ಲ. ಇದೆಲ್ಲವನ್ನು ತಿಳಿದೇ ಅವರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನವುದರಲ್ಲಿ ಎರಡು ಮಾತಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JDS rebel MLA, who recently joined Congress party has visited his constituency Nagamangala in Mandya district. hundreds of his followers, supporters and workers welcomed him. Sources said he discussed about various issues related to Karnataka assembly elections 2018 with some Congress leaders.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ