ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜಪೇಟೆ ಶಾಸಕ ಜಮೀರ್ ಕಾಂಗ್ರೆಸ್ ತೊರೆಯುವ ಅಸಲಿ ಲೆಕ್ಕಾಚಾರವೇ ಬೇರೆ ಗೊತ್ತಾ?

|
Google Oneindia Kannada News

ಬೆಂಗಳೂರು, ಏ. 08: ಕಾಂಗ್ರೆಸ್ ರಾಜ್ಯ ಅಧಿನಾಯಕರ ನಡೆಯಿಂದ ಬೇಸತ್ತು ಚಾಮರಾಜಪೇಟೆ ಶಾಸಕ ಬಿ. ಝಡ್ ಜಮೀರ್ ಕೈ ಪಕ್ಷ ತ್ಯಜಿಸುತ್ತಾರೆ ಎಂಬ ಸಂಗತಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಜಮೀರ್ ಕಾಂಗ್ರೆಸ್ ಪಕ್ಷ ತೊರೆಯುತ್ತಾರೆ ಎಂಬುದು ಪಕ್ಷದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಹೂಡಿರುವ ತಂತ್ರವೇ ? ಇಲ್ಲವೇ ಕಾಂಗ್ರೆಸ್ ಗೆ ಅಲ್ಪಸಂಖ್ಯಾತ ಮತಗಳನ್ನು ತಪ್ಪಿಸಲು ಆಡಳಿತ ರೂಢ ಸರ್ಕಾರದ ನಾಯಕರು ರೂಪಿಸಿರುವ ಪ್ಲಾನ್?

Recommended Video

Zameer Ahmed ಕಾಂಗ್ರೆಸ್ ತೊರೆದು JDS ಸೇರಲಿದ್ದಾರ | Oneindia Kannada

ತನ್ನ ಮುಂದಿನ ರಾಜಕೀಯ ನಡೆ ಬಗ್ಗೆ ರಂಜಾನ್ ಬಳಿಕ ಮಾತನಾಡುತ್ತೇನೆ ಎನ್ನುವ ಮೂಲಕ ಜಮೀರ್ ಅವರು ಕೈ ತೊರೆಯಲಿದ್ದಾರೆ ವಿಷಯ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಹೀಗಾಗಿ ಕಳೆದ ಎರಡು ದಿನದಿಂದ ರಾಜ್ಯದ ಸುದ್ದಿ ಮಾಧ್ಯಮಗಳಲ್ಲಿ ಜಮೀರ್ ವಿಚಾರವೇ ದೊಡ್ಡ ಸುದ್ದಿಯಾಗುತ್ತಿದೆ.

ಜಮೀರ್ ನಿಜವಾಗಿಯೂ ಸಿದ್ದರಾಮಯ್ಯ ಅವರ ಮಾತು ಮೀರಿ ಕಾಂಗ್ರೆಸ್ ಪಕ್ಷ ತೊರೆಯುವರೇ? ಒಂದು ವೇಳೆ ತೊರೆದರೇ ಮತ್ತೆ ಜೆಡಿಎಸ್ ಗೆ ವಾಪಸು ಹೋಗಲಿದ್ದಾರೆಯೇ? ಇಲ್ಲವೇ ಬೇರೆ ಪಕ್ಷ ಪ್ರತಿನಿಧಿಸುವರೇ? ಅಥವಾ ತನ್ನ ಸಮುದಾಯದ ಪ್ರಶ್ನಾತೀತ ಅಧಿನಾಯಕ ಎನ್ನವ ಪಟ್ಟ ಧರಿಸುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುವ ತಂತ್ರವಾಗಿ ಇಂತದ್ದೊಂದು ಗೇಮ್ ಜಮೀರ್ ಆರಂಭಿಸಿದ್ದಾರಾ ಎನ್ನುವ ಪ್ರಶ್ನೆಗಳು ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಾಂದಿ ಹಾಡಿವೆ.

Chamarajpete MLA B. Z Zameer will quit congress party?

ಸದ್ಯ ಚಾಲ್ತಿಯ ವಿಚಾರ:

ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್‌ಗೆ ತಪ್ಪಿಸುವುದು ಆಡಳಿತ ರೂಢ ಬಿಜೆಪಿಯ ತಂತ್ರ. ಅದರ ಭಾಗವಾಗಿಯೇ ಜಮೀರ್ ಕಾಂಗ್ರೆಸ್ ತೊರೆದು ವಾಪಸು ಜೆಡಿಎಸ್ ಗೆ ಸೇರುವಂತೆ ಹೈದರಾಬಾದ್ ಮೂಲದ ಪ್ರಭಾವಿ ಮುಸ್ಲಿಂ ನಾಯಕರೊಬ್ಬರು ಜಮೀರ್ ಗೆ ಸಲಹೆ ನೀಡಿದ್ದಾರೆ ಎಂಬ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತು.

ಮುಸ್ಲಿಂ ಸಮುದಾಯ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ವಿಚಾರದಲ್ಲಿ ಬೀದಿಗೆ ಇಳಿದು ಧ್ವನಿಯೆತ್ತುವ ವ್ಯಕ್ತಿ ಸಿದ್ದರಾಮಯ್ಯ. ಅವರನ್ನು ನಂಬಿ ಜೆಡಿಎಸ್ ತೊರೆದು ಜಮೀರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಅಂತಹ ನಾಯಕನನ್ನು ಬಿಟ್ಟು ವಾಪಸು ಜೆಡಿಎಸ್ ಗೆ ಹೋದ್ರೆ ರಾಜಕೀಯವಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವೇ ಎಂಬುದು ಜಮೀರ್ ಅವರನ್ನು ಕಾಡುತ್ತಿರುವ ವಿಚಾರ. ಮಿಗಿಲಾಗಿ ಕೆಲ ತಿಂಗಳ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಚಾಮಗೋಚರ ಬೀದಿ ಸಮರ ಸಾರಿದ್ದ ಜಮೀರ್ ಅವರ ಡೈಲಾಗ್ ಗಳಿಗೆ ಜೆಡಿಎಸ್ ನಾಯಕರೇ ಥಂಡಾ ಹೊಡೆದಿದ್ದರು. ಆತ ಬಸ್ ಚಾಲಕ ಎಂದೇ ಕುಮಾರಸ್ವಾಮಿ ಜರಿದಿದ್ದರು. ಸಭ್ಯತೆಯಿಂದ ಜೆಡಿಎಸ್ ತೊರೆದಿದ್ದ ಜಮೀರ್ ವಾಪಸು ಜೆಡಿಎಸ್ ಗೆ ಮರಳಲಾರದ ರೀತಿಯಲ್ಲಿ ಬಾಯಿ ಮಾತಿನಲ್ಲಿ ಜೆಡಿಎಸ್ ಎಂಟ್ರಿ ಬಾಗಿಲು ಬಂದ್ ಮಾಡಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಜಮೀರ್ ಕಾಂಗ್ರೆಸ್ ತೊರೆದರೆ ಇರುವ ಏಕೈಕ ಅವಕಾಶ ಜೆಡಿಎಸ್ ಮಾತ್ರ. ಮಾಜಿ ಸಿಎಂ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ವಿರುದ್ಧ ಬಾಯಿಗೆ ಬಂದಂಗೆ ಮಾತಾಡಿ ಸಂಬಂಧ ಹಾಳು ಮಾಡಿಕೊಂಡಿರುವ ಜಮೀರ್ ನಿಜವಾಗಿಯೂ ಜೆಡಿಎಸ್ ಸೇರಿ ಮುಖ ತೋರಿಸಿ ರಾಜಕಾರಣ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಕೂಡ ಎದುರಾಗಿದೆ.

Chamarajpete MLA B. Z Zameer will quit congress party?

ಜಮೀರ್ ಪ್ಲಾನ್ ಬೇರೆ ?

ಹಿಜಾಬ್, ಅಜಾನ್, ಹಲಾಲ್ ಕಟ್ ಸರಣಿ ವಿವಾದಗಳ ಬಗ್ಗೆ ತಮ್ಮ ಸಮುದಾಯವವನ್ನು ಪ್ರತಿನಿಧಿಸಿ ಮಾತನಾಡಲು ಕಾಂಗ್ರೆಸ್ ಪಕ್ಷ ಅವಕಾಶ ಕೊಟ್ಟಿಲ್ಲ. ಹಿಜಾಬ್ ಸೇರಿದಂತೆ ಯಾವುದೇ ವಿಚಾರದ ಬಗ್ಗೆ ತಾನು ಇಲ್ಲವೇ ವಿರೋಧ ಪಕ್ಷದ ನಾಯಕ ಮಾತ್ರ ಮಾತನಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಫರ್ಮಾನು ಹೊರಡಿಸಿದ್ದರು. ಇದನ್ನು ಮೀರಿ ಜಮೀರ್ ಹಿಜಾಬ್ ಕುರಿತು ಮಾತನಾಡಿ ಬಳಿಕ ಕೆಪಿಸಿಸಿ ರಾಜ್ಯ ಅಧಿನಾಯಕರ ಕ್ಷಮೆ ಕೇಳಿದ್ದರು. ರಾಜ್ಯದಲ್ಲಿ ಕೇವಲ ಅಲ್ಪ ಸಂಖ್ಯಾತ ಮತಗಳನ್ನು ನಂಬಿ ಅಧಿಕಾರಕ್ಕೆ ಬರುವುದು ಕನಸಿನ ಮಾತೇ ಸರಿ. ಹೀಗಾಗಿ ಪ್ರಭಾವಿ ಒಕ್ಕಲಿಗ ಮತ್ತು ಲಿಂಗಾಯುತ ಸಮುದಾಯದ ಮತ ನಿರ್ಣಾಯಕ. ಹೀಗಾಗಿ ಡಿ.ಕೆ. ಶಿವಕುಮಾರ್ ಹಿಂದುತ್ವದ ವಿಚಾರ - ವಿವಾದ ಬಂದಾಗ ಸಾಫ್ಟ್ ಕಾರ್ನರ್ ತೋರುತ್ತಿದ್ದಾರೆ. ಇದು ಸದ್ಯದ ಪರಿಸ್ಥಿತಿಯಲ್ಲಿ ಜಮೀರ್ ಮುನಿಸಿಗೆ ಕಾರಣ ಎಂದೇ ಹೇಳಲಾಗುತ್ತಿದೆ.

ಮುನಿಸು ಅನ್ನುವುದಕ್ಕಿಂತಲೂ ಈ ಅವಕಾಶವನ್ನು ಬಳಸಿಕೊಂಡು, ನನಗೆ ರಾಜಕೀಯ ಪಕ್ಷಕ್ಕಿಂತಲೂ ನನ್ನ ಸಮುದಾಯ ಮುಖ್ಯ. ನಮ್ಮ ಸಮುದಾಯಕ್ಕೆ ನಾನೇ ಮಾಸ್ ಲೀಡರ್ ಎಂಬುದನ್ನು ಬಿಂಬಿಸಿಕೊಳ್ಳುವ ಮೂಲಕ ಸಮುದಾಯದ ಅಧಿನಾಯಕನಾಗಿ ಗುರುತಿಸಿಕೊಂಡರೆ, ಎಲ್ಲಾ ರಾಜಕೀಯ ಪಕ್ಷಗಳಿಗೂ ನನ್ನ ಅಗತ್ಯತೆ ಬೀಳುತ್ತದೆ ಎಂಬುದು ಜಮೀರ್ ಲೆಕ್ಕಾಚಾರ ಇದ್ದರೂ ಇರಬಹುದು. ಹೀಗಾಗಿ ಪಕ್ಷ ತೊರೆಯುವ ಆಟ ಆಡುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಜಮೀರ್ ಮುಂದಾಗಿದ್ದರೂ ಅಚ್ಚರಿ ಪಡಬೇಕಿಲ್ಲ. ಪಕ್ಷ ತೊರೆಯುವ ಆಟವಾಡಿ ಕೈ ಪಕ್ಷದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ತಂತ್ರವೋ ಇಲ್ಲವೇ ಬಿಜೆಪಿ ಹೂಡಿರುವ ಕಾಂಗ್ರೆಸ್ ಪಕ್ಷಕ್ಕೆ ಅಲ್ಪ ಸಂಖ್ಯಾತ ಮತ ತಪ್ಪಿಸಬೇಕು ಎನ್ನು ಪ್ಲಾನ್ ಅನುಷ್ಠಾನದ ಭಾಗವೋ ಗೊತ್ತಿಲ್ಲ. ಜಮೀರ್ ಅಂತೂ ಕೈ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಂತೆ ನಡೆದುಕೊಳ್ಳುತ್ತಿರುವುದು ವಾಸ್ತವ. ರಂಜಾನ್ ಮುಗಿದ ಕೂಡಲೇ ಪಕ್ಷ ಬದಲಾವಣೆ ಬಗ್ಗೆ ಮಾತನಾಡುವೆ ಎಂದು ಹೇಳಿರುವುದು ದಿಟ. ಎಲ್ಲದಕ್ಕೂ ಅತಿ ಶೀಘ್ರದಲ್ಲಿಯೇ ಉತ್ತರ ಸಿಗಲಿದೆ.

English summary
Inside story of Chamarajpete MLA B. Z Zameer : Do you know the original calculation of MLA zameer Ahmad khan to quit congress party?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X