• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯ ಬಿಜೆಪಿ ಉಪಾಧ್ಯಕ್ಷರ ಪಟ್ಟಕ್ಕೆ ಬಿಎಸ್ ವೈ ಪುತ್ರ ವಿಜಯೇಂದ್ರ

|

ಬೆಂಗಳೂರು, ಜುಲೈ.31: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರರನ್ನು ಬೆಂಗಳೂರು ಕೇಂದ್ರ ವಿಭಾಗದ ಬಿಜೆಪಿ ಪದಾಧಿಕಾರಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

ರಾಜ್ಯದ ಭಾರತೀಯ ಜನತಾ ಪಕ್ಷದಲ್ಲಿ ಮಹತ್ವದ ಬದಲಾವಣೆಗಳ ಚರ್ಚೆ ಶುರುವಾಗಿದೆ. ಇದರ ನಡುವೆಯೇ ರಾಜ್ಯ ಬಿಜೆಪಿ ಘಟಕದ ಪುನರ್ ರಚನೆ ಮಾಡಲಾಗಿದ್ದು, ನಳೀನ್ ಕುಮಾರ್ ಕಟೀಲ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ.

ಯಡಿಯೂರಪ್ಪ ಉಚ್ಛಾಟನೆ ಮಾಡಿದ್ದವರಿಗೆ ರಾಜ್ಯ ಉಪಾಧ್ಯಕ್ಷ ಹುದ್ದೆ!

ನಿಮ್ಮೆಲ್ಲರ ವಿಶ್ವಾಸದ ಸಹಕಾರದ ಫಲ, ಯುವ ಕಾರ್ಯಕರ್ತರು ಬೆನ್ನಿಗೆ ನಿಂತು ನನ್ನ ಸಂಘಟನಾ ಚಟುವಟಿಕೆಗಳಿಗೆ ಬೆಂಬಲ ನೀಡಿದ ಪರಿಣಾಮ ಪಕ್ಷದ ವರಿಷ್ಠರು ನನ್ನ ಮೇಲೆ ಅಚಲ ವಿಶ್ವಾಸವನ್ನಿರಿಸಿ ರಾಜ್ಯ ಬಿಜೆಪಿಯ ಉಪಾಧ್ಯಕ್ಷನನ್ನಾಗಿ ನೇಮಿಸಿದ್ದಾರೆ. ತಮಗೆ ನೀಡಿರುವ ನೂತನ ಜವಾಬ್ದಾರಿಗೆ ಸಂಬಂಧಿಸಿದಂತೆ ಸ್ವತಃ ಬಿ.ವೈ.ವಿಜಯೇಂದ್ರ ಫೇಸ್ ಬುಕ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.

ಹೈಕಮಾಂಡ್ ಸೇರಿ ರಾಜ್ಯ ನಾಯಕರಿಗೆ ಧನ್ಯವಾದ

ಹೈಕಮಾಂಡ್ ಸೇರಿ ರಾಜ್ಯ ನಾಯಕರಿಗೆ ಧನ್ಯವಾದ

ತಮ್ಮನ್ನು ಬಿಜೆಪಿ ಉಪಾಧ್ಯಕ್ಷರಾಗಿ ನೇಮಿಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‍ ಶಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಎಲ್. ಸಂತೋಷ್, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರಿಗೆ ಕೃತಜ್ಞತಾ ಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಎಂದು ಬರೆದುಕೊಂಡಿದ್ದಾರೆ.

ಬಿಜೆಪಿಯ ಹಿರಿಯ ನಾಯಕರನ್ನು ಸ್ಮರಿಸಿದ ಉಪಾಧ್ಯಕ್ಷ

ಬಿಜೆಪಿಯ ಹಿರಿಯ ನಾಯಕರನ್ನು ಸ್ಮರಿಸಿದ ಉಪಾಧ್ಯಕ್ಷ

ಶ್ರೀ ಶ್ಯಾಂಪ್ರಕಾಶ್ ಮುಖರ್ಜಿ, ಶ್ರೀ ಪಂಡಿತ್ ದೀನದಯಾಳ್ ಉಪಾಧ್ಯಾಯರ ಪರಿಶ್ರಮದ, ಕನಸಿನ ಸಂಘಟನಾ ಕೋಟೆ ಇಂದು ಸಾಕಾರಗೊಂಡು ಕೋಟಿ, ಕೋಟಿ ಭಾರತೀಯರ ಮನೆ-ಮನದಲ್ಲಿ ಬಲವಾಗಿ ನೆಲೆಯೂರಿದೆ. ಭಾರತೀಯ ಜನತಾ ಪಾರ್ಟಿ ವಿಶ್ವದಲ್ಲೇ ಅತೀ ಹೆಚ್ಚು ಸದಸ್ಯರನ್ನು ಹೊಂದಿದ ಅಗ್ರಮಾನ್ಯ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಇಂಥಾ ಹೆಗ್ಗಳಿಕೆಯ ಬೆಳವಣಿಗೆಯ ಹಿಂದೆ ತಮ್ಮ ಇಡೀ ಜೀವಮಾನವನ್ನೇ ಸಂಘಟನೆಗಾಗಿ ಸಮರ್ಪಿಸಿ ಪಕ್ಷದ ಕಟ್ಟಾಳುಗಳಾಗಿ ಶ್ರಮಿಸಿದ ಅನೇಕ ಹಿರಿಯರನ್ನು ಈ ಸಂದರ್ಭದಲ್ಲಿ ನಾನು ಅತ್ಯಂತ ಗೌರವಪೂರ್ವಕವಾಗಿ ನೆನೆಯಬಯಸುತ್ತೇನೆ.

ದೇಶ ಕಂಡ ಅಪರೂಪದ ವ್ಯಕ್ತಿತ್ವದ ದಿ. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪ ಪ್ರಧಾನಿ ಶ್ರೀ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ, ರಾಜಮಾತೆ ವಿಜಯರಾಜೇ ಸಿಂಧಿಯಾ ಮೊದಲಾದ ಹಿರಿಯರು ಯಶಸ್ವಿಯಾಗಿ ಮುನ್ನಡೆಸಿದ ಪಕ್ಷ, ಪ್ರಧಾನಿ ನರೇಂದ್ರ ಮೋದಿಯವರ ಪ್ರಖರ ಬೆಳಕು ದೇಶದೆಲ್ಲೆಡೆ ಪ್ರಜ್ವಲಿಸಿದ ಪರಿಣಾಮ ಇಂದು ಭಾರತೀಯ ಜನತಾ ಪಾರ್ಟಿಯ ಝಂಡಾ ಮುಗಿಲೆತ್ತರಕ್ಕೆ ಎದೆಯುಬ್ಬಿಸಿ ಹಾರಾಡುತ್ತಾ ಭಾರತೀಯತೆಯ ಸ್ವಾಭಿಮಾನದ ಸಂಕೇತವಾಗಿ ಜಗತ್ತಿನ ಗಮನವನ್ನು ತನ್ನತ್ತ ಕೇಂದ್ರೀಕರಿಸಿಕೊಳ್ಳುವ ಸಾಮಥ್ರ್ಯವನ್ನು ಪಡೆದಿದೆ.

ಗೃಹ ಸಚಿವ ಅಮಿತ್ ಶಾರನ್ನು ಹೊಗಳಿದ ವಿಜಯೇಂದ್ರ

ಗೃಹ ಸಚಿವ ಅಮಿತ್ ಶಾರನ್ನು ಹೊಗಳಿದ ವಿಜಯೇಂದ್ರ

ಈ ನಿಟ್ಟಿನಲ್ಲಿ ಹಿಂದಿನ ರಾಷ್ಟ್ರೀಯ ಅಧ್ಯಕ್ಷರಾದ ಗೃಹಮಂತ್ರಿ ಅಮಿತ್‍ ಶಾ ಅವರ ಚಾಣಕ್ಯ ಮಾರ್ಗದ ತಂತ್ರ, ಪ್ರತಿ ಕಾರ್ಯಕರ್ತನನ್ನೂ ಸೂಜಿಗಲ್ಲಿನಂತೆ ಆಕರ್ಷಿಸುವ ವ್ಯಕ್ತಿತ್ವ, ಇದಕ್ಕೆ ಪೂರಕವಾದ ಸಂಘಟನಾ ಚಾತುರ್ಯತೆಯ ಯೋಜನೆ ‘ಬಿಜೆಪಿ' ಕಟ್ಟಕಡೆಯ ಜನರ ಹೃದಯದ ಬಾಗಿಲು ತಟ್ಟಿ, ಕೋಟ್ಯಂತರ ಸದಸ್ಯರನ್ನು ತನ್ನ ಮಡಿಲಲ್ಲಿ ತುಂಬಿಕೊಳ್ಳಲು ಸಾಧ್ಯವಾಯಿತು. ಅದರಲ್ಲೂ ಯುವಜನರನ್ನು ಸೆಳೆಯುವಲ್ಲಿ ಅವರು ಬೀರಿದ ಪ್ರಭಾವ ಸಂಘಟನೆಯ ಬಲಿಷ್ಠತೆಗೆ ಕಾರಣವಾಯಿತು. ಅವರ ಪ್ರೇರಣೆಯಿಂದಾಗಿ ನಾನೂ ಒಬ್ಬ ಕಾರ್ಯಕರ್ತನಾಗಿ ಗುರುತಿಸಿಕೊಳ್ಳುವ ‘ಸೌಭಾಗ್ಯದ ಅವಕಾಶ' ನನ್ನ ಪಾಲಿನದಾಯಿತು.

ಬಿಜೆಪಿಯ ‘ಕಮಲ' ಅರಳಲು ಸಾಧ್ಯವೇ ಇಲ್ಲ ಎನ್ನುವಂಥಾ ಪರಿಸ್ಥಿತಿಯಿದ್ದ ಪಶ್ಚಿಮ ಬಂಗಾಳದಂತಹ ರಾಜ್ಯವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಬಿಜೆಪಿಯ ಕಮಲದ ಹೂದೋಟಗಳನ್ನೇ ನಿರ್ಮಿಸಿದ ನಿಬ್ಬೆರಗಿನ ಸಾಧನೆಗೈದು ಭಾರತದ ಇಂಚಿಂಚು ನೆಲದಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವದ ಅಲೆ ಆಕ್ರಮಿಸಿಕೊಳ್ಳಲು ಅಮಿತ್‍ಶಾ ಜೀಯವರು ರೂಪಿಸಿದ ಸಂಘಟನಾ ನಕ್ಷೆ, ಕಾರ್ಯಕರ್ತರಿಗೆ ನೀಡಿದ ತರಬೇತಿ, ಮಾರ್ಗದರ್ಶನ ನನಗೆ ಎಂದೆಂದೂ ಪ್ರೇರಣೆಯಾಗಿದೆ.

ಬಿಎಸ್ ವೈರನ್ನು ಹಾಡಿ ಹೊಗಳಿದ ವಿಜಯೇಂದ್ರ

ಬಿಎಸ್ ವೈರನ್ನು ಹಾಡಿ ಹೊಗಳಿದ ವಿಜಯೇಂದ್ರ

ಕರ್ನಾಟಕದ ವಿಧಾನಸಭೆಯಲ್ಲಿ ಖಾತೆ ತೆರೆಯುವುದೇ ಕಷ್ಟವಾಗಿದ್ದ ಕಾಲದಲ್ಲಿ ಊರೂರು ಸುತ್ತಿ, ಸೈಕಲ್ ತುಳಿದು, ಬಿಸಿಲು-ಮಳೆ-ಚಳಿ ಎನ್ನದೇ, ಕುಟುಂಬದ ಹಿತವನ್ನೂ ಲೆಕ್ಕಿಸದೇ ಬಿಜೆಪಿ ಕಟ್ಟಿದ ನಮ್ಮ ತಂದೆಯವರೇ ನನಗೆ ಸದಾ ಸ್ಫೂರ್ತಿ. ಇವರೊಡನೆ ಹೆಗಲು ಕೊಟ್ಟ ದಿ.ಅನಂತ್ ‍ಕುಮಾರ ಅವರು ನನಗೆ ಸದಾ ಮಾದರಿ. ಪಕ್ಷದ ಭೀಷ್ಮರಂತಿದ್ದು ಭದ್ರ ಬುನಾದಿ ಹಾಕಿದ ಹಿರಿಯರಾದ ಜಗನ್ನಾಥ್ ರಾವ್ ಜೋಷಿ, ಮುಳ್ಳೂರು ಆನಂದರಾಯರು, ಕರಂಬಳ್ಳಿ ಸಂಜೀವ ಶೆಟ್ಟರು, ಬಿ.ಬಿ.ಶಿವಪ್ಪ, ಡಾ.ತಂಗಾ, ಡಾ.ವಿ.ಎಸ್.ಆಚಾರ್ಯ ಹಾಗೂ ನಮ್ಮೊಡನಿರುವ ಡಿ.ಎಚ್.ಶಂಕರ ಮೂರ್ತಿ, ಬಸವರಾಜ ಪಾಟೀಲ ಸೇಡಂ ಮೊದಲಾದವರ ಸಮರ್ಪಣಾ ಮನೋಭಾವದ ಪಕ್ಷ ಸೇವೆ ನನಗೆ ಎಂದೆಂದೂ ಆದರ್ಶ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಿದ್ಧಾಂತ, ಶಿಸ್ತು, ಕಾರ್ಯಕ್ರಮಗಳು ನನಗೆ ದಾರಿದೀಪ.

ಮಂಡ್ಯ ಜಿಲ್ಲೆ ಬೂಕನಕೆರೆ ಜನ್ಮವೆತ್ತಿದ ನನ್ನ ಪೂಜ್ಯ ತಂದೆ ಶ್ರೀ ಯಡಿಯೂರಪ್ಪನವರು ಶಿಕಾರಿಪುರವನ್ನು ಕರ್ಮಭೂಮಿಯನ್ನಾಗಿಸಿಕೊಂಡು ರಾಜ್ಯ ಕಂಡ ಅಪರೂಪದ ಯಶಸ್ವಿ ನೇತಾರರಾಗಿ, ಮಾತೃ ಹೃದಯದ ದಕ್ಷ ಆಡಳಿತದ ಮುಖ್ಯಮಂತ್ರಿಯಾಗಿ ಸಫಲತೆಯನ್ನು ಕಂಡಿದ್ದಾರೆ. ಕಾಕತಾಳೀಯ ವೆಂಬಂತೆ ಶಿಕಾರಿಪುರದಲ್ಲಿ ಜನಿಸಿದ ನಾನು ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಅನಿರೀಕ್ಷಿತ ತಿರುವಿನಲ್ಲಿ ವರುಣಾ ಕ್ಷೇತ್ರದಲ್ಲಿ ರಾಜಕೀಯ ಜನ್ಮ ಪಡೆದು ಜನರ ಪ್ರೀತ್ಯಾದರದ ಆಸರೆಯಲ್ಲಿ ಬಂಧಿಯಾಗುವಂತೆ ಮಾಡಿತು. ಪೂಜ್ಯ ತಂದೆಯವರು ‘ಜನರೆಂದರೆ ಏಕಿಷ್ಟು ಮಿಡಿಯುತ್ತಾರೆ?' ಎಂಬ ಪ್ರಶ್ನೆಗೆ ವರುಣಾ ಕ್ಷೇತ್ರದ ಜನತೆ ಉತ್ತರ ದೊರಕಿಸಿಕೊಟ್ಟದ್ದು ನಾನು ಜೀವನದಲ್ಲಿ ಮರೆಯಲಾಗದ ದಿನಗಳು.

ತಂದೆಯವರ ಮಾರ್ಗದರ್ಶನದಲ್ಲೇ ಸಾಗಬೇಕೆಂಬ ನನ್ನ ಶಪಥದ ಹಾದಿಗೆ ಯುವ ಮೋರ್ಚಾ ಸಂಘಟನೆ ಸ್ಫೂರ್ತಿ ಒದಗಿಸಿದರೆ, ರಾಜ್ಯದ ಉದ್ದಗಲಕ್ಕೂ ಜನ ತೋರಿದ ಪ್ರೀತಿ, ಯುವಜನರು ವ್ಯಕ್ತಪಡಿಸಿದ ಅಭಿಮಾನ ನನ್ನನ್ನು ತಂದೆಯವರ ತಾಯ್ನೆಲ ಕೆ.ಆರ್.ಪೇಟೆಯ ಉಪಚುನಾವಣೆಯಲ್ಲಿ ಜವಾಬ್ದಾರಿ ಹೊರುವ ಅವಕಾಶ ಒದಗಿಸಿತು. "ಸಂಘಟನೆಯಲ್ಲಿ ಸಮನ್ವಯತೆ, ಕಾರ್ಯತಂತ್ರದಲ್ಲಿ ಪ್ರಾಮಾಣಿಕತೆ ಇದ್ದರೆ ಬರಡು ಭೂಮಿಯಲ್ಲೂ ಹಸನಾದ ಫಸಲು ತೆಗೆಯಬಹುದು" ಎಂಬುದಕ್ಕೆ ಕೆ.ಆರ್.ಪೇಟೆಯ ಫಲಿತಾಂಶ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ದಾಖಲೆ ಬರೆಯಿತು. ಅಷ್ಟೇ ಅಲ್ಲದೇ ತಂದೆಯವರ ಬಹುದಿನದ ಕೊರಗು ನೀಗಿಸಿ ಮಂಡ್ಯ ಜಿಲ್ಲೆಯ ಕಾರ್ಯಕರ್ತರ ಹಲ ವರುಷಗಳ ಹೋರಾಟಕ್ಕೆ ಜಯದ ಮಾಲೆ ತೊಡಿಸಿತು.

ಸದ್ಯ ವಹಿಸಲಾಗಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಸಾಮಥ್ರ್ಯ ನನಗೆ ಬರುವಂತಾಗಲು ಪಕ್ಷದ ಹಿರಿಯರ ಮಾರ್ಗದರ್ಶನ, ಪ್ರತೀ ಕಾರ್ಯಕರ್ತರ ಸಹಕಾರವನ್ನು ಅತ್ಯಂತ ವಿನಮ್ರತೆಯಿಂದ ನಿರೀಕ್ಷಿಸುತ್ತೇನೆ ಎಂದು ಬಿ.ವೈ.ವಿಜಯೇಂದ್ರ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

English summary
B Y Vijayendra Says Thank To High-Command For Appoint As State BJP Vice-President.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more