ನಮ್ಮ ಯುವ ನಾಯಕ ಬಿ.ವೈ. ವಿಜಯೇಂದ್ರ ಬಿಜೆಪಿಯ ಬಾಹುಬಲಿ!
ಬೆಂಗಳೂರು, ನ. 10: ಶಿರಾ ಉಪ ಚುನಾವಣೆಯ ಫಲಿತಾಂಶ ಬಿಜೆಪಿ ನಾಯಕರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಶಿರಾ ಕ್ಷೇತ್ರದಲ್ಲಿ ಕಳೆದ ಎಲ್ಲ ಚುನಾವಣೆಗಳಲ್ಲಿ ಮೂರನೇ ಸ್ಥಾನದಲ್ಲಿದ್ದ ಪಕ್ಷದ ಅಭ್ಯರ್ಥಿಯನ್ನು ಈ ಬಾರಿ ಉಪ ಚುನಾವಣೆಯಲ್ಲಿ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಗೆಲ್ಲಿಸಿಕೊಂಡು ಬಂದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಂತೆಯೆ ವಿಜಯೇಂದ್ರ ಅವರಿಗೂ ಜನರನ್ನು ಸೆಳೆಯುವ ಗುಣವಿದೆ ಎಂದು ಬಿಜೆಪಿಯ ಪ್ರಬಲ ನಾಯಕರೇ ಹೇಳುತ್ತಿದ್ದಾರೆ. ಇದೀಗ ಉಪ ಚುನಾವಣೆ ಫಲಿತಾಂಶದ ಕುರಿತು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಮಹತ್ವದ ಹೇಳಿಕೆಯನ್ನು ಕೊಟ್ಟಿದ್ದಾರೆ.
ಆರ್. ಆರ್. ನಗರ, ಶಿರಾ ಉಪ ಚುನಾವಣೆ ಫಲಿತಾಂಶ
ಉಪ ಚುನಾವಣೆ ನಡೆದಿದ್ದ ಎರಡೂ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಬಿ.ವೈ. ವಿಜಯೇಂದ್ರ ಅವರು ಎಲ್ಲ ಉಪ ಚುನಾವಣೆಗಳಲ್ಲಿ ಸಾರಥ್ಯ ವಹಿಸಿಕೊಂಡು ಬಿಜೆಪಿಯನ್ನು ಗೆಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲೆಲ್ಲಿ ವಿಜಯೇಂದ್ರ ಹೋಗುತ್ತಾರೋ ಅಲ್ಲಲ್ಲಿ ಬಿಜೆಪಿ ಗೆಲುವು ಅಂತಾ ನಾನು ಶಿರಾದಲ್ಲಿ ಈ ಮೊದಲೇ ಹೇಳಿದ್ದೆ. ವಿಜಯೇಂದ್ರ ನಮ್ಮ ಪಕ್ಷಕ್ಕೆ ಬಾಹುಬಲಿ ಇದ್ದ ಹಾಗೆ ಎಂದು ವಿಜಯೇಂದ್ರ ಅವರನ್ನು ಶ್ರೀರಾಮುಲು ಕೊಂಡಾಡಿದ್ದಾರೆ.
ಪ್ರಧಾನಿ ಮೋದಿ ಸಮರ್ಥ ನಾಯಕ ಅಂತಾ ಬಿಹಾರದಲ್ಲಿ ಯುವ ಜನತೆ ಮತ ಹಾಕಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಇನ್ನು ಏನೂ ನೆಪ ಇಲ್ಲ. ಏನೇನೂ ಮಾತನಾಡಬಾರದಿತ್ತೋ ಅದೆಲ್ಲವನ್ನೂ ಮಾತನಾಡಿದ್ದಾರೆ. ಈ ಫಲಿತಾಂಶ ಅವರಿಗೆ ಉತ್ತರ ಕೊಟ್ಟಿದೆ. ಅವರ ಪಕ್ಷದಲ್ಲಿ ಸಿಎಂ ಕುರ್ಚಿ ಮ್ಯೂಸಿಕಲ್ ಚೇರ್ ಆಗಿತ್ತು. ಸ್ವಲ್ಪ ಹೆಚ್ಚು ಕಡಿಮೆ ಆದರೆ ತಾನೇ ಕುಳಿತುಕೊಳ್ಳುವ ಪ್ರಯತ್ನದಲ್ಲಿ ಸಿದ್ದರಾಮಯ್ಯ ಇದ್ದರು ಎಂದು ಶ್ರೀರಾಮುಲು ಲೇವಡಿ ಮಾಡಿದ್ದಾರೆ.