ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಾ ಉಪಚುನಾವಣೆ: ಟಿ.ಬಿ. ಜಯಚಂದ್ರ ಭವಿಷ್ಯ ಕೆ.ಎನ್. ರಾಜಣ್ಣ ಕೈಯಲ್ಲಿ?

|
Google Oneindia Kannada News

ಬೆಂಗಳೂರು, ಸೆ. 15: ರಾಜ್ಯ ವಿಧಾನಸಭೆಯ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಅವುಗಳಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ ಹಾಗೂ ರಾಯಚೂರಿನ ಮಸ್ಕಿ ಕ್ಷೇತ್ರಗಳ ಕುರಿತು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಹೀಗಾಗಿ ಸಧ್ಯಕ್ಕೆ ಬರುವ ನವೆಂಬರ್‌ನಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಿಂದಿಗೆ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಜೆಡಿಎಸ್ ಶಾಸಕ ಕೆ. ಸತ್ಯನಾರಾಯಣ ಅವರು ಅಕಾಲಿಕವಾಗಿ ನಿಧನ ಹೊಂದಿದ್ದರಿಂದ ಶಿರಾ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ.

ಕ್ಷೇತ್ರವನ್ನು ಉಳಿಸಿಕೊಳ್ಳಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ತಯಾರಿ ನಡೆಸಿದ್ದಾರೆ. ಶಿರಾ ಕ್ಷೇತ್ರದ ಜೆಡಿಎಸ್ ನಾಯಕರನ್ನು ಕರೆದು ಮಾತನಾಡಿದ್ದಾರೆ. ಜೊತೆಗೆ ಕೆ. ಸತ್ಯನಾರಾಯಣ ಅವರ ಕುಟುಂಬಸ್ಥರಿಗೆ ಟಿಕೆಟ್ ಕೊಟ್ಟು ಅನುಕಂಪದ ಅಲೆಯ ಲಾಭ ಪಡೆಯಲೂ ಜೆಡಿಎಸ್‌ನಲ್ಲಿ ಪ್ರಯತ್ನಗಳು ನಡೆದಿವೆ. ಈ ಮಧ್ಯೆ ಕಾಂಗ್ರೆಸ್ ಪಕ್ಷ ಕೂಡ ಉಪ ಚುನಾವಣೆಗೆ ತಯಾರಿ ಆರಂಭಿಸಿದೆ. ಇದೇ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರನ್ನು ಕರೆದು ಮಾತನಾಡಿದ್ದಾರೆ. ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಕಾಂಗ್ರೆಸ್ ಅಭ್ಯರ್ಥಿ ಆಗುವುದು ಬಹುತೇಕ ಖಚಿತವಾಗಿದ್ದು, ಜಯಚಂದ್ರ ಅವರ ಭವಿಷ್ಯ ಕೆ.ಎನ್. ರಾಜಣ್ಣ ಅವರ ಕೈಯಲ್ಲಿದೆ ಎನ್ನಲಾಗಿದೆ. ಹೀಗಾಗಿಯೇ ಡಿಕೆಶಿ ಅವರು ರಾಜಣ್ಣ ಅವರನ್ನು ಕರೆದು ಮಾತನಾಡಿದ್ದಾರೆ. ಅಷ್ಟಕ್ಕೂ ಮಾಜಿ ಶಾಸಕ ರಾಜಣ್ಣ ಅವರದ್ದು ಪಕ್ಕದ ಮಧುಗಿರಿ ಕ್ಷೇತ್ರ ಆದರೂ ಅವರು ಅದ್ಹೇಗೆ ಶಿರಾ ಕ್ಷೇತ್ರದ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರ ಭವಿಷ್ಯ ನಿರ್ಧಾರ ಮಾಡುತ್ತಾರೆ?

ದೇವೇಗೌಡರ ಸೋಲಿಗೆ ರಾಜಣ್ಣ ಕಾರಣ?

ದೇವೇಗೌಡರ ಸೋಲಿಗೆ ರಾಜಣ್ಣ ಕಾರಣ?

ಹೌದು ಶಿರಾ ಕ್ಷೇತ್ರದಲ್ಲಿ ಯಾರೇ ಕಾಂಗ್ರೆಸ್ ಅಭ್ಯರ್ಥಿಯಾದರೂ ಗೆಲ್ಲಲು ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರ ಸಹಕಾರ ಅತ್ಯಗತ್ಯ. ಇದಕ್ಕೆ ಈ ಹಿಂದೆ ತುಮಕೂರು ಜಿಲ್ಲೆಯಲ್ಲಿ ನಡೆದಿರುವ ಚುನಾವಣೆಗಳೇ ಸಾಕ್ಷಿ. 2013ರಲ್ಲಿನ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಮಾಜಿ ಸಚಿವ ಜಿ. ಪರಮಶ್ವರ್ ಅವರ ಸೋಲಿಗೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅವರ ಸೋಲಿಗೆ ಮಧುಗಿರಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರೇ ಕಾರಣ ಎಂಬ ಆರೋಪಗಳು ಇವೆ. ಇದಕ್ಕೆ ಕಾರಣಗಳೂ ಇವೆ.

ಮಂತ್ರಿಯಾಗದ ರಾಜಣ್ಣ!

ಮಂತ್ರಿಯಾಗದ ರಾಜಣ್ಣ!

ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು 2 ಬಾರಿ ಶಾಸಕರಾಗಿ ಕಳೆದ ಚುನಾವಣೆಯಲ್ಲಿ 2 ಬಾರಿ ಸೋತಿದ್ದಾರೆ. ಮೊದಲು ಬೆಳ್ಳಾವೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅವರು ಕ್ಷೇತ್ರ ವಿಂಗಡನೆ ಬಳಿಕ ಮಧುಗಿರಿ ಕ್ಷೇತ್ರಕ್ಕೆ ಬಂದಿದ್ದಾರೆ. ಅಲ್ಲಿಯೂ ಗೆದ್ದಿದ್ದರು. ಆದರೆ 2 ಬಾರಿ ಗೆಲವು ಸಾಧಿಸಿದರೂ ಅವರಿಗೆ ಸಚಿವಸ್ಥಾನ ಸಿಗಲಿಲ್ಲ. ಮತ್ತೊಂದೆಡೆ ಡಾ. ಜಿ. ಪರಮೇಶ್ವರ್ ಹಾಗೂ ಟಿ.ಬಿ. ಜಯಚಂದ್ರ ಅವರು ಜಿಲ್ಲೆಯಲ್ಲಿ ಪ್ರಬಲರಾಗುತ್ತಲೇ ಹೋದರು. ಇದು ರಾಜಣ್ಣ ಅವರಿಗೆ ಮತ್ತಷ್ಟು ತಲೆನೋವಾಯ್ತು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಪ್ರತಿ ಸಲವೂ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ರಾಜಣ್ಣ ಅವರ ಹೆಸರು ಕೇಳಿ ಬರುತ್ತಿತ್ತು. ಆದರೆ ಅವರು ಮಂತ್ರಿಯಾಗಲೇ ಇಲ್ಲ. ಹೀಗಾಗಿ ಪಕ್ಷದ ನಾಯಕರೊಂದಿಗಿನ ಅವರ ವೈಮನಸ್ಸು ಶುರುವಾಯಿತು ಎನ್ನುತ್ತಾರೆ ಅವರನ್ನು ಬಲ್ಲವರು. ಹೀಗಾಗಿಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ತುಮಕೂರು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಎಚ್ಚರಿಕೆಯನ್ನೂ ಪಕ್ಷಕ್ಕೆ ಕೊಟ್ಟಿದ್ದರು.

ಪಕ್ಷ ವಿರೋಧಿ ಚಟುವಟಿಕೆ ನೋಟೀಸ್

ಪಕ್ಷ ವಿರೋಧಿ ಚಟುವಟಿಕೆ ನೋಟೀಸ್

ಆಗ ಅವರಿಗೆ ಪಕ್ಷ ವಿರೋಧಿ ಚಟುವಟಿಕೆಯಡಿ ನೋಟೀಸ್ ಕೊಡಲಾಗಿತ್ತು. ಆಗ ರಾಜಣ್ಣ ಅವರು, ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ಅವರಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯದ ದೃಷ್ಟಿಯಿಂದ ನಾನು ಹೇಳಿಕೆ ಕೊಟ್ಟಿದ್ದೇನೆ. ಅದು ಪಕ್ಷ ವಿರೋಧಿ ಚಟುವಟಿಕೆಯಲ್ಲ ಎಂದು ತಿಳಿಸಿದ್ದರು. ಆಮೇಲೆ ಕೆಪಿಸಿಸಿ ಏನು ಕ್ರಮ ಕೈಗೊಂಡಿತು ಎಂಬುದು ಗೊತ್ತಾಗಿಲ್ಲ.

ಇದೀಗ ಮತ್ತೆ ರಾಜಣ್ಣ ಅವರು ಉಪ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಗೆ ಬೆಂಬಲ ಕೊಡುತ್ತಾರೆ ಎಂಬ ಸುದ್ದುಗಳು ತುಮಕೂರು ಜಿಲ್ಲೆಯಲ್ಲಿ ಹರಿದಾಡುತ್ತಿವೆ. ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ರಾಜಣ್ಣ ಅವರನ್ನು ಕರೆದು ಮಾತನಾಡಿದ್ದಾರೆ. ಆದರೆ ರಾಜಣ್ಣ ಅವರು ಏನೂ ಹೇಳದೆ ಹೋಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಇದು ಶಿರಾ ಕ್ಷೇತ್ರದ ಉಪ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

Recommended Video

India Nepal : ನೇಪಾಳ ಹೊಸ ವರಸೆ ಶುರು | Oneindia Kannada
ಜಯಚಂದ್ರ ಭವಿಷ್ಯ ರಾಜಣ್ಣ ಕೈಯಲ್ಲಿ?

ಜಯಚಂದ್ರ ಭವಿಷ್ಯ ರಾಜಣ್ಣ ಕೈಯಲ್ಲಿ?

ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು ಸುದ್ದಿಗೋಷ್ಠಿ ನಡೆಸಿ ಈಗಾಗಲೇ ತಾವು ಶಿರಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಚುನಾವಣೆಗೆ ನಿಲ್ಲುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಆದರಿಂದಲೇ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರ ಭವಿಷ್ಯ ಕೆ.ಎನ್. ರಾಜಣ್ಣ ಅವರ ಕೈಯಲ್ಲಿದೆ.

ಜೊತೆಗೆ ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ ಹಾಗೂ ಶಿರಾ ಕ್ಷೇತ್ರಗಳಲ್ಲಿ ಎಸ್‌ಟಿ ಸಮುದಾಯದ ಮತಗಳು ನಿರ್ಣಾಯಕ. ಕೆ.ಎನ್. ರಾಜಣ್ಣ ಅವರು ಎಸ್‌ಟಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ರಾಜಣ್ಣ ಅವರ ಅಸಹಕಾರ ಚುನಾವಣೆ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಮಧ್ಯೆ ನೀವು ಚುನಾವಣೆಯಲ್ಲಿ ಸೋತಿದ್ದೀರಿ. ಎಲ್ಲರ ಸಹಕಾರ ನಿಮ್ಮ ಗೆಲವಿಗೂ ಮುಂದೆ ಬೇಕಾಗುತ್ತದೆ ಎಂದು ಡಿಕೆಶಿ ಅವರು ರಾಜಣ್ಣ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಆದರೂ ಕೆ.ಎನ್. ರಾಜಣ್ಣ ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಭವಿಷ್ಯ ನಿಂತಿದೆ.

English summary
The by-election in the Tumkur district of Shira constituency is a challenge for the Congress party. Former Congress MLA KN Rajanna's cooperation is essential for the Congress victory in Shira. This is why KPCC president DK Shivakumar has held talks with Rajanna. Know more about,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X