ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೀರ್ಥಹಳ್ಳಿಯಲ್ಲಿ ಉಗ್ರರು: ಹಬ್ಬಿದ ಗಾಳಿ ಸುದ್ದಿಗೆ 'ಅಪ್ಪ ಅಮ್ಮ' ಯಾರು?

|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 22: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಒಂದು ಸುತ್ತಿನ 'ಶಂಕಿತ ಭಯೋತ್ಪಾದನಾ' ಸುದ್ದಿಯಲ್ಲಿ ಮಿಂದು ಎದ್ದಿದೆ. ಮಳೆಗಾಲ ಕಳೆದರೂ ನಿಲ್ಲದ ಮಳೆಯ ನಡುವೆಯೇ ಭಯವನ್ನು ಹುಟ್ಟುಹಾಕುವ ಪ್ರಯತ್ನವೊಂದು ಇಲ್ಲಿ ನಡೆದಿದ್ದು ಕಳೆದ ವಾರ; ದಸರಾ ಸಮಯದಲ್ಲಿ.

'ಉಗ್ರರಾದ ಕೆ. ಪಿ. ಶಬ್ಬೀರ್, ಯಾಸೀನ್ ಭಟ್ಕಳ್ ನಂತರ ಮತ್ತೊಮ್ಮೆ ಶಿವಮೊಗ್ಗ ಜಿಲ್ಲೆ ಭಯೋತ್ಪಾದಕರ ಸ್ಲೀಪರ್ ಸೆಲ್ ಆಯಿತೇ ಅಥವಾ ಚಟುವಟಿಕೆಯ ತಾಣವಾಯಿತೇ ಎಂಬ ಪ್ರಶ್ನೆ ಕಾಡತೊಡಗಿದೆ' ಎಂದೆಲ್ಲಾ ಪತ್ರಿಕೆಗಳು ಬರೆದವು. ಮಲೆನಾಡಿನ ಜನ ಮಾತ್ರ ಅಲ್ಲ, ಇಡೀ ಜಿಲ್ಲೆ ಸಹಜವಾಗಿಯೇ ಆತಂಕಕ್ಕೆ ಒಳಗಾಯಿತು.

ಭಯೋತ್ಪಾದಕ ಸಂಘಟನೆ ನಂಟು ಹೊಂದಿದ್ದ ಹುಬ್ಬಳ್ಳಿ ವ್ಯಕ್ತಿ ಬಂಧನಭಯೋತ್ಪಾದಕ ಸಂಘಟನೆ ನಂಟು ಹೊಂದಿದ್ದ ಹುಬ್ಬಳ್ಳಿ ವ್ಯಕ್ತಿ ಬಂಧನ

ಕಳೆದ ವಿಧಾನಸಭಾ ಚುನಾವಣೆಗೂ ಮೊದಲು ನಂದಿತ ಎಂಬ ಬಾಲಕಿಯೊಬ್ಬಳು ತೀರ್ಥಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಸಾವಿಗೂ ಮುನ್ನ ಆಕೆಯನ್ನು ಕೆಲವು ಮುಸ್ಲಿಂ ಯುವಕರು 'ಆನಂದ ಗಿರಿ ಬೆಟ್ಟ'ಕ್ಕೆ ಕರೆದೊಯ್ದಿದ್ದರು ಎಂಬುದು ನಂತರ ವಿವಾದವಾಯಿತು. ಆಕೆಯ ಮೇಲೆ ಅತ್ಯಾಚಾರ ಎಸಗಿ ಯುವಕರು ಹತ್ಯೆ ಮಾಡಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ವ್ಯವಸ್ಥಿತವಾಗಿ ಹರಡಲಾಯಿತು. ಅವತ್ತು ಶಾಸಕರಾಗಿದ್ದ ಕಿಮ್ಮನೆ ರತ್ನಾಕರ್ ಆರೋಪಿ ಯುವಕರಿಗೆ ಧರ್ಮದ ಕಾರಣಕ್ಕೆ ರಕ್ಷಣೆ ನೀಡುತ್ತಿದ್ದಾರೆ ಎಂಬ ಗುಲ್ಲೆದ್ದಿತು. ಚುನಾವಣೆಯಲ್ಲಿ ಕಿಮ್ಮನೆ ರತ್ನಾಕರ್ ಸೋಲಲು ಹಾಗೂ ಬಿಜೆಪಿ ಪಕ್ಷದ ಆರಗ ಜ್ಞಾನೇಂದ್ರ ಗೆಲ್ಲಲು ನಂದಿತಾ ಪ್ರಕರಣ ಕೂಡ ಒಂದು ಕಾರಣ ಎಂಬುದು ಸ್ಥಳೀಯ ರಾಜಕೀಯ ವಿಶ್ಲೇಷಣೆಗಳು.

Bursting the fake news of terror plot in Thirthahalli

Recommended Video

ಬಿ ಎಸ್ ಯಡಿಯೂರಪ್ಪ ಆಪ್ತ ಜೆಡಿಎಸ್ ಗೆ ಸೇರ್ಪಡೆ | Oneindia Kannada

ಸಮಾಜವಾದಿ ಹಿನ್ನೆಲೆಯ ರಾಜಕಾರಣಿಗಳನ್ನು, ಚುನಾವಣೆ ಸಮಯದಲ್ಲಿ ಜನರ ಸಮಸ್ಯೆಗಳ ವಿಚಾರಗಳನ್ನು ಚರ್ಚಿಸುತ್ತಿದ್ದ ತಾಲೂಕಿನಲ್ಲಿ ನಂದಿತಾ ಪ್ರಕರಣ ಧರ್ಮದ ಸುತ್ತ ಚರ್ಚೆಯನ್ನು ನಡೆಸುವಂತೆ ಜನರನ್ನು ಮೊದಲ ಬಾರಿಗೆ ಪ್ರೇರೇಪಣೆ ನೀಡಿತು. ಅದರ ನಂತರ ಎರಡನೇ ಬಾರಿ ಅಷ್ಟೆ ದೊಡ್ಡ ಪ್ರಮಾಣದಲ್ಲಿ ಸುಳ್ಳಿ ಸುದ್ದಿ ಹಬ್ಬಿಸುವ ಪ್ರಯತ್ನ ನಡೆದಿದ್ದು ಭಯೋತ್ಪಾದನೆ ವಿಚಾರದಲ್ಲಿ, ಕಳೆದ ವಾರ. ಈ ಬಾರಿಯಂತೂ ತೀರ್ಥಹಳ್ಳಿಗೆ ಅನತಿ ದೂರದಲ್ಲಿರುವ ಸಂಕದಹೊಳೆಯಲ್ಲಿ ಶಂಕಿತ ಭಯತ್ಪಾದಕನ ಬಂಧನವಾಗಿದೆ ಎಂದು ಸುದ್ದಿಗೆ ನೀಡಿದ ತಿರುವು ಸ್ಥಳೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಯಿತು.

ಒಂದು ಕಡೆ ಸುಳ್ಳು ಸುದ್ದಿಯನ್ನು ಮುಖ್ಯವಾಹಿನಿ ಮಾಧ್ಯಮಗಳೇ ಹರಡುತ್ತಿದ್ದರೆ, ಅತ್ತ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ತೀರ್ಥಹಳ್ಳಿಯ ರಸ್ತೆಗಳಿಗೆ ಇಳಿದಿತ್ತು. ಅಸಲಿಗೆ ಅಲ್ಲಿ ನಡೆದಿದ್ದ ಸಂಗತಿಯೇ ಬೇರೆ ಇತ್ತು.

ಅದು ಸ್ಯಾಟಲೈಟ್‌ ಫೋನ್‌:

ಬೆಂಕಿ ಇಲ್ಲದೆ ಹೊಗೆಯಾಡಲು ಸಾಧ್ಯವಿಲ್ಲ. ಇಲ್ಲಿಯೂ ಕೂಡ ನಡೆದಿದ್ದು ಅದೇ. ತೀರ್ಥಹಳ್ಳಿಯ ನಗರದಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆಯಾಗಿದೆ ಎಂಬುದನ್ನು ಮೊದಲು ಪತ್ತೆ ಹಚ್ಚಿದ್ದು ಡಿಫೆನ್ಸ್ ರಿಸರ್ಚ್‌ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್‌ (ಡಿಆರ್‌ಡಿಓ), ಸುಮಾರು ಒಂದು ತಿಂಗಳ ಹಿಂದೆ. ಪೊಲೀಸ್‌ ಮೂಲಗಳು ಹೇಳುವ ಪ್ರಕಾರ, "ನಗರ ಸಮೀಪ ಬ್ಯಾಕ್‌ವಾಟರ್ ಜಾಗದಲ್ಲಿ ಮೊದಲು ಸ್ಯಾಟಲೈಟ್‌ ಫೋನ್‌ ಬಳಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ತಕ್ಷಣ ಎಟಿಎಸ್‌ಗೆ ತನಿಖೆಗೆ ಆದೇಶಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದ ಸಮಯದಲ್ಲೇ 10 ದಿನಗಳ ಕೆಳಗೆ ಸಂಕದಹೊಳೆ ಎಂಬಲ್ಲಿ ಸ್ಯಾಟಲೈಟ್‌ ಫೋನ್ ಮತ್ತೆ ಬಳಕೆಯಾದ ಕುರಿತು ಮಾಹಿತಿ ಸಿಕ್ಕಿದೆ. ತಕ್ಷಣ ರಸ್ತೆಗೆ ನಾಕಾಬಂಧಿ ಹಾಕಲಾಗಿದೆ. ವಾಹನಗಳ ತಪಾಸಣೆ ಆರಂಭಿಸಲಾಗಿದೆ. ಜತೆಗೆ, ಸ್ಯಾಟಲೈಟ್ ಬಳಕೆಯಾದ ಜಾಗದಲ್ಲಿದ್ದ ತೋಟದ ಮಾಲೀಕ ಜಬ್ಬಾರ್ ಸಾಬ್‌ ಎಂಬುವವರನ್ನು ವಿಚಾರಣೆ ನಡೆಸಲಾಗಿದೆ."

ಸುಳ್ಳು ಸುದ್ದಿಗೆ ಆಹಾರ:

ಜಮೀನಿನ ಮಾಲೀಕರು ಮುಸ್ಲಿಂ ಆಗಿದ್ದ ಕಾರಣಕ್ಕೆ ಏನೋ ಸುದ್ದಿಗೆ ಹೊಸ ತಿರುವು ನೀಡುವ ಪ್ರಯತ್ನ ನಡೆದಿದ್ದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹಿಂದೆ ಕೂಡ ಜಿಲ್ಲೆಯಲ್ಲಿ ಭಯೋತ್ಪಾದಕರು ಆಶ್ರಯ ಪಡೆದಿದ್ದ ವರದಿಗಳಾದ ಹಿನ್ನೆಲೆಯನ್ನು ಮುಂದಿಟ್ಟು ಸುದ್ದಿ ಸ್ವರೂಪ ಪಡೆದುಕೊಂಡಿತು. ಜಬ್ಬಾರ್ ಸಾಬ್ ತೋಟ ಇರುವುದು ಸಂಕದ ಹೊಳೆಯಲ್ಲಿಯೇ ಆದರೂ ಮನೆ ಇರುವುದು ತೀರ್ಥಹಳ್ಳಿ ಸಿಟಿ ಒಳಗೆ ಇರುವ ಮಾರ್ಕೆಟ್ ರಸ್ತೆಯಲ್ಲಿ. ಪೊಲೀಸರು ಕರೆದೊಯ್ದು ವಿಚಾರಣೆ ನಡೆಸಿದ ಮಾತ್ರಕ್ಕೆ ಬಂಧನವೇ ನಡೆದಿದೆ, ಸಂಚು ಬಯಲಾಗಿದೆ ಎಂದು ಹೊರಬಿದ್ದ ವರದಿಗಳು ಸಾಕಷ್ಟು ಘಾಸಿ ಮಾಡಿದವು.

"ಜಬ್ಬಾರ್ ಸಾಬ್ ಅವರಿಗೆ ಯಾವ ಮಾಹಿತಿಯೂ ಇರಲಿಲ್ಲ ಎಂಬುದು ಮೇಲ್ನೋಟಕ್ಕೆ ಅರ್ಥ ಆಯಿತು. ಆ ಕಾರಣಕ್ಕೆ ಮನೆಗೆ ಕಳುಹಿಸಿದೆವು. ಅದು ಯಾಕೆ ಮತ್ತು ಹೇಗೆ ಮಾಧ್ಯಮಗಳಿಗೆ ಸೋರಿಕೆಯಾಯಿತು ಎಂಬುದು ಗೊತ್ತಿಲ್ಲ,'' ಎನ್ನುತ್ತಾರೆ ತೀರ್ಥಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಅಧಿಕಾರಿಯೊಬ್ಬರು.

ಕೊನೆಗೆ, ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಎಂ. ಶಾಂತರಾಜು, "ಜನರು ಆತಂಕಕ್ಕೀಡಾಗುವ ಅಗತ್ಯವಿಲ್ಲ. ಕೆಲವು ಪೂರ್ವಭಾವಿ ತನಿಖೆಗಾಗಿ ತಪಾಸಣೆ ನಡೆಸಲಾಗಿದೆ. ಉಗ್ರರ ಬಂಧನವಾಗಿದೆ ಅನ್ನುವುದು ಸುಳ್ಳು" ಎನ್ನುವ ಮೂಲಕ ಗಾಳಿ ಸುದ್ದಿಗೆ ತೆರೆ ಎಳೆದರು.

ಇವತ್ತಿನ ಸ್ಥಿತಿ ಹೇಗಿದೆ?

ಸದ್ಯ ಭಯೋತ್ಪಾದನೆಯ ಕುರಿತಾದ ಗಾಳಿ ಸುದ್ದಿ ತಣ್ಣಗಾಗಿದೆ. ಎಟಿಎಸ್‌ ಚಲನವಲನಗಳು ಕಡಿಮೆಯಾಗಿರುವುದರಿಂದ ಸ್ಥಳೀಯ ಪೊಲೀಸರು ಕೂಡ ಅರಾಮಾಗಿದ್ದಾರೆ. ಜಬ್ಬಾರ್ ಸಾಬ್ ಮತ್ತೆ ಸಹಜ ಜೀವನಕ್ಕೆ ಮರಳುವ ಪ್ರಯತ್ನದಲ್ಲಿದ್ದಾರೆ. ಸುಳ್ಳು ಸುದ್ದಿಗಳ ಜಾಡಗಳನ್ನು ಗಮನಿಸಿದರೆ ಇಂತಹ ಶಾಂತ ಪರಿಸ್ಥಿತಿಯನ್ನು ಅವು ಹೆಚ್ಚು ದಿನ ಸಹಿಸಲಾರವು. ಎಚ್ಚರಿಕೆಯಲ್ಲಿರಬೇಕಿರುವುದು ತಾಲೂಕಿನ ಜನ ಅಷ್ಟೆ.

English summary
Thirthahalli taluk of Malnad region went under fear because of the fake news of suspected terrorist arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X