ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಮರಳಿದ ಬಿ.ಎಸ್.ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಜ.9: ಹಲವು ದಿನಗಳ ಗೊಂದಲಗಳಿಗೆ ಅಂತಿಮವಾಗಿ ತೆರೆಬಿದ್ದಿದ್ದು, ಮಾಜಿ ಸಿಎಂ ಮತ್ತು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುರುವಾರ ಬೆಂಬಲಿಗರೊಂದಿಗೆ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ನಾಲ್ವರು ಶಾಸಕರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರೊಂದಿಗೆ ಯಡಿಯೂರಪ್ಪ ಬಿಜೆಪಿಗೆ ಮರಳಿದ್ದಾರೆ. ಬಿಜೆಪಿ ನಾಯಕರು ಯಡಿಯೂರಪ್ಪ ಅವರಿಗೆ ಭವ್ಯ ಸ್ವಾಗತ ಕೋರಿದ್ದಾರೆ.

ಗುರುವಾರ ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಬಿ.ಎಸ್.ಯಡಿಯೂರಪ್ಪ ಕಾಲ್ನೆಡಿಗೆ ಮೂಲಕ ಬಿಜೆಪಿ ಕಚೇರಿಗೆ ಆಗಮಿಸಿದರು. ನಾಲ್ವರು ಶಾಸಕರು ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಸಿಎಂ ಉದಾಸಿ ಮುಂತಾದವರು ಯಡಿಯೂರಪ್ಪ ಅವರ ಜೊತೆಗಿದ್ದರು.

bjp

ಬಿ.ಎಸ್.ಯಡಿಯೂರಪ್ಪ ಅವರಿಗೆ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಭವ್ಯ ಸ್ವಾಗತ ದೊರೆಯಿತು. ಒಂದೂವರೆ ವರ್ಷದ ಬಳಿಕ ಪಕ್ಷಕ್ಕೆ ಮರಳುತ್ತಿರುವ ಅವರಿಗೆ ಪಕ್ಷದ ಕಾರ್ಯಕರ್ತರು ಸ್ವಾಗತ ಕೋರಿದರು. ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಯಡಿಯೂರಪ್ಪ ಅವರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡುವ ಮೂಲಕ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅನಂತ್ ಕುಮಾರ್, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಅಶೋಕ್ ಬಿಜೆಪಿಯ ಹಲವು ಶಾಸಕರು, ವಿಧಾನ ಪರಿಷತ್ ಸದಸ್ಯರು ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು. ಕೆಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವಿ.ಧನಂಜಯ್ ಕುಮಾರ್ ಹೊರತು ಪಡಿಸಿ ಉಳಿದ ನಾಯಕರು ಯಡಿಯೂರಪ್ಪ ಜೊತೆ ಬಿಜೆಪಿಗೆ ಮರಳಿದರು. [ಅಡ್ವಾಣಿ ಒಪ್ಪಿದರೆ ಧನಂಜಯ್ ಬಿಜೆಪಿಗೆ]

ಬಿಜೆಪಿಗೆ ಮರಳಿದವರು : ಯಡಿಯೂರಪ್ಪ ಅವರ ಜೊತೆ ಕೆಜೆಪಿಗೆ ತೆರಳಿದ್ದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಸಿಎಂ ಉದಾಸಿ, ಎಂಪಿ ರೇಣುಕಾಚಾರ್ಯ, ಎಂ.ಡಿ.ಲಕ್ಷ್ಮೀ ನಾರಾಯಣ, ಬಿ.ಪಿ.ಹರೀಶ್, ಕೆಜೆಪಿಯ ನಾಲ್ವರು ಶಾಸಕರು ಬಿಜೆಪಿಗೆ ಮರಳಿದರು. ಆದರೆ, ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ವಿ.ಧನಂಜಯ್ ಕುಮಾರ್ ಮಾತ್ರ ಬಿಜೆಪಿಗೆ ಇಂದು ಸೇರ್ಪಡೆಗೊಂಡಿಲ್ಲ.

ಬಿಜೆಪಿಗೆ ಮರಳಿದ ಶಾಸಕರು : ಬಿಎಸ್ ಯಡಿಯೂರಪ್ಪ, ಡಾ ಗುರುಪಾದಪ್ಪ ನಾಗಮಾರಪಲ್ಲಿ, ಯುಬಿ ಬಣಕಾರ್, ಡಾ ವಿಶ್ವನಾಥ ಈರಣ್ಣಗೌಡ ಪಾಟೀಲ. ಮರಳಬೇಕಾಗಿರುವುದು ಆಳಂದ ಶಾಸಕ ಬಿಆರ್ ಪಾಟೀಲ್ ಮತ್ತು ಶಹಪುರದ ಗುರುಪಾಟೀಲ್ ಶಿರವಾಳ. [ಯಡಿಯೂರಪ್ಪ ಮುಂದಿರುವ ಸವಾಲುಗಳು]

ಯಡಿಯೂರಪ್ಪ ಹೇಳಿದ್ದೇನು : ಬಿಜೆಪಿಗೆ ಮರಳಿದ ಬಳಿಕ ಪ್ರಹ್ಲಾದ್ ಜೋಶಿ ಮತ್ತು ಯಡಿಯೂರಪ್ಪ ಜಂಟಿ ಪ್ರತಿಕಾಗೋಷ್ಠಿ ನಡೆಸಿದರು. ಬಿಜೆಪಿಗೆ ಮರಳಿದ ನಂತರ ಮಾತನಾಡಿದ ಯಡಿಯೂರಪ್ಪ ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಿಂದ ಮುಖ್ಯಮಂತ್ರಿಯ ತನಕ ಎಲ್ಲಾ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಆದ್ದರಿಂದ ಇದಕ್ಕಿಂತ ಹೆಚ್ಚಿನ ಸ್ಥಾನಮಾನದ ನಿರೀಕ್ಷೆ ಇಲ್ಲ ಎಂದು ಹೇಳಿದರು.

ನಮ್ಮ ನಡುವಿನ ವೈ ಮನಸ್ಸನ್ನು ಉಪಯೋಗಿಸಿಕೊಂಡ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ, ಸಿದ್ದರಾಮಯ್ಯ ಅವರ ಸರ್ಕಾರದ ಕಾರ್ಯವೈಖರಿ ಬಗ್ಗೆ ಜನರಿಗೆ ಈಗ ಮನದಟ್ಟಾಗಿದೆ. ಕರ್ನಾಟಕ ಮತ್ತು ದೇಶದ ಅಭಿವೃದ್ಧಿಗಾಗಿ ಬೆಂಬಲಿಗರೊಂದಿಗೆ ಬಿಜೆಪಿಗೆ ಮರಳಿದ್ದು, ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸುತ್ತೇನೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಮುಕ್ತ ಭಾರತ ನಮ್ಮ ಗುರಿ : ಕಾಂಗ್ರೆಸ್ ಪಕ್ಷದಲ್ಲಿ ಇಂದು ನಾಯಕರು ಇಲ್ಲವಾಗಿದ್ದಾರೆ. ಪಕ್ಷ ಹಲವಾರು ಭ್ರಷ್ಟಾಚಾರಗಳಲ್ಲಿ ತೊಡಗಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮುಕ್ತ ಭಾರತವನ್ನು ಕಟ್ಟೋಣ ಎಂದು ಕರೆ ನೀಡಿದ್ದಾರೆ. ಆದ್ದರಿಂದ ಪಕ್ಷಕ್ಕೆ ಮರಳಿದ್ದು, ರಾಜ್ಯವನ್ನು ಕಾಂಗ್ರೆಸ್ ಮುಕ್ತವಾಗಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.

ನರೇಂದ್ರ ಮೋದಿ ಪ್ರಧಾನಿಯಾಗಬೇಕು : ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಘೋಷಿಸಿದ ದಿನವೇ ನಾನು ಬಿಜೆಪಿಗೆ ಮರಳಬೇಕು ಎಂದು ನಿರ್ಧಾರ ಮಾಡಿದೆ. ಎನ್ ಡಿಎ ಮೈತ್ರಿಕೂಟಕ್ಕೆ ಕೆಜೆಪಿ ಬೆಂಬಲ ಸೂಚಿಸುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಪತ್ರ ಬರೆದ್ದೇನೆ. ಕೆಜೆಪಿ ಮತ್ತು ಬಿಜೆಪಿ ವಿಲೀನಕ್ಕೆ ನಮ್ಮ ಸಂಫೂರ್ಣ ಸಹಮತವಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂಬುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದರು.

ಪಕ್ಷ ಸಂಘಟನೆಗೆ ಆದ್ಯತೆ : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಇಂದಿನಿಂದಲೇ ಬಿಜೆಪಿ ಪಕ್ಷವನ್ನು ಸಂಘಟನೆ ಮಾಡಲು ಆರಂಭಿಸುತ್ತೇನೆ. ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವುದು ಬಿಜೆಪಿಯ ಗುರಿಯಾಗಿದೆ ಅದಕ್ಕಾಗಿ ಶ್ರಮವಹಿಸಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

English summary
Former chief minister and KJP president B.S Yeddyurappa and his followers formally join BJP On January 9 Thursday. B.S Yeddyurappa and his supporters get party primary membership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X