ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆ : ಅರಳಿದ ಕಮಲ, ಮುದುಡಿದ ಕಾಂಗ್ರೆಸ್

By Prasad
|
Google Oneindia Kannada News

ಬೆಂಗಳೂರು, ಫೆಬ್ರವರಿ 16 : ಮೂವರು ಶಾಸಕರ ಸಾವಿನಿಂದ ತೆರವಾಗಿದ್ದ ಮೂರು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಹೆಬ್ಬಾಳ ಮತ್ತು ದೇವದುರ್ಗದಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಿದ್ದು, ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದು ತೃಪ್ತಿಪಟ್ಟುಕೊಂಡಿದೆ. ಜಾತ್ಯತೀತ ಜನತಾದಳದ ಅಭ್ಯರ್ಥಿಗಳು ಮೂರರಲ್ಲೂ ಠೇವಣಿ ಕಳೆದುಕೊಂಡಿದ್ದಾರೆ.

ಭಾರೀ ಪ್ರತಿಷ್ಠೆಯ ಕಣವಾಗಿದ್ದ ಹೆಬ್ಬಾಳದಲ್ಲಿ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಅಭ್ಯರ್ಥಿ, ಜಾಫರ್ ಷರೀಫ್ ಅವರ ಮೊಮ್ಮಗ ರೆಹಮಾನ್ ಷರೀಫ್ ಅವರನ್ನು ಸದೆಬಡಿದು, ಕಾಂಗ್ರೆಸ್ಸಿಗೆ ಭಾರೀ ಮುಖಭಂಗ ಉಂಟು ಮಾಡಿದ್ದಾರೆ. ಜೆಡಿಎಸ್‌ನ ಇಸ್ಮಾಯಿಲ್ ಷರೀಫ್ ಕಾಂಗ್ರೆಸ್ಸಿನ ಕೆಲ ಮತಗಳನ್ನು ದೋಚಿದ್ದರಿಂದ ಬಿಜೆಪಿ ಗೆಲುವು ಸುಲಭವಾಯಿತು. ಬಿಜೆಪಿಯ ಜಗದೀಶ್ ಕುಮಾರ್ ಅವರು ಅಸುನೀಗಿದ್ದರಿಂದ ಇಲ್ಲಿ ಚುನಾವಣೆ ನಡೆದಿತ್ತು. [ಹೆಬ್ಬಾಳದಲ್ಲಿ ಕಾಂಗ್ರೆಸ್ ಸೋಲಿಗೆ 7 ಕಾರಣಗಳು!]

ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಬಿಜೆಪಿಯ ಶಿವನಗೌಡ ನಾಯಕ್ ಮತ್ತು ಕಾಂಗ್ರೆಸ್ಸಿನ ರಾಜಶೇಖರ ನಾಯಕ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತದೆಂದು ನಿರೀಕ್ಷಿಸಲಾಗಿತ್ತು. ಆದರೆ, ಶಿವನಗೌಡ ನಾಯಕ್ ಅವರು 16 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದರು. ಜೆಡಿಎಸ್ ಅಭ್ಯರ್ಥಿ ಕರಿಯಮ್ಮ ನಾಯಕ್ ಮೂರನೇ ಸ್ಥಾನ ಗಳಿಸಿದರು. ಇಲ್ಲಿ ಕಾಂಗ್ರೆಸ್‌ನ ವೆಂಕಟೇಶ್ ನಾಯಕ್ ಅವರು ಸಾವನ್ನಪ್ಪಿದ್ದರಿಂದ ಉಪಚುನಾವಣೆ ನಡೆದಿತ್ತು. ವೆಂಕಟೇಶ್ ಅವರ ಮಗ ರಾಜಶೇಖರ ಚುನಾವಣೆಗೆ ನಿಂತಿದ್ದರೂ ಅನುಕಂಪದ ಮತಗಳನ್ನು ಪಡೆಯುವಲ್ಲಿ ವಿಫಲರಾದರು. [ಮೂರು ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ]

BJP wins 2 out of 3 in Karnataka Assembly By-elections

ಇನ್ನು ಬೀದರ್ ವಿಧಾನಸಭೆ ಕಣದಲ್ಲಿ ಕಾಂಗ್ರೆಸ್ಸಿನ ರಹೀಂ ಖಾನ್ ಅವರೆದಿರು ಬಿಜೆಪಿಯ ಪ್ರಕಾಶ್ ಖಂಡ್ರೆ ಮತ್ತು ಜೆಡಿಎಸ್ಸಿನ ಮೊಹಮ್ಮದ್ ಅಯಾಜ್ ಅವರ ಆಟ ನಡೆದಿಲ್ಲ. ರಹೀಂ ಖಾನ್ ಅವರು ಹದಿನೆಂಟು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿ ಕಾಂಗ್ರೆಸ್ಸಿನ ಮಾನವನ್ನು ಅಲ್ಪಮಟ್ಟಿಗೆ ಕಾಪಾಡಿದ್ದಾರೆ. ಇಲ್ಲಿ ಗುರುಪಾದಪ್ಪ ನಾಗಮಾರಪಲ್ಲಿ (ಕೆಜೆಪಿ) ಅವರ ಅಕಾಲಿಕ ಮರಣದಿಂದ ಉಪಚುನಾವಣೆ ಎದುರಾಗಿತ್ತು. [2013ರ ಚುನಾವಣೆಯಲ್ಲಿ ಗೆದ್ದವರು, ಸೋತವರು]

ಎರಡು ಕ್ಷೇತ್ರಗಳಲ್ಲಿ ಜಯಶಾಲಿಯಾಗಿದ್ದರಿಂದ, 2013ರ ಚುನಾವಣೆಯಲ್ಲಿ ಮುದುಡಿದ್ದ ಕಮಲ ಸ್ವಲ್ಪಮಟ್ಟಿಗೆ ಅರಳಿದಂತಾಗಿದೆ. ಆಂತರಿಕ ಜಗಳ, ಮನಸ್ತಾಪಗಳಿಂದ ಜರ್ಜರಿತವಾಗಿರುವ ಜೆಡಿಎಸ್ ಈ ಚುನಾವಣೆಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿತ್ತು. ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿರುವ ಕಾಂಗ್ರೆಸ್ ಈಗಲೇ ಆಂತರಿಕ ಜಗಳಗಳನ್ನು ಬಗೆಹರಿಸಿಕೊಳ್ಳುವುದು ಒಳಿತು. ಒಗ್ಗಟ್ಟು ತೋರಿಸದಿದ್ದರೆ ಏನಾಗುತ್ತದೆಂದು ಹೆಬ್ಬಾಳದ ಮತದಾರರು ಕಾಂಗ್ರೆಸ್ಸಿಗೆ ತೋರಿಸಿಕೊಟ್ಟಿದ್ದಾರೆ. [ಸಿದ್ದರಾಮಯ್ಯ ಸರ್ಕಾರಕ್ಕೆ ತೀವ್ರ ಮುಖಭಂಗ, ಟೈಂ ಸರಿ ಇಲ್ಲ ಕಂಡ್ರಿ!]

ಕ್ಷೇತ್ರಗಳು ಗೆದ್ದವರು ಮತಗಳು ಸೋತವರು ಮತಗಳು
ಹೆಬ್ಬಾಳ ವೈ.ಎ. ನಾರಾಯಣ ಸ್ವಾಮಿ (ಬಿಜೆಪಿ) 60,367 ಅಬ್ದುಲ್ ರೆಹಮಾನ್ ಷರೀಫ್ (ಕಾಂಗ್ರೆಸ್) 41,218
ದೇವದುರ್ಗ ಶಿವನಗೌಡ ನಾಯಕ್ (ಬಿಜೆಪಿ) 72,647 ರಾಜಶೇಖರ ನಾಯಕ್ (ಕಾಂಗ್ರೆಸ್) 55,776
ಬೀದರ್ ರಹೀಂ ಖಾನ್ (ಕಾಂಗ್ರೆಸ್) 69,250 ಪ್ರಕಾಶ್ ಖಂಡ್ರೆ (ಬಿಜೆಪಿ) 46,425
English summary
In just concluded by-election to Hebbal, Devadurga (Raichur) and Bidar assembly constituencies BJP has won first two seats and Congress has won Bidar. JDS nowhere stood upto the competition. The double win has given some respite to BJP, which had lost thoroughly in 2013 assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X