ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯವರು ಸುಳ್ಳು ಹೇಳ್ತಾರೆ, ನಾವು ಸತ್ಯ ಹೇಳೋಣ; ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಆಗಸ್ಟ್ 09: "ದೇಶಾದ್ಯಂತ ಕ್ವಿಟ್‌ ಇಂಡಿಯಾ ಚಳವಳಿ ದಿನವನ್ನು ಆಚರಣೆ ಮಾಡುತ್ತಿದ್ದೇವೆ. 1942 ಆಗಸ್ಟ್‌ 8 ರಂದು ಮುಂಬೈ ಅಧಿವೇಶನದಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಕರೆಯನ್ನು ಗಾಂಧೀಜಿ ಅವರು ಕರೆಕೊಟ್ಟರು. ಅದೇ ದಿನ ಸಂಜೆ ಮಾಡು ಇಲ್ಲವೆ ಮಡಿ ಎಂದು ಸ್ವಾತಂತ್ರ್ಯ ಹೋರಾಟಗಾರರಿಗೆ ಕರೆ ಕೊಟ್ಟರು" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

"1942 ಆಗಸ್ಟ್‌ 9ರಂದು ಕ್ವಿಟ್‌ ಇಂಡಿಯಾ ಚಳವಳಿ ಆರಂಭವಾಯಿತು. ನಂತರದ ದಿನ 1 ಲಕ್ಷಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರನ್ನು ಬ್ರಿಟಿಷರು ಬಂಧಿಸಿದರು. ಗಾಂಧೀಜಿ ಅವರನ್ನು ಬಂಧಿಸಿ ಆಗಾಖಾನ್‌ ಅರಮನೆಯಲ್ಲಿಡುತ್ತಾರೆ. ಬ್ರಿಟಿಷರು ಸುಮಾರು 200 ವರ್ಷಗಳ ಕಾಲ ನಮ್ಮನ್ನು ಗುಲಾಮರನ್ನಾಗಿ ಮಾಡಿಕೊಂಡು ಆಳಿದರು" ಎಂದು ಸಿದ್ದರಾಮಯ್ಯ ತಿಳಿಸಿದರು.

ಕ್ವಿಟ್ ಇಂಡಿಯಾ ದಿನಾಚರಣೆ, ರಾಜಕೀಯ ನಾಯಕರ ಇನ್ನಿತರ ಕಾರ್ಯಕ್ರಮಗಳ ವಿವರಕ್ವಿಟ್ ಇಂಡಿಯಾ ದಿನಾಚರಣೆ, ರಾಜಕೀಯ ನಾಯಕರ ಇನ್ನಿತರ ಕಾರ್ಯಕ್ರಮಗಳ ವಿವರ

"ಆರ್‌ ಎಸ್‌ ಎಸ್ ಸ್ಥಾಪನೆಯಾದದ್ದು 1925ರಲ್ಲಿ. 1930 ರಲ್ಲಿ ದಂಡಿ ಯಾತ್ರೆ. 1942ರಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ನಡೆಯಿತು. ಈ ಸಂದರ್ಭದಲ್ಲಿ ಲಕ್ಷಾಂತರ ಜನರು ಸೆರೆಮನೆ ವಾಸ ಅನುಭವಿಸಿದರು. ಆದರೆ ಈ ಯಾವ ಹೋರಾಟಗಳಲ್ಲೂ ಸಂಘ ಪರಿವಾರ ಭಾಗವಹಿಸಲಿಲ್ಲ. ಜನಸಂಘ ಸ್ಥಾಪನೆಯಾದದ್ದು 1951. ಸ್ವಾತಂತ್ರ್ಯ ಬಂದ ನಂತರ ಸಂಘದ ರಾಜಕೀಯ ಪಕ್ಷ ಸ್ಥಾಪನೆಯಾದದ್ದು. ಈಗ ಬಿಜೆಪಿ ಅವರು ಹರ್‌ ಘರ್‌ ತಿರಂಗಾ ಅಭಿಯಾನ ಮಾಡುತ್ತಿದ್ದಾರೆ, ಆದರೆ ಗೋಲ್ವಾಲ್ಕರ್‌ ಮತ್ತು ಸಾವರ್ಕರ್‌ ಅವರು ತ್ರಿವರ್ಣ ಧ್ವಜವನ್ನು ವಿರೋಧ ಮಾಡಿದ್ದರು. 53 ವರ್ಷಗಳ ಕಾಲ ನಾಗ್ಪುರದ ಆರ್‌ ಎಸ್‌ ಎಸ್‌ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಿರಲಿಲ್ಲ. ಇತ್ತೀಚೆಗೆ ಇಬ್ಬರು ಯುವಕರು ಹೋಗಿ ಗಲಾಟೆ ಮಾಡಿದ ಮೇಲೆ ಧ್ವಜ ಹಾರಿಸಲು ಆರಂಭಿಸಿದ್ದಾರೆ" ಎಂದು ದೂರಿದರು.

ಬಸವಣ್ಣನವರು ಬಂದ ಶಿಕ್ಷಣ ಸಿಗಲು ಆರಂಭ

ಬಸವಣ್ಣನವರು ಬಂದ ಶಿಕ್ಷಣ ಸಿಗಲು ಆರಂಭ

ಆರ್‌ ಎಸ್‌ ಎಸ್‌, ಭಜರಂಗದಳ, ವಿಶ್ವಹಿಂದೂ ಪರಿಷತ್‌ ಈ ಎಲ್ಲಾ ಸಂಘಟನೆಗಳು ಸಂಘಪರಿವಾರದ ಬೇರೆ ಬೇರೆ ಮುಖಗಳು ಅಷ್ಟೆ. ಇವರೆಲ್ಲರೂ ಶ್ರೇಣೀಕೃತ ವ್ಯವಸ್ಥೆ ಮತ್ತು ಅಸಮಾನತೆಯ ಕಡೆ ಒಲವು ಇಟ್ಟುಕೊಂಡಿದ್ದಾರೆ. ಜಾತಿ ವ್ಯವಸ್ಥೆ ಇಲ್ಲದೆ ಹೋಗಿದ್ದರೆ ಅಸಮಾನತೆ ಇರುತ್ತಿರಲಿಲ್ಲ. ಸಾವಿರಾರು ವರ್ಷಗಳ ಕಾಲ ಮಹಿಳೆಯರು ಮತ್ತು ಶೂದ್ರರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಬಸವಣ್ಣನವರು ಬಂದಮೇಲೆ ಎಲ್ಲರಿಗೂ ಶಿಕ್ಷಣ ಸಿಗಲು ಆರಂಭವಾದದ್ದು ಎಂದು ಸಿದ್ದರಾಮಯ್ಯ ಹೇಳಿದರು.

ನರೇಂದ್ರ ಮೋದಿ ದೊಡ್ಡ ನಾಟಕಕಾರ

ನರೇಂದ್ರ ಮೋದಿ ದೊಡ್ಡ ನಾಟಕಕಾರ

ರಾಷ್ಟ್ರಧ್ವಜವನ್ನು ವಿರೋಧ ಮಾಡುತ್ತಾರೆ ಎಂದರೆ ಇವರಲ್ಲಿ ದೇಶಭಕ್ತಿ ಇರಲು ಸಾಧ್ಯವೇ?. ಆದರೆ ಈಗ ಹರ್‌ ಘರ್‌ ತಿರಂಗಾ ಎಂಬ ನಾಟಕವಾಡಲು ಆರಂಭಿಸಿದ್ದಾರೆ. 1985ರಲ್ಲಿ ಡಾ. ಹ್ಯೂಮ್‌ ಎನ್ನುವವರಿಂದ ಕಾಂಗ್ರೆಸ್‌ ಸ್ಥಾಪನೆಯಾಗಿದ್ದು, ಅಂದಿನಿಂದ ಇಂದಿನವರೆಗೆ ಸ್ವಾತಂತ್ರ್ಯದ ಗಾಳಿಯನ್ನು ನಾವು ಉಸಿರಾಡುತ್ತಿದ್ದರೆ ಅದಕ್ಕೆ ಕಾಂಗ್ರೆಸ್‌ ಪಕ್ಷ ಕಾರಣ. 1915ರಲ್ಲಿ ಮಹಾತ್ಮ ಗಾಂಧಿ, ಗೋಪಾಲ ಕೃಷ್ಣ ಗೋಖಲೆ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಬಂದು, ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿಕೊಂಡರು. ನೆಹರು, ವಲ್ಲಭಾಬಾಯಿ ಪಟೇಲ್‌, ಸುಭಾಷ್‌ ಚಂದ್ರ ಭೋಸ್‌, ಸರೋಜಿನಿ ನಾಯ್ಡು, ಲಾಲ್‌ ಬಹದ್ದೂರ್‌ ಶಾಸ್ತ್ರಿ, ಆಜಾದ್‌ ಹೀಗೆ ದೇಶಕ್ಕಾಗಿ ಆಸ್ತಿಪಾಸ್ತಿ, ಜೈಲುವಾಸ, ಸಾವು ನೋವು ಅನುಭವಿಸಿದವರು ಕಾಂಗ್ರೆಸ್‌ ನವರು. ಸಾವರ್ಕರ್‌ ಜೈಲಿನಲ್ಲಿ ನಿಮ್ಮ ಸಹವಾಸಕ್ಕೆ ಬರಲ್ಲ ಎಂದು ಬ್ರಿಟೀಷರಿಗೆ ಮುಚ್ಚಳಿಕೆ ಬರೆದುಕೊಟ್ಟರು. ಈಗ ವೀರ ಸಾವರ್ಕರ್‌ ಎಂದು ಕರೆದು ವಿಜೃಂಭಿಸಲಾಗುತ್ತಿದೆ. ಸಾವರ್ಕರ್‌, ಗೋಲ್ವಾಲ್ಕರ್‌ ಇವರಲ್ಲಿ ಒಬ್ಬರಾದ್ರೂ ಜೈಲಿಗೆ ಹೋಗಿದ್ದಾರಾ?. ದೇಶಕ್ಕಾಗಿ ಆರ್‌ ಎಸ್‌ ಎಸ್‌ನ ಯಾರಾದರೂ ಪ್ರಾಣಾರ್ಪಣೆ ಮಾಡಿದ್ದಾರಾ? ಇವರು ನಮಗೆ ದೇಶಭಕ್ತಿಯ ಪಾಠ ಮಾಡುತ್ತಾರೆ. ದೇಶಭಕ್ತಿಯಿಂದ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರು ಕಾಂಗ್ರೆಸ್‌ ನವರು. ನರೇಂದ್ರ ಮೋದಿ ಒಬ್ಬರು ದೊಡ್ಡ ನಾಟಕಕಾರ ಎಂದು ಸಿದ್ದರಾಮಯ್ಯ ಆರ್‌ ಎಸ್‌ ಎಸ್ , ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಬಿಜೆಪಿ 100 ಸಲ ಸುಳ್ಳು ಹೇಳ್ತಾರೆ, ನಾವು 4ಸಲ ಸತ್ಯ ಹೇಳೋಣ

ಬಿಜೆಪಿ 100 ಸಲ ಸುಳ್ಳು ಹೇಳ್ತಾರೆ, ನಾವು 4ಸಲ ಸತ್ಯ ಹೇಳೋಣ

ನಾವಿಂದು ನಕಲಿ ದೇಶಪ್ರೇಮಿಗಳ ಬಾಯಿ ಮುಚ್ಚಿಸುವ ಕೆಲಸ ಮಾಡಬೇಕು. ನಮಗೆ ಮಾತ್ರ ನೈತಿಕತೆ ಇದೆ. ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಗೌರವ ಇಲ್ಲ. ಇಂಥವರು ದೇಶ ಆಳುತ್ತಿದ್ದಾರೆ. ಹೀಗಾಗಿ ನಾವೆಲ್ಲ ಹೋರಾಟ ಮಾಡಲು ತಯಾರಾಗಬೇಕು, ಜನರ ಬಳಿ ಹೋಗಿ ಅವರಿಗೆ ಸತ್ಯ ತಿಳಿಸುವ ಕೆಲಸ ಮಾಡಬೇಕು. ಬಿಜೆಪಿಯವರು ಸುಳ್ಳನ್ನೇ ನೂರು ಸಲ ಹೇಳುತ್ತಾರೆ, ನಾವು ಸತ್ಯವನ್ನು 4 ಬಾರಿ ಹೇಳೋಕಾಗಲ್ವಾ? ನೆಹರು ಅವರ ಬಗ್ಗೆ ಬಿಜೆಪಿ ಅವರು ಬಹಳ ಲಘುವಾಗಿ ಮಾತನಾಡ್ತಾರೆ. ನೆಹರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ 11 ವರ್ಷ ಜೈಲಿಗೆ ಹೋಗಿದ್ದರು. ಗೋಲ್ವಾಲ್ಕರ್‌ ಹೋಗಿದ್ರಾ?. ಇಂಥಾ ಕಾರಣಗಳಿಗಾಗಿಯೇ ಇಂದು ನಾವು ಶ್ರದ್ಧಾ ಭಕ್ತಿಯಿಂದ ಕ್ವಿಟ್‌ ಇಂಡಿಯಾ ಚಳವಳಿ ದಿನವನ್ನು ಆಚರಿಸಿ. ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದವರನ್ನು ಸಿದ್ದರಾಮಯ್ಯ ಸ್ಮರಿಸಿದರು.

ಬೆಂಗಳೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗ್ತಾರೆ

ಬೆಂಗಳೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗ್ತಾರೆ

ಸ್ವಾತಂತ್ರ್ಯ ಬಂದು 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ದೇಶಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿದೆ. ರಾಜ್ಯದಲ್ಲಿ 15ರಂದು ಪಾದಯಾತ್ರೆ ಆಯೋಜಿಸಲಾಗಿದೆ. ಇದರಲ್ಲಿ ಕನಿಷ್ಟ 1 ಲಕ್ಷ ಜನ ಭಾಗವಹಿಸಬೇಕು ಎಂದು ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ. ಇದೊಂದು ಐತಿಹಾಸಿಕ ನಡಿಗೆಯಾಗಬೇಕು. ರೈಲು ನಿಲ್ದಾಣದ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಷನಲ್‌ ಕಾಲೇಜ್‌ ಮೈದಾನದವರೆಗೆ ಪಾದಯಾತ್ರೆ ಮಾಡಲಾಗುತ್ತದೆ. ನಾನು ಈಗಾಗಲೇ ಚಾಮುಂಡೇಶ್ವರಿ, ಚಿಂತಾಮಣಿ, ಕೋಲಾರ, ಮಾಲೂರಲ್ಲಿ ಪಾದಯಾತ್ರೆ ನಡೆಸಿದ್ದೇನೆ, ನಾಳೆ ಬಾಗಲಕೋಟೆಗೆ ಹೋಗುತ್ತೇನೆ, ಕೆಲವು ಕಡೆ ಮಳೆ ಹೆಚ್ಚಿರುವುದರಿಂದ ಈ ತಿಂಗಳ 31 ರ ವರೆಗೆ ಪಾದಯಾತ್ರೆ ವಿಸ್ತರಣೆ ಮಾಡಲಾಗಿದೆ.

ಈ ಪಾದಯಾತ್ರೆ ಐತಿಹಾಸಿಕ ಪಾದಯಾತ್ರೆ ಆಗಬೇಕು, ಕನಿಷ್ಟ 1 ಲಕ್ಷ ಜನ ಸೇರಬೇಕು ಎಂಬ ನಿರೀಕ್ಷೆ ಇದೆ, ಅಷ್ಟು ಜನ ಸೇರಿ ಯಶಸ್ವಿಯಾಗಿ ನಡೆಸಲು ತಾವೆಲ್ಲ ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ. ಮಹಾತ್ಮ ಗಾಂಧಿ ಅವರನ್ನು ಸ್ಮರಿಸುತ್ತಾ ತಮ್ಮೆಲ್ಲರಿಗೂ ಕ್ವಿಟ್‌ ಇಂಡಿಯಾ ಚಳವಳಿ ದಿನದ ಶುಭ ಹಾರೈಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

English summary
Leader of opposition Siddaramaiah said that repeat a lie 100 times & people will start believing it to be true. He challenged BJP to tell truth 4 times. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X