ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗು: ಕೆ.ಜಿ.ಬೋಪಯ್ಯ ವಿರುದ್ಧ ಬಿಜೆಪಿಯಲ್ಲೇ ಅಸಮಾಧಾನ!

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಮಾರ್ಚ್ 16: ಕೊಡಗಿನ ವೀರಾಜಪೇಟೆ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕೊಡವರು ನೆಲೆಸಿದ್ದರೂ ಅವರಿಗೆ ಸೂಕ್ತ ರಾಜಕೀಯ ಮನ್ನಣೆ ಇದುವರೆಗೆ ಸಿಕ್ಕಿಲ್ಲ ಎಂಬ ಅಸಮಾಧಾನ ಹಿಂದಿನಿಂದಲೂ ಇದೆ. ಈ ಅಸಮಾಧಾನ ಚುನಾವಣೆ ಬರುತ್ತಿದ್ದಂತೆಯೇ ಭುಗಿಲೆದ್ದಿದ್ದು ಇದರ ಪರಿಣಾಮ ಮಾಜಿ ಸ್ಪೀಕರ್, ಹಾಲಿ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಕುತ್ತು ತರುತ್ತಾ ಎಂಬ ಸಂಶಯ ಇದೀಗ ಎಲ್ಲರನ್ನು ಕಾಡತೊಡಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇದಕ್ಕೆ ಕಾರಣವೂ ಇಲ್ಲದಿಲ್ಲ. ಬೋಪಯ್ಯ ಗೌಡ ಸಮುದಾಯದವರಾಗಿದ್ದು, ಈ ಬಾರಿ ಕೊಡವ ಸಮುದಾಯದವರಿಗೆ ಬಿಜೆಪಿಯಿಂದ ಟಿಕೆಟ್ ನೀಡಿ ಎಂಬ ಒತ್ತಾಯಗಳು ವೀರಾಜಪೇಟೆ ತಾಲೂಕಿನಲ್ಲಿ ಕೇಳಿ ಬರತೊಡಗಿದ್ದು, ಇದು ಹೀಗೆಯೇ ಮುಂದುವರೆದರೆ ಚುನಾವಣೆ ವೇಳೆ ಪಕ್ಷದ ಮೇಲೆ ಭಾರೀ ಪರಿಣಾಮ ಬೀರುವುದು ಖಚಿತ.

ವಿರಾಜಪೇಟೆಯಿಂದ ಈ ಬಾರಿ ಅಂಕಣಕಾರ ಸಂತೋಷ್ ಕಣಕ್ಕೆ?ವಿರಾಜಪೇಟೆಯಿಂದ ಈ ಬಾರಿ ಅಂಕಣಕಾರ ಸಂತೋಷ್ ಕಣಕ್ಕೆ?

ಇದುವರೆಗೆ ಜಾತಿಗಿಂತ ವ್ಯಕ್ತಿಯನ್ನು ನೋಡಿ ಆತನನ್ನು ಆರಿಸಿ ಕಳುಹಿಸುತ್ತಿದ್ದ ಜನರಿಗೆ ಇದೀಗ ನಮ್ಮವನು, ನಮ್ಮ ಜಾತಿಯವನು ಎಂಬ ವಿಷ ಬೀಜ ಬಿತ್ತುವ ಕೆಲಸವನ್ನು ಕೆಲವರು ಮಾಡುತ್ತಿದ್ದು, ಇದು ಜಿಲ್ಲೆಯ ಸಾಮರಸ್ಯಕ್ಕೆ ಧಕ್ಕೆ ತರುವುದರೊಂದಿಗೆ ಪಕ್ಷದ ಮೇಲೆಯೂ ಪರಿಣಾಮ ಬೀರಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಸಂತೋಷ್ ತಮ್ಮಯ್ಯನಂಥವರು ಅಭ್ಯರ್ಥಿ ಯಾಕಾಗಬಾರದು?ಸಂತೋಷ್ ತಮ್ಮಯ್ಯನಂಥವರು ಅಭ್ಯರ್ಥಿ ಯಾಕಾಗಬಾರದು?

ಇವತ್ತು ವೀರಾಜಪೇಟೆಯ ಕೊಡವ ಸಮುದಾಯದ ಬಿಜೆಪಿ ನಾಯಕರಲ್ಲಿ ಅಸಮಾಧಾನವಿರುವುದಕ್ಕೆ ಕಾರಣವೂ ಇಲ್ಲದಿಲ್ಲ. ಇಲ್ಲಿರುವ ಬಹುತೇಕ ನಾಯಕರು ಇನ್ನೂ ಕೂಡ ಯಾವುದೇ ಹುದ್ದೆಯನ್ನು ಹೊಂದಲು ಸಾಧ್ಯವಾಗಿಲ್ಲ. ಬಹಳಷ್ಟು ಮಂದಿ ಇನ್ನೂ ಕಾರ್ಯಕರ್ತರಾಗಿಯೇ ಉಳಿದುಹೋಗಿದ್ದಾರೆ.

ಕಾರ್ಯಕರ್ತರಿಗೆ ಅವಕಾಶ ಸಿಗುತ್ತಿಲ್ಲ

ಕಾರ್ಯಕರ್ತರಿಗೆ ಅವಕಾಶ ಸಿಗುತ್ತಿಲ್ಲ

ಈ ಕುರಿತಂತೆ ಬಿಜೆಪಿ ಕಾರ್ಯಕರ್ತರು ಸಭೆ ನಡೆಸಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅವರು ನೀಡುತ್ತಿರುವ ಹೇಳಿಕೆಯಲ್ಲಿಯೂ ಸತ್ಯವಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಕಾರ್ಯಕರ್ತ ಮಲ್ಲಮಾಡ ಪ್ರಭು ಪೂಣಚ್ಚ ಎಂಬುವರ ಹೇಳಿಕೆಯನ್ನೇ ಇಲ್ಲಿ ಉಲ್ಲೇಖಿಸುವುದಾದರೆ, ವೀರಾಜಪೇಟೆ ತಾಲೂಕಿನಲ್ಲಿ ಕಳೆದ 65 ವರ್ಷದಿಂದ ಸ್ಥಳೀಯ ಮತದಾನ ಹಕ್ಕು ಹೊಂದಿರುವ ಕಾರ್ಯಕರ್ತರಿಗೆ ಶಾಸಕರಾಗಲು ಅವಕಾಶ ದೊರೆತಿಲ್ಲ. ವೀರಾಜಪೇಟೆ ಕ್ಷೇತ್ರ ಕೊಡಗು ರಾಜ್ಯ ವಿಲೀನದ ನಂತರ ಮೀಸಲು ಕ್ಷೇತ್ರವಾಗಿ ಸ್ಥಳೀಯರಿಗೆ ಶಾಸಕರಾಗುವ ಅವಕಾಶ ದೊರೆಯದಂತಾಯಿತು.

ಹೊರಗಿನವರಿಗೆ ಶಾಸಕರಾಗಲು ಅವಕಾಶ!

ಹೊರಗಿನವರಿಗೆ ಶಾಸಕರಾಗಲು ಅವಕಾಶ!

2008ರ ನಂತರ ಕ್ಷೇತ್ರ ಪುನರ್ ವಿಂಗಡಣೆಯಾದ ನಂತರವೂ ತಾಲೂಕಿನಲ್ಲಿ ಹೊರಗಿನವರು (ಮಡಿಕೇರಿಯ ಕೆ.ಜಿ.ಬೋಪಯ್ಯ) ಬಂದು ಶಾಸಕರಾಗುವಂತಾಗಿದೆ. ಇದರಿಂದ ಸ್ಥಳೀಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಹೊರಗಿನಿಂದ ಬಂದು ಆಯ್ಕೆಯಾಗಿರುವ ಶಾಸಕರಿಂದ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ. ಆದ್ದರಿಂದ ಸ್ಥಳೀಯ ಸಮಸ್ಯೆಗಳಿಗೆ ಪ್ರಾಮಾಣಿಕ ಕಾಳಜಿ ತೋರುವ ತಾಲೂಕು ವ್ಯಾಪ್ತಿಯ ಪಕ್ಷದ ಕಾರ್ಯಕರ್ತರಿಗೆ ಅಭ್ಯರ್ಥಿಯಾಗಲು ಅವಕಾಶ ಕಲ್ಪಿಸಿ ಎನ್ನುವುದು ಅವರ ಒತ್ತಾಯವಾಗಿದೆ. ಇಂತಹ ಹತ್ತಾರು ಕಾರಣಗಳನ್ನು ಕಾರ್ಯಕರ್ತರು ನೀಡುತ್ತಿದ್ದು, ವೀರಾಜಪೇಟೆ ತಾಲೂಕಿನಲ್ಲಿರುವ ಮುಖಂಡರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡಿ ಎಂಬ ಒತ್ತಡ ಹೇರಲಾಗುತ್ತಿದೆ.

ಮಂಕಾಗಿದ್ದಾರೆ ಬೋಪಯ್ಯ

ಮಂಕಾಗಿದ್ದಾರೆ ಬೋಪಯ್ಯ

ಈಗಾಗಲೇ ಸಭೆ, ಚರ್ಚೆಗಳು ನಡೆಯುತ್ತಿರುವುದರಿಂದ ಅಲ್ಲದೆ ಸ್ಪರ್ಧಿಸಲು ಆಕಾಂಕ್ಷಿಗಳ ಪಟ್ಟಿ ದೊಡ್ಡಮಟ್ಟದಲ್ಲಿ ಇರುವುದರಿಂದಾಗಿ ಹಾಲಿ ಶಾಸಕ ಕೆ.ಜಿ.ಬೋಪಯ್ಯ ಅವರು ಮಂಕಾಗಿರುವುದು ಸತ್ಯ. ಇದುವರೆಗೆ ಕಾಣಿಸದ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಈ ಬಾರಿ ಕಾಣಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಒಂದು ವೇಳೆ ಬಿಜೆಪಿಯ ನಾಯಕರು ಕೆ.ಜಿ.ಬೋಪಯ್ಯ ಅವರಿಗೆ ಟಿಕೆಟ್ ನೀಡಿದರೆ ಪಕ್ಷದೊಳಗಿನ ಅಸಮಾಧಾನಗಳು ಅವರಿಗೆ ಮುಳುವಾದರೂ ಅಚ್ಚರಿ ಪಡಬೇಕಾಗಿಲ್ಲ. ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಕಾಯುತ್ತಿವೆ. ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಕೊಡವ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ಖಚಿತವಾಗಿರುವುದರಿಂದ ಬೋಪಯ್ಯರಿಗೆ ಪ್ರತಿಕೂಲ ಪರಿಣಾಮ ಬೀರುವುದಂತೂ ನಿಜ.

ಬೋಪಯ್ಯ ಅವರಿಗೆ ನುಂಗಲಾರದ ತುತ್ತು

ಬೋಪಯ್ಯ ಅವರಿಗೆ ನುಂಗಲಾರದ ತುತ್ತು

ಇದರ ನಡುವೆ ವೀರಾಜಪೇಟೆ ತಾಲೂಕಿನ ಸುಮಾರು 40 ಗ್ರಾಪಂ ವ್ಯಾಪ್ತಿಯ ಪದಾಧಿಕಾರಿಗಳು ಸಭೆ ನಡೆಸಿ ವೀರಾಜಪೇಟೆ ವ್ಯಾಪ್ತಿಯಲ್ಲಿ ಮತದಾನದ ಹಕ್ಕು ಹೊಂದಿರುವ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ವಿಧಾನಸಭಾ ಅಭ್ಯರ್ಥಿಯ ಟಿಕೆಟ್ ಅನ್ನು ನೀಡವಂತೆ ನಿರ್ಣಯ ಕೈಗೊಂಡು ಪಕ್ಷದ ರಾಷ್ಟ್ರ, ರಾಜ್ಯ, ಜಿಲ್ಲಾಧ್ಯಕ್ಷರುಗಳಿಗೆ ಕಳುಹಿಸಲು ಮುಂದಾಗಿದ್ದಾರೆ. ಅಷ್ಟೇ ಲ್ಲ, ಈ ಭಾಗದಲ್ಲಿ ಟಿಪ್ಪು ಜಯಂತಿ ವಿರುದ್ಧ ಹೋರಾಡಿದ ಹಲವು ಬಿಜೆಪಿ ಕಾರ್ಯಕರ್ತರ ಬಗ್ಗೆ ಬಿಜೆಪಿಯಲ್ಲಿ ಉತ್ತಮ ಭಾವನೆ ಇದ್ದು, ಅವರಲ್ಲೇ ಯಾರಿಗಾದರೂ ಟಿಕೇಟ್ ಸಿಕ್ಕರೂ ಅಚ್ಚರಿಯಿಲ್ಲ. ಇದು ಕೆ.ಜಿ.ಬೋಪಯ್ಯ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮುಂದೇನಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

English summary
Karnataka Assembly elections 2018: Many BJP leaders have displeasure about former speaker and present MLA K G Bopaiah in Madikeri. BJP leaders have decided to give Virajapet constituency ticket for assembly elections for a Kodava community person, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X