ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟ್ಟಿ ಬದಲಿಸಿದ ಹೈಕಮಾಂಡ್: ಸಿಎಂ ಯಡಿಯೂರಪ್ಪಗೆ ಮತ್ತೆ ಹಿನ್ನಡೆ?

|
Google Oneindia Kannada News

ಬೆಂಗಳೂರು, ಜೂ‌. 17: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಂತೆಯೆ, ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ಬದಲಿಸಿದೆ. ರಾಜ್ಯ ಕೋರ್ ಕಮಿಟಿಯಲ್ಲಿ ಅಂತಿಮಗೊಳಿಸಿದ್ದ ಅಭ್ಯರ್ಥಿಗಳ ಪಟ್ಟಿಯಲ್ಲಿ ಅರ್ಧದಷ್ಟು, ಅಂದರೆ ಇಬ್ಬರು ಅಭ್ಯರ್ಥಿಗಳ ಹೆಸರುಗಳನ್ನು ಮಾತ್ರ ಬಿಜೆಪಿ ಹೈಕಮಾಂಡ್ ಪರಿಗಣಿಸಿದ್ದು, ಮತ್ತಿಬ್ಬರು ಅಭ್ಯರ್ಥಿಗಳನ್ನು ತಾನೇ ತೀರ್ಮಾನಿಸಿದೆ.

ಮೊನ್ನೆ ನಡೆದಿದ್ದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದ ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲನೆ ಮಾಡಿರುವ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ, ರಾಜ್ಯ ಘಟಕದ ಶಿಫಾರಸು ಮಾಡಿದ್ದ ಪಟ್ಟಿಯಲ್ಲಿದ್ದ ಎರಡು ಹೆಸರುಗಳನ್ನು ಮಾತ್ರ ಪುರಸ್ಕರಿಸಿ, ಇನ್ನೆರಡು ಹೆಸರುಗಳನ್ನು ಹೈಕಮಾಂಡ್ ನಿರ್ಧಾರದಂತೆ ಪ್ರಕಟ ಮಾಡಲಿದೆ ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಶಾಸಕರ ದಿಢೀರ್ ಸಭೆ ನಡೆಸಿದ್ದಾರೆ.

ಎರಡು ವಿಭಾಗ

ಎರಡು ವಿಭಾಗ

ರಾಜ್ಯ ಕೋರ್ ಕಮಿಟಿ ಸಬೆಯಲ್ಲಿ ತೀರ್ಮಾನ ಮಾಡಿದಂತೆ ಸರ್ಕಾರ ರಚನೆ ಮತ್ತು ಪಕ್ಷದ ಕಾರ್ಯಕರ್ತರು ಎಂದು ವಿಭಾಗಿಸಿ ಹೆಸರುಗಳನ್ನು ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ ಇದೀಗ ಇಬ್ಬರ ಹೆಸರುಗಳನ್ನು ಮಾತ್ರ ಹೈಕಮಾಂಡ್ ಪುರಸ್ಕರಿಸಿದೆ. ಇನ್ನುಳಿದಂತೆ ಮತ್ತಿಬ್ಬರು ಅಭ್ಯರ್ಥಿಗಳನ್ನು ಹೈಕಮಾಂಡ್ ನಿರ್ಧಾರ ಮಾಡಿದೆ.

ಬಿಜೆಪಿ ಹೈಕಮಾಂಡ್ ಆಯ್ಕೆಯ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಪ್ರಭಾವವಿದೆ ಎನ್ನಲಾಗಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ವಿರೋಧಿ ಬಣದ ಇಬ್ಬರು ವಿಧಾನ ಪರಿಷತ್ ಪ್ರವೇಶಿಸುವುದು ಖಚಿತವಾಗಿದೆ.

ಬದಲಾದ ಅಭ್ಯರ್ಥಿಗಳು

ಬದಲಾದ ಅಭ್ಯರ್ಥಿಗಳು

ರಾಜ್ಯ ಬಿಜೆಪಿ ಘಟಕ ಕಳುಹಿಸಿದ್ದ ಪಟ್ಟಿಯಲ್ಲಿ ಮಾಜಿ ಸಚಿವರಾದ ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಅವರಿಗೆ ವಿಧಾನ ಪರಿಷತ್ ಟಿಕೆಟ್ ಬಹುತೇಕ ಖಚಿತವಾಗಿದೆ. ಆದರೆ ಮಾಜಿ ಸಚಿವ ಎಚ್. ವಿಶ್ವನಾಥ್ ಅವರಿಗೆ ಟಿಕೆಟ್ ಕೊಡದಿರಲು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದೆ ಎನ್ನಲಾಗಿದೆ.

ಪಕ್ಷದ ಕಾರ್ಯಕರ್ತರ ಕೋಟಾದಲ್ಲಿ ಇಬ್ಬರ ಹೆಸರುಗಳನ್ನು ಬಿ.ಎಲ್. ಸಂತೋಷ್ ಅವರು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಸಿಎಂ ದಿಡೀರ್ ಸಭೆ

ಸಿಎಂ ದಿಡೀರ್ ಸಭೆ

ಇನ್ನು ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳನ್ನು ದಿಢೀರ್ ಬದಲಾವಣೆ ಮಾಡುವ ಸುಳಿವನ್ನರಿತ ಸಿಎಂ ಯಡಿಯೂರಪ್ಪ ಅವರು ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವರಾದ ಆರ್. ಅಶೋಕ್, ಬಸವರಾಜ್ ಬೊಮ್ಮಾಯಿ, ಡಾ. ಸುಧಾಕರ್, ಸಂಸದೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಎಂ.ಪಿ. ರೇಣುಕಾಚಾರ್ಯ, ಕಲಬುರಗಿ, ಬಾಗಲಕೋಟೆ, ದಾವಣಗೆರೆ, ಯಾದಗಿರಿ, ಕೊಪ್ಪಳ ಕ್ಷೇತ್ರದ 20ಕ್ಕೂ ಹೆಚ್ಚು ಶಾಸಕರೊಂದಿಗೆ ದಿಢೀರ್ ಸಭೆ ನಡೆಸಿದ್ದಾರೆ.

ರಾಜ್ಯ ಬಿಜೆಪಿ ಕೋರ್ ಕಮಿಟಿ ಶಿಫಾರಸ್ಸು ಮಾಡಿದ್ದ ಮಾಜಿ ಸಚಿವ ಎಚ್. ವಿಶ್ವನಾಥ್ ‌ಅವರಿಗೆ ಹೈಕಮಾಂಡ್ ಟಿಕೆಟ್ ಕೊಡುವುದಿಲ್ಲ ಎಂಬುದು ಖಚಿತವಾದ ತಕ್ಷಣ ಸಿಎಂ ಯಡಿಯೂರಪ್ಪ ಸಭೆ ನಡೆಸಿದ್ದಾರೆ.

ಅಸಮಾಧಾನಕ್ಕೆ ಮುನ್ನುಡಿ!

ಅಸಮಾಧಾನಕ್ಕೆ ಮುನ್ನುಡಿ!

ಇನ್ನು ಅನರ್ಹತೆಯಿಂದ ಅತಂತ್ರರಾಗಿರುವ ಮಾಜಿ ಸಚಿವರಾದ ಎಚ್. ವಿಶ್ವನಾಥ್, ರೋಷನ್ ಬೇಗ್ ಅವರಿಗೆ ಮುಂದೆಯೂ ಟಿಕೆಟ್ ಕೊಡುವ ಭರವಸೆ ಸಿಕ್ಕಿಲ್ಲ. ಇನ್ನು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿ.ಪಿ. ಯೋಗೇಶ್ವರ್ ಸೇರಿದಂತೆ ಹಲವರು ಸೂಕ್ತ ಸ್ಥಾನಮಾನ ಸಿಗದೇ ಇದ್ದರೆ ಸುಮ್ಮನಿರುತ್ತಾರಾ ಎಂಬುದು ರಾಜ್ಯ ಬಿಜೆಪಿ ವಲಯದಲ್ಲಿಯೆ ಎದ್ದಿರುವ ಪ್ರಶ್ನೆ!

English summary
BJP High Command ignores CM Yeddyurappa in council election candidates selection,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X