ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆ: ಯಡಿಯೂರಪ್ಪ ಎದುರು ಹೈಕಮಾಂಡ್ ಇಟ್ಟ 3 ಷರತ್ತುಗಳು!

|
Google Oneindia Kannada News

ಬೆಂಗಳೂರು, ನ. 26: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅನಿಶ್ಚಿತತೆಗೆ ಸಿಲುಕಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮೂಲಕ ತಾವು ಕೊಟ್ಟಿರುವ ಮಾತು ಉಳಿಸಿಕೊಳ್ಳುವ ತವಕದಲ್ಲಿದ್ದಾರೆ. ಅದ್ಯಾಕೊ ಬಿಜೆಪಿ ಹೈಕಮಾಂಡ್ ಮಾತ್ರ ಕರ್ನಾಟಕ ಸಂಪುಟ ವಿಸ್ತರಣೆ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಶತಾಯ ಗತಾಯ ಸಂಪುಟ ವಿಸ್ತರಣೆಗೆ ಪಟ್ಟು ಹಿಡಿದಿರುವ ಯಡಿಯೂರಪ್ಪ ಅವರ ಎದುರು ಬಿಜೆಪಿ ಹೈಕಮಾಂಡ್ ಮೂರು ಶರತ್ತುಗಳನ್ನು ಇಟ್ಟಿದೆ ಎಂಬ ಮಾಹಿತಿ ಬಂದಿದೆ.

ಉಪ ಚುನಾವಣೆಯ ಭರ್ಜರಿ ಗೆಲುವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಭಾರಿ ಬಲ ತಂದಿರುವುದು ಸುಳ್ಳಲ್ಲ. ಹೀಗಾಗಿಯೇ ಈ ಬಾರಿ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ಕೊಟ್ಟೆ ಕೊಡುತ್ತದೆ ಎಂದು ವಿಶೇಷ ವಿಮಾನ ಮಾಡಿಕೊಂಡು ಹೋಗಿ ಪಕ್ಷದ ವರಿಷ್ಠರನ್ನು ಯಡಿಯೂರಪ್ಪ ಭೇಟಿ ಮಾಡಿ ಬಂದಿದ್ದಾರೆ. ಆದರೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಅನುಮತಿ ಕೊಡುವ ಬದಲು ಹೈಕಮಾಂಡ್ ಯಡಿಯೂರಪ್ಪ ಅವರ ಎದುರು ಮೂರು ಶರತ್ತುಗಳನ್ನು ಇಟ್ಟಿದೆ ಎಂಬ ಮಾಹಿತಿ ಬಂದಿದೆ. ಹೀಗಾಗಿಯೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುತ್ತಿಲ್ಲ ಎನ್ನಲಾಗಿದೆ.

ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎದುರು ಇಟ್ಟಿರುವ ಶರತ್ತುಗಳೇನು? ಯಡಿಯೂರಪ್ಪ ಅವರು ಹೈಕಮಾಂಡ್ ಶರತ್ತಿಗೆ ಒಪ್ಪಿಕೊಂಡಿದ್ದಾರಾ ಅಥವಾ ಇಲ್ಲವಾ? ಮುಂದಿದೆ ಸಂಪೂರ್ಣ ಮಾಹಿತಿ!

ಹೈಕಮಾಂಡ್ ಷರತ್ತುಗಳೇ ಕಾರಣ?

ಹೈಕಮಾಂಡ್ ಷರತ್ತುಗಳೇ ಕಾರಣ?

ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಯಾಕೆ ಅನುಮತಿ ಕೊಡದೆ ಯಾಕೆ ಸುಮ್ಮನಿದೆ ಎಂಬ ಚರ್ಚೆಗಳು ರಾಜ್ಯ ಬಿಜೆಪಿಯಲ್ಲಿ ನಡೆದಿವೆ. ಆದರೆ ಬಿಜೆಪಿ ಹೈಕಮಾಂಡ್ ಸುಮ್ಮನಿಲ್ಲ ಎಂಬ ಮಾಹಿತಿ ಇದೀಗ ದೆಹಲಿಯಿಂದ ಬಂದಿದೆ.

ಹೌದು, ಸಂಪುಟ ವಿಸ್ತರಣೆ ಬೇಡಿಕೆಯೊಂದಿಗೆ ಹೈಕಮಾಂಡ್ ಕದ ತಟ್ಟಿದ್ದ ಯಡಿಯೂರಪ್ಪ ಅವರ ಎದುರು ಮೂರು ಶರತ್ತುಗಳನ್ನು ಬಿಜೆಪಿ ಹೈಕಮಾಂಡ್ ಇಟ್ಟಿದೆ ಎನ್ನಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಮೂಲಕ ಶರತ್ತುಗಳನ್ನು ಕಳುಹಿಸಿದೆ ಎನ್ನಲಾಗಿದೆ.

ಹೈಕಮಾಂಡ್ ಷರತ್ತು ನಂ. 1

ಹೈಕಮಾಂಡ್ ಷರತ್ತು ನಂ. 1

ಸಂಪುಟ ವಿಸ್ತರಣೆ ಕುರಿತು ಬಿಜೆಪಿ ಹೈಕಮಾಂಡ್ ಸಿಎಂ ಯಡಿಯೂರಪ್ಪ ಅವರಿಗೆ ಸಧ್ಯ ಸಂಪುಟ ವಿಸ್ತರಣೆ ಕೆಲಸಕ್ಕೆ ಕೈಹಾಕೋದು ಬೇಡ ಎಂಬ ಶರತ್ತು ಇಟ್ಟಿದೆ. ಕರ್ನಾಟಕದಲ್ಲಿ ಶೀಘ್ರದಲ್ಲಿಯೇ ಗ್ರಾಮ ಪಂಚಾಯತ್ ಚುನಾವಣೆ ಎದುರಾಗಲಿದೆ. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಗ್ರಾಮ ಪಂಚಾಯತ್ ಚುನಾವಣೆ ಮಹತ್ವದ್ದಾಗಿದೆ. ಹೀಗಾಗಿ ಗ್ರಾಮ ಪಂಚಾಯತ್ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಮಾಡೋಣ ಎಂದು ಹೈಕಮಾಂಡ್ ಹೇಳಿದೆಯಂತೆ.

ಜೊತೆಗೆ ಖಾಲಿ ಇರುವ 7 ಮಂತ್ರಿಸ್ಥಾನಗಳಲ್ಲಿ 6 ಸ್ಥಾನಗಳನ್ನು ಮಾತ್ರ ಭರ್ತಿ ಮಾಡುವಂತೆ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಅದರಲ್ಲಿಯೂ ಅದರಲ್ಲಿ ಮೂವರು ವಲಸಿಗರು, ಮೂವರು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರಿಗೆ ಮಂತ್ರಿ ಪದವಿ ಕೊಡುವಂತೆ ಸೂಚಿಸಲಾಗಿದೆ.

ಹೈಕಮಾಂಡ್ ಷರತ್ತು ನಂ. 2

ಹೈಕಮಾಂಡ್ ಷರತ್ತು ನಂ. 2

ಸಂಪುಟ ಪುನಾರಚನೆ ಮಾಡಬೇಕೆಂದರೆ ಒಂಭತ್ತು ಜನರ ಸೇರ್ಪಡೆಗೆ ಅವಕಾಶ ಮಾಡಿಕೊಳ್ಳಬೇಕು ಎಂಬ ಎರಡನೇಯ ಶರತ್ತನ್ನು ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಹಾಕಿದೆ ಎನ್ನಲಾಗಿದೆ. ಸಿಎಂ ಯಡಿಯೂರಪ್ಪ ಅವರು ತಮ್ಮ ಆಪ್ತ ಮೂವರು ಸಚಿವರನ್ನು ಸಂಪುಟದಿಂದ ಕೈಬಿಡಬೇಕು. ಹೊಸದಾಗಿ 6 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು.

ಸಂಪುಟದಿಂದ ಕೈಬಿಡುವ ಮಂತ್ರಿಗಳನ್ನು ಬಿಜೆಪಿ ಸಂಘಟನೆ ದುರ್ಬಲವಾಗಿರುವ ಕ್ಷೇತ್ರಗಳಲ್ಲಿ ಅವರಿಗೆ ಉಸ್ತುವಾರಿ ಕೊಡಬೇಕು ಎಂಬ 2ನೇ ಶರತ್ತು ಯಡಿಯೂರಪ್ಪ ಅವರಿಗೆ ಎದುರಾಗಿದೆ.

Recommended Video

ನಿವಾರ್ ಅಬ್ಬರಕ್ಕೆ Bangalore ತತ್ತರ!! | Oneindia Kannada
ಹೈಕಮಾಂಡ್ ಷರತ್ತು ನಂ. 3

ಹೈಕಮಾಂಡ್ ಷರತ್ತು ನಂ. 3

ಮೂರನೇಯ ಹಾಗೂ ಅತ್ಯಂತ ಮಹತ್ವದ ಷರತ್ತನ್ನು ಸಿಎಂ ಯಡಿಯೂರಪ್ಪ ಅವರ ಎದುರು ಹೈಕಮಾಂಡ್ ಇಟ್ಟಿದೆ. ನಿಮ್ಮ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕಷ್ ಬಿ.ವೈ. ವಿಜಯೇಂದ್ರ ಅವರ ರಾಜಕೀಯ ಭವಿಷ್ಯಕ್ಕಾಗಿ ಮುಖ್ಯಮಂತ್ರಿ ಸ್ಥಾನವನ್ನು ನೀವು ತ್ಯಾಗ ಮಾಡಿ. ತಾವು ಸೂಚಿಸಿದವರಿಗೆ ಮುಖ್ಯಮಂತ್ರಿ ಸ್ಥಾನ ಕಲ್ಪಿಸುವುದು ನಮ್ಮ ಜವಾಬ್ದಾರಿ. ಜೊತೆಗೆ ತಮ್ಮ ಪುತ್ರನಿಗೂ ಸೂಕ್ತ ಸ್ಥಾನ ನೀಡುವ ಭರವಸೆಯನ್ನು ನಾವು ಕೊಡುತ್ತೇವೆ ಎಂಬ ಮೂರನೇ ಶರತ್ತನ್ನು ಹೈಕಮಾಂಡ್ ಯಡಿಯೂರಪ್ಪ ಅವರ ಎದುರು ಇಟ್ಟಿದೆ.

ಈ ಮೂರು ಶರತ್ತುಗಳನ್ನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಮೂಲಕ ಹೈಕಮಾಂಡ್ ರವಾನಿಸಿದೆ ಎನ್ನಲಾಗಿದೆ. ಹೀಗಾಗಿ ಯಡಿಯೂರಪ್ಪ ಅವರು ಏಕಾಏಕಿ ಎಲ್ಲ ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಆದೇಶ ಮಾಡಿದ್ದಾರೆ. ಜೊತೆಗೆ ಮೂರು ಶರತ್ತುಗಳಲ್ಲಿ ಮೊದಲೆರಡು ಶರತ್ತುಗಳನ್ನು ಒಪ್ಪಿಕೊಳ್ಳುವುದಾಗಿಯೂ ಯಡಿಯೂರಪ್ಪ ಅವರು ಹೈಕಮಾಂಡ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್ ಶರತ್ತುಗಳನ್ನು ಒಪ್ಪಿಕೊಂಡರೂ ಕೂಡ ಗ್ರಾಮ ಪಂಚಾಯತ್ ಚುನಾವಣೆ ಮುಗಿಯುವವರೆಗೆ ಸಂಪುಟ ವಿಸ್ತರಣೆಗೆ ಅವಕಾಶವಿಲ್ಲ. ಹೀಗಾಗಿ ಸಿಎಂ ಯಡಿಯೂರಪ್ಪ ಅವರು ಗ್ರಾಮ ಪಂಚಾಯತ್ ಚುನಾವಣೆಗೂ ಮೊದಲು ಸಂಪುಟ ವಿಸ್ತರಣೆ ಆಗಲೇ ಬೇಕು ಎಂಬ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದಕ್ಕೆ ಹೈಕಮಾಂಡ್ ಏನು ಹೇಳುತ್ತದೆ ಎಂಬುದನ್ನು ಕಾಯ್ದು ನೋಡಬೇಕು.

English summary
Instead of agreeing to the expansion of the cabinet, BJP High Command has set three conditions for Chief Minister BS Yediyurappa, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X