ಎರಡನೇ ಬಾರಿ ಮಂತ್ರಿ ಪದವಿ ಪಡೆದುಕೊಂಡ ಯಶಸ್ವಿ ಉದ್ಯಮಿ ಮುರುಗೇಶ್ ನಿರಾಣಿ!
ಬೆಂಗಳೂರು, ಜ. 13: ಬೃಹತ್ ಕೈಗಾರಿಕಾ ಸಚಿವರಾಗಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿದ್ದ ಬಾಗಲಕೋಟೆ ಜಿಲ್ಲೆ ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ್ ನಿರಾಣಿ ಅವರು ಎರಡನೇ ಬಾರಿ ಸಚಿವರಾಗಿದ್ದಾರೆ. ಮುರುಗೇಶ್ ನಿರಾಣಿ ಮೂಲತಃ ಸಿವಿಲ್ ಇಂಜಿನಿಯರ್. ಬಾಗಲಕೋಟೆ ಜಿಲ್ಲೆ ಬೀಳಗಿಯ ಸಾಮಾನ್ಯ ರೈತ ಕುಟುಂಬದಿಂದ ಬಂದಿರುವ ಮುರುಗೇಶ್ ನಿರಾಣಿ ಅವರು, ಯಶಸ್ವಿ ಉದ್ಯಮಿಯೂ ಹೌದು. 2004ರಲ್ಲಿ ಅವಿಭಜಿತ ಜಮಖಂಡಿ-ಬೀಳಗಿ ಕ್ಷೇತ್ರದ ಶಾಸಕರಾಗಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು.
ಲಿಂಗಾಯತ (ಪಂಚಮಸಾಲಿ) ಸಮುದಾಯಕ್ಕೆ ಸೇರಿರುವ ಮುರುಗೇಶ್ ನಿರಾಣಿ ಅವರು ಬಿಇ (ಸಿವಿಲ್) ಹಾಗೂ ಬಿಸಿನೆಸ್ ಮ್ಯಾನೇಜ್ಮೆಂಟ್ನಲ್ಲಿ ಡಿಪ್ಲೊಮಾ ಓದಿದ್ದಾರೆ. ಮುರುಗೇಶ್ ಸಹೋದರ ಹನುಮಂತ ನಿರಾಣಿ ಅವರು ವಿಧಾನ ಪರಿಷತ್ ಸದಸ್ಯ. ಮತ್ತೊಬ್ಬ ಸಹೋದರ ಸಂಗಮೇಶ್ ನಿರಾಣಿ ಉದ್ಯಮಿ. ಇನ್ನಿಬ್ಬರು ಸಹೋದರರು ಉದ್ಯಮ ಹಾಗೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಎರಡನೇ ಬಾರಿ ಸಚಿವರಾಗಿ ಆಯ್ಕೆಯಾಗಿರುವ ಮುರುಗೇಶ್ ನಿರಾಣಿ ಅವರ ಪರಿಚಯ ಹೀಗಿದೆ.
ವೈಯಕ್ತಿಕ ಪರಿಚಯ
* ಮುರುಗೇಶ್ ನಿರಾಣಿ-ಬಾಗಲಕೋಟೆ ಜಿಲ್ಲೆ ಬೀಳಗಿ ಶಾಸಕ
* ಜನ್ಮ ದಿನಾಂಕ: 01. 06. 1965
* ವಿದ್ಯಾರ್ಹತೆ: ಬಿಇ (ಸಿವಿಲ್), ಡಿಪ್ಲೊಮಾ ಇನ್ ಬಿಜಿನೆಸ್ ಮ್ಯಾನೇಜ್ಮೆಂಟ್
* ತಂದೆಯ ಹೆಸರು: ರುದ್ರಪ್ಪ ನಿರಾಣಿ
* ತಾಯಿ: ಸುಶೀಲಾಬಾಯಿ ನಿರಾಣಿ
* ಪತ್ನಿ: ಕಮಲಾ ನಿರಾಣಿ
* ಮಕ್ಕಳು: ವಿಶಾಲ್ ನಿರಾಣಿ ಮತ್ತು ವಿಜಯ್ ನಿರಾಣಿ
ರಾಜಕೀಯ ಜೀವನ
* 1993 ರಿಂದ 2000 ವರೆಗೆ ಬಾಗಲಕೋಟೆ ಜಿಲ್ಲೆ ಬಿಜೆಪಿ ಅಧ್ಯಕ್ಷ
* 2004-05 ಬಿಜೆಪಿ ರಾಜ್ಯ ಸಮಿತಿ ಸದಸ್ಯ
* 2004-08 ರಲ್ಲಿ ಮೊದಲ ಬಾರಿಗೆ ಅವಿಭಜಿತ ಜಮಖಂಡಿ-ಬೀಳಗಿ ವಿಧಾನಸಭಾಕ್ಷೇತ್ರದ ಶಾಸಕರಾಗಿ ಆಯ್ಕೆ
* 2008-14 ರಲ್ಲಿ ಎರಡನೇ ಬಾರಿ ಬೀಳಗಿ ಶಾಸಕರಾಗಿ ಆಯ್ಕೆ
* 2014 ರಲ್ಲಿ ಬೀಳಗಿ ಕ್ಷೇತ್ರದಲ್ಲಿ ಸೋಲು
* 2018 ರಲ್ಲಿ ಬೀಳಗಿ ಕ್ಷೇತ್ರದಿಂದ ಮೂರನೇ ಬಾರಿ ಶಾಸಕರಾಗಿ ಆಯ್ಕೆ
* 2008-14 ರ ಅವಧಿಯಲ್ಲಿ ಬೃಹತ್, ಮದ್ಯಮ ಕೈಗಾರಿಕಾ ಸಚಿವರಾಗಿ ಕಾರ್ಯ
* ಬೃಹತ್ ಕೈಗಾರಿಕಾ ಸಚಿವರಾಗಿದ್ದಾಗ ಯಶಸ್ವಿ ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದ ಸಾಧನೆ
* 2013-14 ಸರ್ದಾರ್ ವಲ್ಲಬಾಯಿ ಪಟೇಲ್ ಪ್ರತಿಮೆ ಲೋಹ ಸಂಗ್ರಹಣಾ ಸಮಿತಿ ರಾಜ್ಯ ಪ್ರಕೋಷ್ಟದ ಸಂಚಾಲಕ
* ಪಕ್ಷದ ರಾಜ್ಯ ಘಟಕದ ಅಭಿವೃದ್ಧಿ ಮತ್ತು ಮಾಹಿತಿ ರಾಜ್ಯ ಪ್ರಕೋಷ್ಟದ ಸಹಸಂಚಾಲಕರಾಗಿ ಕಾರ್ಯ
* ವಿಜಯಪುರ, ಕೊಪ್ಪಳ, ಧಾರವಾಡ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅನುಭವ
ಉದ್ಯಮಿಯಾಗಿ ಸಾಧನೆ
* ಕೈಗಾರಿಕೆ ಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ ಸ್ಥಾಪಿಸಿ ರಾಜ್ಯದಲ್ಲಿ ಪ್ರಮುಖ ಕೈಗಾರಿಕೋದ್ಯಮಿ
* ಎಂ ಆರ್ ಎನ್ (ನಿರಾಣಿ) ಉದ್ದಿಮೆ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು
* ಸಾಮಾನ್ಯ ಕುಟುಂಬದಿಂದ ಬಂದು 6 ಸಕ್ಕರೆ ಕಾರ್ಖಾನೆ, 1 ಸಿಮೆಂಟ್ ಕಾರ್ಖಾನೆ, ಶಿಕ್ಷಣ ಸಂಸ್ಥೆ ಸ್ಥಾಪಿಸಿರುವ ಸಾಧಕ
* ಬ್ಯಾಂಕ್ ಸ್ಥಾಪಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಸಾಧನೆ