ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಜೆಂಟ್ ಮುಖಾಂತರ ಡೀಲಿಂಗ್‌ಗೆ ಇಳಿದರೇ ತೂಕ ಮತ್ತು ಅಳತೆ ಅಧಿಕಾರಿಗಳು?

|
Google Oneindia Kannada News

ಬೆಂಗಳೂರು, ಜು. 31: ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ಕದಿಯುವ ದಂಧೆಗೆ ಕಾನೂನು ಮಾಪನ ಶಾಸ್ತ್ರ ಇಲಾಖೆ ( ತೂಕ ಮತ್ತು ಅಳತೆ ) ಅಧಿಕಾರಿಗಳೇ ಅವಕಾಶ ಮಾಡಿಕೊಟ್ಟಿದ್ದಾರೆ. ಲೀಟರ್ ಇಂಧನಕ್ಕೆ ಕನಿಷ್ಠ 5 ರಿಂದ 10 ಲೀಟರ್ ಕದಿಯುವ ದಂಧೆಯ ಬಗ್ಗೆ ಪೆಟ್ರೋಲ್ ಬಂಕ್ ಸಿಬ್ಬಂದಿ ಮತ್ತು ಅಳತೆ ಮತ್ತು ಮಾಪನ ಇಲಾಖೆಯ ಮಹಿಳಾ ಅಧಿಕಾರಿ ನಡೆಸಿರುವ ರಹಸ್ಯ ಮಾತುಕತೆ ನಡೆಸುತ್ತಿರುವ ವಿಡಿಯೋ ಇಂತದ್ದೊಂದು ಅನುಮಾನವನ್ನು ಹುಟ್ಟು ಹಾಕಿದ್ದು, ಈ ಕುರಿತ ವಿಡಿಯೋ ಒನ್ ಇಂಡಿಯಾ ಕನ್ನಡಕ್ಕೆ ಸಿಕ್ಕಿದೆ. ಪೆಟ್ರೋಲ್ ಬಂಕ್ ಗಳಲ್ಲಿ ಹಫ್ತಾ ವಸೂಲಿ ಮಾಡಿ ಅಳತೆ ಮತ್ತು ತೂಕದ ಇಲಾಖೆ ಅಧಿಕಾರಿಗಳಿಗೆ ಕೊಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ದಾಳಿಗೆ ಒಳಗಾಗಿದ್ದ ಏಜೆಂಟ್ ಸಮ್ಮುಖದಲ್ಲಿಯೇ ಮಾತುಕತೆ ನಡೆದಿದೆ!

ಅಳತೆ ಮತ್ತು ತೂಕದ ಇಲಾಖೆ ಅಧಿಕಾರಿ ಕೆಲಸ: ಹೊಸಕೋಟೆ ಸಮೀಪದ ಪೆಟ್ರೋಲ್ ಬಂಕ್ ಗೆ ಹೋಗಿರುವ ಅಳತೆ ಮತ್ತು ತೂಕದ ಇಲಾಖೆಯ ಸಹಾಯಕ ನಿಯಂತ್ರಕಿ ಸೀಮಾ ಭೇಟಿ ನೀಡಿದ್ದಾರೆ. ತನಿಖಾ ದಳದ ಸಹಾಯಕ ನಿಯಂತ್ರಕಿ ಆಗಿರುವ ಸೀಮಾ ಅವರು ಮೊದಲು ಮಾಡಬೇಕಿದ್ದ ಪೆಟ್ರೋಲ್ ಬಂಕ್ ನಲ್ಲಿ ಇಂಧನ ಸಾರ್ವಜನಿಕರಿಗೆ ಸರಿಯಾಗಿ ಪೂರೈಕೆ ಮಾಡುತ್ತಿದ್ದಾರಾ ಎಂದು ತಪಾಸಣೆ ಮಾಡಬೇಕಿತ್ತು. ಬಂಕ್ ನಲ್ಲಿರುವ ಐದು ಲೀಟರ್ ಅಳತೆ ಕ್ಯಾನ್ ಗೆ ಪೆಟ್ರೋಲ್ ತುಂಬಿಸಿ ಅಳತೆ ಮಾಡಿ ಪ್ರಮಾಣೀಕರಿಸಬೇಕಿತ್ತು. ದಿನಾಂಕ ಉಲ್ಲೇಖಿಸಿ ತಪಾಸಣೆ ನಡೆಸಿದ ಬಗ್ಗೆ ಸಹಿ ಮಾಡಿ ಆ ಪೆಟ್ರೋಲ್ ಬಂಕ್ ನ ಇಂಧನ ಪೂರೈಕೆಯಲ್ಲಿ ಯಾವುದೇ ಮೋಸ ಇಲ್ಲ ಎಂಬುದನ್ನು ಖಾತ್ರಿ ಪಡಿಸಬೇಕು. ಒಂದು ವೇಳೆ ತಪಾಸಣೆ ವೇಳೆ ಮೋಸ ಕಂಡು ಬಂದಲ್ಲಿ ಪ್ರಕರಣ ದಾಖಲಿಸಿ ಪೆಟ್ರೋಲ್ ಬಂಕ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿತ್ತು.

ಪೆಟ್ರೋಲ್ ಬಂಕ್ ಸಿಬ್ಬಂದಿ ವಂಚನೆ ಮಾತು

ಪೆಟ್ರೋಲ್ ಬಂಕ್ ಸಿಬ್ಬಂದಿ ವಂಚನೆ ಮಾತು

ಸಹಾಯಕ ನಿಯಂತ್ರಣಾಧಿಕಾರಿ ಸೀಮಾ ಮ್ಯಾಗಿ ಪಕ್ಕದಲ್ಲಿ ಕೂತಿರುವ ಈ ವ್ಯಕ್ತಿ ಹೆಸರು ಶಿವಕುಮಾರ್. 2019 ರಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ನಡೆಸಿದ್ದ "ಆಪರೇಷನ್ ಅಳತೆ ಮತ್ತು ತೂಕ ಏಜೆಂಟ್" ಕಾರ್ಯಾಚರಣೆಯಲ್ಲಿ 20 ಏಜೆಂಟರು ಬಂಧನಕ್ಕೆ ಒಳಗಾಗಿದ್ದರು. ಆ ಬಂಧಿತ ಗ್ಯಾಂಗ್ ನ ಸದಸ್ಯನೇ ಶಿವಕುಮಾರ್. ಇನ್ನೂ ಪ್ರಕರಣದ ತನಿಖೆಯೇ ಮುಗಿದಿಲ್ಲ. ಅದಾಗಲೇ ಅಳತೆ ಮತ್ತು ತೂಕ ಇಲಾಖೆ ಅಧಿಕಾರಿಗಳ ಜತೆಯಲ್ಲಿ ಜೀಫ್ ನಲ್ಲಿ ಓಡಾಟ ಶುರು ಮಾಡಿದ್ದಾನೆ. ತಾನು ಅಳತೆ ಮತ್ತು ತೂಕ ಇಲಾಖೆಯ ಇನ್ಸ್ ಪೆಕ್ಟರ್ ಎಂದು ಫೋಸ್ ಕೊಡುವ ಈತ ಪೆಟ್ರೋಲ್ ಬಂಕ್ ಗಳಲ್ಲಿ ಮಾತುಕತೆ, ಹಫ್ತಾ ವಸೂಲಿ ಮಾಡುತ್ತಾನೆ. ತನ್ನ ಪಾಲು ಜೇಬಿಗೆ ಇಟ್ಟುಕೊಂಡು ಉಳಿದಿದ್ದನ್ನು ಕರೆದೊಯ್ಯುವ ಅಧಿಕಾರಿಗಳಿಗೆ ನೀಡುತ್ತಾನೆ ಎಂಬ ಗಂಭೀರ ಆರೋಪವಿದೆ. ಅದನ್ನು ಪುಷ್ಠೀಕರಿಸುವ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಅದರ ವಿಡಿಯೋ ಒನ್ ಇಂಡಿಯಾ ಕನ್ನಡಕ್ಕೆ ಲಭ್ಯವಾಗಿದೆ.

ಹತ್ತು ಎಂಎಲ್ ಹೊಡೆಯೋಕೂ ಬಿಡ್ತಿಲ್ಲ

ಹತ್ತು ಎಂಎಲ್ ಹೊಡೆಯೋಕೂ ಬಿಡ್ತಿಲ್ಲ

ಹೊಸಕೋಟೆಯ ಸಮೀಪದ ಬಂಕ್‌ಗೆ ಸರ್ಕಾರಿ ಜೀಪ್ ನಲ್ಲಿ ಹೋಗುವ ಸೀಮಾ ಮ್ಯಾಗಿ ಜತೆಯಲ್ಲಿ ಇರುವುದು ಬಂಧಿತ ಏಜೆಂಟ್ ಶಿವಕುಮಾರ್. ಯಾವ ಅಳತೆ ತಪಾಸಣೆ ಮಾಡದೇ ಪೆಟ್ರೋಲ್ ಬಂಕ್ ನ ಕಚೇರಿಯಲ್ಲಿ ಕೂತು ಮಾತನಾಡಿದ್ದು ಸಾರ್ವಜನಿಕರಿಗೆ ಪೆಟ್ರೋಲ್ ಕದಿಯುವ ವಿಚಾರ. ಬೂದಿಗೆರೆ ರಸ್ತೆಯಲ್ಲಿರುವ ಲಘುಮಮ್ಮ ಏಜೆನ್ಸಿ ಇಂಡಿಯನ್ ಆಯಿಲ್ ಬಂಕ್ ನಲ್ಲಿ ಐದು ಲೀಟರ್ ಮೆಜರ್ ಬಗ್ಗೆ ಮಾತು ಆರಂಭಿಸುತ್ತಾರೆ. ಮೊದಲು ವರ್ಗಾವಣೆ ಬಗ್ಗೆ ಮಾತುಕತೆ ನಡೆಸುವ ಪೆಟ್ರೋಲ್ ಬಂಕ್ ಸಿಬ್ಬಂದಿ ನಂತರ ಈಗ ನಮಗೆ ಹತ್ತು ಎಂಎಲ್ ಕದಿಯಲು ಅವಕಾಶ ಕೊಟ್ಟಿಲ್ಲ. ಸೇಲ್ಸ್ ಅಧಿಕಾರಿ ಒಬ್ಬ ಹುಚ್ಚ ಬಂದಿದ್ದಾನೆ. ಬೆಂಗಳೂರು ಹೆಡ್ ಆಗಿದ್ದಾನೆ.

ಅವನ ಹೆಸರು ಶಿವಂಶಾ ಎಂದು ಪ್ರಸ್ತಾಪ ಮಾಡಿ ಮಾತನಾಡಿದ್ದಾರೆ. ಒಬ್ಬ ಪೆಟ್ರೋಲ್ ಬಂಕ್ ಸಿಬ್ಬಂದಿ ಇಂಧನ ಕದಿಯುವ ಡೀಲ್ ಗೆ ಅವಕಾಶ ಕೊಟ್ಟಿಲ್ಲ ಎನ್ನುವುದರ ಬಗ್ಗೆ ಮಾತುಕತೆ ಆಗಿದ್ದು, ಮುಂದುವರೆದ ಮಾತುಕತೆಯಲ್ಲಿ ಮಾಮೂಲಿ ಯಾಕೆ ಕೊಡಬೇಕು ಎನ್ನುವ ದಾಟಿಯಲ್ಲಿ ಮಾತನಾಡಲಾಗಿದೆ. ಒಬ್ಬ ಅಧಿಕಾರಿಯಾಗಿ ಬಂಧಿತ ಏಜೆಂಟ್ ನನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುವುದು ಮಹಾ ಅಪರಾಧ.

ಏಜೆಂಟ್ ಶಿವಕುಮಾರ್ ಸೇರಿದಂತೆ ಇಪ್ಪತ್ತು ಏಜೆಂಟರ ವಿರುದ್ಧದ ಕೇಸು ತನಿಖೆಯಲ್ಲಿದೆ. ಎರಡನೆಯದ್ದು ಪೆಟ್ರೋಲ್ ಬಂಕ್ ಸಿಬ್ಬಂದಿ ಜತೆ ತನಿಖಾದಳದ ಅಧಿಕಾರಿ ಪೆಟ್ರೋಲ್ ಕದಿಯುವ ದಂಧೆ ಬಗ್ಗೆ ಬಂಕ್ ಸಿಬ್ಬಂದಿ ಜತೆ ಮಾತನಾಡುವುದು ನ್ಯಾಯವೇ ? ಬಂಕ್ ನಲ್ಲಿ ತಪಾಸಣೆ ಮಾಡಿರುವ ಬಗ್ಗೆ ಇಲಾಖೆಯ ಲ್ಯಾಪ್ ಟಾಪ್ ನಲ್ಲಿ ನಮೂದಿಸಬೇಕಲ್ಲವೇ ಈ ಬಗ್ಗೆ ಉನ್ನತ ಅಧಿಕಾರಿಗಳು ಕ್ರಮ ಜರುಗಿಸುವರೇ ?

 ರಾಜಧಾನಿಯಲ್ಲಿ ಎಂಎಲ್ ದಂಧೆಗೆ ತೂಕ ಅಧಿಕಾರಿಗಳೇ ಕುಮ್ಮಕ್ಕು

ರಾಜಧಾನಿಯಲ್ಲಿ ಎಂಎಲ್ ದಂಧೆಗೆ ತೂಕ ಅಧಿಕಾರಿಗಳೇ ಕುಮ್ಮಕ್ಕು

ರಾಜಧಾನಿ ಬೆಂಗಳೂರಿನ ಬಹುತೇಕ ಪಂಪ್ ಗಳಲ್ಲಿ ಲೀಟರ್ ಗೆ ಐದು ಎಂಎಲ್ ಕದಿಯುವ ದಂಧೆಗೆ ಅಳತೆ ಮತ್ತು ತೂಕದ ಇಲಾಖೆ ಅಧಿಕಾರಿಗಳೇ ಅವಕಾಶ ಕೊಟ್ಟಿದ್ದಾರೆ. ಇದರ ಬಗ್ಗೆ ಒನ್ ಇಂಡಿಯಾ ಈ ಹಿಂದೆ ಕೂಡ ವಿಸ್ತೃತ ವರದಿ ಪ್ರಕಟಿಸಿತ್ತು. ಬೆಂಗಳೂರಿನ ಪೆಟ್ರೋಲ್ ಬಂಕ್ ಗಳಲ್ಲಿ ಸರಾಸರಿ ಐದು ಎಂಎಲ್ ವ್ಯತ್ಯಯ ಬಂದರೆ ಯಾವುದೇ ಬಂಕ್ ವಿರುದ್ಧ ಕೇಸು ದಾಖಲಿಸಬಾರದು ಎಂಬ ಅಲಿಖಿತ ನಿಯಮವನ್ನು ಅಳತೆ ಮತ್ತು ತೂಕಕದ ಇಲಾಖೆ ಅಧಿಕಾರಿಗಳು ಪಾಲಿಸುತ್ತಿದ್ದಾರೆ.

ದಿನಕ್ಕೆ 20 ಸಾವಿರ ಲೀಟರ್ ವಹಿವಾಟು ನಡೆಸುವ ಬಂಕ್ ಗಳು ಲೀಟರ್ ಗೆ ಐದು ಎಂಎಲ್ ಹೊಡೆದರೂ ಸಾಕು ಸಂಜೆ ವೇಳೆಗೆ 100 ಲೀಟರ್ ಇಂಧನ ಉಳಿತಾಯವಾಗುತ್ತದೆ. ಇವತ್ತಿನ ಬೆಲೆಯಲ್ಲಿ ಹತ್ತು ಸಾವಿರ ರೂ. ದಿನಕ್ಕೆ ಐದು ಎಂಎಲ್ ನಿಂದ ಉಳಿಯುವುದಾದರೆ ತಿಂಗಳಿಗೆ ಮೂರು ಲಕ್ಷ ರೂ. ಆದಾಯ ಬಂದಂತಾಗುತ್ತದೆ. ಬೆಂಗಳೂರಿನಲ್ಲಿ ಸುಮಾರು ಒಂದು ಸಾವಿರ ಪೆಟ್ರೋಲ್ ಬಂಕ್ ಗಳಿವೆ.

ತಿಂಗಳಿಗೆ ಹಫ್ತಾ ರೂಪದಲ್ಲಿಯೇ ಒಂದು ಕೋಟಿ ರೂ. ವಹಿವಾಟು ನಡೆಯುತ್ತದೆ ಎಂಬ ಆರೋಪ ಕೇಳಿ ಬಂದಿದೆ. ಎಂಎಲ್ ಲೆಕ್ಕದಲ್ಲಿ ಕದಿಯುವ ದಂಧೆಗೆ ಅವಕಾಶ ಮಾಡಿಕೊಟ್ಟಿರುವ ಅಳತೆ ಮತ್ತು ತೂಕದ ಅಧಿಕಾರಿಗಳಿಗೆ ತಿಂಗಳ ಮಾಮೂಲಿ ಸಂದಾಯವಾಗುತ್ತದೆ . ವಿಸಿಟ್ ಗೆ ಹತ್ತು ಸಾವಿರ ರೂ. ಕೊಡುತ್ತಾರೆ ಎಂಬ ಮಾತು ಕೇಳಿ ಬರುತ್ತಿವೆ. ಸಿಸಿಟಿವಿ , ಮೊಬೈಲ್ ಕಾರಣದಿಂದ ಅಧಿಕಾರಿಗಳು ಇದನ್ನು ನಿರ್ವಹಣೆ ಮಾಡಲು ಏಜೆಂಟರನ್ನು ನೇಮಿಸಿಕೊಂಡಿದ್ದಾರೆ. ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿತಿಲ್ಲ. ಎಸಿಬಿ ದಾಳಿಗೆ ಒಳಗಾಗಿದ್ದ ಅಳತೆ ಮತ್ತು ತೂಕದ ಏಜೆಂಟರು ಇದೀಗ ವಸೂಲಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಏಜೆಂಟ್ ಶಿವಕುಮಾರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.

ಹುಬ್ಬಳ್ಳಿಯ ಕಿಂಗ್ ಪಿನ್ ಸಿಕ್ಕಿದ್ರೂ ರಾಜ್ಯದಲ್ಲಿ ತಪಾಸಣೆ ಇಲ್ಲ

ಹುಬ್ಬಳ್ಳಿಯ ಕಿಂಗ್ ಪಿನ್ ಸಿಕ್ಕಿದ್ರೂ ರಾಜ್ಯದಲ್ಲಿ ತಪಾಸಣೆ ಇಲ್ಲ

ರಾಜ್ಯದಲ್ಲಿ ಕಾನೂನು ಮಾಪನ ಶಾಸ್ತ್ರದ ಅಧಿಕಾರಿಗಳು ಅಕ್ಷರಶಃ ನಿದ್ದೆ ಮಾಡುತ್ತಿದ್ದಾರೆ ಎಂದೆನಿಸುತ್ತದೆ. ಇಲ್ಲವೇ ಹಫ್ತಾ ವಸೂಲಿ ಬಾಜಿ ಮುಲಾಜಿ ಒಳಗಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಕಳೆದ ವರ್ಷ ನೆರೆಯ ಆಂಧ್ರ ಪ್ರದೇಶ , ಮಹಾರಾಷ್ಟ್ರ , ಉತ್ತರ ಪ್ರದೇಶದಲ್ಲಿ ಪೆಟ್ರೋಲ್ ಬಂಕ್ ಗಳಲ್ಲಿ ರಿಮೋಟ್ ಡ್ಜೆಸ್ಟ್ ಮೆಂಟ್ ನಿಂದ ಇಂಧನ ಕದಿಯುವ ದೊಡ್ಡ ಜಾಲ ಬೆಳಕಿಗೆ ಬಂದಿತ್ತು.

ಡಿಜಿಟಲ್ ರಿಮೋಟ್ ತಯಾರು ಮಾಡುವ ಕಿಂಗ್ ಪಿನ್ ಕರ್ನಾಟಕದ ಹುಬ್ಬಳ್ಳಿ ನಿವಾಸಿ ಎಂಬುದು ಜಗ್ಗಜಾಹೀರಾಗಿತ್ತು. ವಿಪರ್ಯಾಸವೆಂದರೆ ರಾಜ್ಯದಲ್ಲಿ ಒಂದೇ ಒಂದು ಬಂಕ್ ನ್ನು ಕೂಡ ಕಾನೂನು ಮಾಪನ ಶಾಸ್ತ್ರದ ಅಧಿಕಾರಿಗಳು ಪರಿಶೀಲನೆ ಮಾಡಲಿಲ್ಲ. ಸೈಬರಾಬಾದ್ ಪೊಲೀಸರ ಮಾದರಿಯಲ್ಲಿ ಚಿಪ್ ನಿಂದ ಪೆಟ್ರೋಲ್ ಕದಿಯುವ ಜಾಲವನ್ನು ಬಯಲಿಗೆ ಎಳೆಯಲು ಸಿಸಿಬಿ ಪೊಲೀಸರು ದಾಳಿ ಕಾರ್ಯಾಚರಣೆಗೆ ತಯಾರು ನಡೆಸಿದ್ದರು.

ಆದರೆ ಅಳತೆ ಮತ್ತು ತೂಕ ಹಾಗೂ ಪೆಟ್ರೋಲ್ ಬಂಕ್ ಡಿಜಿಟಲ್ ಮೀಟರ್ ಗಳ ಬಗ್ಗೆ ಮಾಹಿತಿ ಕೊರತೆ ಕಾರಣದಿಂದ ಅದೇ ಇಲಾಖೆಯ ಅಧಿಕಾರಿಗಳ ನೆರವು ಪಡೆದಿದ್ದರು. ಸಿಸಿಬಿ ಪೊಲೀಸರಿಗೆ ನೆರವು ನೀಡುವ ನೆಪದಲ್ಲಿ ಇಡೀ ರಾಜ್ಯದ ಪೆಟ್ರೋಲ್ ಬಂಕ್ ಮಾಲೀಕರಿಗೆ ಸಿಸಿಬಿ ದಾಳಿಯ ಸೀಕ್ರೇಟ್ ನ್ನು ಅಳತೆ ಮತ್ತು ತೂಕ ಇಲಾಖೆ ಅಧಿಕಾರಿಗಳು ಬಹಿರಂಗ ಪಡಿಸಿದ್ದರು. ಹೀಗಾಗಿ ಸಿಸಿಬಿ ಪೊಲೀಸರ ಕಾರ್ಯಾಚರಣೆಯನ್ನು ಅಳತೆ ಮತ್ತು ತೂಕದ ಇಲಾಖೆ ಅಧಿಕಾರಿಗಳೇ ಮಣ್ಣು ಪಾಲು ಮಾಡಿದ್ದರು.

ಕ್ರಿಮಿನಲ್ ಕೇಸ್ ಆದರೂ ಒಂದೂ ಟ್ಯಾಂಕರ್ ತಪಾಸಣೆ ಇಲ್ಲ ಯಾಕೆ ?

ಕ್ರಿಮಿನಲ್ ಕೇಸ್ ಆದರೂ ಒಂದೂ ಟ್ಯಾಂಕರ್ ತಪಾಸಣೆ ಇಲ್ಲ ಯಾಕೆ ?

ಇತ್ತೀಚೆಗೆ ತಿಪಟೂರಿನಲ್ಲಿ ಪೊಲೀಸ್ ಪೇದೆಯೊಬ್ಬನ ಪೆಟ್ರೋಲ್ ಟ್ಯಾಂಕರ್ ನಲ್ಲಿ ಬೇಬಿ ಟ್ಯಾಂಕ್ ನಿರ್ಮಿಸಿ ಇಂಧನ ಕದಿಯುವ ದಂಧೆಯನ್ನು ತಿಪಟೂರು ಪೊಲೀಸರು ಬಯಲಿಗೆ ಎಳೆದಿದ್ದರು ಪ್ರಕರಣವನ್ನು ಹಾಸನ ಪೊಲೀಸರಿಗೆ ವರ್ಗಾವಣೆ ಮಾಡಲಾಗಿತ್ತು.

ಅಚ್ಚರಿ ಏನೆಂದರೆ ಈ ಪ್ರಕರಣದಲ್ಲಿ ಪೊಲೀಸರಿಗೆ ಸಹಕರಿಸಲು ಹಾಸನದ ಅಳತೆ ಮತ್ತು ತೂಕದ ಇಲಾಖೆಯ ಅಧಿಕಾರಿ ಹಿಂದೇಟು ಹಾಕಿದ್ದಾರೆ. ಬೇಬಿ ಟ್ಯಾಂಕ್ ದಂಧೆ ಬಯಲಿಗೆ ಬಂದರೆ ಮಾಮೂಲಿ ನಿಂತು ಹೋಗುತ್ತದೆ ಎನ್ನುವ ಭಯಕ್ಕೆ. ಬದಲಿಗೆ ಮೈಸೂರಿನಿಂದ ಅಳತೆ ಮತ್ತು ತೂಕದ ಇಲಾಖೆ ಅಧಿಕಾರಿಯನ್ನು ಹಾಸನಕ್ಕೆ ಕಳುಹಿಸಿ ಟ್ಯಾಂಕರ್ ಗನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ಟ್ಯಾಂಕರ್ ನಲ್ಲಿ ಬೇಬಿ ಟ್ಯಾಂಕ್ ನಿರ್ಮಿಸಿ ಮೋಸ ಮಾಡುತ್ತಿದ್ದ ಸಂಗತಿಬಯಲಿಗೆ ಬಂದಿತ್ತು.

ಬಹುಶಃ ರಾಜ್ಯದಲ್ಲಿ ಪೆಟ್ರೋಲ್ ಬಂಕ್ ಗಳಿಗೆ ಇಂಧನ ಪೂರೈಕೆ ಮಾಡುವ ಬಾಡಿಗೆ ಟ್ಯಾಂಕರ್ ಗಳನ್ನು ತಪಾಸಣೆಗೆ ಒಳಪಡಿಸಿದರೆ ಇಂತಹ ಸಾವಿರಾರು ಟ್ಯಾಂಕರ್ ಗಳ ಬಣ್ಣ ಬಯಲಾಗುತ್ತದೆ. ಬೆಂಗಳೂರಿಗೆ ಇಂಧನ ಪೂರೈಸುವ ದೇವನ ಗುಂದಿ ಆಯಿಲ್ ಕಾರ್ಪೋರೇಷನ್ ನಿಂದ ಸಾಗಟ ಮಾಡುವ ಟ್ಯಾಂಕರ್ ಗಳು ಕೂಡ ಇದೇ ದಂಧೆ ಮಾಡುತ್ತಿವೆ. ಇಡೀ ದಂಧೆ ಬಯಲಿಗೆ ಬಂದರೂ ಅಕ್ರಮದ ಮಾದರಿಯನ್ನು ತಪಾಸಣೆ ಮಾಡುವ ಗೋಜಿಗೂ ರಾಜ್ಯದ ಅಳತೆ ಮತ್ತು ತೂಕದ ಇಲಾಖೆ ಅಧಿಕಾರಿಗಳು ಹೋಗಿಲ್ಲ. ಇದರಲ್ಲಿಯೇ ಇವರ ಬದ್ಧತೆಯನ್ನು ತೋರಿಸುತ್ತದೆ.

English summary
Secret talks between Petrol Bunk staff and legal metrology officer about stealing petrol in the Bunks . Dealing with legal metrology Department Officers through Agent who was arrested by ACB in last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X