• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಾಮೀಜಿ ಕರ್ಮಕಾಂಡ: ಬಾಲಕಿಯ ಪೋಷಕರು ಪರಾರಿ

By Srinath
|

ಬೆಳಗಾವಿ, ಫೆ.26: ತಮ್ಮ ಮಗಳು ನಿಜಲಿಂಗಮ್ಮ ದೇವಿ ಅಥಣಿಯ ಅಪ್ಪಯ್ಯ ಸ್ವಾಮೀಜಿಯಿಂದ ಬಾಧೆಗೊಳಗಾದ ಸುದ್ದಿ ಬಿತ್ತರವಾಗುತ್ತಿದ್ದಂತೆ ಆಕೆಯ ಪೋಷಕರು ನಾಪತ್ತೆಯಾಗಿದ್ದಾರೆ.

ನಿಜಲಿಂಗಮ್ಮ ದೇವಿಯ ತಂದೆ-ತಾಯಿಯು ಬಾಗಲಕೋಟೆ ಜಿಲ್ಲೆ ಜಮಖಂಡಿಯ ಸೊರ್ಪಾಲಿ ಗ್ರಾಮದ ರೈತಾಪಿ ಜನ. ತಂದೆ ದೊಡ್ಡಮನಿ ಮತ್ತು ತಾಯಿ ಕಸ್ತೂರಿ ದೊಡ್ಡಮನಿ. ಇವರಿಗೆ ಇಬ್ಬರು ಅವಳಿ ಹೆಣ್ಣು ಮಕ್ಕಳು.

ವಿಶ್ವಶಾಂತಿಗಾಗಿ ಮಕ್ಕಳು ಬೇಕೆಂದು ಸ್ವಾಮೀಜಿ ಕಸ್ತೂರಿ ದೊಡ್ಡಮನಿ ದಂಪತಿಗೆ ದುಂಬಾಲು ಬಿದ್ದಿದ್ದ. ಅವನ ಕೋರಿಕೆಗೆ ಮರುಗಿದ ದಂಪತಿ ಒಂದು ಹೆಣ್ಣು ಮಗುವನ್ನು ಮಠಕ್ಕೆ ದತ್ತು ನೀಡಿದ್ದರು.

ಬುಧವಾರ 12.30ರಲ್ಲಿ: ಅಥಣಿ ಸ್ವಾಮಿಯ ಆಟಾಟೋಪಕ್ಕೆ ಬ್ರೇಕ್ ಬಿದ್ದಿದೆ. ಬಾಲಕಿಗೆ ಬೆಂಕಿ ಹಚ್ಚಿ ಪವಾಡ ಮಾಡಲು ಹೋದ ಅಯ್ಯಪ್ಪನ ವಿರುದ್ಧ ಕೊನೆಗೂ ಜಿಲ್ಲಾಡಳಿತ ಎಚ್ಚೆತ್ತಿದೆ.

ಇದೀಗತಾನೆ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಜಿಲ್ಲಾಧಿಕಾರಿ ಜಯರಾಮ್ ಅವರು ತಕ್ಷಣ ಮಠದ ಸ್ಥಳವನ್ನು ಸರಕಾರದ ವಶಕ್ಕೆ ಪಡೆದಿದ್ದಾರೆ. ಮಠದಲ್ಲಿದ್ದ ಅಯ್ಯಪ್ಪ ಸ್ವಾಮಿಯ ಶಿಷ್ಯ ವೃಂದವನ್ನೆಲ್ಲಾ ಅಲ್ಲಿಂದ ವಕ್ಕಲೆಬ್ಬಿಸಿರುವ ಜಿಲ್ಲಾಧಿಕಾರಿ ತಂಡ, ಮಠವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

ಇದೇ ವೇಳೆ ಮಠದಲ್ಲಿದ್ದ ಐದು ಬಾಲಕಿಯರನ್ನೂ ಸಹ ಜಿಲ್ಲಾಡಳಿತ ತನ್ನ ವಶಕ್ಕೆ ತೆಗೆದುಕೊಂಡಿದೆ.

ಬುಧವಾರ 11.30ರಲ್ಲಿ: ಮಹಾಶಿವರಾತ್ರಿ ವೇಳೆಗೆ ಪವಾಡ ಮಾಡುವುದಾಗಿ ಹೇಳಿ ಬಾಲಕಿಯನ್ನು ಬೆಂಕಿಗೆ ತಳ್ಳಿದ್ದ ಅಪ್ಪಯ್ಯ ಸ್ವಾಮೀಜಿ ಮತ್ತೊಂದು ನಾಟಕವಾಡಿದ್ದಾನೆ.

ನಿನ್ನೆ ರಾತ್ರಿಯೇ ಅಪ್ಪಯ್ಯ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಇಂದು ಬೆಳಗ್ಗೆ ಸ್ಥಳ ಪರೀಕ್ಷೆಗೆಂದು ಪೊಲೀಸರು ಅಪ್ಪಯ್ಯನನ್ನು ಕರೆದೊಯ್ಯುತ್ತಿದ್ದಾಗ ಪೊಲೀಸರ ಬಂಧನ ತಪ್ಪಿಸಿಕೊಂಡು, ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಎಚ್ಚೆತ್ತ ಪೊಲೀಸರು ತಮ್ಮ ಹಿಡಿತದಿಂದ ನುಣುಚಿಕೊಳ್ಳಲು ಆಸ್ಪದ ನೀಡದೆ, ಬಿಗಿ ಹಿಡಿತ ಸಾಧಿಸಿದ್ದಾರೆ. ಇದೀಗ ಐಗಳಿ ಪೊಲೀಸ್ ಠಾಣೆಯಲ್ಲಿ ಖುದ್ದು ಜಿಲ್ಲಾ ಎಸ್ಪಿ ಚಂದ್ರಗುಪ್ತಾ ಅವರೇ ವಿಚಾರಣೆ ನಡೆಸುತ್ತಿದ್ದಾರೆ.

ಹಿಂದಿನ ಸುದ್ದಿ:

ಬಾಧಿತ ಬಾಲಕಿ ನಿಜಲಿಂಗಮ್ಮ ದೇವಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದೆ. ಆಕೆಗೆ ಜ್ವರ ಬಂದಂತಾಗಿದೆ. ಬಾಲಕಿಯನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲಾಗಿದೆ. ವೈದ್ಯರು ನಿರಂತರವಾಗಿ ಆಕೆಯ ಆರೈಕೆ ಮಾಡುತ್ತಿದ್ದಾರೆ ಎಂದು ಅಥಣಿ ಆಸ್ಪತ್ರೆಯ ವೈದ್ಯಾಧಿಕಾರಿ ಪುಷ್ಪಲತಾ ಸುಣ್ಣದಕಲ್ ತಿಳಿಸಿದ್ದಾರೆ.

ಇನ್ನು ಜಿಲ್ಲಾಧಿಕಾರಿಯೂ ಮಾತನಾಡಿದ್ದಾರೆ: ತಕ್ಷಣ ತಾವು ಅಥಣಿಗೆ ತೆರಳುತ್ತಿದ್ದು, ಮೊದಲು ಬಾಲಕಿಯನ್ನು ನೋಡಬೇಕಿದೆ. ಆಕೆಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವಂತೆ ರಾತ್ರಿಯೇ ನಮ್ಮ ವೈದ್ಯರಿಗೆ ಸೂಚಿಸಿದ್ದೇನೆ.

ಬಾಲಕಿ ಚೇತರಿಸಿಕೊಂಡ ನಂತರ ಆಕೆಯನ್ನು ಸರಕಾರಿ ಹಾಸ್ಟೆಲಿಗೆ ಸೇರಿಸಲಾಗುವುದು. ಸಂಪೂರ್ಣವಾಗಿ ಗುಣಮುಖವಾದ ಮೇಲೆ ಆಕೆಯ ಶಿಕ್ಷಣ ಜವಾಬ್ದಾರಿಯನ್ನು ಸರಕಾರವೇ ವಹಿಸಿಕೊಳ್ಳಲಿದೆ. ತಪಾಸಣೆ ನಂತರ ಆಕೆಯನ್ನು ಪೋಷಕರಿಗೆ ಒಪ್ಪಿಸುವುದಿಲ್ಲ. ಸಮಾಜ ಕಲ್ಯಾಣ ಇಲಾಖೆ ಆಕೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ.

ಆರೋಪಿ ಅಪ್ಪಯ್ಯ ಸ್ವಾಮೀಜಿಗೆ ಮತ್ತೆ ಇಂತಹ ಹುಚ್ಚಾಟಗಳಿಗೆ ಅವಕಾಶ ನೀಡುವುದಿಲ್ಲ. ಆತನನ್ನು ಈಗಾಗಲೇ ಬಂಧಿಸಲಾಗಿದೆ. ಆತನ ವಿರುದ್ಧ ಕಾನೂನುಕ್ರಮ ಜರುಗಿಸಲು ಜಿಲ್ಲಾ ಎಸ್ಪಿ ಚಂದ್ರಗುಪ್ತ ಅವರಿಗೆ ಆದೇಶಿಸಿರುವುದಾಗಿ ಜಿಲ್ಲಾಧಿಕಾರಿ ಜಯರಾಮ್ ಹೇಳಿದ್ದಾರೆ.

ಬೆಳಗಿನ ವರದಿ:

ಜಿಲ್ಲೆಯ ಅಥಣಿ ತಾಲ್ಲೂಕಿನ ಝಂಜರವಾಡ ಅಪ್ಪಯ್ಯ ಮಠದ ಸ್ವಾಮೀಜಿಗೆ ಅದೇನು ಹುಚ್ಚೋ/ಬೆಪ್ಪೋ ಗೊತ್ತಾಗುತ್ತಿಲ್ಲ. ಆದರೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಆತ ಮತ್ತೊಂದು ಅನಾಹುತ ಮಾಡಿದ್ದಾನೆ.

ಅಬೋಧ ಬಾಲಕಿಯನ್ನು ಗುಹೆಯಲ್ಲಿ 21 ದಿನಗಳ ಕಾಲ ಜೀವಂತ ಕೂಡಿ ಹಾಕಿ, ಬೆಂಕಿ ಹಚ್ಚಿ ಈ ಅಪ್ಪಯ್ಯ ಸ್ವಾಮೀಜಿ ರಾದ್ಧಾಂತ ಮಾಡಿದ್ದಾನೆ. ಇವನ ಮೂಲ ಹೆಸರು ಸದಾಶಿವ. ಈತ ಧರ್ಮದ ಚಂದ್ರಮ್ಮದೇವಿ ದೇಗುಲ ಮಠದ ಸ್ವಾಮೀಜಿ.

ಕೊನೆಗೆ ಸ್ಥಳೀಯ ಅಧಿಕಾರಿಗಳು ದಾಳಿ ನಡೆಸಿ, ಸ್ವಯಂ ಘೋಷಿತ ದೇವಮಾನವ ಅಪ್ಪಯ್ಯ ಸ್ವಾಮೀಜಿಯ ಕೈಗೆ ಕೋಳ ತೊಡಿಸಿದ್ದಾರೆ. ಸುಟ್ಟ ಗಾಯಗಳಿಂದ ಬೇಯುತ್ತಿದ್ದ ಬಾಲಕಿಯನ್ನು ರಕ್ಷಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳ್ಳ ಸ್ವಾಮೀಜಿ, ಲೋಕ ಕಲ್ಯಾಣಕ್ಕಾಗಿ 7 ವರ್ಷದ ಬಾಲಕಿಯ ಮೇಲೆ ಈ ಪವಾಡ ಮಾಡಿ ತೋರಿಸಲು ಯತ್ನಿಸಿದ್ದಾನೆ. ನಾಳೆ ಮಹಾಶಿವರಾತ್ರಿ ದಿನ ಬಾಲಕಿ ಜೀವಂತವಾಗಿ ಹೊರಬರುತ್ತಾಳೆ ಎಂದು ಹೇಳಿ, ನಿನ್ನೆ ಮಧ್ಯರಾತ್ರಿ ಬಾಲಕಿಯ ಮೈಮೇಲೆ 5 ಟನ್ ಕಟ್ಟಿಗೆ ಹಾಕಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವ ಹುಚ್ಚು ಸಾಹಸ ಮಾಡಿದ್ದಾನೆ. ಅದಕ್ಕೂ ಮುನ್ನ 19 ದಿನಗಳಿಂದ ಗುಹೆಯಲ್ಲಿ ಕೂಡಿಹಾಕಿದ್ದಾನೆ.

ಅಪ್ಪಯ್ಯ ಸ್ವಾಮೀಜಿಯ ಹುಚ್ಚಾಟಗಳಿಗೆ ಕೊನೆಯೇ ಇಲ್ಲದಂತಾಗಿದೆ. ಆದರೆ ಈ ಬಾರಿ ಸ್ವಾಮೀಜಿಗೆ ತಕ್ಕ ಶಾಸ್ತಿ ಮಾಡಲು ಖಡಕ್ ನಿರ್ಧಾರ ತೆಗೆದುಕೊಳ್ಳುವುದಾಗಿ ಅಥಣಿಯ ತಹಸೀಲ್ದಾರ್ ಅಪರ್ಣಾ ಪಾವಟೆ ಅವರು ಪಬ್ಲಿಕ್ ಟಿವಿಗೆ ಇದೀಗ ತಾನೆ ತಿಳಿಸಿದ್ದಾರೆ.

ಈ ಹಿಂದೆ ಇದೇ ಅಪ್ಪಯ್ಯ ಸ್ವಾಮೀಜಿ ಮೇಲೆ ರೇಪ್ ಕೇಸ್ ಕೇಳಿ ಬಂದಿತ್ತು. ಮಠದ ಭಕ್ತಿಣಿಯೊಬ್ಬರು ಸ್ವಾಮೀಜಿ ವಿರುದ್ಧ ಈ ಆರೋಪ ಮಾಡಿದ್ದಳು. ಕಡೆಗೆ ತನ್ನ ಮೇಲಿನ ಅತ್ಯಾಚಾರದ ಆರೋಪ ಶುದ್ಧ ಸುಳ್ಳು ಎಂದು ಆ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದ.

ಅದು ಮಾತ್ರ ಸಾಲದು ಎಂಬಂತೆ ಆರೋಪಕ್ಕೆ ಪ್ರತಿಯಾಗಿ ಅತ್ಯಾಚಾರ ಎಸಗಲು ಅಗತ್ಯವಿರುವ ಅಂಗವೇ ತನ್ನ ಬಳಿ ಇಲ್ಲ ಎಂಬುದನ್ನು ಬಹಿರಂಗವಾಗಿಯೇ ಪ್ರದರ್ಶಿಸಿಯೇ ಬಿಟ್ಟಿದ್ದ ಈ ಸರ್ವಸಂಗ ಪರಿತ್ಯಾಗಿ. ಅಥಣಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯಲ್ಲೇ ಕಳೆದ ಜೂನ್ ತಿಂಗಳಲ್ಲಿ ಈ ಘಟನೆ ನಡೆದಿತ್ತು.

English summary
A 7 year old girl from Belgaum Athani Taluk is burnt alive on Feb 24 by Appayya Swamy, a self styled godman from Janjarawada. The girl was rescued by local authorities and sent to hospital. The Swamiji is now arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X