ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರ್ಕಾರದ ಮತ್ತೊಂದು ಯಡವಟ್ಟು, 10100 ಬಾಡಿಗೆ ಬೆಡ್‌ಗಳು!

|
Google Oneindia Kannada News

ಬೆಂಗಳೂರು, ಜು. 14: ಕೊರೊನಾ ವೈರಸ್‌ ನಾಡಿನ ಜನರಿಗೆ ಜೀವನ್ಮರಣದ ಮಧ್ಯದ ಹೋರಾಟವಾಗಿದೆ. ತಮ್ಮ ವ್ಯಾಪಾರ, ವಹಿವಾಟು ಎಲ್ಲವನ್ನೂ ಬಂದ್ ಮಾಡಿ ಬಹುತೇಕರು ಮನೆ ಸೇರಿದ್ದಾರೆ. ಇನ್ನು ಕಾರ್ಮಿಕರ ಸ್ಥಿತಿಯಂತೂ ಬೀದಿ ಪಾಲಾಗಿದೆ. ಇಷ್ಟೆಲ್ಲಾ ಆದರೂ ಕೋವಿಡ್ ನಿಯಂತ್ರಿಸಲು ಸರ್ಕಾರದೊಂದಿಗೆ ಸಾಮಾನ್ಯ ಜನರು ಕೈಜೋಡಿಸಿದ್ದಾರೆ. ಆದರೆ ಕೋವಿಡ್-19 ಸಂಕಷ್ಟ ಒಂದೆಡೆಯಾದರೆ, ಒಂದರ ಮೇಲೊಂದರಂತೆ ಹಗರಣಗಳು ಹೊರಗೆ ಬರುತ್ತಿರುವುದು ಜನರನ್ನು ಮತ್ತಷ್ಟು ಕಂಗೆಡಿಸಿದೆ.

Recommended Video

ಸದ್ಯಕ್ಕೆ ಸರಿಯಾಗೋದಿಲ್ಲ ಕೊರೊನ ಪರಿಸ್ಥಿತಿ - WHO | Oneindia Kannada

ಜನರು ಬೀದಿ ಬೀದಿಯಲ್ಲಿ ಬಿದ್ದು ಸಾಯುತ್ತಿದ್ದಾರೆ. ಅದೇ ಜನರ ಹೆಣಗಳ ಮೇಲೆ ಭ್ರಷ್ಟಾಚಾರ ನಡೆಯುತ್ತಿರುವುದು ಮಾತ್ರ ದುರ್ದೈವದ ಸಂಗತಿ. ಈಗಾಗಲೇ ಪಿಪಿಇ ಕಿಟ್, ವೆಂಟಿಲೇಟರ್ಸ್, ಸ್ಯಾನಿಟೈಸರ್ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮವಾಗಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿವೆ. ಆದರೆ ವಿಪಕ್ಷಗಳ ಆರೋಪಕ್ಕೆ ಸಿಎಂ ಯಡಿಯೂರಪ್ಪ ಸೇರಿದಂತೆ ಸಂಪುಟದ ಸದಸ್ಯರು ಸೊಪ್ಪು ಹಾಕಿಲ್ಲ. ಬದಲಾಗಿದೆ ವಿಪಕ್ಷಗಳ ಆರೋಪಕ್ಕೆ ಪ್ರತಿಯಾಗಿ ಸರ್ಕಾರ ಆರೋಪ ಮಾಡಿದವರಿಂದಲೇ ಸಾಕ್ಷಿ ಕೇಳಿದೆ. ಇದೀಗ ಇವೆಲ್ಲವುಗಳಿಗೂ ಕಿರೀಟ ಇಟ್ಟಂತೆ ಬಾಡಿಗೆ ಬೆಡ್‌ಗಳ ಹಗರಣ ಹೊರ ಬಂದಿದೆ.

BIECಯಲ್ಲಿ ಬಾಡಿಗೆ ಬೆಡ್‌ಗಳು

BIECಯಲ್ಲಿ ಬಾಡಿಗೆ ಬೆಡ್‌ಗಳು

ಬೆಂಗಳೂರು ಹಾಗೂ ಸುತ್ತಲಿನ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡಲು ಹೊರ ವಲಯದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ(BIEC)ದಲ್ಲಿ 10,100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗಿದೆ. ಸರ್ಕಾರದ ಈ ಕ್ರಮಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದೇಶದಲ್ಲಿಯೇ ಅತಿದೊಡ್ಡ ಕೋವಿಡ್-19 ಆಸ್ಪತ್ರೆಯನ್ನು ರಾಜ್ಯ ಸರ್ಕಾರದ ಸಹಾಯದಿಂದ ಬಿಬಿಎಂಪಿ ಸ್ಥಾಪಿಸಿದೆ.

ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಲಭ್ಯವಿದೆ? ಮನೆಯಲ್ಲೇ ಕೂತು ತಿಳಿಯಬಹುದುಆಸ್ಪತ್ರೆಯಲ್ಲಿ ಎಷ್ಟು ಬೆಡ್ ಲಭ್ಯವಿದೆ? ಮನೆಯಲ್ಲೇ ಕೂತು ತಿಳಿಯಬಹುದು

ಆದರೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಹಾಕಿರುವ ಎಲ್ಲ 10,100 ಹಾಸಿಗೆಗಳು, ದಿಂಬು, ಹೊದಿಕೆ ಮುಂತಾದ ವಸ್ತುಗಳನ್ನು ಬಾಡಿಗೆ ರೂಪದಲ್ಲಿ ತರಲಾಗಿದೆ. ಜೊತೆಗೆ ಬೆಂಗಳೂರಿನ ಇತರೆಡೆ ಸ್ಥಾಪನೆ ಮಾಡಲಾಗಿರುವ ಎಲ್ಲ ಕೋವಿಡ್ ಕೇರ್ ಸೆಂಟರ್‌ಗಳಿಗೆ ಬೆಡ್‌ಗಳನ್ನು ಬಾಡಿಗೆ ತರಲಾಗಿದೆ ಎಂಬ ಮಾಹಿತಿಯಿದೆ. ಹೀಗಾಗಿ ಮುಂದಿನ 3 ರಿಂದ 6 ತಿಂಗಳುಗಳ ಅವಧಿಗೆ ಬಾಡಿಗೆಯನ್ನು ಈ ಬೆಡ್‌ಗಳಿಗೆ ಕೊಡಬೇಕಾಗುತ್ತದೆ. ಅದು ಖರೀದಿ ಮಾಡುವುದಕ್ಕಿಂತ ದೊಡ್ಡ ಮೊತ್ತವಾಗಲಿದೆ ಎಂದು ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರ 'ಒನ್‌ಇಂಡಿಯಾ'ಕ್ಕೆ ಲಭ್ಯವಾಗಿದೆ. ಅದಕ್ಕಿಂತ ಮೊದಲು ಪ್ರತಿ ಬೆಡ್‌ಗೆ ಸರ್ಕಾರ ವ್ಯಯಿಸುತ್ತಿರುವ ಹಣದ ಲೆಕ್ಕಾಚಾರ ಹೀಗಿದೆ.

ಬಾಡಿಗೆ ಬೆಡ್‌ಗಳ ವಿವರ

ಬಾಡಿಗೆ ಬೆಡ್‌ಗಳ ವಿವರ

BIEC ಕೋವಿಡ್ ಕೇರ್ ಸೆಂಟರ್‌ನಲ್ಲಿ ಕಬ್ಬಿಣದ ಕಾಟ್ ಸೇರಿದಂತೆ ಹಾಸಿಗೆ ಸೆಟ್‌ಗೆ ಪ್ರತಿದಿನಕ್ಕೆ 800 ರೂ. ಗಳ ಬಾಡಿಗೆ ಆಧಾರದ ಮೇಲೆ ತರಲಾಗಿದೆ. ಪ್ರತಿ ಹಾಸಿಗೆ ಸೆಟ್‌ಗೆ 800 ರೂಪಾಯಿಗಳ ದಿನ ಬಾಡಿಗೆಯಂತೆ ಒಟ್ಟು 10 ಸಾವಿರ ಹಾಸಿಗೆಗಳಿಗೆ ಒಂದು ದಿನಕ್ಕೆ 80 ಲಕ್ಷ ರೂಪಾಯಿಗಳಷ್ಟು ಬಾಡಿಗೆ ಆಗುತ್ತದೆ. ಒಂದು ತಿಂಗಳಿಗೆ ಬಾಡಿಗೆ ರೂಪದಲ್ಲಿ ಸರಿಸುಮಾರು 24 ಕೋಟಿ ರೂಪಾಯಿಗಳನ್ನು ಕೊಡಬೇಕು.

ರಾಜ್ಯ ಸರ್ಕಾರ ಮುಂದಿನ 3 ರಿಂದ 6 ತಿಂಗಳುಗಳ ಕಾಲ ಈ ಕೋವಿಡ್ ಕೇರ್ ಸೆಂಟರ್ ನಡೆಸಲು ತೀರ್ಮಾನ ಮಾಡಿದೆ. ಹೀಗಾಗಿ 72 ರಿಂದ 144 ಕೋಟಿ ರೂಪಾಯಿಗಳನ್ನು ಕೇವಲ ಹಾಸಿಗೆಗಳಿಗೆ ಬಾಡಿಗೆ ರೂಪದಲ್ಲಿ ಹಣವನ್ನು ಸರ್ಕಾರ ಭರಿಸಬೇಕಾಗುತ್ತದೆ. ಉಸ್ತುವಾರಿ ಹೊತ್ತಿರುವ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಇದೆಲ್ಲವನ್ನೂ ವಿವರಿಸಿ ಕಳೆದ ಜುಲೈ 3 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಒಂದು ಸೆಟ್‌ ಹಾಸಿಗೆ

ಒಂದು ಸೆಟ್‌ ಹಾಸಿಗೆ

ಒಂದು ಕಬ್ಬಿಣದ ಕಾಟು, ಎರಡು ಫೂಮ್ ಮೆಟ್ರೆಸ್, 3 ಸೆಟ್‌ ಬೆಡ್‌ಶೀಟ್‌ಗಳು, ಒಂದು ತಲೆದಿಂಬು, ಬ್ಲಾಂಕೆಟ್, ಟವೇಲ್ ಹಾಗೂ ಒಂದು ಪ್ಲಾಸ್ಟಿಕ್ ಚೇರ್‌ನ್ನು ಒಂದು ಸೆಟ್ ಹಾಸಿಗೆ ಹೊಂದಿದೆ. ಇಷ್ಟು ಹಾಸಿಗೆ ಸೆಟ್‌ನ್ನು ಮುಂದಿನ ಮೂರರಿಂದ ಆರು ತಿಂಗಳುಗಳಿಗೆ ಬಾಡಿಗೆ ಪಡೆದುಕೊಳ್ಳಲಾಗಿದೆ. ಆದರೆ ಒಂದು ಸೆಟ್‌ ಹಾಸಿಗೆಯನ್ನು ಈಗಿನ ಮಾರುಕಟ್ಟೆ ದರದಲ್ಲಿ 7 ಸಾವಿರ ರೂಪಾಯಿಗಳಲ್ಲಿ ಖರೀದಿ ಮಾಡಬಹುದು ಎಂದು ಅಧಿಕಾರಿ ಸರ್ಕಾರಕ್ಕೆ ತಿಳಿಸಿದ್ದಾರೆ.

ಹಾಸಿಗೆಗಳ ಹಂಚಿಕೆಗೆ ಕೇಂದ್ರೀಕೃತ ವ್ಯವಸ್ಥೆ : ಸಚಿವ ಡಾ.ಕೆ.ಸುಧಾಕರ್ಹಾಸಿಗೆಗಳ ಹಂಚಿಕೆಗೆ ಕೇಂದ್ರೀಕೃತ ವ್ಯವಸ್ಥೆ : ಸಚಿವ ಡಾ.ಕೆ.ಸುಧಾಕರ್

ಕೇವಲ 10 ಕೋಟಿ ರೂಪಾಯಿಗಳಲ್ಲಿ ಅಗತ್ಯವಿರುವ ಎಲ್ಲ 10 ಸಾವಿರ ಹಾಸಿಗೆ ಸೆಟ್‌ಗಳನ್ನು ಖರೀದಿ ಮಾಡಬಹುದು ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ. ಆದರೆ ಅಧಿಕಾರಿಗಳ ಸಲಹೆ ಹೊರತಾಗಿಯೂ ಬಾಡಿಗೆ ರೂಪದಲ್ಲಿಯೆ ಹಾಸಿಗೆ ಪಡೆದಿರುವುದರ ಹಿಂದಿನ ಮರ್ಮ ಬಹಿರಂಗವಾಗಿಲ್ಲ.

ಪತ್ರದ ಸಂಪೂರ್ಣ ವಿವರ ಇಲ್ಲಿದೆ!

ಪತ್ರದ ಸಂಪೂರ್ಣ ವಿವರ ಇಲ್ಲಿದೆ!

ಮಾನ್ಯರೇ, ಕೋವಿಡ್-19 ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶಕ್ಕಾಗಿ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಪ್ರಯತ್ನಗಳಿಗಾಗಿ ದಿನಾಂಕ: 15.06.2020ರ ಸರ್ಕಾರದ ಆದೇಶ ಸಂಖ್ಯೆ: ಕಂಇ 158 ಟಿಎನ್‌ಆರ್ 2020ರ ಆದೇಶದಲ್ಲಿ ವಿವಿಧ ಕಾರ್ಯ ತಂಡಗಳನ್ನು ರಚಿಸಿ ಆದೇಶಿಸಲಾಗಿದೆ. ಈ ಆದೇಶನ್ವಯ ಸೌಮ್ಯ ಪ್ರಕರಣಗಳಿಗಾಗಿ ಆಸ್ಪತ್ರೆ ಹೊರತು ಪಡಿಸಿ ಇತರ ಸ್ಥಳಗಳಲ್ಲಿ ಸುಮಾರು 20,000 ಹಾಸಿಗೆಗಳ ಸಾಮರ್ಥ್ಯವನ್ನು ಸಿದ್ಧಗೊಳಿಸುವುದು ಮತ್ತು ಹಾಸಿಗೆಗಳು, ನೈರ್ಮಲ್ಯ, ಆಹಾರ, ಲಾಜಿಸ್ಟಿಕ್, ವೈದ್ಯಕೀಯ ಮತ್ತು ಕಾರ್ಯಾಚರಣೆಯ ನಿರ್ವಹಣೆಗೆ ಮಾನವ ಶಕ್ತಿಯ ಗುರುತಿಸುವಿಕೆ ಮತ್ತು ತರಬೇತಿ ಇತ್ಯಾದಿ ವಿಷಯದಲ್ಲಿ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುವ ಸಿಎಚ್‌ಸಿ (ಕೋವಿಡ್ ಆರೈಕೆ ಕೇಂದ್ರಗಳು) ತಂಡಕ್ಕೆ ನನ್ನನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿದೆ.

ಇದರ ಭಾಗವಾಗಿ ಸಿಎಚ್‌ಸಿ (ಕೋವಿಡ್ ಆರೈಕೆ ಕೇಂದ್ರಗಳು) ತಂಡದ ಕಾರ್ಯ ಚಟುವಟಿಕೆಗಳ ಕಾರ್ಯನಿರ್ವಹಣೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯ 8 ವಲಯಗಳಲ್ಲಿ ಈ ಚಟುವಟಿಕೆಗಳಿಗೆ ಸಂಬಂಧಿಸಿದ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಮಾಡಲು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ 8 ಜನ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ಕಾರ್ಯತಂಡವು ಈಗಾಗಲೇ ಕೇಂದ್ರಗಳನ್ನು ಗುರುತಿಸಿದ್ದು, ಇದರಲ್ಲಿ 3 ಕೇಂದ್ರಗಳು ಈಗಾಗಲೇ ಕಾರ್ಯಾರಂಭಗೊಂಡಿದ್ದು ಕೋವಿಡ್ ಆರೈಕೆ ಕೇಂದ್ರಗಳ ಪ್ರಸ್ತುತ ಹಂತದ ವಿವರಗಳನ್ನು ಈ ಪತ್ರದೊಂದಿಗೆ ಲಗತ್ತಿಲಾಗಿದೆ.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳಿಗೆ ಅಗತ್ಯವಿರುವ ಹಾಸಿಗೆ, ದಿಂಬು, ಹೊದಿಕೆ ಮುಂತಾದ ವಸ್ತುಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲಾಗುತ್ತಿದ್ದು, ಈ ವಸ್ತುಗಳು ಗುಣಮಟ್ಟದಲ್ಲಿ ಉತ್ತಮವಾಗಿರುವುದಿಲ್ಲ. ಅಲ್ಲದೆ ಕೋವಿಡ್ ಆರೈಕೆ ಕೇಂದ್ರಗಳು ಇನ್ನೂ ಮೂರರಿಂದ ನಾಲ್ಕು ತಿಂಗಳುಗಳವರಗೆ ಕಾರ್ಯನಿರ್ವಹಿಸುವ ಸಾಧ್ಯತೆ ಇದ್ದು, ಈ ವಸ್ತುಗಳಿಗೆ ನೀಡುತ್ತಿರುವ ಬಾಡಿಗೆ ವಸ್ತುವಿನ ಮೂಲ ಬೆಲೆಗಿಂತ 3 ರಿಂದ 4 ಪಟ್ಟು ಹೆಚ್ಚಾಗುತ್ತದೆ. ಈ ಕಾರಣಕ್ಕಾಗಿ ಅಗತ್ಯವಿರುವ ಉತ್ತಮ ಗುಣಮಟ್ಟದ ಹಾಸಿಗೆ, ದಿಂಬು ಇತ್ಯಾದಿ ಪರಿಕರಗಳನ್ನು ಬಾಡಿಗೆ ಪಡೆಯುವ ಬದಲಾಗಿ ಖರೀದಿಸಬಹುದಾಗಿದೆ. ಅವುಗಳನ್ನು ಈಗಾಗಲೇ ಪ್ರಾರಂಭವಾಗಿರುವ ಕೋವಿಡ್ ಆರೈಕೆ ಕೇಂದ್ರಗಳಿಗೆ ಮತ್ತು ಮುಂದೆ ಪ್ರಾರಂಭಿಸಲಾಗುವ ಕೇಂದ್ರಗಳಲ್ಲಿ ಬಳಸಿಕೊಂಡು ಮುಂದಿನ ದಿನಗಳಲ್ಲಿ ಸೋಂಕು ಮುಕ್ತಗೊಳಿಸುವ ಮೂಲಕ ಸರ್ಕಾರಿ ವಿದ್ಯಾರ್ಥಿ ನಿಲಯಗಳು, ಆಸ್ಪತ್ರೆಗಳು, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ನಿರ್ವಹಿಸುವ ವಿದ್ಯಾರ್ಥಿನಿಲಯಗಳಲ್ಲಿ ಮತ್ತು ಇತರೆ ಅಗತ್ಯವಿರುವ ಕಡೆ ಮರು ಬಳಕೆ ಮಾಡಿಕೊಳ್ಳಬಹುದಾಗಿರುತ್ತದೆ.

ಮೇಲಿನ ವಿವರಣೆಗಳ ಹಿನ್ನೆಲೆಯಲ್ಲಿ ಬಾಡಿಗೆಗೆ ಪಡೆಯುವ ಬದಲು ಅಲ್ಪಾವಧಿ ಟೆಂಡರ್, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಡಿ 4(ಜಿ) ಅಡಿ ವಿನಾಯತಿ ಪಡೆದು ಅಥವಾ GEM ಪೋರ್ಟಲ್ ಮೂಲಕ ಖರೀದಿಸಬಹುದಾಗಿರುತ್ತದೆ. ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮವಹಿಸುವಂತೆ ಕೋರಿದೆ.

ಗೌರವಗಳೊಂದಿಗೆ ಎಂದು ಪತ್ರ ಮುಕ್ತಾಯವಾಗಿದೆ.

BIECಗೆ ಸಿಎಂ ಭೇಟಿ

BIECಗೆ ಸಿಎಂ ಭೇಟಿ

ಕಳೆದ ಭಾನುವಾರ BIEC ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಒಳ್ಳೆಯ ವ್ಯವಸ್ಥೆ ಮಾಡಿದ್ದನ್ನು ಶ್ಲಾಘನೆ ಮಾಡಿದ್ದರು. ಇದೀಗ ಬಾಡಿ ಬೆಡ್‌ ಹರಗಣದ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಸೋಂಕಿತರಿಗೆ ಚಿಕಿತ್ಸೆ ಕೊಡುವುದಕ್ಕೆ ಗಮನ ಕೊಟ್ಟಂತೆ, ಬಾಡಿಗೆ ಬೆಡ್ ಪಡೆದು ಭ್ರಷ್ಟಾಚಾರ ನಡೆದಿದ್ದರೆ ಅದನ್ನೂ ತಕ್ಷಣ ತನಿಖೆಗೆ ವಹಿಸಬೇಕು ಎಂಬುದು ಜನ ಸಮಾನ್ಯರ ಆಶಯ.

Exclusive: ನೆಗೆಟಿವ್ ಇದ್ದವ್ರಿಗೂ ಕೊರೊನಾ ಪಾಸಿಟಿವ್ ಎಂದು ವಿಕ್ಟೋರಿಯಾ ಎಡವಟ್ಟುExclusive: ನೆಗೆಟಿವ್ ಇದ್ದವ್ರಿಗೂ ಕೊರೊನಾ ಪಾಸಿಟಿವ್ ಎಂದು ವಿಕ್ಟೋರಿಯಾ ಎಡವಟ್ಟು

English summary
BIEC India's biggest COVID-19 centre Scam: BBMP wastes crores of money by paying contractors rs 800 rent per bed per day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X