Breaking: ಬಸವರಾಜ ಹೊರಟ್ಟಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ
ಬೆಂಗಳೂರು, ಮೇ 18: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಸವರಾಜ ಹೊರಟ್ಟಿ ಅವರು ಜೆಡಿಎಸ್ ತೊರೆದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು.
ಜೆಡಿಎಸ್ ಮೂಲಕ ವಿಧಾನ ಪರಿಷತ್ ಸಭಾಪತಿಯಾಗಿ ಕಳೆದ ಫೆಬ್ರವರಿಯಲ್ಲಿ ನೇಮಕ ಆಗಿದ್ದ ಬಸವರಾಜ ಹೊರಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೇ 17ರಂದು ರಾಜೀನಾಮೆ ಅಂಗೀಕಾರ ಆಗುತ್ತಿದ್ದಂತೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಕ್ಷದ ಧ್ವಜ ಮತ್ತು ಶಾಲು ಹೊದಿಸಿ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಚಿವರಾದ ಗೋವಿಂದ ಎಂ. ಕಾರಜೋಳ, ಆರ್. ಅಶೋಕ್ ಸಹಿತ ಹಲವರು ಹೊರಟ್ಟಿ ಅವರನ್ನು ಅಭಿನಂದಿಸಿ ಸ್ವಾಗತಿಸಿದರು.
ರಾಜಕೀಯವಾಗಿ ಶಕ್ತಿ ಹೊಂದಿದ್ದಾರೆ:
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಬಸವರಾಜ ಹೊರಟ್ಟಿ ಅವರು 45 ವರ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿ, ಮಂತ್ರಿಯಾಗಿ, ಸಭಾಪತಿಯಾಗಿ ಗೌರವ ಹೊಂದಿರುವ ಹಿರಿಯ ನಾಯಕ. ಕಾಲೇಜು, ಹೈಸ್ಕೂಲ್ ಶಿಕ್ಷಕರನ್ನು ಸಂಘಟಿಸಿ ನಿರಂತರವಾಗಿ ಹೋರಾಟ ಮಾಡಿಕೊಂಡು ರಾಜಕೀಯವಾಗಿ ತಮ್ಮದೇ ಶಕ್ತಿ ಬೆಳೆಸಿಕೊಂಡು ಬಂದಿದ್ದಾರೆ," ಎಂದು ಹೇಳಿದರು.
1952 ರಿಂದ ರಾಜಕಾರಣದಲ್ಲಿ ಇದ್ದಾರೆ. ನಿರಂತರವಾಗಿ ವಿಧಾನ ಪರಿಷತ್ಗೆ ಆಯ್ಕೆಯಾಗುತ್ತಿರುವಂತಹ ದಾಖಲೆ ಇಡೀ ದೇಶದಲ್ಲಿಯೇ ಇಲ್ಲ. ಅಂತಹ ನಾಯಕರನ್ನು ಬರಮಾಡಿಕೊಳ್ಳುವುದಕ್ಕೆ ಸಂತೋಷ ಇದೆ. ಹೊರಟ್ಟಿ ಅವರು ನಮ್ಮ ಪಕ್ಷಕ್ಕೆ ಸೇರಬೇಕೆಂಬ ತೀರ್ಮಾನ ಮಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿ ಮಾಡಿದ್ದರು. ಸಭಾಪತಿ ಮತ್ತು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ಎಲ್ಲವೂ ಆಂಗೀಕಾರ ಆಗಿವೆ. ಇಂದು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ:
ಹುಬ್ಬಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ ಮಾಡುವ ಮೂಲಕ ಬಸವರಾಜ ಹೊರಟ್ಟಿ ಅವರನ್ನು ವಿಜೃಂಭಣೆಯಿಂದ ಬರಮಾಡಿಕೊಳ್ಳುತ್ತೇವೆ. ಅವರ ಸೇರ್ಪಡೆಯಿಂದ ಬಿಜೆಪಿ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಶಕ್ತಿ ಬಂದಿದೆ. ಅವರ ಅನುಭವವನ್ನು ಗೌರವಿಸಿ ಪಕ್ಷದಲ್ಲಿ ಎಲ್ಲಾ ರೀತಿಯ ಅವಕಾಶಗಳನ್ನೂ ಮಾಡಿಕೊಡಲು ಹಿರಿಯ ನಾಯಕರು ಒಪ್ಪಿದ್ದಾರೆ. ಬಿಜೆಪಿ ಬೆಳವಣಿಗೆಗೆ ಅತ್ಯಂತ ಚರಿತ್ರಾರ್ಹ ದಿನ ಎಂದು ಬಣ್ಣಿಸಿದರು.