ಕಾಮನ್ ಮ್ಯಾನ್ಗೆ 'ಮಂಡಿ' ನೋವು; ಸಿಎಂ 'ಬಂಡಿ' ಹೊಸಬ್ರು ಏರೋದು ಖಾಯಂ
ಬೆಂಗಳೂರು, ಡಿ. 23: 'ಕಾಮನ್ ಮ್ಯಾನ್'(CM) ಬಸವರಾಜ ಬೊಮ್ಮಾಯಿ ಅವರಿಗೆ ಮಂಡಿ ನೋವಂತೆ. ಹೀಗಾಗಿ ಕರ್ನಾಟಕ ಸಿಎಂ ಸ್ಥಾನ 'ಬಂಡಿ' ಏರಲು ನಾಲ್ಕು ನಾಯಕರು ರೇಸ್ನಲ್ಲಿದ್ದಾರೆ. ಬೊಮ್ಮಾಯಿ ಬದಲಾವಣೆಗೆ ಮಂಡಿ ನೋವು ನೆಪವಾದರೂ ನಿಜವಾಗಿಯೂ ಇರುವ ಆ ಮೂರು ಕಾರಣಗಳೇ ಬೇರೆ. ಕರ್ನಾಟಕ ಮುಖ್ಯಮಂತ್ರಿ ಬದಲಾವಣೆ ಕಾರಣವಾಗಿರುವ ಆ ಮೂರು ಕಾರಣಗಳ ವಿವರ ಇಲ್ಲಿದೆ.
ರಾಜ್ಯ ಬಿಜೆಪಿ ಪಕ್ಷದಲ್ಲಿ ನಡೆದ ದಿಢೀರ್ ಬೆಳವಣಿಗೆಯಿಂದ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಯಾರ ಊಹೆಗೂ ನಿಲುಕದೇ ಬಸವರಾಜ ಬೊಮ್ಮಾಯಿ ಅವರು ಸಿಎಂ ಅಭ್ಯರ್ಥಿ ಎಂದು ಬಿಜೆಪಿ ವರಿಷ್ಠರು ಘೋಷಣೆ ಮಾಡಿದ್ದರು. ಬಿಎಸ್ವೈ ಪರಮಾಪ್ತ ನಾಯಕನಾಗಿ ಗುರುತಿಸಿಕೊಂಡಿದ್ದ ಬಸವರಾಜ ಬೊಮ್ಮಾಯಿ ಜು. 28 ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಕಾಮನ್ ಮ್ಯಾನ್ ಬೊಮ್ಮಾಯಿ ಆಡಳಿತದ ಕೋಟಾ ಅರು ತಿಂಗಳಿಗೆ ಮುಗಿದಂತೆ ಕಾಣುತ್ತಿದೆ. ಅತಿ ಶೀಘ್ರದಲ್ಲಿಯೇ ಸಿಎಂ ಸ್ಥಾನದಿಂದ ಬೊಮ್ಮಾಯಿ ಕೆಳಗೆ ಇಳಿಯಲಿದ್ದಾರೆ ಎಂಬುದು ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ. ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ತೆರವಾಗುವ ಸಿಎಂ ಕುರ್ಚಿ ಅಲಂಕರಿಸಲು ಬಿಜೆಪಿ ನಾಯಕರು ಬಿರುಸಿನ ಚಟುವಟಿಕೆ ಅದಾಗಲೇ ಆರಂಭಿಸಿದ್ದಾರೆ.

ಮಂಡಿನೋವಿನಿಂದ ಬಳಲುತ್ತಿರುವುದು ಖಚಿತ
ಸದ್ಯ ಪಕ್ಷದಲ್ಲಿ ಕೆಲ ನಾಯಕರ ಲೆಕ್ಕಾಚಾರದ ಪ್ರಕಾರ ಸಂಕ್ರಾಂತಿ ಬಳಿಕ ಬಸವರಾಜ ಬೊಮ್ಮಾಯಿ ಅವರು ಸಿಎಂ ಕುರ್ಚಿಯಿಂದ ಕೆಳಗೆ ಇಳಿಯಲಿದ್ದಾರೆ. ಕೆಳಗೆ ಇಳಿದು ನೇರ ಅವರು ಅಮೆರಿಕಕ್ಕೆ ತೆರಳಲಿದ್ದಾರೆ. ಮಂಡಿನೋವುನಿಂದ ಬಳಲುತ್ತಿರುವ ಬಸವರಾಜ ಬೊಮ್ಮಾಯಿ ಶಸ್ತ್ರ ಚಿಕಿತ್ಸೆ ಮೊರೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟೀಕರಿಸುವಂತೆ ಇತ್ತೀಚೆಗೆ ಬೆಳಗಾವಿ ಏರ್ಪೋರ್ಟ್ನಲ್ಲಿ ಸಂಸದೆ ಮಂಗಳಾ ಸುರೇಶ್ ಎದುರಾದರೂ ಸೌಜನ್ಯಕ್ಕೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಎದ್ದಿಲ್ಲ. ಇದು ಸುದ್ದಿಯಾದ ವೇಳೆ ಬೊಮ್ಮಾಯಿ ಅವರೆ ಸ್ವತಃ ಮಂಡಿ ನೋವಿನ ಸೀಕ್ರೇಟ್ ಬಿಚ್ಚಿಟ್ಟಿದ್ದರು.
ಮಂಡಿನೋವಿನಿಂದ ಕಾಲು ಮೇಲೆ ಕಾಲು ಹಾಕಿ ಕೂತಿದ್ದೆ. ಎದ್ದು ಅವರಿಗೆ ಗೌರವ ತೋರಬಾರದು ಎಂಬ ಉದ್ದೇಶ ನನಗೆ ಇಲ್ಲ. ಏಳಲಾರದ ಸ್ಥಿತಿಯಲ್ಲಿ ಕಾಲು ಮೇಲೆ ಕಾಲು ಹಾಕಿ ಕೂತಿದ್ದೆ ಎಂದು ಸ್ಪಷ್ಟನೆ ನೀಡಿದ್ದರು. ಅವರ ಹೇಳಿಕೆಯಂತೆ ಮಂಡಿನೋವಿನಿಂದ ಬಳಲುತ್ತಿರುವುದು ಖಚಿತವಾಗಿದ್ದು, ಇದೇ ಕಾರಣ ಮುಂದಿಟ್ಟುಕೊಂಡು ಸಿಎಂ ಬದಲಾವಣೆಗೆ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಸಿಎಂ ರೇಸ್ನಲ್ಲಿ ನಾಲ್ಕು ಮಂದಿ:
ಇನ್ನು ಮುಖ್ಯಮಂತ್ರಿ ಬದಲಾವಣೆ ಅಗುತ್ತಾರೆ, ಕಾದು ನೋಡಿ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಸಿಎಂ ಬದಲಾವಣೆ ಭವಿಷ್ಯ ನುಡಿದಿದ್ದಾರೆ. ಯಡಿಯೂರಪ್ಪ ಬದಲಾವಣೆ ಬಗ್ಗೆ ಮೊದಲು ಭವಿಷ್ಯ ನುಡಿದ ಬಿಜೆಪಿ ನಾಯಕರು. ಇದೀಗ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ. ಹೀಗಾಗಿ ಬಹುತೇಕ ಸಿಎಂ ಸ್ಥಾನ ಬದಲಾವಣೆ ಆಗುವುದು ಪಕ್ಕ ಎಂದೇ ಹೇಳಲಾಗುತ್ತಿದೆ. ಇನ್ನೂ ಸಿಎಂ ರೇಸಿಗೆ ಅದಾಗಲೇ ನಾಲ್ಕು ನಾಯಕರ ಹೆಸರು ಕೇಳಿ ಬಂದಿದೆ. ಯಡಿಯೂರಪ್ಪನವರ ಹಸ್ತಕ್ಷೇಪ ದೂರ ಮಾಡುವ ಜತೆಗೆ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಒಕ್ಕಲಿಗ ಸಮುದಾಯದ ಒಲೈಕೆಗಾಗಿ ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಅವರ ಹೆಸರು ಅಗ್ರ ಸ್ಥಾನದಲ್ಲಿ ನಿಂತಿದೆ. ಎಂದಿನಂತೆ ಈ ಬಾರಿಯೂ ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹೆಸರು ರೇಸ್ನಲ್ಲಿ ಕೇಳಿ ಬರುತ್ತಿದೆ.
ಉಳಿದಂತೆ ದಲಿತ ಸಮುದಾಯದ ಕೋಟಾದಡಿ ಗೋವಿಂದ ಕಾರಜೋಳ ಅವರು ಸಿಎಂ ಆದರೂ ಅಚ್ಚರಿ ಪಡಬೇಕಿಲ್ಲ ಎಂದೇ ಹೇಳಲಾಗುತ್ತಿದೆ. ಇನ್ನು ನಾಲ್ಕನೇ ಕ್ಯಾಂಡಿಡೇಟ್ ಯಾರೂ ನಿರೀಕ್ಷಿಸದ ರೀತಿಯಲ್ಲಿ ಡಾರ್ಕ್ ಹಾರ್ಸ್ ಸ್ಥಾನ ಯಾರು ಬೇಕಾದರೂ ಅಲಂಕರಿಸಬಹುದು. ಅಂತೂ ಮೊದಲ ಸಾಲಿನಲ್ಲಿ ಸಿಎಂ ರೇಸಿನಲ್ಲಿರುವ ಮೂವರ ಹೆಸರು ಕೇಳಿ ಬರುತ್ತಿದೆ. ಈ ಎಲ್ಲಾ ಬೆಳವಣಿಗೆ ನೋಡಿದರೆ ನೂತನ ವರ್ಷದ ಸಂಕ್ರಾತಿ ಬಳಿಕ ಸಿಎಂ ಬದಲಾವಣೆ ಆಗಲಿದ್ದಾರೆ ಎಂದೇ ಹೇಳಲಾಗುತ್ತಿದೆ.

ಆ ಮೂರು ಕಾರಣಗಳು:
ಇನ್ನು ಮಂಡಿ ನೋವಿನದ್ದು ಗಂಭೀರ ಸಮಸ್ಯೆ. ಶಸ್ತ್ರ ಚಿಕಿತ್ಸೆಗೆ ಒಳಗಾದರೂ ತಿಂಗಳುಗಳ ಕಾಲ ವಿಶ್ರಾಂತಿ ಅಗತ್ಯ. ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಚುರುಕು ಆಡಳಿತ ನೀಡಬೇಕು. ಹೀಗಾಗಿ ಹಂಗಾಮಿ ಸಿಎಂ ಇಟ್ಟುಕೊಂಡು ಆಡಳಿತ ನಡೆಸುವುದು ಕಷ್ಟಸಾಧ್ಯ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರನ್ನು ಇದೇ ಕಾರಣದ ಮೇಲೆ ಬದಲಿಸಲು ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಬಿಟ್ ಕಾಯಿನ್ ಅಕ್ರಮ:
ಇನ್ನೂ ಬಿಟ್ ಕಾಯಿನ್ ಅಕ್ರಮಲ್ಲಿ ಬಿಜೆಪಿ ಸರ್ಕಾರಕ್ಕೆ ರಾಷ್ಟ್ರ ಮಟ್ಟದಲ್ಲಿ ಪೆಟ್ಟು ಬಿದ್ದಿದೆ. ಹೀಗಾಗಿ ಬಿಜೆಪಿ ಆಡಳಿತ ಸ್ವಚ್ಛ ಆಡಳಿತ ಎಂಬ ಮೋದಿ ಕನಸಿಗೆ ಧಕ್ಕೆ ಒದಗಿದೆ. ಹೀಗಾಗಿ ಇದನ್ನು ಸಹ ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಬೊಮ್ಮಾಯಿ ಮೇಲೆ ಗಂಭೀರ ಆರೋಪ ಕೇಳಿ ಬಂದಿರುವ ಕಾರಣ ಸಿಎಂ ಬದಲಾವಣೆ ಮಾಡುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.

ಆಡಳಿತದ ಅಧಃಪತನ:
ಇನ್ನು ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಬಹುತೇಕ ಕೆಲಸಗಳು ಕ್ಷಿಪ್ರ ಗತಿಯಲ್ಲಿ ನಡೆಯುತ್ತಿಲ್ಲ. ಯಾವ ಕಡತಗಳು ವಿಲೇವಾರಿಯಾಗುತ್ತಿಲ್ಲ. ಕಮೀಷನ್ ದಂಧೆ ಪರಕಾಷ್ಟೆ ತಲುಪಿ 40 ಪರ್ಸೆಂಟ್ ಗೌರ್ನಮೆಂಟ್ ಎಂಬ ಅಪಖ್ಯಾತಿ ಎದುರಿಸುವಂತಾಗಿದೆ. ಸಿಎಂ ಅವರ ತೀರ್ಮಾನಗಳಿಂದ ಅಭಿವೃದ್ಧಿ ಕೆಲಸಗಳು ಸಂಪೂರ್ಣ ನಿಂತು ಹೋಗಿವೆ. ಹೀಗಾಗಿ ರಾಜ್ಯದ ಆರ್ಥಿಕ ಪ್ರಗತಿ ಕುಂಟಿತವಾಗಿದ್ದು, ಇದೇ ರೀತಿ ಆಡಳಿತ ನೀಡಿದರೆ ಮುಂದೆ ಚುನಾವಣೆ ಎದುರಿಸಲು ಅಸಾಧ್ಯ. ಹೀಗಾಗಿ ರಾಜ್ಯದ ಆಡಳಿತಕ್ಕೆ ವೇಗ ಕೊಡಲು, ಮಿ. ಕ್ಲೀನ್ ಇಮೇಜ್ ಇರುವ ನಾಯಕರನ್ನು ಸಿಎಂ ಕುರ್ಚಿ ಮೇಲೆ ಕೂರಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಹೀಗಾಗಿ ಸಿಎಂ ಕುರ್ಚಿಗಾಗಿ ಡಾರ್ಕ್ ಹಾರ್ಸ್ಗಾಗಿ ಶೋಧನೆ ನಡೆದಿದೆ. ಸದ್ಯ ರೇಸ್ನಲ್ಲಿರುವರನ್ನು ಹೊರತು ಪಡಿಸಿ ಯಾರು ಬೇಕಾದರೂ ಸಿಎಂ ಕುರ್ಚಿ ಅಲಂಕರಿಸಬಹುದು ಎಂಬುದು ಬಿಜೆಪಿ ಪಾಳಯದ ಬಿಸಿ ಚರ್ಚೆಯಾಗಿದೆ. ಅಂತು ಮಂಡಿ ನೋವಿನ ನೆಪದಲ್ಲಿ ಬಸವರಾಜ ಬೊಮ್ಮಾಯಿ ಸಿಎಂ ಕುರ್ಚಿ ಇಳಿಯುವುದು ಖಚಿತ ಎಂದೇ ಹೇಳಲಾಗುತ್ತಿದೆ.