• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಸವ ಜಯಂತಿ 'ಆಚರಣೆ' ಗಿಂತ ವಿಚಾರ ಮೆರವಣಿಗೆಯಾಗಲಿ

By ಗುರುರಾಜ ಪೋಶೆಟ್ಟಿಹಳ್ಳಿ
|

'ಮೃತ್ಯುಲೋಕವೆಂಬುದು ಕರ್ತಾರನ ಕಮ್ಮಟವಯ್ಯ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು. ಮೃತ್ಯುಲೋಕ, ದೇವಲೋಕ ಬೇರಿಲ್ಲ. ಸತ್ಯವ ನುಡಿವುದು ದೇವಲೋಕ, ಮಿಥ್ಯವ ನುಡಿವುದೇ ಮೃತ್ಯು ಲೋಕ, ಇದು ಶರಣರ ಬದುಕಿನ ಸಂದೇಶವಾಗಿತ್ತು.

ಶರಣರು ಕೇವಲ ಮಾತಿನ ಮಲ್ಲರಾಗಿರದೇ ನಡೆ ಧೀರರಾಗಿದ್ದರು. ಮೊದಲು ನಡೆದು ನಂತರ ನುಡಿಯುವುದು ಅವರ ಜೀವನಾದರ್ಶನವಾಗಿತ್ತು ಭೂಲೋಕದಲ್ಲಿ ಬಸವಣ್ಣನವರಿದ್ದ ಅಲ್ಪಕಾಲಾವಧಿಯಲ್ಲಿ ಬಹುದೊಡ್ಡ ಧಾರ್ಮಿಕ ಕ್ರಾಂತಿ ಜರುಗಿತು. ಆರ್ಥಿಕ, ಸಾಮಾಜಿಕ, ಧಾರ್ಮಿಕವಾಗಿ ಜನಜೀವನದ ವಿವಿಧ ಸ್ತರಗಳಲ್ಲಿ ಹೊಸತನ ಮೂಡಿತು.

ತಮ್ಮ ಬದುಕಿನ ಸಾರಸರ್ವಸ್ವವನ್ನೆಲ್ಲ ವಚನಗಳ ಮೂಲಕ ಕನ್ನಡ ಕುಲಕೋಟಿಗೆ ಧಾರೆ ಎರೆದರು. ಸಹಸ್ರಾರು ಶರಣ ಶರಣೆಯರು ವಚನಗಳನ್ನು ರಚಿಸಿ ಎಲ್ಲ ಕಾಲಕ್ಕೂ ಜನಸಮೂಹದ ಬದುಕಿಗೆ ಮಾರ್ಗದರ್ಶಿ ದೀಪ್ತಿಗಳಾಗಿರುವಂತೆ ಮಾಡಿದ್ದಾರೆ.

ಗೃಹಸ್ಥನೇ ಆಗಿರಲಿ, ಕಾವಿ ಲಾಂಛನ ಧಾರಿಸ್ವಾಮಿಯೇ ಆಗಿರಲಿ ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಎಂಬ ವಚನೋಕ್ತಿಯಂತೆ ನಡೆದು ತೋರಿಸಿದರೆ ಬಸವಣ್ಣನವರಿಗೆ ಗೌರವ ತೋರಿದಂತಾಗುವುದು.

ಅಣ್ಣನು ಬ್ರಹ್ಮಚಾರಿಯಲ್ಲವಾದರೂ, ಸನ್ಯಾಸಿಯಲ್ಲವಾದರೂ, ಸತಿದ್ವಯಕತೃತೀಯನಾಗಿದ್ದರೂ, ಯಾವ ಧರ್ಮಾಚಾರ್ಯನೂ ಕಂಡರಿಯದ, ಕೇಳರಿಯದ ರೀತಿಯಲ್ಲಿ ವಿಶ್ವಮಾದರಿಯಲ್ಲಿ ಭವಿಷತ್ ಪ್ರಪಂಚದ ಭದ್ರ ಬುನಾದಿಯಾಗಿ ಧರ್ಮವನ್ನು ಸಂಸ್ಥಾಪಿಸಿರುವುದರಿಂದ ಬಸವಣ್ಣ ಗೃಹಸ್ಥ ಜಗದ್ಗುರುವೆಂದು ಹೇಳುವುದು ಅರ್ಥಪೂರ್ಣವಾದ ವಿವೇಕವಾಗಿದೆ.

ಬಸವಣ್ಣನವರು ಉಣ ಕಲಿಸಿದರು, ಉಡ ಕಲಿಸಿದರು, ನಡೆ ಕಲಿಸಿದರು ನುಡಿ ಕಲಿಸಿದರು, ಧರ್ಮಕ್ಕೆ ಮೂಲ ದಯೆಯಾಗಿರಬೇಕು. ಕಾಯಕದಿಂದ ಬಂದ ಫಲ ದಾಸೋಹಕ್ಕೆ ಸಲ್ಲಬೇಕು.

ಬಸವಣ್ಣನವರಿಗೆ ಜಾತಿ ನಿರ್ಮೂಲನೆಯೇ ಶ್ರೇಷ್ಠಕಾರ್ಯವಾಗಿತ್ತು. ಈಗ ನಾವು ಭಾರತವೆಂಬ ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿಗಳಿಗೆ ಎಲ್ಲಿಲ್ಲದ ಮಹತ್ವವನ್ನು ನೀಡುತ್ತಿದ್ದೇವೆ. ಅಷ್ಟೇ ಅಲ್ಲ ಜಾತಿಗೊಂದು ಮಠ ಪೀಠ ಕಟ್ಟುತ್ತಿದ್ದೇವೆ. ಬಸವಣ್ಣನವರು ಅನುಭವ ಮಂಟಪ ಕಟ್ಟಿದರೆ ಹೊರತು ಜಾತಿಗೊಂದು ಪೀಠ, ಮಠಗಳನ್ನು ಕಟ್ಟಲಿಲ್ಲ.

ಎಂತಹ ಬಡವನಾದರೂ ಸರಿಯೇ, ಕಾಯಕ ಮಾಡಿ ಹೆಮ್ಮೆಯಿಂದ ಬದುಕು ಸಾಗಿಸಬೇಕೆಂಬುದು ಬಸವಣ್ಣನವರ ಕಟ್ಟಪ್ಪಣೆಯಾಗಿತ್ತು. ಇದು ಶ್ರಮ ಸಂಸ್ಕೃತಿಯ ಮಹತ್ವದ ಅಂಶವಾಗಿತ್ತು. ಯಾರೂ ಪುಕ್ಕಟೆ ಬಂದುದನ್ನು ಸ್ವೀಕರಿಸುವಂತಿರಲಿಲ್ಲ. ಬಸವಪ್ರಶಸ್ತಿಯನ್ನು ಕೊಡುವ ಸರ್ಕಾರವೇ ಈಗ ದುಡಿಮೆಯ ಕಾಯಕ ಸಂಸ್ಕೃತಿಯೇ ಹಾಳಾಗಿ ಹೋಗುವಂತೆ ಮಾಡುತ್ತಿರುವುದು ಶೋಚನೀಯ.

ಶ್ರೀಬಸವಣ್ಣನವರು ಲೋಕದ ದೋಷಗಳನ್ನು ಕಂಡು ಮರುಗಿದ್ದು ಮಾತ್ರವಲ್ಲ, ಅವುಗಳಿಗೆ ಸೂಕ್ತ ಪರಿಹಾರವನ್ನು ಹುಡುಕಿದರು. ಧರ್ಮ ದೇವರುಗಳಿಗೆ ಹೊಸ ವ್ಯಾಖ್ಯಾನ ನೀಡಿದರು. ಭಯವೇ ಧರ್ಮ ಬಸವಣ್ಣನವರು ಹೇಳಿದ್ದು ದಯವೇ ಧರ್ಮದ ಮೂಲ ಎಂದು ನಿಜಕ್ಕೂ ಸಮಾಜದಲ್ಲಿ ಬಸವ ತತ್ತ್ವದಂತೆ ಬಾಳುವ ಸಂಕಲ್ಪ ಮಾಡಿದರೆ ವ್ಯಕ್ತಿ ಕಲ್ಯಾಣ.

ತನ್ಮೂಲಕ ಲೋಕ ಕಲ್ಯಾಣದ ಕನಸು ನನಸಾಗುವುದು. ಇಂದು ಸಮಾಜದಲ್ಲಿ ಅನೇಕ ರೋಗಗಳು ಉಲ್ಭಣಿಸಿ ಸಾಮಾಜಿಕ ಆರೋಗ್ಯ ತುಂಬಾ ಹದಗೆಡುತ್ತಿರುವುದಕ್ಕೆ ಕಾರಣ ಬಸವ ಸಂದೇಶ ಜಾರಿಯಲ್ಲಿ ಬಾರದಿರುವುದು. ನಿಜಕ್ಕೂ ಬಸವ ಸಂದೇಶದಂತೆ ಬದುಕನ್ನು ರೂಪಿಸಿಕೊಳ್ಳುವ ಗಟ್ಟಿ ಮನಸ್ಸು ನೇತಾರರಿಗೆ ಮತ್ತು ಮತದಾರರಿಗೆ ಬಂದಲ್ಲಿ ಕಲ್ಯಾಣ ರಾಜ್ಯ ನೆಲೆಗೊಳ್ಳುವುದು.

ಸ್ವಾಮಿಗಳಿಗೆ, ನೇತಾರರಿಗೆ ಬಸವಣ್ಣನವರು ಹೇಳುವುದು ಪರಧನದಾಮಿಷ, ಪರಸ್ತ್ರೀಯ ಮೋಹವನ್ನು ಮೊದಲು ತೊರೆಯಿರಿ ಎಂದು ನಂಟು ಭಕ್ತಿ ನಾಯಕ ನರಕವೆಂದು ಹೇಳುವ ಮೂಲಕ ನೀವು ನಿಮ್ಮ ಬಂಧುಬಾಂಧವರನ್ನು ಹತ್ತಿರ ಬಿಟ್ಟುಕೊಳ್ಳಬೇಡಿರೆಂದು ಸೂಚಿಸುವರು. ಸಂಗ್ರಹ ಪದ್ಧತಿ ಸಲ್ಲದು ಎನ್ನುವರು ಬಸವಣ್ಣನವರು.

ಇಂದಿಗೆ ನಾಳಿಗೆ ಮಡದಿ ಮಕ್ಕಳಿಗೆಂದು ಕೂಡಿಡುವುದು ಸಲ್ಲದು ಎಂದು ಹೇಳಿದ್ದು ಮಾತ್ರವಲ್ಲ, ಅದರಂತೆ ಬಸವಣ್ಣನವರು ಬಾಳಿದರು. ಅದು ಇಂದು ಎಲ್ಲ ಜನರಿಗೂ ಆದರ್ಶವಾಗಬೇಕಿದೆ. ಬಸವ ಜಯಂತಿಯ ಆಚರಣೆ ಮಾಡುವುದು ಎಂದರೆ ಕೇವಲ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಮಾಡುವುದಲ್ಲ, ಅವರ ವಿಚಾರಗಳ ಮೆರವಣಿಗೆ ಆಗಬೇಕು ಆ ವಿಚಾರಗಳು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಆಗ ಬಸವಜಯಂತಿಗೆ ಅರ್ಥ ಬರುವುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
12th century social reformer Basaveshwara's birthday being celebrated across the Karnataka as Basava Jayanti. It should be a birth anniversary it should be celebration of his works and philosophy

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more