ವಾರಾಂತ್ಯದಲ್ಲೂ ಹೋಟೆಲ್, ಬಾರ್ ಓಪನ್; ಉದ್ದಿಮೆದಾರರಿಗೆ ರಿಲೀಫ್
ಬೆಂಗಳೂರು, ಜನವರಿ 21: ಕರ್ನಾಟಕದಲ್ಲಿ ವಾರಾಂತ್ಯ ಕರ್ಫ್ಯೂ ತೆರವುಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಕಂದಾಯ ಸಚಿವ ಆರ್.ಅಶೋಕ್ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ವಾರಾಂತ್ಯ ಕರ್ಫ್ಯೂ ರದ್ದುಗೊಳಿಸಿ, ರಾತ್ರಿ ಕರ್ಫ್ಯೂ ಅನ್ನು ವಿಸ್ತರಣೆ ಮಾಡಲು ತೀರ್ಮಾನಿಸಿದೆ. ಮುಂದಿನ 7 ದಿನಗಳ ಕಾಲ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಇರಲಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದರು.
ಹೋಟೆಲ್, ಬಾರ್, ಪಬ್ ಓಪನ್; ಮದ್ಯಪ್ರಿಯರಿಗೆ ಗುಡ್ ನ್ಯೂಸ್
ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದ್ದು, ವಾರಾಂತ್ಯ ದಿನಗಳಾದ ಶನಿವಾರ ಮತ್ತು ಭಾನುವಾರ ಸಹ ರಾತ್ರಿ 10 ಗಂಟೆಯವರೆಗೆ ಹೋಟೆಲ್, ಬಾರ್ & ರೆಸ್ಟೋರೆಂಟ್ ಮತ್ತು ಪಬ್ ತೆರೆಯಲು ಅನುಮತಿ ನೀಡಲಾಗಿದೆ. ಈ ವೇಳೆ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.
ಇದರಿಂದ ಮದ್ಯಪ್ರಿಯರು, ವೀಕೆಂಡ್ ಪಾರ್ಟಿ ಪ್ರಿಯರಿಗೆ ಖುಷಿಯಾಗಿದ್ದಾರೆ. ಇನ್ನು ಹೋಟೆಲ್ ಮತ್ತು ಬಾರ್ & ರೆಸ್ಟೋರೆಂಟ್ ಮಾಲೀಕರಿಗೆ ನಿಟ್ಟುಸಿರು ಬಿಟ್ಟಂತಾಗಿದೆ. ವಾರಾಂತ್ಯದಲ್ಲಿಯೇ ಉತ್ತಮ ವ್ಯಾಪಾರವಾಗಲಿದ್ದು, ವಾರಾಂತ್ಯ ಕರ್ಫ್ಯೂ ರದ್ದುಗೊಳಿಸಿರುವುದು ಉದ್ದಿಮೆದಾರರಿಗೆ ಬಿಗ್ ರಿಲೀಫ್ ದೊರೆತಂತಾಗಿದೆ.
ಸಚಿವ ಆರ್. ಅಶೋಕ್ ತಿಳಿಸಿದ ಇತರ ವಿಷಯಗಳು
ಕರ್ನಾಟಕದಲ್ಲಿ ನಾಳೆಯಿಂದಲೇ (ಜ.21) ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ರದ್ದಾಗಿದೆ. ಯಾವುದೇ ಶಾಸಕರು ಅಥವಾ ಸಚಿವರ ಒತ್ತಡಕ್ಕೆ ಮಣಿದು ಕರ್ಫ್ಯೂ ರದ್ದುಪಡಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ. ತಜ್ಞರ ಅಭಿಪ್ರಾಯದಂತೆ ವೀಕೆಂಡ್ ಕರ್ಫ್ಯೂ ರದ್ದುಪಡಿಸಲಾಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದರು.
ರಾಜ್ಯದಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 7ರವರೆಗೆ ರಾತ್ರಿ ಕರ್ಫ್ಯೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚಾದರೆ ವೀಕೆಂಡ್ ಕರ್ಫ್ಯೂ ಜಾರಿಮಾಡುವುದು ಅನಿವಾರ್ಯವಾಗುತ್ತದೆ. ವೀಕೆಂಡ್ ಕರ್ಫ್ಯೂ ಹೊರತುಪಡಿಸಿ ಉಳಿದೆಲ್ಲ ಕೊವಿಡ್ ನಿಯಮಗಳು ಎಂದಿನಂತೆ ಮುಂದುವರಿಯಲಿವೆ ಎಂದರು.
ಆಸ್ಪತ್ರೆಗೆ ಸೇರುವವರ ಸಂಖ್ಯೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದರಿಂದ ವೀಕೆಂಡ್ ಕರ್ಫ್ಯೂ ರದ್ದುಪಡಿಸಲಾಗಿದೆ. ಕೊರೊನಾ 3ನೇ ಅಲೆಯಲ್ಲಿ ಆಸ್ಪತ್ರೆಗೆ ಸೇರುವವರ ಸಂಖ್ಯೆ ಶೇ.5ರಷ್ಟು ಮಾತ್ರ ಇದೆ. ಎಲ್ಲ ತಜ್ಞರ ಒಟ್ಟು ಅಭಿಪ್ರಾಯ ಪಡೆದೇ ನಿಯಮಗಳನ್ನು ರೂಪಿಸಲಾಗಿದೆ. ವೀಕೆಂಡ್ ಕರ್ಫ್ಯೂ ರದ್ದು ಪಡಿಸುವಾಗಲೂ ಅವರ ಅಭಿಪ್ರಾಯಗಳನ್ನು ಪಡೆದುಕೊಳ್ಳಲಾಗಿದೆ. ಪಾರ್ಟಿ, ಬಾರ್‌ಗಳಲ್ಲಿ ಚಟುವಟಿಕೆ ನಿಯಂತ್ರಿಸುವ ಉದ್ದೇಶದಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.