ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಂಡಾ ಕಾಯ್ದೆ ಏನಿದು? ಈಗ ಸುದ್ದಿಯಲ್ಲೇಕಿದೆ?

|
Google Oneindia Kannada News

ಬೆಂಗಳೂರು,ಜು.30: ರಾಜ್ಯದ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಸರ್ಕಾರ ಮುಂದಾಗಿದ್ದು ಗೂಂಡಾ ಕಾಯ್ದೆ ತಿದ್ದುಪಡಿ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.

ಗೂಂಡಾ ಕಾಯ್ದೆ ಎಂದೇ ಹೆಸರಾಗಿರುವ 'ಕರ್ನಾಟಕ ಅಪಾಯಕಾರಿ ಚಟುವಟಿಕೆಗಳ ಪ್ರತಿಬಂಧಕ ಕಾಯ್ದೆ' ತಿದ್ದುಪಡಿಯಾಗಿದ್ದು ಇನ್ನು ಮುಂದೆ ಅತ್ಯಾಚಾರಿಗಳನ್ನು ನೇರವಾಗಿ ಜೈಲಿಗೆ ಕಳುಹಿಸಬಹುದು.

ಏನಿದು ಗೂಂಡಾ ಕಾಯ್ದೆ? 1985ರಲ್ಲಿ ಆಗಿನ ಜನತಾ ಪಕ್ಷದ ಸರ್ಕಾರ ಗೂಂಡಾ ಚಟುವಟಿಕೆ ನಿಯಂತ್ರಿಸಲು ಈ ಕಾಯ್ದೆಯನ್ನು ಜಾರಿಗೆ ತಂದಿತ್ತು. ಜೂಜುಕೋರರು, ಕಳ್ಳ ಬಟ್ಟಿ ವ್ಯಾಪಾರಿಗಳು, ಮಾದಕ ವಸ್ತು ಸಾಗಾಣಿಕೆ ಮತ್ತು ಮಾರಾಟಗಾರರ ವಿರುದ್ಧ ಈ ಕಾಯ್ದೆಯ ಮೂಲಕ ಕ್ರಮಕೈಗೊಳ್ಳಬಹುದಾಗಿತ್ತು.

goonda act

ಈಗ ಸುದ್ದಿಯಾಗಿದ್ದು ಯಾಕೆ? ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿದ್ದ ಹಿನ್ನಲೆಯಲ್ಲಿ ಅತ್ಯಾಚಾರಿಗಳ ವಿರುದ್ಧ ಗುಂಡಾ ಕಾಯ್ದೆಯನ್ನು ಬಳಸಿ ಶಿಕ್ಷೆ ನೀಡಬೇಕೆಂದು ಎಲ್ಲೆಡೆಯಿಂದ ಒತ್ತಾಯ ಕೇಳಿಬಂದಿತ್ತು. ಆದರೆ ಈ ಕಾಯ್ದೆಯ ಮೂಲಕವೇ ಅತ್ಯಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲದ ಕಾರಣ ಸರ್ಕಾರಕ್ಕೆ ಭಾರೀ ತಲೆನೋವಾಗಿತ್ತು.

ಸರ್ಕಾರಕ್ಕೆ ತಲೆನೋವಾಗಿದ್ದು ಯಾಕೆ? 2013ರಲ್ಲಿ ಅತ್ಯಾಚಾರ ಆರೋಪಿಗಳನ್ನು ಗೂಂಡಾಕಾಯ್ದೆ ಅಡಿ ಬಂಧಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಶರಣ್‌ ದೇಸಾಯಿ ಎಂಬುವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಬಳಿಕ ಹೈಕೋರ್ಟ್‌‌ ಈಗಿರುವ ಗೂಂಡಾ ಕಾಯ್ದೆಯಡಿ ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಅದು ಉಚಿತವೂ ಅಲ್ಲ. ಆದ್ದರಿಂದ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಕುರಿತು ಹೊಸದಾಗಿ ಕಾಯ್ದೆ ರಚಿಸುವ ಬಗ್ಗೆ ಯೋಚಿಸಿ, ತಿಳಿಸಿ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.[ಅತ್ಯಾಚಾರ ವಿರುದ್ಧ ಗೂಂಡಾ ಕಾಯ್ದೆ: ಭಾರಿ ಹಿನ್ನಡೆ]

'ಗೂಂಡಾ ಎನ್ನುವ ಪದದ ಅರ್ಥವ್ಯಾಪ್ತಿ ಮತ್ತು ಅತ್ಯಾಚಾರಿ ಎಂಬ ಪದದ ಅರ್ಥವ್ಯಾಪ್ತಿ ಬೇರೆ ಬೇರೆಯಾಗಿದೆ. ಇವೆರಡೂ ಒಂದೇ ಅಲ್ಲ. ಹೆಣ್ಣುಮಕ್ಕಳನ್ನು ಚುಡಾಯಿಸುವ ಕೃತ್ಯ ಹಾಗೂ ಗೂಂಡಾಗಿರಿಯನ್ನು ಒಂದೇ ದೃಷ್ಟಿಯಿಂದ ನೋಡಲಾಗದು' ಎಂದೂ ನ್ಯಾಯಪೀಠ ಹೇಳಿತ್ತು.

ಗೂಂಡಾ ಕಾಯ್ದೆ ತಿದ್ದುಪಡಿ ಬಳಿಕ ಯಾರ ವಿರುದ್ಧ ಕ್ರಮ ಕೈಗೊಳ್ಳಬಹುದು: ತಿದ್ದು ಪಡಿಯಾದ ಕಾಯ್ದೆ ವ್ಯಾಪ್ತಿಗೆ ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರು, ಆಸಿಡ್‌ ದಾಳಿಕೋರರು, ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಪರಿಸರಕ್ಕೆ ಹಾನಿ ಮಾಡುವವರು, ಡಿಜಿಟಲ್‌ ಮೀಡಿಯಾದಲ್ಲಿ (ವೆಬ್‌ಸೈಟ್‌) ವಂಚಿಸುವವರು, ಭೂ ಕಬಳಿಕೆದಾರರು, ಕಾನೂನು ಬಾಹಿರ ಹಣಕಾಸು ವ್ಯವಹಾರ ನಡೆಸುವವರರನ್ನು ಸೇರಿಸಲಾಗಿದೆ. ಈ ಹಿಂದೆ ಜೂಜುಕೋರರು, ಕಳ್ಳ ಬಟ್ಟಿ ವ್ಯಾಪಾರಿಗಳು, ಮಾದಕ ವಸ್ತು ಸಾಗಾಣಿಕೆ ಮತ್ತು ಮಾರಾಟಗಾರರ ವಿರುದ್ಧ ಈ ಕಾಯ್ದೆಯ ಮೂಲಕ ಕ್ರಮಕೈಗೊಳ್ಳಬಹುದಾಗಿತ್ತು.

ನೇರವಾಗಿ ಜೈಲಿಗೆ: ಈ ಕಾಯ್ದೆಯಲ್ಲಿ ಬಂಧಿಸಲಾದ ವ್ಯಕ್ತಿಯನ್ನು ಇತರ ಪ್ರಕರಣಗಳ ಮಾದರಿಯಲ್ಲಿ 24 ಗಂಟೆಗಳ ಒಳಗೆ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಾದ ಅಗತ್ಯ ಇಲ್ಲ. ಪೊಲೀಸ್‌ ಕಸ್ಟಡಿ ಅಥವಾ ನ್ಯಾಯಾಂಗ ಬಂಧನವನ್ನು ಪದೇ ಪದೇ ವಿಸ್ತರಿಸಿಕೊಳ್ಳುವ ಪ್ರಕ್ರಿಯೆಯ ಅಗತ್ಯವೂ ಇಲ್ಲದೇ ನೇರವಾಗಿ ಜೈಲಿಗೆ ಕಳುಹಿಸಬಹುದು. ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿತನಾದಲ್ಲಿ ಅಪರಾಧಿಗೆ ಒಂದು ವರ್ಷ ಜಾಮೀನು ಸಿಗುವುದಿಲ್ಲ.

ಯಾರಿಗೆ ಅಧಿಕಾರ? ಗೂಂಡಾ ತಡೆ ಕಾಯ್ದೆಯನ್ನು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಜಾರಿಗೊಳಿಸಲು ಪೊಲೀಸ್‌ ಆಯುಕ್ತರಿಗೆ ಮ್ಯಾಜಿಸ್ಟೀರಿಯಲ್‌ ಅಧಿಕಾರವಿರುತ್ತದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಥವಾ ಪೊಲೀಸ್‌ ಆಯುಕ್ತರಿಗೆ ಈ ಅಧಿಕಾರವಿದೆ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಚಟುವಟಿಕೆಗಳ ಬಗ್ಗೆ ಕೆಳಹಂತದ ಪೊಲೀಸ್‌ ಅಧಿಕಾರಿಗಳು ನೀಡುವ ವರದಿಯನ್ನು ಪರಿಶೀಲಿಸಿ ಪೊಲೀಸ್‌ ಆಯುಕ್ತರು ಅಥವಾ ಜಿಲ್ಲಾಧಿಕಾರಿ ಕಾಯ್ದೆಯನ್ನು ಜಾರಿಗೊಳಿಸುತ್ತಾರೆ.

English summary
In the backdrop of rising sexual offences against women including recent rape of a six-year-old school girl in the State, Karnataka Legislative Assembly on Monday passed an amendment to the Goonda Act, bringing sexual offences, including rapes, under its ambit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X